ತಿಪಟೂರು :
ವೈದ್ಯರೊಂದಿಗೆ ಸಿಬ್ಬಂದಿಗಳು ನಡವಳಿಕೆ ಸರಿಯಿಲ್ಲದೇ ಹೊಂದಾಣಿಕೆ ಮಾಡಿಕೊಳ್ಳದೇ ಮನಸ್ಸೋ ಇಚ್ಛೆ ಕಾರ್ಯ ನಿರ್ವಹಿಸುತ್ತಿರು ವುದರಿಂದ ರೋಗಿಗಳಿಗೆ ತೊಂದರೆಯಾಗುತ್ತಿದೆ. ಕೂಡಲೇ ಸಿಬ್ಬಂದಿಗಳನ್ನು ವರ್ಗಾವಣೆಗೊಳಿಸಿ ವೈದ್ಯರಿಗೆ, ಗ್ರಾಮಸ್ಥರಿಗೆ ಅನುಕೂಲ ಮಾಡಿಕೊಡಬೇಕೆಂದು ಒತ್ತಾಯಿಸಿ ಪ್ರತಿಭಟನೆ ಮಾಡಿದ ಘಟನೆ ನಡೆದಿದೆ.
ತಾಲ್ಲೂಕಿನ ತಡಸೂರು ಗ್ರಾ.ಪಂ. ವ್ಯಾಪ್ತಿಯ ಸಿದ್ದರಾಮದೇವರಪಾಳ್ಯ ಎಂಬ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕಳೆದ 8-10 ವರ್ಷಗಳಿಂದ ವೈದ್ಯರಿಲ್ಲದೇ ನರಳುತ್ತಿದ್ದು ಆಸ್ಪತ್ರೆಗೆ ಕಳೆದ ಒಂದೂವರೆ ವರ್ಷದಿಂದ ವೈದ್ಯರೊಬ್ಬರು ಕಾರ್ಯನಿರ್ವಹಣೆಯಲ್ಲಿ ತೊಡಗಿದ್ದು, ಸ್ಥಳೀಯ ಗ್ರಾಮಸ್ಥರಿಗೆ ಆಶಾಕಿರವಾಗಿದ್ದಾರೆ.
ಆದರೆ ಈ ಪ್ರಾಥಮಿಕ ಕೇಂದ್ರದಲ್ಲಿ ಇರುವಂತಹ ಸಿಬ್ಬಂದಿಗಳು ವೈದ್ಯರಿಗೆ ಸರಿಯಾಗಿ ಸ್ಫಂದಿಸದೇ ರೋಗಿಗಳಿಗೆ ಅಗತ್ಯವಿರುವ ಸೌಕರ್ಯ, ಸೌಲಭ್ಯಗಳನ್ನು ಒದಗಿಸುವಲ್ಲಿ ವಿಫಲರಾಗುತ್ತಿದ್ದಾರೆ. ವೈದ್ಯರಿಗೆ ಕಿಂಚಿತ್ತು ಗೌರವ, ಸಹಕಾರವನ್ನು ನೀಡದ ಸಿಬ್ಬಂದಿಗಳನ್ನು ಕೂಡಲೇ ವಜಾ ಮಾಡಬೇಕು ಇಲ್ಲವೇ ವರ್ಗಾವಣೆಗೊಳಿಸಿ ಉತ್ತಮವಾಗಿ ಕಾರ್ಯನಿರ್ವಹಣೆಯನ್ನು ಮಾಡುವ ಸಿಬ್ಬಂದಿಗಳನ್ನು ನೇಮಿಸಬೇಕೆಂದು ಒತ್ತಾಯಿಸಿ ಗ್ರಾಮಸ್ಥರು ಪ್ರತಿಭಟನೆಯಲ್ಲಿ ತೊಡಗಿದ್ದಾರೆ.
ಸಿದ್ದರಾಮದೇವರಪಾಳ್ಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಒಟ್ಟು 9 ಮಂದಿ ಸಿಬ್ಬಂದಿಗಳು ಕಾರ್ಯನಿರ್ವಹಣೆಯನ್ನು ಮಾಡುತ್ತಿದ್ದು, ಕಳೆದ ಒಂದೂವರೆ ವರ್ಷದಿಂದ ವೈದ್ಯರೊಬ್ಬರು ಹೊರಗುತ್ತಿಗೆಯ ಆಧಾರದಲ್ಲಿ ಬಂದು ಕಾರ್ಯನಿರ್ವಣೆಯನ್ನು ಮಾಡುತ್ತಿದ್ದಾರೆ. ಈ ಆರೋಗ್ಯ ಕೇಂದ್ರದಲ್ಲಿ ವೈದ್ಯರಾಗಿ ಡಾ.ಸಂತೋಷ್, ಸ್ಟಾಫ್‍ನರ್ಸ್ (ದಾದಿಯರು) ಗಳಾಗಿ ನಾಲ್ಕು ಜನ ಕಾರ್ಯನಿರ್ವಹಿಸುತ್ತಿದ್ದು ಲಲಿತಮ್ಮ, ಹೇಮಾಕ್ಷಮ್ಮ, ಹೇಮಾವತಿ, ಶೈಲಾ, ಡಿ ಗ್ರೂಪ್ ನೌಕರರಾಗಿ ಕೃಷ್ಣಪ್ಪ, ಅನಿಲ್, ಔಷಧಿ ವಿಭಾಗದಲ್ಲಿ ಸತೀಶ್, ಮೇಲ್ ವರ್ಕರ್ ಗುರುಮೂರ್ತಿ ಕಾರ್ಯನಿರ್ವಹಿಸುತ್ತಿದ್ದಾರೆ.
ಆದರೆ ಇಲ್ಲಿನ ಸಿಬ್ಬಂದಿಗಳಿಗೆ ವೈದ್ಯರ ಆಗಮನವು ಇರುಸು ಮುರುಸು ತಂದಿದ್ದು ವೈದ್ಯರಿಗೆ ಅಗತ್ಯವಾದ ಸೌಕರ್ಯ, ಔಷಧಿಗಳನ್ನು ನೀಡದೇ ಕಾರ್ಯನಿರ್ವಹಣೆಗೆ ಆಡಚಣೆ ಉಂಟಾಗುತ್ತಿದೆ. ಅಲ್ಲದೇ ವೈದ್ಯರಿಗೆ ಸಿಬ್ಬಂದಿಗಳೇ ಬೆದರಿಸಿ ಸರಿಯಾಗಿ ಆಸ್ಪತ್ರೆಗೆ ಹಾಜರಾಗದೇ ತಿಂಗಳಿಗೆ ಸರಿಯಾಗಿ ಸಂಬಳವನ್ನು ಪಡೆಯುತ್ತಿದ್ದಾರೆ ಎಂದು ಗ್ರಾಮಸ್ಥರ ಆರೋಪವಾಗಿದೆ.
ಗ್ರಾಮಸ್ಥ ಯೋಗೀಶ್ ಮಾತನಾಡಿ ಸಾರ್ವಜನಿಕ ಸೇವೆ ಮಾಡುವಲ್ಲಿ ಇಲ್ಲಿನ ಸಿಬ್ಬಂದಿಗಳು ವಿಫಲವಾಗಿದ್ದು, ಅಮಾಯಕ ವೈದ್ಯರಿಗೆ ಕಾರ್ಯನಿರ್ವಹಣೆ ಮಾಡಲು ಸಾಧ್ಯವಾಗದಂತೆ ಕಿರುಕುಳ ನೀಡುತ್ತಿದ್ದಾರೆ. ಇಲ್ಲಿನ ಸಿಬ್ಬಂದಿಗಳಿಗೆ ಹಣ ಮಾಡುವ ಉದ್ದೇಶವಿದ್ದು ವೈದ್ಯರು ಬಂದ ನಂತರದಲ್ಲಿ ಇದಕ್ಕೆಲ್ಲಾ ಅಸ್ಪದ ನೀಡದೇ ಪ್ರಾಮಾಣಿಕ ಸೇವೆಯನ್ನು ಮಾಡುತ್ತಿರುವುದಕ್ಕೆ ಇವರಿಗೆ ವೈದ್ಯರಿಗೆ ಸರಿಯಾಗಿ ಸ್ಫಂದಿಸುವುದಿಲ್ಲ.
ಅಲ್ಲದೇ ತಮಗೆ ಇಚ್ಛೇ ಬಂದಾಗ ಮಾತ್ರವೇ ಆಸ್ಪತ್ರೆಗೆ ಬರುವ ಇವರುಗಳಿಗೆ ತಾಲ್ಲೂಕಿನ ವೈದ್ಯಾಧಿಕಾರಿ ರವಿಕುಮಾರ್ ಸಹ ಇವರ ಬೆಂಗಾವಲಿಗೆ ನಿಂತಿದ್ದು ಸ್ಥಳಕ್ಕೆ ಭೇಟಿ ನೀಡಿ ಕಣ್ಣೊರೆಸುವ ತಂತ್ರವನ್ನು ಮಾಡುತ್ತಾರೆ. ಕೂಡಲೇ ಸಂಬಂಧಪಟ್ಟ ಜಿಲ್ಲಾ ವೈದ್ಯಾಧಿಕಾರಿ, ಜಿಲ್ಲಾಧಿಕಾರಿಗಳು ಇತ್ತ ಗಮನಹರಿಸಿ ಸಮಸ್ಯೆ ಬಗೆಹರಿಸಬೇಕೆಂದು ಆಗ್ರಹಿಸಿದರು.
ಬನ್ನಿಹಳ್ಳಿ ಗ್ರಾಮಸ್ಥ ಶಶಿಧರ್ ಮಾತನಾಡಿ ಆಸ್ಪತ್ರೆಯಲ್ಲಿ ವೈದ್ಯರು ಕಾರ್ಯನಿರ್ವಹಣೆಯಿಂದ ಸುತ್ತಮುತ್ತಲಿನ ಹತ್ತಾರು ಹಳ್ಳಿಗಳಿಂದ ಸಾರ್ವಜನಿಕರು ಚಿಕಿತ್ಸೆಗಾಗಿ ಇದೇ ಆಸ್ಪತ್ರೆಗೆ ಬರುತ್ತಿದ್ದು ದಿನನಿತ್ಯವೂ ಸುಮಾರು 35-40 ಜನ ರೋಗಿಗಳು ಚಿಕಿತ್ಸೆ ಪಡೆಯುತ್ತಾರೆ. ಆದರೆ ಔಷಧಿ ವಿತರಕ ಸತೀಶ್ ಸರಿಯಾಗಿ ಆಸ್ಪತ್ರೆಗೆ ಬಾರದೆ ರೋಗಿಗಳಿಗೆ ಚಿಕಿತ್ಸೆ ನೀಡಲು ತೊಂದರೆಯಾಗುತ್ತಿದೆ. ಅಲ್ಲದೇ ಕಳೆದ 2 ವರ್ಷದ ಹಿಂದೆ ಆಸ್ಪತ್ರೆಯಲ್ಲಿ ಇದ್ದಂತಹ ಟಿವಿ ಮತ್ತು ಕಂಪ್ಯೂಟರ್ ಕಳವಾಗಿದ್ದು,ಇದರ ಬಗ್ಗೆ ಯಾವ ಸಿಬ್ಬಂದಿಗಳು ಮಾಹಿತಿ ನಿಡುವುದಿಲ್ಲ. ಜೊತೆಗೆ ಆಸ್ಪತ್ರೆಗೆ ಬರುವ ಸೌಕರ್ಯಗಳನ್ನು ಸಾರ್ವಜನಿಕರಿಗೆ ನೀಡುವಲ್ಲಿ ವಿಫಲಾಗಿದ್ದು ವೈದ್ಯರಿಗೆ ಉತ್ತಮ ಸಿಬ್ಬಂದಿಗಳನ್ನು ನೀಡಬೇಕು. ಜೊತೆಗೆ ಆಸ್ಪತ್ರೆಯಲ್ಲಿ ಕಳವಾಗಿರುವ ವಸ್ತುಗಳ ತನಿಖೆಯಾಗಬೇಕೆಂದು ಒತ್ತಾಯಿಸಿದರು.