ತುಮಕೂರು
ಜೋರು ಮಳೆ ಬಂದರೆ ಸಾಕು ಸ್ಮಾರ್ಟ್ ಸಿಟಿಯಾಗುತ್ತಿರುವ ತುಮಕೂರು ನಗರದ ಪ್ರಮುಖ ರಾಜಗಾಲುವೆಗಳು ತುಂಬಿ ರಸ್ತೆಗೆ ನೀರು ಹರಿದು ಮನೆಗಳಿಗೂ ನುಗ್ಗಿ ಅವಾಂತರ ಸೃಷ್ಟಿಯಾಗುತ್ತಿದೆ. ಪ್ರತಿ ವರ್ಷ ಮಳೆಗಾಲದಲ್ಲೂ ಈ ಸಮಸ್ಯೆ ಮರುಕಳಿಸುತ್ತಲೆ ಇದ್ದರೂ, ಇದಕ್ಕೆ ಶಾಶ್ವತ ಪರಿಹಾರ ಕಲ್ಪಿಸುವಲ್ಲಿ ಸ್ಥಳೀಯ ಆಡಳಿತಗಳು ವಿಫಲವಾಗಿವೆ.
ನಗರದ ಹಲವೆಡೆ ರಾಜಗಾಲುವೆ ಒತ್ತುವರಿಯಾಗಿದ್ದು, ಅನೇಕ ಕಡೆ ಯುಜಿಡಿ, ಚರಂಡಿ ನೀರನ್ನು ರಾಜಗಾಲುವೆಗೆ ಹರಿಸಿರುವುದು ಕಸಕಡ್ಡಿ, ಕಲ್ಲು ತುಂಬಿಕೊಂಡು ಮಳೆ ನೀರು ಸರಾಗವಾಗಿ ಹರಿಯಲು ತೊಂದರೆಯಾಗಿದೆ. ಕಳೆದ ಕೆಲವು ದಿನಗಳಿಂದ ರಭಸವಾಗಿ ಸುರಿಯುತ್ತಿರುವ ಮಳೆ ರಾಜಗಾಲುವೆ ಒತ್ತುವರಿಯ ನೈಜ ಸ್ಥಿತಿಯ ದರ್ಶನ ಮಾಡಿಸಿದ್ದು, ನಗರದ 30ನೆ ವಾರ್ಡ್ ವ್ಯಾಪ್ತಿಗೆ ಬರುವ ಸಪ್ತಗಿರಿ ಬಡಾವಣೆ ದಕ್ಷಿಣ ಭಾಗದ ಮನೆಗಳು, ಶಂಕರ್‍ಪುರಂ ಹಿಂಭಾಗದ ಆರ್.ಟಿ. ನಗರ, ಮುನ್ಸಿಪಲ್ ಲೇಔಟ್, ಸಿದ್ಧಗಂಗಾ ಬಡಾವಣೆ, ದಿಬ್ಬೂರು ರಸ್ತೆ, ಮೆಳೆಕೋಟೆ ಸೇರಿದಂತೆ ರಾಜಗಾಲುವೆ ಹಾದುಹೋಗುವ ನಗರದ ವಿವಿಧ ವಾರ್ಡ್‍ಗಳ ನಿವಾಸಿಗಳು ಕಾಲುವೆಯಲ್ಲಿ ನೀರು ಸರಾಗವಾಗಿ ಹರಿಯದೆ ಮನೆಗಳು ಜಲಾವೃತವಾಗುವ ಭೀತಿ ಎದುರಿಸುತ್ತಿದ್ದಾರೆ.
ಗಾರೆ ನರಸಯ್ಯನ ಕಟ್ಟೆ ಕೋಡಿ ಒಡೆದರೆ ಅಪಾಯ: ಕಳೆದ ಕೆಲವು ದಿನಗಳಿಂದ ಸುರಿದ ಮಳೆಗೆ ಗಾರೆ ನರಸಯ್ಯನ ಕಟ್ಟೆ ತುಂಬುವ ಹಂತ ತಲುಪಿದ್ದು, 19.10 ಗುಂಟೆ ವಿಸ್ತೀರ್ಣದ ಕಟ್ಟೆ ಮುಕ್ಕಾಲು ಎಕರೆ ಹಾಗೂ ರಾಜಗಾಲುವೆ ಪೂರ್ಣ ಒತ್ತುವರಿಯಾಗಿರುವುದು ಹಿಂದೆ ನಡೆದ ಸರ್ವೆಯಲ್ಲಿ ಬಹಿರಂಗಗೊಂಡಿದೆ. ಸನಿಹದ ಲೇಔಟ್‍ನವರು ಪಾರ್ಕ್ ಜಾಗವೆಂದು ತೋರಿಸಿ ಕಟ್ಟೆಯ ಜಾಗವನ್ನು ಲೇಔಟ್‍ಗೆ ಅತಿಕ್ರಮಿಸಿಕೊಂಡಿರುವ ಆರೋಪವಿದ್ದು, ಇದರೊಂದಿಗೆ ಕಟ್ಟೆಯ ನೀರು ರಾಜಗಾಲುವೆ ಮೂಲಕ ಸರಾಗವಾಗಿ ಹರಿದು ಹೋಗಲು ಸಾಧ್ಯವಾಗದೆ ಸದ್ಯ ಹರಿದು ಬರುತ್ತಿರುವ ನೀರಿನಿಂದ ಕಟ್ಟೆ ಕೋಡಿ ಒಡೆಯುವ ಅಪಾಯ ಎದುರಾಗಿದೆ. ಇನ್ನೊಂದೆರಡು ಜೋರು ಮಳೆ ಬಿದ್ದರೆ ಕಟ್ಟೆ ಕೋಡಿ ಒಡೆದು, ಸಪ್ತಗಿರಿ ಬಡಾವಣೆ ದಕ್ಷಿಣ ಭಾಗದ ಸುತ್ತಲಿನ ಮನೆಗಳಿಗೆ ನೀರು ನುಗ್ಗಲಿದ್ದು, ಜಲಗಂಡಾಂತರ ಸಂಭವಿಸುವ ಆತಂಕವನ್ನು 30ನೇ ವಾರ್ಡ್‍ನ ಪಾಲಿಕೆ ಸದಸ್ಯ ವಿಷ್ಣುವಧರ್Àನ್ ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿರುವ ಮನವಿಯಲ್ಲಿ ವ್ಯಕ್ತಪಡಿಸಿದ್ದಾರೆ.
ಅಮಾನಿಕೆರೆ ನೈಸರ್ಗಿಕ ನೀರಿನ ಮೂಲಗಳೆ ಬಂದ್: ತುಮಕೂರಿನ ಹೃದಯಭಾಗದ ಅಮಾನಿಕೆರೆಗೆ ಸದ್ಯ ಹೇಮಾವತಿ ನೀರನ್ನು ಹರಿಸಲಾಗುತ್ತಿದ್ದು, ನೈಸರ್ಗಿಕ ನೀರಿನ ಮೂಲಗಳೇ ಬಂದ್ ಆಗಿರುವುದು ದುರಂತವೆನಿಸಿದೆ. ಅಮಾನಿಕೆರೆಗೆ ನೀರಿನ ಮೂಲವಾಗಿ ರಾಜರ ಆಳ್ವಿಕೆಯ ಅವಧಿಯಲ್ಲೇ ಕುಂದೂರು ಕ್ರಾಸ್, ಜಗನ್ನಾಥಪುರ, ಪುಟ್ಟಸ್ವಾಮಯ್ಯನಪಾಳ್ಳ ಸೇರಿದಂತೆ ನಾಲ್ಕು ಕಡೆ ರಾಜಗಾಲುವೆ ನಿರ್ಮಿಸಿ ನೈಸರ್ಗಿಕವಾಗಿ ಮಳೆ ನೀರು ಹರಿದು ಮುಂದೆ ಕೋಡಿ ಬಿದ್ದು ಮಲ್ಲಸಂದ್ರದ ತನಕ ಹರಿದು ಹೋಗುವ ವ್ಯವಸ್ಥೆ ಕಲ್ಪಿಸಲಾಗಿತ್ತು.
ಕಸ ಕಡ್ಡಿ, ಹಾವು ಚೇಳುಗಳು ಎಂಟ್ರಿ:
ನಗರದ ರಾಜಗಾಲುವೆಗಳಲ್ಲಿ ಒತ್ತುವರಿಯಿಂದ ನೀರು ಸರಾಗವಾಗಿ ಹರಿಯದ ಕಾರಣ, ಜತೆಗೆ ಚರಂಡಿ ನೀರು, ಯುಜಿಡಿ ನೀರು ಸಹ ರಾಜಗಾಲುವೆಗೆ ಬಿಟ್ಟಿರುವ ಕಾರಣ, ಜೋರಾಗಿ ಮಳೆ ಬಂದ ಸಂದರ್ಭದಲ್ಲಿ ಕಾಲುವೆಯಲ್ಲಿ ನೀರು ತುಂಬಿ ರಸ್ತೆ ಮನೆಗಳಿಗೆ ಪ್ರವೇಶಿಸುತ್ತದೆ. ಈ ವೇಳೆ ಕಲುಷಿತ ನೀರು ಮಾತ್ರ ನುಗ್ಗುವುದಿಲ್ಲ. ಹಾವು ಚೇಳುಗಳು ನೀರಿನೊಂದಿಗೆ ಮನೆಗಳಿಗೆ ಎಂಟ್ರಿ ಕೊಡುತ್ತದೆ. ಎರಡು-ಮೂರು ಅಡಿ ಎತ್ತರಕ್ಕೆ ನೀರು ನಿಂತಾಗ ಮನೆಯಲ್ಲಿ ಮಕ್ಕಳು, ವೃದ್ಧರು ಎಲ್ಲಿಗೆ ಹೋಗಬೇಕು.
ಒತ್ತುವರಿಯ ಸಮಗ್ರ ಸರ್ವೆ ಅಗತ್ಯ:
ಸದ್ಯ ನಗರದ ರಾಜಗಾಲುವೆಗಳ ವಿಸ್ತೀರ್ಣ, ಆಳ, ಉದ್ದದ ಬಗ್ಗೆ ಪೂರ್ಣ ಸಮೀಕ್ಷೆಯ ಮಾಹಿತಿಯೂ ಪಾಲಿಕೆಯ ಬಳಿ ಲಭ್ಯವಿಲ್ಲ. ಬರೀ ಪಟ್ಟಿ ಮಾತ್ರ ಲಭ್ಯವಿದೆ. 2019 ರಲ್ಲಿ ಈ ಬಗ್ಗೆ ಪೂರ್ಣ ಸರ್ವೆ ಮಾಡಿಸಲು ಜಿಲ್ಲಾಡಳಿತಕ್ಕೆ ಪಾಲಿಕೆಯಿಂದ ಪತ್ರ ಬರೆದಿದ್ದರೂ ಆ ಕಾರ್ಯ ಇನ್ನೂ ಆಗಿಲ್ಲ. ಈ ಕಾರ್ಯ ಬೇಗ ಪೂರ್ಣಗೊಂಡು ಒತ್ತುವರಿ ತೆರವುಗೊಳಿಸಿ, ಕಸ ಕಡ್ಡಿ ಚರಂಡಿ ನೀರು ತ್ಯಾಜ್ಯ ಇವುಗಳನ್ನು ರಾಜಗಾಲುವೆಯಲ್ಲಿ ಹರಿಸುವುದನ್ನು ನಿಲ್ಲಿಸಿದರೆ ನಗರದ ಅಮಾನಿಕೆರೆ ಸೇರಿದಂತೆ ಹಲವು ಜಲಸಂಗ್ರಹಾಗಾರಗಳಿಗೆ ನೀರು ಹರಿದು ಅಂತರ್ಜಲ ಮಟ್ಟ ವೃದ್ಧಿಸುವ ಜತೆಗೆ ಅಮಾನಿಕೆರೆ ಸುತ್ತಮುತ್ತ ತರಕಾರಿ, ಹೂ ಬೆಳೆಯುವ ಏಳು ಹಳ್ಳಿಗಳ ರೈತರಿಗೂ ಅನುಕೂಲವಾಗಲಿದೆ.
ಹಳೆಯ ಪ್ರಮುಖ ರಾಜಗಾಲುವೆಗಳು
* ಜಗನ್ನಾಥಪುರದಿಂದ – ಅಮಾನಿಕೆರೆವರೆಗೆ * ಅಮಾನಿಕೆರೆಯಿಂದ- ಭೀಮಸಂದ್ರದವರೆಗೆ.*ನವಿಲಹಳ್ಳಿಯಿಂದ- ಅಮಾನಿಕೆರೆವರೆಗೆ *ಮಾರುತಿನಗರದಿಂದ- ಗಾರೆನರಸಯ್ಯನಕಟ್ಟೆವರೆಗೆ *ಬಾವಿಕಟ್ಟೆ ಕಲ್ಯಾಣಮಂಟಪದಿಂದ – ದಿಬ್ಬೂರುವರೆಗೆ *ಕೆಐಎಡಿಬಿ ಕೈಗಾರಿಕಾ ಪ್ರದೇಶದಿಂದ-ಲಿಂಗಾಪುರದವರೆಗೆ *ಗುಬ್ಬಿಗೇಟ್‍ನಿಂದ- ಕೋಡಿಬಸವೇಶ್ವರ ರಸ್ತೆಯವರೆಗೆ*ಅರಳಿಮರದಪಾಳ್ಯದಿಂದ-ಮರಳೇನಹಳ್ಳಿ ಯವರೆಗೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
