ಹಿರಿಯೂರು :
ಮಾನವನ ಅತಿಯಾದ ಆಸೆಯಿಂದ, ಕಾಡಿನ ಸಂಪತ್ತಾದ ಮರಗಿಡಗಳ ನಾಶದಿಂದ ಮಳೆಯ ಪ್ರಮಾಣ ಕಡಿಮೆಯಾಗುತ್ತಿದ್ದು, ಅತ್ಯಮೂಲ್ಯವಾದ ಜಲಸಂಪತ್ತು ಕ್ಷೀಣಿಸುತ್ತಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಸಂತೋಷ್ ಎಸ್.ಪಲ್ಲೇದ್ ತಿಳಿಸಿದರು.
ತಾಲ್ಲೂಕಿನ ಆಲೂರಿನಲ್ಲಿ ತಾಲ್ಲೂಕು ಕಾನೂನು ಸೇವಾಸಮಿತಿ ವಕೀಲರ ಸಂಘ. ಹೊಸಯಳನಾಡು ಗ್ರಾಮಪಂಚಾಯಿತಿ ನೇತೃತ್ವದಲ್ಲಿ ವಿಶ್ವ ಜಲದಿನ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಕಾನೂನು ಅರಿವು ಮತ್ತು ಜಲಸಂರಕ್ಷಣೆಯಲ್ಲಿ ನಾಗರಿಕರ ಪಾತ್ರ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಮುಂದಿನ ದಿನಗಳಲ್ಲಿ ನೀರು ಇಲ್ಲದ ಬದುಕನ್ನು ಊಹಿಸಿಕೊಳ್ಳಲು ಕಷ್ಟ. ಇಂತಹ ಅಮೂಲ್ಯ ಸಂಪತ್ತನ್ನು ಹೇಗೆ ಬಳಸಬೇಕೆಂಬ ಅರಿವು ಪ್ರತಿಯೊಬ್ಬರಲ್ಲೂ ಇರಬೇಕು. ನೀರಿನ ಮೂಲಗಳನ್ನು ಸಂರಕ್ಷಿಸಿಕೊಳ್ಳಬೇಕು. ನೀರಿನ ಮಿತ ಬಳಕೆ ಮತ್ತು ಮರುಬಳಕೆ ಕುರಿತು ವೈಜ್ಞಾನಿಕ ಕ್ರಮಗಳನ್ನು ಅನುಸರಿಸುವ ಮೂಲಕ ನೀರಿನ ಅಭಾವ ತಡೆಗಟ್ಟಬೇಕು ಎಂದು ಅವರು ಸಲಹೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಕೀಲರ ಸಂಘದ ಅಧ್ಯಕ್ಷರಾದ ಜಿ.ಎಸ್.ತಿಪ್ಪೇಸ್ವಾಮಿ ವಹಿಸಿದ್ದರು. ಕಾರ್ಯಕ್ರಮದಲ್ಲಿ ಗ್ರಾಮೀಣ ನೀರು ಸರಬರಾಜು ಇಲಾಖೆ ಎಇಒ ಮಂಜುನಾಥ್, ಮತ್ತು ವಕೀಲರಾದ ಡಿ.ಜಗದೀಶ್‍ರವರು ಉಪನ್ಯಾಸ ನೀಡಿದರು.
ಕಾರ್ಯಕ್ರಮದಲ್ಲಿ ವಕೀಲರಾದ ಟಿ.ಧೃವಕುಮಾರ್, ಹೆಚ್.ಶಿವಕುಮಾರ್, ವೈ.ಸೈಯದ್ ನವಾಜ್, ಪಿಡಿಓ ಮಹಮ್ಮದ್ ಹಸನ್, ಗ್ರಾಮಪಂಚಾಯಿತಿ ಸಿಬ್ಬಂದಿ ಮತ್ತು ಪೋಲೀಸ್ ಸಿಬ್ಬಂದಿಯವರು ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
