ತುಮಕೂರು
ತುಮಕೂರು ನಗರದಲ್ಲಿ ಸೋಮವಾರ ರಾತ್ರಿ ಸುರಿದ ಧಾರಾಕಾರ ಮಳೆಯಿಂದಾಗಿ ತುಮಕೂರು ನಗರದ ಶೆಟ್ಟಿಹಳ್ಳಿ ಗೇಟ್‍ನಲ್ಲಿರುವ ಅಂಡರ್‍ಪಾಸ್ ಮತ್ತು ನಗರದ ವಿವಿಧ ಬಡಾವಣೆಗಳ ಮನೆಗಳಿಗೆ ನೀರು ನುಗ್ಗಿದ ಪ್ರಸಂಗಗಳು ನಡೆದಿವೆ.
ಅಂಡರ್‍ಪಾಸ್‍ನಲ್ಲಿ ಸೋಮವಾರ ಮಧ್ಯರಾತ್ರಿ ಸುಮಾರು 2 ಗಂಟೆಯಲ್ಲಿ ನೀರು ತುಂಬಿರುವ ವಿಚಾರ ತಿಳಿದು ತಕ್ಷಣವೇ 30 ನೇ ವಾರ್ಡ್ ಕಾರ್ಪೊರೇಟರ್ ವಿಷ್ಣುವರ್ಧನ್ (ಪಕ್ಷೇತರ) ಸ್ಥಳಕ್ಕೆ ಧಾವಿಸಿದ್ದಾರೆ. ಇಲ್ಲಿನ ಆಟೋಮ್ಯಾಟಿಕ್ ಮೋಟಾರ್ ಪಂಪ್ ಅನ್ನು ನಿರ್ವಹಿಸುವ ಪಾಲಿಕೆ ಸಿಬ್ಬಂದಿಗಳಾದ ನಾರಾಯಣಮೂರ್ತಿ ಮತ್ತು ನರಸಯ್ಯ ಅವರೊಂದಿಗೆ ಮುಂದಿನ ಕ್ರಮಕ್ಕೆ ಗಮನಹರಿಸಿದ್ದಾರೆ.
ಅಲ್ಲಿ ಒಟ್ಟು 2 ಮೋಟಾರ್‍ಗಳಿದ್ದು, ಅದರಲ್ಲಿ ಒಂದು ಮೋಟಾರ್‍ನ ವೈರ್ ದಿಢೀರನೆ ಸುಟ್ಟುಹೋಗಿದ್ದರಿಂದ, ಇದ್ದ ಒಂದೇ ಮೋಟಾರನ್ನು ಚಾಲನೆಗೊಳಿಸಿ ನೀರು ಹೊರಹೋಗುವಂತೆ ಸದರಿ ಸಿಬ್ಬಂದಿ ರಾತ್ರಿಯಿಡಿ ಶ್ರಮಿಸಿದ್ದಾರೆ. ಮಂಗಳವಾರ ಬೆಳಗಿನ ಜಾವ ಸುಮಾರು 5-30 ರ ಹೊತ್ತಿಗೆ ಇಲ್ಲಿ ನಿಂತಿದ್ದ ನೀರನ್ನು ಸಂಪೂರ್ಣವಾಗಿ ಹೊರಕ್ಕೆ ಹಾಕಲಾಗಿದ್ದು, ಸಾರ್ವಜನಿಕ ಸಂಚಾರಕ್ಕೆ ತೆರವುಗೊಳಿಸಲಾಗಿದೆ.
ಈ ಮಧ್ಯೆ ನಗರದ ಕೋತಿ ತೋಪು ಬಳಿಯ ಕೆ.ಇ.ಬಿ. ಕಲ್ಯಾಣ ಮಂಟಪದ ಎದುರಿನ ವೃತ್ತದಲ್ಲಿ ಕೆರೆಯೋಪಾದಿಯಲ್ಲಿ ಮಳೆ ನೀರು ನಿಂತು ಭಾರಿ ಸಮಸ್ಯೆ ತಲೆದೋರಿತು. ನೀರು ಮುಂದಕ್ಕೆ ಹೋಗುವ ಜಾಗ ಯಾವುದೆಂಬುದು ಗೊತ್ತಾಗದೇ ಇದ್ದುದರಿಂದ ಸಮಸ್ಯೆ ಹಾಗೆಯೇ ಉಳಿಯಿತು. ಮಂಗಳವಾರ ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಪಾಲಿಕೆಯ ಇಂಜಿನಿಯರ್‍ಗಳು ಮತ್ತು ಆರೋಗ್ಯ ಶಾಖೆಯ ಸಿಬ್ಬಂದಿ ಸ್ಥಳದಲ್ಲಿದ್ದು, ನೀರು ಹರಿದು ಹೋಗುವಂತೆ ಮಾಡಿದರು.
ಇದಲ್ಲದೆ ನಗರದ ಶಂಕರಪುರಂ, ಶಾರದಾದೇವಿನಗರ, ಚಿಕ್ಕಪೇಟೆಯ ಗಾರ್ಡನ್ ರಸ್ತೆಯ ಅಯ್ಯಪ್ಪಸ್ವಾಮಿ ದೇವಾಲಯದ ಬಳಿ, ಮಹಾತ್ಮಗಾಂಧಿರಸ್ತೆ, ಸಂತೆಪೇಟೆಯ ಬೀಬಿಜಾನ್ ಲೇಔಟ್, ಶಿರಾಗೇಟ್‍ನ ಹೌಸಿಂಗ್ ಬೋರ್ಡ್ ಕಾಲೋನಿ ಮೊದಲಾದ ಕಡೆಗಳಲ್ಲಿ ಮಳೆ ನೀರು ಮನೆಗಳಿಗೆ ನುಗ್ಗಿದ್ದರಿಂದ ಆ ಭಾಗದ ನಿವಾಸಿಗಳು ತೀವ್ರ ಸಂಕಷ್ಟಕ್ಕೆ ಒಳಗಾದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ