ಲೋಕಸಭಾ ಚುನಾವಣೆ: ಜಿಲ್ಲೆಯಲ್ಲಿ ಶೇ.100 ಮತದಾನವಾಗಬೇಕು

ತುಮಕೂರು

         ಜಿಲ್ಲೆಯಲ್ಲಿ ಏಪ್ರಿಲ್ 18ರಂದು ನಡೆಯುವ ಲೋಕಸಭಾ ಚುನಾವಣೆಯಲ್ಲಿ ಶೇ.100ರಷ್ಟು ಮತದಾನವಾಗಬೇಕು ಎಂದು ಜಿಲ್ಲಾಧಿಕಾರಿ ಡಾ|| ಕೆ.ರಾಕೇಶ್‍ಕುಮಾರ್ ತಿಳಿಸಿದರು.ಜಿಲ್ಲಾ ಸ್ವೀಪ್ ಸಮಿತಿಯಿಂದ ನಗರದ ಸರ್ಕಾರಿ ಕಾಲೇಜು ಮೈದಾನದಲ್ಲಿಂದು ಹಮ್ಮಿಕೊಂಡಿದ್ದ ಮತದಾನ ಕುರಿತು ಜನ ಜಾಗೃತಿ ಮೂಡಿಸುವ ಸಲುವಾಗಿ ಆಟೋ, ಬಸ್ಸುಗಳ ಮೇಲೆ ಸ್ಟಿಕರ್ ಅಂಟಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಜಿಲ್ಲಾದ್ಯಂತ ಈಗಾಗಲೇ ಮತದಾನ ಕುರಿತು ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಜನರಲ್ಲಿ ಮತದಾನ ಮಹತ್ವ ಕುರಿತು ಅರಿವು ಮೂಡಿಸಲಾಗುತ್ತಿದೆ. ಬರುವ ಏಪ್ರಿಲ್ 18ರಂದು ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ಪ್ರತಿಯೊಬ್ಬರೂ ತಮ್ಮ ಮತದಾನದ ಹಕ್ಕನ್ನು ಚಲಾಯಿಸಿದಾಗ ಮಾತ್ರ ಜಿಲ್ಲೆಯಲ್ಲಿ ಶೇ.100ರಷ್ಟು ಮತದಾನ ಸಾಧ್ಯ ಎಂದು ತಿಳಿಸಿದರು.

        ನಮ್ಮ ಭಾರತವು ಅತಿ ದೊಡ್ಡ ಪ್ರಜಾಪ್ರಭುತ್ವ ದೇಶವೆಂದು ಹೆಮ್ಮೆಯಿಂದ ಹೇಳಿಕೊಳ್ಳುವ ನಾವೆಲ್ಲರು ಅಷ್ಟೇ ಹೆಮ್ಮೆಯಿಂದ ಚುನಾವಣೆಯಲ್ಲಿ ಕಡ್ಡಾಯವಾಗಿ ಮತವನ್ನು ಚಲಾಯಿಸು ಮೂಲಕ ನಮ್ಮ ಕರ್ತವ್ಯವನ್ನು ಪಾಲಿಸಬೇಕು. ದೇಶದ ಅಭಿವೃದ್ಧಿಗಾಗಿ ಅರ್ಹ ನಾಯಕರನ್ನು ಆಯ್ಕೆ ಮಾಡಿ ತಮ್ಮ ಕರ್ತವ್ಯ ಪ್ರಜ್ಞೆ ಮೆರೆಯಬೇಕು. ನಗರ ಪ್ರದೇಶದಲ್ಲಿ ವಿದ್ಯಾವಂತರು ಹೆಚ್ಚಿನ ಸಂಖ್ಯೆಯಲ್ಲಿದ್ದರೂ ಕಳೆದ ಬಾರಿ ಚುನಾವಣೆಯಲ್ಲಿ ಗ್ರಾಮೀಣ ಪ್ರದೇಶಕ್ಕಿಂತ ನಗರ ಪ್ರದೇಶಗಳಲ್ಲಿ ಕಡಿಮೆ ಪ್ರಮಾಣದಲ್ಲಿ ಮತದಾನವಾಗಿದೆ. ಈ ನಿಟ್ಟಿನಲ್ಲಿ ಲಿಂಗತ್ವ ಅಲ್ಪಸಂಖ್ಯಾತರು, ವಿಕಲಚೇತನರು, ಬಡವರು, ಶ್ರೀಮಂತರೆನ್ನದೆ ಎಲ್ಲರೂ ಚುನಾವಣೆಯಲ್ಲಿ ಪಾಲ್ಗೊಂಡು ತಮ್ಮ ಹಕ್ಕನ್ನು ಚಲಾಯಿಸಬೇಕೆಂದು ತಿಳಿಸಿದರು.

          ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಶುಭಾ ಕಲ್ಯಾಣ್ ಮಾತನಾಡಿ ಲೋಕಸಭಾ ಚುನಾವಣೆಯನ್ನು ಪಾರದರ್ಶಕವಾಗಿ ಹಾಗೂ ಕಟ್ಟುನಿಟ್ಟಾಗಿ ನಡೆಸಲು ಈಗಾಗಲೇ ಪೂರ್ವಭಾವಿ ಸಿದ್ಧತೆ ಮಾಡಲಾಗಿದೆ. ಭಾರತ ಚುನಾವಣಾ ಆಯೋಗವು “ಸಿವಿಜಿಲ್” ಎಂಬ ನೂತನ ಮೊಬೈಲ್ ಆ್ಯಪ್ ಅನ್ನು ಸೃಜಿಸಿದ್ದು, ಈ ಆ್ಯಪ್ ಮೂಲಕ ಚುನಾವಣಾ ಸಂದರ್ಭದಲ್ಲಿ ನೀತಿ ಸಂಹಿತೆ ಉಲ್ಲಂಘನೆ, ಅಕ್ರಮಗಳು ಕಂಡುಬಂದಲ್ಲಿ ಫೋಟೊ ಅಥವಾ ವಿಡಿಯೋಗಳನ್ನು ಕಳುಹಿಸಿ ದೂರು ದಾಖಲಿಸಲು ಅವಕಾಶವಿದೆ ಎಂದು ತಿಳಿಸಿದರು.

        ಮತದಾನ ಜಾಗೃತಿ ಕುರಿತು ಬಸ್ ಹಾಗೂ ಆಟೋಗಳ ಮೇಲೆ ಅಂಟಿಸಿರುವ ಸ್ಟಿಕರ್‍ಗಳನ್ನು ಏಪ್ರಿಲ್ 18ರವರೆಗೆ ತೆಗೆಯದೆ ಹಾಗೆಯೇ ಕಾಪಾಡಿಕೊಂಡು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಕೈಜೋಡಿಸಬೇಕು ಎಂದು ತಿಳಿಸಿದರು.ಮಹಾನಗರ ಪಾಲಿಕೆ ಆಯುಕ್ತ ಭೂಬಾಲನ್ ಮಾತನಾಡಿ ಮನೆ ಮಂದಿಯೆಲ್ಲಾ ಮತದಾನ ಮಾಡುವ ಮೂಲಕ ಚುನಾವಣೆಯನ್ನು ಹಬ್ಬದ ರೀತಿಯಲ್ಲಿ ಆಚರಿಸಿ ಸಂಭ್ರಮಿಸಬೇಕೆಂದರು.

         ಈ ಸಂದರ್ಭದಲ್ಲಿ ಶಿಕ್ಷಕ ರಿಜ್ವಾನ್ ಪಾಷಾ ಅವರು ಇವಿಎಂ ಹಾಗೂ ವಿವಿಪ್ಯಾಟ್ ಮತ ಯಂತ್ರಗಳ ಬಗ್ಗೆ ಪ್ರಾತ್ಯಕ್ಷಿಕೆ ಮೂಲಕ ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ|| ಕೋನವಂಶಿಕೃಷ್ಣ, ಪಾಲಿಕೆ ಆಯುಕ್ತ ಟಿ.ಭೂಬಾಲನ್, ಕೆಎಸ್‍ಆರ್‍ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಗಜೇಂದ್ರಕುಮಾರ್, ಪ್ರಾದೇಶಿಕ ಸಾರಿಗೆ ಇಲಾಖೆ ಆಯುಕ್ತ ಎಸ್.ರಾಜು, ಸ್ವೀಪ್ ಸಮಿತಿಯ ಸದಸ್ಯ ಮಹಂಕಾಳಪ್ಪ, ರಾಜಶೇಖರ್, ದೇವರಾಜ್, ರಾಜ್‍ಕುಮಾರ್, ವಾಸಂತಿ ಉಪ್ಪಾರ್, ಶ್ರೀನಿವಾಸ್, ನಟರಾಜ್, ಮತ್ತಿತರರು ಹಾಜರಿದ್ದರು.

ಸ್ಟಿಕರ್ ಅಳವಡಿಕೆ :-

         ಈ ಸಂದರ್ಭದಲ್ಲಿ “ಚುನಾವಣಾ ಅಕ್ರಮಗಳಿಗೆ ಇನ್ನು ಅವಕಾಶವೇ ಇಲ್ಲ! ಇಲ್ಲಿ, ಪ್ರತಿಯೊಬ್ಬ ಪ್ರಜೆಯೂ ಪ್ರಜಾಪ್ರಭುತ್ವದ ಕಾವಲುಗಾರ!! ಅದಕ್ಕಾಗಿ ಇದೀಗ ನಾಗರಿಕರ ಕೈಯಲ್ಲಿ ‘ಸಿ-ವಿಜಿಲ್ ಅಸ್ತ್ರ’!!!” ಎಂಬ ಸ್ಟಿಕರ್‍ಗಳನ್ನು ಸಾಂಕೇತಿಕವಾಗಿ 5 ಕೆ.ಎಸ್.ಆರ್.ಟಿ.ಸಿ. ಬಸ್ ಹಾಗೂ 500 ಆಟೋಗಳ ಮೇಲೆ ಅಂಟಿಸಲಾಯಿತು. ಕೆ.ಎಸ್.ಆರ್.ಟಿ.ಸಿ. ತುಮಕೂರು ಘಟಕ ವ್ಯಾಪ್ತಿಯ ಸುಮಾರು 400 ಬಸ್ ಹಾಗೂ 3000 ಆಟೋಗಳಿಗೆ ಸ್ಟಿಕರ್‍ಗಳನ್ನು ಅಂಟಿಸಲು ಕ್ರಮ ವಹಿಸಲಾಗುವುದು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link