ತುಮಕೂರು
ರಾತ್ರಿ ಸುರಿದ ಬಿರು ಮಳೆ ನಗರದ ಅಂತರಸನಹಳ್ಳಿ ತರಕಾರಿ ಮಾರುಕಟ್ಟೆಯ ಮಾನ ಹರಾಜು ಮಾಡಿದೆ. ಮಾರುಕಟ್ಟೆ ನಿರ್ಮಿಸಿ ನಿರ್ವಹಿಸುತ್ತಿರುವ ಎಪಿಎಂಸಿ ಆಡಳಿತದ ಕಾರ್ಯವೈಖರಿಯನ್ನು ಬಯಲು ಮಾಡಿದೆ.
ಸುಸಜ್ಜಿತ ಮಾರುಕಟ್ಟೆಯ ವೈಜ್ಞಾನಿಕ ಮಾನದಂಡ ಅನುಸರಿಸದೆ ನಿರ್ಮಾಣಗೊಂಡಿರುವ ಈ ಮಾರುಕಟ್ಟೆಯಲ್ಲಿ ವ್ಯಾಪಾರಿಗಾಗಲೀ, ಗ್ರಾಹಕರಿಗಾಗಲಿ ಕನಿಷ್ಟ ಸೌಕರ್ಯವಿಲ್ಲ. ನಗರದ ಜನಸಂಖ್ಯೆ, ಬೇಡಿಕೆ ಹೆಚ್ಚಾಗಿ ಸುಸಜ್ಜಿತ ಮಾರುಕಟ್ಟೆ ನಿರ್ಮಾಣ ಮಾಡಬೇಕೆಂಬ ಉದ್ದೇಶದಿಂದ ಅಂತರಸನಹಳ್ಳಿ ಕೆರೆ ಅಂಗಳದಲ್ಲಿ ನಿರ್ಮಾಣ ಮಾಡಿ ಬಾಳನಕಟ್ಟೆಯಲ್ಲಿದ್ದ ಅಧ್ವಾನದ ಮಾರುಕಟ್ಟೆಯನ್ನು ಇಲ್ಲಿಗೆ ಸ್ಥಳಾಂತರಿಸಲಾಗಿತ್ತು.
ಕೆರೆ ಅಂಗಳದ ಹಳ್ಳದಲ್ಲಿ ಮಾರುಕಟ್ಟೆ ನಿರ್ಮಿಸಿದವರು ಮಳೆಗಾಲದಲ್ಲಿ ನಿಲ್ಲಬಹುದಾದ ನೀರನ್ನು ತಡೆಯಲು ಇಲ್ಲಿ ಕನಿಷ್ಟ ವ್ಯವಸ್ಥಿತ ಚರಂಡಿ ನಿರ್ಮಾಣ ಮಾಡಿಲ್ಲ. ಸಣ್ಣ ಮಳೆಗೂ ಮಾರುಕಟ್ಟೆ ಜಲಾವೃತವಾಗಿ ವ್ಯಾಪಾರ ವಹಿವಾಟಿಗೆ ಕಿರಿಕಿರಿ ಉಂಟುಮಾಡುತ್ತದೆ. ಹಳ್ಳದ ಜೊತೆಗೆ ಮಾರುಕಟ್ಟೆ ಒಳಗಿನ ರಸ್ತೆಗಳು ಹಾಳಾಗಿ ಗುಂಡಿಬಿದ್ದು ಕೊಳಚೆ ನೀರು ಸಂಗ್ರಹವಾಗುತ್ತದೆ. ಸೋಮವಾರ ರಾತ್ರಿ ಭಾರಿ ಮಳೆ ಸುರಿದು ಪಕ್ಕದ ಡ್ರೈನೇಜ್ ತುಂಬಿ ಹೊರಳಿ ಮಾರುಕಟ್ಟೆ ಜಲಾವೃತವಾಯಿತು. ಅಂಗಡಿಗಳ ಗೋಡೆ ಜಿನುಗಿ ನೀರು ಹರಿದು ತರಕಾರಿ ಕೊಳೆತುಹೋದವು. ಕಳಪೆ ಕಾಮಗಾರಿಯೇ ಇದಕ್ಕೆ ಕಾರಣ ಎಂದು ಮಾರುಕಟ್ಟೆ ವ್ಯಾಪಾರಿ ಹಾಗೂ ನಗರ ಸಭೆ ಮಾಜಿ ಅಧ್ಯಕ್ಷ ಟಿ. ಹೆಚ್. ಜಯರಾಮ್ ಹೇಳಿದರು.
ಇತ್ತೀಚೆಗೆ ಮಾರುಕಟ್ಟೆಗೆ ಭೇಟಿ ನಿಡಿದ್ದ ಎಪಿಎಂಸಿ ಇಂಜಿನಿಯರ್ಗಳು ಎರಡು ಲಕ್ಷ ರೂ. ಮಾತ್ರ ಹಣವಿದೆ, ಅದರಲ್ಲಿ ರಸ್ತೆಯ ಗುಂಡಿಗಳನ್ನು ಮುಚ್ಚಲಾಗುವುದು ಎಂದು ಹೇಳಿ ಹೋದರು. ಹಾಲು ಕೊಡುವ ಹಸುವಿಗೆ ಹುಲ್ಲು ನೀರು ಕೊಡದಂತೆ ಕಡೆಗಣಿಸುವಂತೆ ಲಕ್ಷಾಂತರ ಆದಾಯ ನೀಡುವ ಮಾಡುಕಟ್ಟೆಗೆ ಮೂಲಭೂತ ಸೌಲಭ್ಯ ಒದಗಿಸದೆ ಎಪಿಎಂಸಿ ನಿರ್ಲಕ್ಷ ಮಾಡಿದೆ ಎಂದರು.
ಮಾರುಕಟ್ಟೆಯಲ್ಲಿ ಅಂಗಡಿಗಳ ಮುಂದೆ ವಾಹನಗಳನ್ನು ನಿಲ್ಲಿಸಿ ಜನ ಓಡಾಡಲಾಗದಂತಹ ಪರಿಸ್ಥಿತಿ ಇದೆ, ಇದನ್ನೆಲ್ಲಾ ನಿಯಂತ್ರಿಸುವ ಪ್ರಯತ್ನ ಎಪಿಎಂಸಿಯಿಂದ ಆಗಿಲ್ಲ. ವಿದ್ಯುತ್ ದೀಪಗಳು ಕೆಟ್ಟು ಹೋಗಿ ರಾತ್ರಿವೇಳೆ ಇಡೀ ಮಾರುಕಟ್ಟೆಯಲ್ಲಿ ಕತ್ತಲು ಗವಿಯುತ್ತದೆ, ಮಹಿಳೆಯರು ಸಂಜೆ ನಂತರ ಮಾರುಕಟ್ಟೆಗೆ ಬರಲು ಹೆದರುವಂತಾಗಿದೆ. ಇಲ್ಲಿನ ಶೌಚಾಲಯ ಗಬ್ಬು ನಾರುತ್ತಿದೆ, ಸ್ವಚ್ಚ ಮಾಡುತ್ತಿಲ್ಲ, ನಿಯಮಿತವಾಗಿ ಕಸ ಎತ್ತದೆ, ಅಲ್ಲಲ್ಲಿ ಕಸದ ರಾಶಿ ಇರುತ್ತದೆ ಎಂದು ವ್ಯಾಪಾರಿ ಟಿ ಎಂ ಎನ್ ನಾಗರಾಜ್ ಹೇಳಿದರು.
ಇಲ್ಲಿನ ಕೆಲ ಅಂಗಡಿಗಳನ್ನು ಎಪಿಎಂಸಿ ಲೀಸ್ ಕಂ ಸೇಲ್ ಮಾಡಿದೆ, ಕೆಲವನ್ನು ಬಾಡಿಗೆಗೆ ನೀಡಲಾಗಿದೆ. ಪ್ರತಿ ವಾರ ಸುಮಾರು ಒಂದೂವರೆ ಲಕ್ಷ ರೂ. ಸೆಸ್ ಸಂಗ್ರಹಿಸಲಾಗುತ್ತದೆ, ಇಷ್ಟೆಲ್ಲಾ ಲಾಭ ನೀಡುವ ಮಾರುಕಟ್ಟೆಗೆ ಮೂಲಭೂತ ಸೌಲಭ್ಯ ಒದಗಿಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಮಾರುಕಟ್ಟೆಗೆ ಬಂದು ತರಕಾರಿ ಕೊಳ್ಳುವುದು ಸುಲಭವಲ್ಲ, ಎಲ್ಲಾ ಅಂಗಡಿಗಳ ಮುಂದೆ ದ್ವಿಚಕ್ರ ವಾಹನ, ಆಟೋಗಳು, ಲಗೇಜ್ ವಾಹನ ನಿಂತಿರುತ್ತವೆ. ಜನ ಓಡಾಡಲಾಗುತ್ತಿಲ್ಲ. ವಾಹನಗಳು ಮಾರುಕಟ್ಟೆ ಒಳಗೆ ಬರದಂತೆ ನಿಯಂತ್ರಿಸಬೇಕು ಎಂದು ತರಕಾರಿ ಖರೀದಿಗೆ ಬಂದಿದ್ದ ಜಯಲಕ್ಷ್ಮಿ ಹೇಳಿದರು.
ಎಲ್ಲಾ ಅಂಗಡಿಯವರು ಅಂಗಡಿಬಿಟ್ಟು ರಸ್ತೆವರೆಗೂ ತರಕಾರಿ ಇಟ್ಟುಕೊಂಡಿರುವುದು ಕೂಡಾ ಸಾರ್ವಜನಿಕರಿಗೆ ತೊಂದರೆಯಾಗುತ್ತದೆ. ಅಂಗಡಿಗಳ ಎದುರು ಪ್ಲಾಟ್ಫಾರಂ ನಿರ್ಮಿಸಿ ಖರೀದಿಗೆ ಅನುಕೂಲ ಮಾಡಿಕೊಡಬೇಕು. ವಾಹನಗಳ ಪಾರ್ಕಿಂಗ್ಗೆ ಸರಿಯಾದ ವ್ಯವಸ್ಥೆ ಮಾಡಬೇಕು ಎಂದು ಒತ್ತಾಯಿಸಿದರು.
ಅವ್ಯವಸ್ಥೆ ಬಗ್ಗೆ ಪ್ರತಿಕ್ರಿಸಿದ ಎಪಿಎಂಸಿ ಕಾರ್ಯದರ್ಶಿ ಡಿ. ಆರ್. ಪುಷ್ಪ ಅವರು, ಸಮಸ್ಯೆ ಬಗ್ಗೆ ಅರಿವಿದೆ ಹಂತಹಂತವಾಗಿ ನಿವಾರಿಸುವುದಾಗಿ ಹೇಳಿದರು. ರಾತ್ರಿ ಮಳೆ ಸುರಿದು ಅವಾಂತರವಾಗಿದೆ, ವ್ಯವಸ್ಥಿತವಾಗಿ ಚರಂಡಿ ನಿರ್ಮಿಸಲಾಗುವುದು, ಮಳೆ ನಿಂತ ನಂತರ ತುರ್ತಾಗಿ ಮಾರುಕಟ್ಟೆಯ ರಸ್ತೆ ಗುಂಡಿಗಳನ್ನು ಮುಚ್ಚಿ ಜನ ಓಡಾಡುವಂತೆ ಅನುಕೂಲ ಮಾಡಲಾಗುವುದು ಎಂದರು.ಮಾರುಕಟ್ಟೆಯಲ್ಲಿ ಪ್ರತಿ ದಿನ ಕಸ ತೆಗೆದು ಸ್ವಚ್ಚತೆ ಮಾಡಲಾಗುತ್ತಿದೆ, ಕೆಟ್ಟಿದ್ದ ಶುದ್ಧ ಕುಡಿಯುವ ನೀರಿನ ಘಟಕ ಸರಿಪಡಿಸಲಾಗಿದೆ, ಶೌಚಾಲಯಗಳನ್ನು ಸ್ವಚ್ಚವಾಗಿ ನಿರ್ವಹಿಸುವಂತೆ ಸೂಚಿಸಲಾಗುವುದು ಎಂದರು.
ತರಕಾರಿ ತರುವ ರೈತರು ಲಗೇಜು ಇಳಿಸಿದ ನಂತರ ವಾಹನಗಳನ್ನು ತೆರವು ಮಾಡಬೇಕು, ಇದರ ಹೊರತಾಗಿ ಯಾವುದೇ ವಾಹನಗಳು ಮಾರುಕಟ್ಟೆ ಪ್ರವೇಶಿಸದಂತೆ ಕ್ರಮ ತೆಗೆದುಕೊಳ್ಳಲಾಗುವುದು. ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿ ವಾಹನ ಪಾರ್ಕಿಂಗ್ಗೆ ವ್ಯವಸ್ಥೆ ಮಾಡಲಾಗುವುದು ಎಂದು ಕಾರ್ಯದರ್ಶಿ ಪುಷ್ಪ ಹೇಳಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








