ಮತದಾರರು ಅನ್ನ-ಹಾಲು ಉಣಿಸಿದವರ ಕೈಬಿಡಲ್ಲ

ದಾವಣಗೆರೆ
 
     ಅನ್ನ ಭಾಗ್ಯ ಯೋಜನೆಯ ಮೂಲಕ ಹಸಿದ ಹೊಟ್ಟೆಗೆ ಅನ್ನ ಕೊಟ್ಟವರನ್ನು  ಹಾಗೂ ಕ್ಷೀರ ಭಾಗ್ಯ ಯೋಜನೆಯ ಮೂಲಕ ಮಕ್ಕಳಿಗೆ ಹಾಲು ಕುಡಿಸಿದವರನ್ನು ರಾಜ್ಯದ ಮತದಾರರು ಕೈಬಿಡುವುದಿಲ್ಲ ಎಂದು ಕೆಪಿಸಿಸಿ ಕಾರ್ಯದರ್ಶಿ ಡಿ.ಬಸವರಾಜ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
      ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದಿನ ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ಅನ್ನ ಭಾಗ್ಯ ಯೋಜನೆಯ ಮೂಲಕ ಕೋಟ್ಯಂತರ ಜನರ ಹೊಟ್ಟೆ ಹಸಿವು ನೀಗಿಸಿದ್ದಾರೆ. ಅಲ್ಲದೇ, ಮಕ್ಕಳ ಅಪೌಷ್ಟಿಕತೆ ಹೋಗಲಾಡಿಸಲು ಕ್ಷೀರಭಾಗ್ಯ ಯೋಜನೆಯ ಮೂಲಕ ಮಕ್ಕಳಿಗೆ ಹಾಲುಣಿಸಿದ್ದಾರೆ. ಹೀಗಾಗಿ ಮತದಾರರು ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿಯ ಕೈಬಿಡುವುದಿಲ್ಲ ಎಂದರು.
      ಸಿದ್ದರಾಮಯ್ಯ ಸರ್ಕಾರದ ಅವಧಿಯ ಅಭಿವೃದ್ಧಿ ಕಾಮಗಾರಿಗಳು ಹಾಗೂ ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಮತ್ತು ಮಾಜಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಅವರುಗಳು ಜಿಲ್ಲೆಯಲ್ಲಿ ಕೈಗೊಂಡಿರುವ  ಅಭಿವೃದ್ಧಿ ಕಾರ್ಯಗಳೇ ಮೈತ್ರಿ ಅಭ್ಯರ್ಥಿ ಎಚ್.ಬಿ.ಮಂಜಪ್ಪನವರ ಗೆಲುವಿಗೆ ಶ್ರೀರಕ್ಷೆಯಾಗಲಿವೆ ಎಂದು ಹೇಳಿದರು.
      ಭೋವಿ ಸಮಾಜದ ಬಹು ವರ್ಷಗಳ ಬೇಡಿಕೆಯಾಗಿದ್ದ ಭೋವಿ ಅಭಿವೃದ್ಧಿ ನಿಗಮ ಸ್ಥಾಪಿಸಿದ್ದು, ಭೋವಿ ಸಮುದಾಯದ ಆರಾಧ್ಯ ದೈವ, ಕಾಯಕ ಯೋಗಿ ಶ್ರೀ ಸಿದ್ದ ರಾಮೇಶ್ವರ ಜಯಂತಿ ಆಚರಣೆಗೆ ಚಾಲನೆ ನೀಡಿದ್ದು ಸಿದ್ದರಾಮಯ್ಯ ಸರ್ಕಾರ. ಪಾವಗಡ ಶಾಸಕ ವೆಂಕಟ ರಮಣಪ್ಪನವರಿಗೆ ಕ್ಯಾಬಿನೆಟ್ ಸಚಿವರಾಗಿ ನೇಮಿಸಲಾಗಿದೆ. ಪರಿಶಿಷ್ಟರು, ಅಲ್ಪಸಂಖ್ಯಾತರು, ಹಿಂದುಳಿದವರಿಗೆ ವಿಶೇಷ ಸ್ಥಾನಮಾನ ನೀಡಿದ ಶ್ರೇಯಸ್ಸು ಮಾಜಿ ಸಿಎಂ ಸಿದ್ದರಾಮಯ್ಯನವರಿಗೆ ಸಲ್ಲಲಿದ್ದು, ಅಹಿಂದ ವರ್ಗದ ಮತದಾರರು ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿ ಹೆಚ್.ಬಿ.ಮಂಜಪ್ಪನವರಿಗೆ ಬೆಂಬಲ ನೀಡಬೇಕೆಂದು ಮನವಿ ಮಾಡಿದರು.
      ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವಿದ್ದಾಗ ಪರಿಶಿಷ್ಟ ಜಾತಿ-ವರ್ಗ ಉಪ ಯೋಜನೆಯಡಿ ರಾಷ್ಟ್ರದಲ್ಲೇ ಕ್ರಾಂತಿಕಾರಕ ಮಸೂದೆ ಮಂಡಿಸಿ, ಜಾರಿಗೊಳಿಸಿದರು. ಇದರ ಫಲವಾಗಿಯೇ ಪರಿಶಿಷ್ಟರಿಗೆ 4-5 ಸಾವಿರ ಕೋಟಿ ಇದ್ದ ಬಜೆಟ್ 30 ಸಾವಿರ ಕೋಟಿಗೆ ಏರಿಕೆಯಾಗಿದೆ. ಪರಿಶಿಷ್ಟ ಜಾತಿ-ವರ್ಗದ ಗುತ್ತಿಗೆದಾರರಿಗೆ 1 ಕೋಟಿಯ ವರೆಗೆ ಕಾಮಗಾರಿಗಳನ್ನು ಟೆಂಡರ್ ಇಲ್ಲದೇ, ನೀಡಲು ಕಾಯ್ದೆ ರೂಪಿಸಿದ್ದಾರೆ ಎಂದರು.
        ಕಳೆದ ಒಂದೂವರೆ ದಶಕದಿಂದಲೂ ಸಂಸದರಾಗಿರುವ ಜಿ.ಎಂ.ಸಿದ್ದೇಶ್ವರ ಜಿಲ್ಲೆಯಲ್ಲಿ ಯಾವುದೇ ಅಭಿವೃದ್ಧಿ ಕಾಮಗಾರಿ ಕೈಗೊಂಡಿಲ್ಲ. ಸತತ 3 ಅವದಿಗೆ ಸಂಸದರಾದ ಸಿದ್ದೇಶ್ವರ ತಾವು ಮಾಡಿದ ಕೆಲಸ ಏನೂ ಇಲ್ಲದ್ದಕ್ಕೆ ಮೋದಿ ಎಂಬ ಬೆದರು ಗೊಂಬೆ ಹಿಡಿದು ಪ್ರಚಾರ ಮಾಡುತ್ತಿದ್ದಾರೆ. ಆದ್ದರಿಂದ ಹಿಂದುಳಿದ ವರ್ಗಕ್ಕೆ ಸೇರಿದ ಬಡ, ರೈತ ಕುಟುಂಬದ ಸಾಮಾನ್ಯ ಕಾರ್ಯಕರ್ತ ಎಚ್.ಬಿ.ಮಂಜಪ್ಪ ಮೈತ್ರಿ ಅಭ್ಯರ್ಥಿಯಾಗಿದ್ದು, ಎಲ್ಲಾ ಜಾತಿ, ವರ್ಗದ ಜನರು ಮಂಜಪ್ಪಗೆ ಒಲವು ತೋರುತ್ತಿರುವುದರಿಂದ ಸಹಜವಾಗಿಯೇ ಸಿದ್ದೇಶ್ವರ್‍ಗೆ ಸೋಲಿನ ಭೀತಿ ಕಾಡುತ್ತಿದೆ ಎಂದು ಆರೋಪಿಸಿದರು.
      ಸಿದ್ದೇಶ್ವರ್‍ಗೆ ಸೋಲಿನ ಭೀತಿ ಕಾಡುತ್ತಿರುವುದರಿಂದಲೇ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಪುತ್ಥಳಿ ಪುಡಿಪುಡಿ ಮಾಡಿ ಎಂದಿದ್ದ ತೇಜಸ್ವಿ ಸೂರ್ಯ, ಅಪರಾಧ ಹಿನ್ನೆಲೆ ಹೊಂದಿರುವ ಅಮಿತ್‍ಶಾ ಅವರನ್ನು ಕರೆಯಿಸಿ ಕೋಮು ಭಾವನೆ ಕೆರಳಿಸುವ ಪ್ರಯತ್ನ ಮಾಡುತ್ತಿದ್ದಾರೆ. ಕಾರ್ಯಕರ್ತರು ಎಚ್ಚೆತ್ತುಕೊಳ್ಳದಿದ್ದರೆ ವಾಜಪೇಯಿಗೆ ಬಂದ ಸ್ಥಿತಿಗೆ ಮೋದಿಗೂ ಬರುತ್ತದೆಂದು ಹಿಂದೆ ಕಾರ್ಯಕ್ರಮದಲ್ಲಿ ಸಿದ್ದೇಶ್ವರ ಹೇಳಿದ್ದರು. ಸಿದ್ದೇಶ್ವರ ಸತ್ಯವನ್ನು ಹೇಳಿದ್ದು, ದಾವಣಗೆರೆ ಬಿಜೆಪಿ ಸಂಸದ ಸಿದ್ದೇಶ್ವರ ಮಾತುಗಳೇ ನಿಜವಾಗುವ ಲಕ್ಷಣ ಗೋಚರಿಸುತ್ತಿವೆ ಎಂದು ದೂರಿದರು.
      ಉಗ್ರರ ದಾಳಿಗೆ ಬಲಿಯಾದ ಎಟಿಎಸ್ ಅಧಿಕಾರಿ ಹೇಮಂತ ಕರ್ಕರೆ ಸಾವನ್ನು ತಮ್ಮ ಶಾಪದಿಂದ ಎಂದ ಸಾದ್ವಿ ಬಿಜೆಪಿ ಟಿಕೆಟ್ ನೀಡಿದ್ದು, ಆರೆಸ್ಸೆಸ್‍ನ ಕೇಶವ ಕೃಪಾದಲ್ಲಿ ತೆರೆಮರೆಯಲ್ಲಿ ಕಿತಾಪತಿ ಮಾಡುತ್ತಿದ್ದ ಬಿಜೆಪಿ ರಾಷ್ಟ್ರೀಯ ಸಹ ಸಂಚಾಲಕ ಬಿ.ಎಲ್.ಸಂತೋಷ್ ಇದೀಗ ಹೊರ ಬಂದು ಮಾತನಾಡುತ್ತಿದ್ದಾರೆಂದು ಹೇಳಿದರು.ಸುದ್ದಿಗೋಷ್ಠಿಯಲ್ಲಿ ಪಕ್ಷದ ಮುಖಂಡರಾದ ಅಲ್ಲಾವಲಿ ಘಾಜಿಖಾನ್, ಎಚ್.ಸುಭಾನ್ ಖಾನ್, ನವೀದ್ ಭಾಷಾ, ಡಿ.ಶಿವಕುಮಾರ, ಖಾಜಿ ಕಲೀಲ್, ಹರೀಶ, ಲಿಯಾಕತ್ ಅಲಿ, ಎ.ಅಬ್ದುಲ್ ಜಬ್ಬಾರ್ ಮತ್ತಿತರರು ಹಾಜರಿದ್ದರು. 
   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link