22 ನೇ ವಾರ್ಡ್: ರಂಗೇರಿದ ಉಪಚುನಾವಣೆ

ತುಮಕೂರು

ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಅಭ್ಯರ್ಥಿಗಳಿಂದ ನಾಮಪತ್ರ

       ತುಮಕೂರು ನಗರದ 22 ನೇ ವಾರ್ಡ್ (ಬಟವಾಡಿ)ನಲ್ಲಿ ತೆರವಾಗಿರುವ ಕಾರ್ಪೋರೇಟರ್ ಸ್ಥಾನಕ್ಕಾಗಿ ನಡೆಯಲಿರುವ ಉಪಚುನಾವಣೆಯಲ್ಲಿ ಸ್ಪರ್ಧಿಸಲು ಮೂರು ಪ್ರಮುಖ ಪಕ್ಷಗಳಾದ ಕಾಂಗ್ರೆಸ್‍ನಿಂದ ರುದ್ರೇಶ್, ಬಿಜೆಪಿಯಿಂದ ಸಂದೀಪ್‍ಗೌಡ ಮತ್ತು ಜೆಡಿಎಸ್‍ನಿಂದ ಶ್ರೀನಿವಾಸ ಮೂರ್ತಿ ಅವರುಗಳು ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದ್ದ ಗುರುವಾರ (ಮೇ 16) ತಮ್ಮ ನಾಮಪತ್ರ ಸಲ್ಲಿಸಿದರು. ಇದರೊಂದಿಗೆ ಉಪಚುನಾವಣೆಯು ರಂಗೇರಿತು.

      ಈ ಮೂರೂ ಪಕ್ಷಗಳ ಅಭ್ಯರ್ಥಿಗಳು ತಮ್ಮ ಬೆಂಬಲಿಗರೊಂದಿಗೆ ತಮಟೆ ವಾದ್ಯದ ಸದ್ದಿನೊಡನೆ ತುಮಕೂರು ಮಹಾನಗರ ಪಾಲಿಕೆ ಕಚೇರಿಗೆ ಮೆರವಣಿಗೆಯಲ್ಲಿ ಬಂದು, ನೆಲ ಅಂತಸ್ತಿನಲ್ಲಿರುವ ಉಪಮೇಯರ್ ಕೊಠಡಿಯಲ್ಲಿ ಚುನಾವಣಾಧಿಕಾರಿ ಉಮೇಶ್ ಅವರಿಗೆ ತಮ್ಮ ನಾಮಪತ್ರವನ್ನು ಸಲ್ಲಿಸಿದರು.

      ಕಾಂಗ್ರೆಸ್‍ನ ಅಭ್ಯರ್ಥಿ ರುದ್ರೇಶ್ ಅವರು ಮೊದಲಿಗೆ ಆಗಮಿಸಿ ನಾಮಪತ್ರ ಸಲ್ಲಿಸಿದರು. ತಮ್ಮ ಬೆಂಬಲಿಗರೊಡನೆ ಮೆರವಣಿಗೆಯಲ್ಲಿ ಪಾಲಿಕೆ ಕಚೇರಿಗೆ ಬಂದರು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ರಾಮಕೃಷ್ಣ, ಮಾಜಿ ಮೇಯರ್ ಗೀತಾ ರುದ್ರೇಶ್, ಮಾಜಿ ನಗರಸಭಾ ಸದಸ್ಯ ಮೆಹಬೂಬ್ ಪಾಷ ಮೊದಲಾದವರು ಸೂಚಕರಾಗಿ ಹಾಜರಿದ್ದರು.

       ನಂತರದಲ್ಲಿ ಬಿಜೆಪಿಯ ಅಭ್ಯರ್ಥಿ ಸಂದೀಪ್‍ಗೌಡ ಅವರು ಮೆರವಣಿಗೆಯಲ್ಲಿ ಆಗಮಿಸಿದರು. ಇವರು ನಾಮಪತ್ರ ಸಲ್ಲಿಸುವಾಗ ತುಮಕೂರು ನಗರದ ಶಾಸಕ ಜಿ.ಬಿ.ಜ್ಯೋತಿಗಣೇಶ್, ಮಾಜಿ ಕಾರ್ಪೋರೇಟರ್ ಬಿ.ಎಸ್.ನಾಗೇಶ್, ಮುಖಂಡ ಟಿ.ಆರ್.ಸದಾಶಿವಯ್ಯ ಮತ್ತಿತರರು ಸೂಚಕರಾಗಿ ಉಪಸ್ಥಿತರಿದ್ದರು.

        ಇವರ ಬಳಿಕ ಜೆಡಿಎಸ್ ಅಭ್ಯರ್ಥಿ ಶ್ರೀನಿವಾಸ ಮೂರ್ತಿ ಅವರೂ ಬೆಂಬಲಿಗರೊಂದಿಗೆ ಮೆರವಣಿಗೆಯಲ್ಲಿ ಬಂದರು. ಇದೇ ವಾರ್ಡ್‍ನಿಂದ ಈ ಹಿಂದೆ ವಿಜೇತರಾಗಿದ್ದ ಮಾಜಿ ಮೇಯರ್ ದಿವಂಗತ ಎಚ್.ರವಿಕುಮಾರ್ ಅವರ ತಂದೆ ಹನುಮಂತರಾಯಪ್ಪ, ದಿವಂಗತ ರವಿಕುಮಾರ್ ಅವರ ಪತ್ನಿ ಸವಿತಾ ರವಿಕುಮಾರ್ ಹಾಗೂ ಸಹೋದರಿ ಅವರುಗಳು ಈ ಸಂದರ್ಭದಲ್ಲಿ ಹಾಜರಿದ್ದುದು ವಿಶೇಷವಾಗಿತ್ತು. ಶ್ರೀನಿವಾಸ ಮೂರ್ತಿ ಅವರು ನಾಮಪತ್ರ ಸಲ್ಲಿಸುವಾಗ ಮೇಯರ್ ಲಲಿತಾ ರವೀಶ್, ಸವಿತಾ ರವಿಕುಮಾರ್, ಜೆಡಿಎಸ್ ಮುಖಂಡ ಜಯಣ್ಣ ಮೊದಲಾದವರು ಇದ್ದರು.

15 ಜನರಿಂದ ನಾಮಪತ್ರ

           ಬಹುಜನ ಸಮಾಜ ಪಕ್ಷದ ವತಿಯಿಂದ ರೇಣುಕಾಪ್ರಸಾದ್ ಅವರು ಆ ಪಕ್ಷದ ಮುಖಂಡರೊಡನೆ ಆಗಮಿಸಿ ನಾಮಪತ್ರ ಸಲ್ಲಿಸಿದ್ದಾರೆ. ಸ್ಪರ್ಧೆ ಬಯಸಿ ಒಟ್ಟಾರೆ 15 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. ಇವರಲ್ಲಿ ಕೆಲವರು ಎರಡು ಸೆಟ್ ನಾಮಪತ್ರ ಸಲ್ಲಿಸಿದ್ದಾರೆ.ಇಂದು ಪರಿಶೀಲನೆ,29 ರಂದು ಮತದಾನ ಮೇ 17 ರಂದು ಈ ಎಲ್ಲ ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ಉಮೇದುವಾರಿಕೆ ಹಿಂತೆಗೆದುಕೊಳ್ಳಲು ಮೇ 20 ಕೊನೆಯ ದಿನವಾಗಿದೆ. ಮೇ 29 ರಂದು ಬೆಳಗ್ಗೆ 7 ರಿಂದ ಸಂಜೆ 5 ಗಂಟೆಯವರೆಗೆ ಮತದಾನ ನಡೆಯಲಿದೆ. ಮೇ 31 ರಂದು ಬೆಳಗ್ಗೆ 8 ಗಂಟೆಯಿಂದ ಮತ ಎಣಿಕೆ ಆರಂಭವಾಗಲಿದ್ದು, ಅಂದೇ ಫಲಿತಾಂಶ ಪ್ರಕಟವಾಗಲಿದೆ.

         ತುಮಕೂರು ಮಹಾನಗರ ಪಾಲಿಕೆಗೆ 2018 ರ ಆಗಸ್ಟ್ 31 ರಂದು ಚುನಾವಣೆ ನಡೆದಿತ್ತು. ಆಗ 22 ನೇ ವಾರ್ಡ್‍ನಿಂದ ಜೆಡಿಎಸ್‍ನ ಮಾಜಿ ಮೇಯರ್ ಎಚ್.ರವಿಕುಮಾರ್ ವಿಜೇತರಾಗಿದ್ದರು. ಅದಾದ ಕೆಲವೇ ದಿನಗಳಲ್ಲಿ ಅವರು ಹತ್ಯೆಗೊಳಗಾದ ಹಿನ್ನೆಲೆಯಲ್ಲಿ ಆ ವಾರ್ಡ್‍ನ ಕಾರ್ಪೋರೇಟರ್ ಸ್ಥಾನವು ತೆರವಾಗಿತ್ತು. ಈ ಕಾರಣದಿಂದ ಸದರಿ ವಾರ್ಡ್‍ನಲ್ಲಿ ಮೇ 29 ರಂದು ಉಪಚುನಾವಣೆ ನಡೆಯುತ್ತಿದೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap