ಚಿತ್ರದುರ್ಗ:
ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ವಿವಿಧ ಇಲಾಖೆ ಹಾಗೂ ಅನುದಾನಗಳಡಿ ಅಳವಡಿಸಲಾಗಿರುವ ಎಲ್ಲ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಸುಪರ್ದಿಗೆ ಹಸ್ತಾಂತರಿಸಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಸಿ.ಸತ್ಯಭಾಮ ಅವರು ಹೇಳಿದರು.
ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಬುಧವಾರ ಏರ್ಪಡಿಸಲಾಗಿದ್ದ ಜಿಲ್ಲಾ ಪಂಚಾಯತ್ ಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಕೆಆರ್‍ಐಡಿಎಲ್, ಜಿ.ಪಂ., ಸಂಸದರ ಅನುದಾನ, ಶಾಸಕರ ಅನುದಾನ ಸೇರಿದಂತೆ ವಿವಿಧ ಅನುದಾನಗಳಡಿ ಗ್ರಾಮೀಣ ಪ್ರದೇಶಗಳಲ್ಲಿ ಶುದ್ಧ ಕುಡಿಯುವ ನೀರು ಘಟಕಗಳನ್ನು ಸ್ಥಾಪಿಸಲಾಗಿದೆ. ಆದರೆ ಇದರ ನಿರ್ವಹಣೆ ಯಾರು ಮಾಡಬೇಕು ಎನ್ನುವ ಬಗ್ಗೆ ಹಿಂದಿನಿಂದಲೂ ಗೊಂದಲ ಉಂಟಾಗಿದ್ದರಿಂದ, ಆರ್.ಓ ಘಟಕಗಳು ಕೆಟ್ಟು ಹೋದಾಗ ಸಮಸ್ಯೆ ಉದ್ಭವಿಸುತ್ತಿತ್ತು.
ಆದರೆ ಇದೀಗ ಸರ್ಕಾರ ಸ್ಪಷ್ಟ ಸೂಚನೆ ನೀಡಿದ್ದು, ಎಲ್ಲ ಶುದ್ಧ ಕುಡಿಯುವ ನೀರು ಘಟಕಗಳನ್ನು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಸುಪರ್ದಿಗೆ ಹಸ್ತಾಂತರಿಸುವಂತೆ ನಿರ್ದೇಶನ ನೀಡಿದೆ. ಇದರಿಂದಾಗಿ ಹಲವು ವರ್ಷಗಳಿಂದ ಇದ್ದ ಗೊಂದಲಗಳಿಗೆ ತೆರೆ ಬಿದ್ದಂತಾಗಿದೆ. ಹೀಗಾಗಿ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು, ತಮ್ಮ ವ್ಯಾಪ್ತಿಯ ಎಲ್ಲ ಶುದ್ಧ ಕುಡಿಯುವ ನೀರು ಘಟಕಗಳನ್ನು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಗೆ ಹಸ್ತಾಂತರಿಸಬೇಕು.
ಮುಂದಿನ ದಿನಗಳಲ್ಲಿ ಯಾವುದೇ ಆರ್.ಓ ಘಟಕ ಕೆಟ್ಟುಹೋದಲ್ಲಿ, ಅಥವಾ ಸಮರ್ಪಕ ಕಾರ್ಯ ನಿರ್ವಹಿಸದಿದ್ದಲ್ಲಿ ಅದಕ್ಕೆ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯೇ ನಿರ್ವಹಿಸಿ, ಸರಿಪಡಿಸುವ ಕಾರ್ಯ ಮಾಡಬೇಕು ಎಂದು ಸಿಇಒ ಸತ್ಯಭಾಮ ಅವರು ಹೇಳಿದರು.
42. 82 ಲಕ್ಷ ಮಾನವ ದಿನಗಳ ಸೃಜನೆ : ಮಹಾತ್ಮಾ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಜಿಲ್ಲೆಯಲ್ಲಿ ಈ ವರ್ಷ ಉತ್ತಮ ಸಾಧನೆಯಾಗಿದ್ದು, ನವೆಂಬರ್ ಅಂತ್ಯದವರೆಗೆ 42. 82 ಲಕ್ಷ ಮಾನವ ದಿನಗಳನ್ನು ಸೃಜಿಸಲಾಗಿದೆ. ಅಲ್ಲದೆ 134. 27 ಕೋಟಿ ರೂ. ವೆಚ್ಚ ಮಾಡಲಾಗಿದೆ. ಈ ವರ್ಷ 70 ಲಕ್ಷ ಮಾನವ ದಿನಗಳನ್ನು ಸೃಜಿಸುವ ಗುರಿ ನೀಡಲಾಗಿತ್ತು. ಕಳೆದ ವರ್ಷಕ್ಕಿಂತ ಈ ವರ್ಷ ಈಗಾಗಲೆ 82 ಸಾವಿರ ಮಾನವ ದಿನಗಳನ್ನು ಹೆಚ್ಚು ಸೃಜಿಸಲಾಗಿದೆ.
ಕಳೆದ ವರ್ಷ ಬಾಕಿ ಇದ್ದ ಅನುದಾನದಲ್ಲಿ ಈ ವರ್ಷ 88.47 ಕೋಟಿ ರೂ. ಗಳನ್ನು ಈ ವರ್ಷ ಬಿಡುಗಡೆ ಮಾಡಲಾಗಿದ್ದು, ಇನ್ನು 40 ಕೋಟಿ ರೂ. ಅನುದಾನ ಬಿಡುಗಡೆ ಬಾಕಿ ಇದೆ ಎಂದು ಜಿ.ಪಂ. ಸಿಇಒ ಸತ್ಯಭಾಮ ಹೇಳಿದರು. ನರೇಗಾ ಯೋಜನೆಯಡಿ ಕೂಲಿಗೆ 60, ಮಟೀರಿಯಲ್‍ಗೆ 40 ಅನುಪಾತದಲ್ಲಿ ಕ್ರಿಯಾ ಯೋಜನೆ ರೂಪಿಸಿ, ಅದರಂತೆಯೇ ಕಾಮಗಾರಿಯನ್ನು ಅನುಷ್ಠಾನಗೊಳಿಸಬೇಕು.
ಈ ವರ್ಷ ಜಲ ಸಂರಕ್ಷಣೆ ಯೋಜನೆ ಕಾಮಗಾರಿಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ ಎಂದು ಜಿ.ಪಂ. ಉಪಕಾರ್ಯದರ್ಶಿ ಡಾ. ರಂಗಸ್ವಾಮಿ ಹೇಳಿದರು.ಹೊಸದುರ್ಗ ತಾಲ್ಲೂಕನ್ನು ಪ್ರವಾಹ ಪೀಡಿತ ತಾಲ್ಲೂಕು ಎಂದು ಈಗಾಗಲೆ ಸರ್ಕಾರ ಘೋಷಿಸಿದೆ. ಇಲ್ಲಿ ಪ್ರವಾಹದಿಂದಾಗಿ ಗ್ರಾಮಗಳಲ್ಲಿ ಚರಂಡಿಗಳು ಕೊಚ್ಚಿ ಹೋಗಿವೆ. ನರೇಗಾದಲ್ಲಿ 60:40 ಅನುಪಾತ ಇರುವುದರಿಂದ, ಇಲ್ಲಿ ಮೂಲಸೌಲಭ್ಯ ಕಾಮಗಾರಿ ಕೈಗೊಳ್ಳಲು ಈ ನಿಯಮ ಅಡ್ಡಿಯಾಗಿದೆ ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ಸಿಇಒ ಸತ್ಯಭಾಮ ಅವರು ನರೇಗಾದಲ್ಲಿ 60:40 ಅನುಪಾತ ಪ್ರವಾಹ ಪೀಡಿತ ಪ್ರದೇಶದಲ್ಲಿ ಸಡಿಲಗೊಳಿಸಲು ಅವಕಾಶವಿಲ್ಲ ಎಂದರು. ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಉತ್ತರಿಸಿ, ಈಗಾಗಲೆ ಹೊಸದುರ್ಗ ತಾಲ್ಲೂಕಿನಲ್ಲಿ ಪ್ರವಾಹ ಪೀಡಿತ ಪ್ರದೇಶದಲ್ಲಿ ಮೂಲಭೂತ ಸೌಕರ್ಯ ಕಾಮಗಾರಿಗಳಿಗೆ ಕ್ರಿಯಾ ಯೋಜನೆ ರೂಪಿಸಿ, ಅನುಮೋದನೆ ಪಡೆಯಲಾಗಿದೆ, ಕಾಮಗಾರಿಗಳೂ ಪ್ರಾರಂಭವಾಗಿವೆ ಎಂದರು.
ಶಾಲೆ ಕಟ್ಟಡಗಳಿಗೆ ಮಳೆ ನೀರು ಕೊಯ್ಲು : ಜಿಲ್ಲೆಯಲ್ಲಿನ ಎಲ್ಲ ಸರ್ಕಾರಿ ಶಾಲಾ ಕಟ್ಟಡಗಳಿಗೆ ಮಳೆ ನೀರು ಕೊಯ್ಲು ಅಳವಡಿಕೆಯನ್ನು ಕಡ್ಡಾಯಗೊಳಿಸಬೇಕು ಎಂದು ಜಿಪಂ. ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಕೆ. ಅನಂತ್ ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಿಇಒ ಸತ್ಯಭಾಮ ಅವರು, ಈಗಾಗಲೆ ಜಿಲ್ಲೆಯ ಎಲ್ಲ 189 ಗ್ರಾ.ಪಂ. ಗಳಿಗೆ ಆಯಾ ವ್ಯಾಪ್ತಿಯ ಸರ್ಕಾರಿ ಶಾಲೆಗಳಿಗೆ ಮಳೆ ನೀರು ಕೊಯ್ಲು ಅಳವಡಿಕೆಗೆ ತಲಾ 01 ಲಕ್ಷ ರೂ. ಗಳಂತೆ ಅನುದಾನ ನೀಡಲಾಗಿದೆ ಎಂದರು. ಇದಕ್ಕೆ ಉತ್ತರಿಸಿದ ಅನಂತ್ ಅವರು ಮಳೆ ನೀರು ಕೊಯ್ಲು ಕಾಮಗಾರಿ ಸಮರ್ಪಕವಾಗಿ ಅನುಷ್ಠಾನಗೊಳಿಸಲು 1 ಲಕ್ಷ ರೂ. ಅನುದಾನ ಸಾಕಾಗುವುದಿಲ್ಲ. ಹೆಚ್ಚಿನ ಅನುದಾನ ಒದಗಿಸುವಂತೆ ಕೋರಿದರು.
ಭ್ರೂಣ ಹತ್ಯೆಗೆ ನರ್ಸಿಂಗ್ ಹೋಂ ಲೈಸೆನ್ಸ್ ರದ್ದು : ಚಳ್ಳಕೆರೆಯ ಲಕ್ಷ್ಮೀ ನರ್ಸಿಂಗ್ ಹೋಂ ನಲ್ಲಿ ಭ್ರೂಣ ಹತ್ಯೆ ಪ್ರಕರಣ ವರದಿಯಾದ ಬಳಿಕ, ನರ್ಸಿಂಗ್ ಹೋಂ ಪರಿಶೀಲಿಸಿ, ಭ್ರೂಣ ಹತ್ಯೆ ಯಾಗಿರುವುದು ಖಚಿತಪಟ್ಟಿದೆ. ಹೀಗಾಗಿ ಈ ನರ್ಸಿಂಗ್ ಹೋಂ ಲೈಸೆನ್ಸ್ ರದ್ದುಪಡಿಸಲಾಗಿದ್ದು, ಪಿಸಿಪಿಎನ್‍ಡಿಟಿ ಕಾಯ್ದೆ ಅನ್ವಯ ಮೊಕದ್ದಮೆ ದಾಖಲಿಸಲಾಗಿದೆ ಅಲ್ಲದೆ ನರ್ಸಿಂಗ್ ಹೋಂ ಅನ್ನು ಬಂದ್ ಮಾಡಲಾಗಿದೆ.
ಪಿಸಿಪಿಎನ್‍ಡಿಟಿ ಕಾಯ್ದೆ ಅನ್ವಯ ನರ್ಸಿಂಗ್ ಹೋಂಗಳಿಗೆ ಸಕ್ಷಮ ಅಧಿಕಾರಿಗಳು ಅನಿರೀಕ್ಷಿತ ಭೇಟಿ ನೀಡಿ, ಅಲ್ಲಿನ ಸ್ಕ್ಯಾನಿಂಗ್ ಯಂತ್ರ, ಲೈಸೆನ್ಸ್ ದಾಖಲೆ ಹಾಗೂ ಪ್ರಕ್ರಿಯೆ ಕುರಿತು ವರದಿ ಪಡೆಯಲು ಅವಕಾಶವಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಪಾಲಾಕ್ಷ ಅವರು ಹೇಳಿದರು. ಜಿಲ್ಲೆಯಲ್ಲಿ ಒಟ್ಟು 45 ನರ್ಸಿಂಗ್ ಹೋಂ ಗಳಿದ್ದು, ತಿಂಗಳಲ್ಲಿ ಕನಿಷ್ಟ 15 ನರ್ಸಿಂಗ್ ಹೋಂಗಳಿಗೆ ಅನಿರೀಕ್ಷಿತ ಭೇಟಿ ನೀಡಿ, ಅಲ್ಟ್ರಾಸ್ಕ್ಯಾನಿಂಗ್ ಪ್ರಕ್ರಿಯೆ ಕುರಿತು ತನಿಖೆ ನಡೆಸಿ, ಪ್ರತಿ ತಿಂಗಳು ವರದಿ ಸಲ್ಲಿಸಬೇಕು.
ಭ್ರೂಣ ಲಿಂಗ ಪತ್ತೆ ಅಥವಾ ಹತ್ಯೆ ಶಿಕ್ಷಾರ್ಹ ಅಪರಾಧ, ಯಾರೂ ಕೂಡ ಭ್ರೂಣ ಲಿಂಗ ಪತ್ತೆಗೆ ಒತ್ತಾಯಿಸುವಂತಿಲ್ಲ ಎಂಬುದರ ಕುರಿತು ಜಿಲ್ಲೆಯಲ್ಲಿ ಹೆಚ್ಚಿನ ಜಾಗೃತಿ ಮೂಡಿಸುವ ಕಾರ್ಯ ಕೈಗೊಳ್ಳಿ ಎಂದು ಜಿ.ಪಂ. ಸಿಇಒ ಸತ್ಯಭಾಮ ಅವರು ಡಿಹೆಚ್‍ಒ ಗೆ ಸೂಚನೆ ನೀಡಿದರು.ಸಭೆಯಲ್ಲಿ ಜಿ.ಪಂ. ಅಧ್ಯಕ್ಷೆ ವಿಶಾಲಾಕ್ಷಿ ನಟರಾಜ್, ಉಪಾಧ್ಯಕ್ಷೆ ಎಸ್. ಸುಶೀಲಮ್ಮ, ಮುಖ್ಯ ಲೆಕ್ಕಾಧಿಕಾರಿ ಓಂಕಾರಪ್ಪ, ಮುಖ್ಯ ಯೋಜನಾಧಿಕಾರಿ ಶಶಿಧರ್ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ