ಹುಳಿಯಾರು
ಕಳೆದ ಚುನಾವಣೆಯಲ್ಲಿ ಯಾದವರು ನನ್ನ ಕೈ ಹಿಡಿದ ಪರಿಣಾಮ ಗೆಲುವು ಸುಲಭಸಾಧ್ಯವಾಯಿತು ಎಂದು ಸಭೆ, ಸಮಾರಂಭಗಳಲ್ಲಿ ಹೇಳಿಕೊಳ್ಳುವ ಶಾಸಕ ಮಾಧುಸ್ವಾಮಿಯವರೇ ನಿಮಗೆ ಓಟ್ ಹಾಕಿ ಗೆಲ್ಲಿಸಿದ ತಪ್ಪಿಗೆ ಯಾದವರಿಗೆ ಕಾಣಿಕೆಯಾಗಿ ಹಲ್ಲೆ ಮಾಡುವುದು ಸರಿಯೇ ಎಂದು ತುಮಕೂರು ವಿಶ್ವವಿದ್ಯಾನಿಲಯದ ಮಾಜಿ ಸಿಂಡಿಕೇಟ್ ಸದಸ್ಯ ಡಾ.ಸಾಸಲು ಸತೀಶ್ ಪ್ರಶ್ನಿಸಿದರು.
ಹುಳಿಯಾರಿನ ಕಾಂಗ್ರೆಸ್ ಮುಖಂಡ ಹೊಸಹಳ್ಳಿ ಅಶೋಕ್ ಅವರ ಮನೆಯಲ್ಲಿ ಪತ್ರಿಕಾಗೋಷ್ಠಿ ಕರೆದು ಅವರು ಮಾತನಾಡಿದರು.
ಶಾಸಕರಾದ ಮಾಧುಸ್ವಾಮಿ ಅವರು ಸದನದಲ್ಲಿ ಮಾತನಾಡುವ ಮೂಲಕ ಸದನ ಶೂರರು, ರಾಜಕೀಯ ಮುತ್ಸದ್ಧಿಗಳು ಎಂದು ರಾಜ್ಯದಾದ್ಯಂತ ಹೆಸರಾಗಿದ್ದಾರೆ.
ಇಂತಹವರು ಗ್ರಾಮದಲ್ಲಿ ಮೂಲ ಸೌಕರ್ಯದ ಬಗ್ಗೆ ಪ್ರಶ್ನಿಸಿದ ರಾಜ್ಯದ ಸಣ್ಣ ಸಮುದಾಯಗಳಲ್ಲೊಂದಾದ ಯಾದವ ಸಮಾಜದ ವ್ಯಕ್ತಿಯ ಮೇಲೆ ಹಲ್ಲೆ ಮಾಡುವುದು ಅವರಿಗೆ ಶೋಭೆ ತರುವುದಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನಪ್ರತಿನಿಧಿಗಳೆಂದರೆ ಜನಸೇವಕ. ಜನಸೇವಕರನ್ನು ಜನಸಾಮಾನ್ಯರು ಪ್ರಶ್ನೆ ಮಾಡುವುದು ಪ್ರಜಾಪ್ರಭುತ್ವ ವ್ಯವಸ್ಥೆಯ ಒಂದು ಭಾಗ. ಆದರೆ ಪ್ರಶ್ನೆ ಮಾಡಿದ ಪ್ರಜೆಯ ಮೇಲೆ ಹಲ್ಲೇ ಮಾಡುವ ಮೂಲಕ ತಾನು ಜನಸೇವಕನಲ್ಲ ಎಂಬುದನ್ನು ತೋರಿಸಿಕೊಟ್ಟಿದ್ದಾರೆ ಎಂದು ಟೀಕಿಸಿದರು.
ಚುನಾವಣೆಯಲ್ಲಿ ಸೋತಾಗ ಕಾಮದೇನುವಿನಂತೆಯೂ ಗೆದ್ದ ನಂತರ ವ್ಯಾಘ್ರನಂತೆಯೂ ವರ್ತಿಸುವುದು ಮಾಧುಸ್ವಾಮಿ ಅವರ ನೈಜ ವ್ಯಕ್ತಿತ್ವ. ಅಲ್ಲದೆ ಸಣ್ಣಪುಟ್ಟ ಜಾತಿಗಳನ್ನು ಅವಮಾನಿಸುವುದು, ಜಾತಿಜಾತಿಗಳ ನಡುವೆ ಒಡಕು ಸೃಷ್ಠಿಸುವುದು, ಗ್ರಾಮಗಳಲ್ಲಿ ಗುಂಪುಗಾರಿಗೆ ಮಾಡುವುದು ಇವರ ಅಧಿಕಾರದದಾಹದ ಗುಣವಾಗಿತ್ತು. ಹಾಗಾಗಿಯೇ ಅವರನ್ನು ಕಳೆದ 10 ವರ್ಷಗಳಿಂದ ಗೆಲ್ಲಿಸದೆ ಜನ ಅಧಿಕಾರದಿಂದ ದೂರವಿಟಿದ್ದರು. ಈ ವಿಚಾರ ಹೊಸದಾಗಿ ಚಿ.ನಾ.ಹಳ್ಳಿ ಕ್ಷೇತ್ರ ಸೇರಿದ ಬುಕ್ಕಾಪಟ್ಟಣ ಹಾಗೂ ಹುಳಿಯಾರು ಹೋಬಳಿಯ ಜನಕ್ಕೆ ಈಗ ಮನವರಿಕೆ ಆಗುತ್ತಿದೆ ಎಂದರು.
ಜನರ ಹೃದಯವನ್ನು ಪ್ರೀತಿ, ವಿಸ್ವಾಸ, ಸಹಕಾರ ಹಾಗೂ ಅಭಿವೃದ್ಧಿ ಕೆಲಸಗಳಿಂದ ಗೆಲ್ಲಬಹುದೇ ವಿನಹ ದೌರ್ಜನ್ಯದಿಂದಲ್ಲ ಎಂಬ ಸತ್ಯವನ್ನು ಅರಿತು ಮಾಧುಸ್ವಾಮಿ ಕ್ಷೇತ್ರದಲ್ಲಿ ಅಧಿಕಾರ ಮಾಡಬೇಕಿದೆ. ಅಲ್ಲದೆ ಸಹಜವಾಗಿ ಒಂದು ಗ್ರಾಮದಲ್ಲಿ ಎರಡ್ಮೂರು ಪಕ್ಷದ ಕಾರ್ಯಕರ್ತರು ಇರುವುದು, ಚುನಾವಣಾ ಸಂದರ್ಭದಲ್ಲಿ ಅಸಹಕಾರ ಮಾಡುವುದು, ಪ್ರತಿರೋಧ ತೋರಿವುದು ಸಹಜ. ಇದೆಲ್ಲವನ್ನೂ ಸಂಬಳಿಸಿಕೊಂಡು ರಾಜಕೀಯ ಮಾಡಬೇಕಿದೆ. ಹಾಗಾಗಿ ತಮ್ಮಡಿಹಳ್ಳಿ ಗೊಲ್ಲರಹಟ್ಟಿಯಲ್ಲಿ ನಡೆದಿರುವ ಘಟನೆ ಪುನಃ ಮರುಕಳಿಸದಂತೆ ಎಚ್ಚರವಹಿಸಬೇಕಿದೆ. ಇಲ್ಲವಾದರೆ ಮುಂದಿನ ಪರಿಣಾಮ ನೆಟ್ಟಗಿರುವುದಿಲ್ಲ ಎಂದು ಎಚ್ಚರಿಸಿದ್ದಾರೆ.
ತಾಪಂ ಮಾಜಿ ಸದಸ್ಯ ಸಣ್ಣಪ್ಪ, ಗ್ರಾಪಂ ಅಧ್ಯಕ್ಷ ಕಾಟಲಿಂಗಯ್ಯ, ಗ್ರಾಪಂ ಮಾಜಿ ಅಧ್ಯಕ್ಷ ರಾಂಪುರನಿಂಗರಾಜು, ಎಪಿಎಂಸಿ ಮಾಜಿ ಸದಸ್ಯ ಅಂಕಸಂದ್ರರಾಜಣ್ಣ, ಕಾಡುಗೊಲ್ಲ ಯುವ ಘಟಕದ ಅಧ್ಯಕ್ಷ ಕೆಂಪರಾಯನಹಟ್ಟಿ ಮಂಜು, ದಸೂಡಿ ಚಿತ್ತಯ್ಯ, ಗ್ರಾಪಂ ಸದಸ್ಯ ಬಲ್ಲಪ್ಪನಹಟ್ಟಿ ಚಿತ್ತಯ್ಯ, ಬಲ್ಲಪ್ಪನಹಟ್ಟಿ ಚಿಕ್ಕಣ್ಣ, ಬೆಳವಾಡಿ ಯೋಗೀಶ್, ಬೆಳವಾಡಿ ಕೃಷ್ಣಯ್ಯ, ಬೆಳ್ಳಾರ ಕುಮಾರ್, ಬೆಳ್ಳಾರ ಚಿಕ್ಕಣ್ಣ, ಜೆ.ಸಿ.ಪುರ ಚಿದಾನಂದ್ ಸೇರಿದಂತೆ ಯಾದವ ಸಮಾಜದ ಅನೇಕ ಮುಖಂಡರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








