ಬೆಂಗಳೂರು
ವಕ್ಫ್ ಮಂಡಳಿಯ ಅಧೀನದಲ್ಲಿರುವ ಕಟ್ಟಡಗಳು ಕೋವಿಡ್ – 19 ಸೋಂಕಿತರಿಗೆ ನೆರವಿಗೆ ಬಳಸಿಕೊಳ್ಳುವಂತೆ ವಕ್ಪ್ ಮಂಡಳಿ ಮನವಿ ಮಾಡಿದೆ.
ಇತ್ತೀಚೆಗೆ ರಾಜ್ಯ ವಕ್ಫ್ ಮಂಡಳಿಯ ಅಧ್ಯಕ್ಷರು, ಸದಸ್ಯರು, ಅಧಿಕಾರಿಗಳ ನಿಯೋಗ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಸೋಂಕಿನ ಈ ಸಮಯದಲ್ಲಿ ಮಂಡಳಿಯು ತನ್ನ ಸಂಪೂರ್ಣ ಸಹಭಾಗಿತ್ವದೊಂದಿಗೆ ಹೆಮ್ಮಾರಿಯ ತಡೆಗೆ ಸದಾಕಾಲ ಸರ್ಕಾರದ ಜೊತೆಗಿರಲಿದೆ, ಮಂಡಳಿಯ ಅಧೀನದ ಶಾದಿ ಮಹಲ್, ಹಾಸ್ಟಲ್, ಮುಂತಾದ ಕಟ್ಟಡಗಳನ್ನು ಬಳಸಿಕೊಳ್ಳಬಹುದು ಎಂದು ಹೇಳಿದೆ.
ಕೋವಿಡ್ – 19 ಸೋಂಕಿತರಿಗೆ, ಆರೋಗ್ಯ ಕಾರ್ಯಕರ್ತರಿಗೆ ಕ್ವಾರಂಟೈನ್ ಮಾಡಲು, ಐಸೋಲೇಷನ್ ಕೇಂದ್ರಗಳಿಗೆ ಈ ಕಟ್ಟಡಗಳು ಮುಕ್ತವಾಗಿವೆ ಎಂದಿದೆ.
ಸೋಂಕು ತಡೆಯಲು ರಾಜ್ಯದಲ್ಲಿ ರಾತ್ರಿ 8 ರಿಂದ ಬೆಳಿಗ್ಗೆ 5 ಗಂಟೆಯ ವರೆಗೆ ರಾತ್ರಿ ಕರ್ಪ್ಯೂ ಜಾರಿಯಲ್ಲಿದ್ದು, ಈ ಸಮಯದಲ್ಲಿ ರಾತ್ರಿ 8 ರಿಂದ 9 ಗಂಟೆಯ ನಡುವಿನಲ್ಲಿ ಇಷಾ ಪ್ರಾರ್ಥನೆ ಕೈಗೊಳ್ಳಲು ಅನುಕೂಲವಾಗುವಂತೆ ಕರ್ಪ್ಯೂ ಅವಧಿಯನ್ನು ರಾತ್ರಿ 9.00ರಿಂದ ಜಾರಿಗೊಳಿಸಬೇಕು ಎಂದು ವಕ್ಫ್ ಮಂಡಳಿ ಮನವಿ ಮಾಡಿದೆ.
ವಕ್ಫ್ ಮಂಡಳಿಯ ಕಾರ್ಯಚಟುವಟಿಕೆಗಳ ಅನುಷ್ಠಾನ ಉದ್ದೇಶದಿಂದ ಸರ್ಕಾರದಿಂದ ಒಟ್ಟು 11 ಅಧಿಕಾರಿ ವೃಂದದ ಹುದ್ದೆಗಳನ್ನು ನಿಯೋಜನೆಯ ಮೂಲಕ ಭರ್ತಿ ಮಾಡಬೇಕಾಗಿದ್ದು, ಇವುಗಳಲ್ಲಿ ಖಾಲಿಯಾಗಿರುವ 10 ಅಧಿಕಾರಿ ವೃಂದದ ಹುದ್ದೆಗಳನ್ನು ಒಳಗೊಂಡಂತೆ ಸರ್ಕಾರದಿಂದ ನಿಯೋಜನೆ ಮೂಲಕ ಹಾಗೂ ಗ್ರೂಫ್- ಸಿ ಮತ್ತು ಗ್ರೂಪ್- ಡಿ ವೃಂದದ ಒಟ್ಟು 138 ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಬೇಕು. ಈ ಮೂಲಕ ಮಂಡಳಿಯ ಮಪರಿಣಾಮಕಾರಿ ಹಾಗೂ ಸುಗಮ ಆಡಳಿತಕ್ಕೆ ಅನುಕೂಲ ಮಾಡಿಕೊಡಬೇಕು ಎಂದು ಮಂಡಳಿ ಅಧ್ಯಕ್ಷ ಡಾ. ಮೊಹಮ್ಮದ್ ಯೂಸಫ್, ಸದಸ್ಯರಾದ ತನ್ವೀರ್ ಸೇಠ್, ಮೌಲಾನ್ ಎನ್.ಕೆ.ಎಮ್ ಶಾಫಿ ಸದಿ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಇಸ್ಲಾವುದ್ದೀನ್ ಜೆ ಗದ್ಯಾಳ್, ಸರ್ವೆ ಅಧಿಕಾರಿ ಮುಜಿಬುಲ್ಲಾ ಜಫ್ಫಾರಿ ನೇತೃತ್ವದ ನಿಯೋಗ ಮನವಿ ಮಾಡಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ