ಚಿತ್ರದುರ್ಗ:
ತ್ಯಾಜ್ಯ ಮುಕ್ತ ಮತ್ತು ವ್ಯಾಜ್ಯ ಮುಕ್ತ ಸಮಾಜ ನಿರ್ಮಾಣಕ್ಕೆ ಸಮುದಾಯಗಳ ಸಹಭಾಗಿತ್ವ ಮುಖ್ಯ ಎಂದು ಜಿ.ಪಂ.ಅಧ್ಯಕ್ಷೆ ಸೌಭಾಗ್ಯ ಬಸವರಾಜನ್ ಹೇಳಿದರು.
ಬ್ರೆಡ್ಸ್ ಬೆಂಗಳೂರು, ಚಿತ್ರಡಾನ್‍ಬೋಸ್ಕೋ ಇವರುಗಳ ಸಂಯುಕ್ತಾಶ್ರಯದಲ್ಲಿ ಮಾನವ ಹಕ್ಕುಗಳ ದಿನಾಚರಣೆ ಅಂಗವಾಗಿ ಚಿತ್ರಡಾನ್‍ಬೋಸ್ಕೋದಲ್ಲಿ ಗುರುವಾರ ನಡೆದ ಸಮುದಾಯ ಸಹಭಾಗಿದಾರರ ತರಬೇತಿ ಗ್ರಾ.ಪಂ.ಗಳ ಅಭಿವೃದ್ದಿ ಮತ್ತು ಮಕ್ಕಳ ರಕ್ಷಣೆ ಕುರಿತ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಸದೃಢ ಸಮಾಜಕ್ಕೆ ಆರೋಗ್ಯಪೂರ್ಣ ಮಕ್ಕಳು ಬೇಕಾಗಿರುವುದರಿಂದ ಮಕ್ಕಳಿಗೆ ಪೌಷ್ಟಿಕಾಂಶವುಳ್ಳ ಆಹಾರ ಬಟ್ಟೆ ಕೊಟ್ಟು ಕಾಪಾಡಲಿಲ್ಲವೆಂದರೆ ದುಶ್ಚಟಕ್ಕೆ ಬಲಿಯಾಗುತ್ತಾರೆ. ಆರ್ಥಿಕವಾಗಿ ಸಬಲರಾಗಿ ಕೆಟ್ಟ ಚಟ ಕಲಿತರೆ ಏನು ಪ್ರಯೋಜನ. ಇಡೀ ಸಮಾಜವನ್ನು ತಿದ್ದುವ ಹೊಣೆಗಾರಿಕೆ ಸಮುದಾಯಗಳ ಸಹಭಾಗಿದಾರರ ಮೇಲಿದೆ ಎಂದು ತಿಳಿಸಿದರು.
ಒಂದು ಗಿಡ ನೆಟ್ಟು ನೀರು ಗೊಬ್ಬರ ನೀಡಿ ಪೋಷಣೆ ಮಾಡಿದರೆ ಸಾಲದು. ಜಾನುವಾರುಗಳು ಗಿಡವನ್ನು ತಿನ್ನದೆ ಜೋಪಾನವಾಗಿ ಕಾಪಾಡಿದಾಗ ದೊಡ್ಡ ಮರವಾಗಿ ಬೆಳೆಯಲು ಸಾಧ್ಯ. ಅದೇ ರೀತಿ ಮಕ್ಕಳು ದೈಹಿಕವಾಗಿ ಬೆಳೆಯಲು ಊಟ ಬಟ್ಟೆ ಕೊಟ್ಟರೆ ಸಾಲದು. ಗುಣಮಟ್ಟದ ಆರೋಗ್ಯ ಶಿಕ್ಷಣವನ್ನು ನೀಡಬೇಕು. ಮಗುವಿನಲ್ಲಿರುವ ಯಾವುದೋ ಒಂದು ನೂನ್ಯತೆಯನ್ನು ಪದೆ ಪದೆ ಚುಚ್ಚಿ ಹೇಳುವುದರಿಂದ ಮಕ್ಕಳ ಮನಸ್ಸಿಗೆ ನೋವಾಗುತ್ತದೆ. ಮಗುವಿನ ಮನಸ್ಸನ್ನು ಪ್ರೀತಿಯಿಂದ ಗೆಲ್ಲಬೇಕು ಎಂದು ಹೇಳಿದರು.
ಮೊಬೈಲನ್ನು ಒಳ್ಳೆಯದಕ್ಕೆ ಬಳಸಿ. ಮನೆಯಿಂದಲೇ ಮಗುವಿಗೆ ಒಳ್ಳೆಯ ವಾತಾವರಣ ಸೃಷ್ಟಿಸಿ ದೇಶಕ್ಕೆ ಆಸ್ತಿಯನ್ನಾಗಿ ಕೊಡಿ. ಅಕ್ಕಪಕ್ಕದವರ ಜೊತೆ ಉತ್ತಮ ಬಾಂಧವ್ಯವಿಟ್ಟುಕೊಂಡು ಆರೋಗ್ಯಪೂರ್ಣ ಸಮಾಜ ನಿರ್ಮಿಸಿ. ಸರ್ಕಾರದ ಸೌಲಭ್ಯಗಳನ್ನು ಪಡೆದುಕೊಂಡು ಉತ್ತಮ ಪ್ರಜೆಗಳಾಗಿ ಎಂದರು.
ಫಾದರ್ ಸೋನಿಚನ್‍ಮ್ಯಾಥ್ಯು ಪ್ರಾಸ್ತಾವಿಕವಾಗಿ ಮಾತನಾಡಿ ಮಕ್ಕಳು, ಮಹಿಳೆಯರ ಮೇಲಾಗುತ್ತಿರುವ ದೌರ್ಜನ್ಯ, ಕಿರುಕುಳವನ್ನು ತಪ್ಪಿಸಬೇಕಾದರೆ ಸಮುದಾಯದಲ್ಲಿದ್ದುಕೊಂಡು ಸಮುದಾಯದ ಒಳಿತಿಗೆ ಕೆಲಸ ಮಾಡಬೇಕು. ಸಮುದಾಯ ಸಹಭಾಗಿದಾರರು ಎಲ್ಲರೂ ಒಟ್ಟಿಗೆ ಸೇರಿ ಏನಾದರೂ ಒಳಿತು ಮಾಡಿದಾಗ ಮಾತ್ರ ಶಾಂತಿಯುತ ಸಮಾಜ ನಿರ್ಮಾಣವಾಗಲಿದೆ ಎಂದು ತಿಳಿಸಿದರು.ಫಾದರ್ ವರ್ಗಿಸ್‍ಪಳ್ಳಿಪುರಂ, ಪ್ರಭಾಕರ್, ಸಂಪನ್ಮೂಲ ಮಹಿಳೆ ಕೃಪ, ಕು.ಅರ್ಪಿತ ವೇದಿಕೆಯಲ್ಲಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ