ಬೆಂಗಳೂರು
ಕೊರೋನಾ ಸೋಂಕಿನಿಂದಾಗಿ ನರೇಗಾ ಕೂಲಿ ಹಣದಲ್ಲಿ ಹೆಚ್ಚಳ ಮಾಡಲಾಗಿದ್ದು, ಇನ್ನು ಮುಂದೆ ಈ ಕಾಮಗಾರಿಗಳಿಗೆ ಚುರುಕು ನೀಡಿ ಈ ಯೋಜನೆಯ ಕೂಲಿ ಕಾರ್ಮಿಕರನ್ನು ಸಾಮಾಜಿಕ ಅಂತರ ಕಾಯ್ದುಕೊಂಡು ಕೆಲಸ ಮಾಡಿಸಲಾಗುವುದು. ಕೊರೋನಾದಿಂದ ಸಂಕಷ್ಟಕ್ಕೊಳಗಾಗಿರುವ ಕೂಲಿ ಕಾರ್ಮಿಕರಿಗೆ ಇದರಿಂದ ಅನುಕೂಲವಾಗಲಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.
ವಿಧಾನಸೌಧದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನರೇಗಾ ಯೋಜನೆಯಲ್ಲಿ ಕೇಂದ್ರದಿಂದ 1,861 ಕೋಟಿ ರೂ. ಹಣ ಬಿಡುಗಡೆ ಆಗಿದ್ದು, ಇದರಲ್ಲಿ ಕೂಲಿ ಕಾರ್ಮಿಕರಿಗೆ 1,039 ಕೋಟಿ ರೂ. ಬಾಕಿ ಹಣ ಕೊಡಬೇಕಿದೆ. ರಾಜ್ಯ ಸರ್ಕಾರದಿಂದಲೂ 257 ಕೋಟಿ ರೂ. ಅನುದಾನ ಇದೆ. ಹಿಂದೆ ಕೆಲವರಿಗೆ ಕೂಲಿ ಮತ್ತು ಸಲಕರಣೆಗಳ ಬಿಲ್ ಬಾಕಿ ಇತ್ತು. ಎಲ್ಲವನ್ನೂ ಪಾವತಿಸಿದ ಬಳಿಕ 1077 ರೂ. ಬಾಕಿ ಹಣ ಉಳಿಯಲಿದೆ. ರಾಜ್ಯದಲ್ಲಿ ಒಬ್ಬ ಕೂಲಿ ಕಾರ್ಮಿಕನಿಗೆ 275 ರೂ. ವರೆಗೆ ಕೂಲಿ ಹೆಚ್ಚಿಸಲಾಗಿದೆ. ಮುಂದಿನ ದಿನಗಳಲ್ಲಿ ಉಳಿಕೆ ನರೇಗಾ ಹಣದ ಬಳಕೆ ಮಾಡಿಕೊಳ್ಳುತ್ತೇವೆ ಎಂದರು.
49 ಬರಪೀಡಿತ ತಾಲ್ಲೂಕುಗಳಲ್ಲಿ ಕುಡಿಯುವ ನೀರಿಗೆ ಅನುದಾನ ಬಿಡುಗಡೆಯಾಗಿದ್ದು, ಕುಡಿಯುವ ನೀರಿಗಾಗಿ ಪ್ರತಿ ತಾಲ್ಲೂಕಿಗೆ ತಲಾ 1 ಕೋಟಿ ರೂ. ಬಿಡುಗಡೆ ಮಾಡಲಾಗುವುದು. ಗ್ರಾಮ ಪಂಚಾಯಿತಿಗಳಲ್ಲಿ ಕೊರೋನಾ ಟಾಸ್ಕ್ ಫೋರ್ಸ್ ರಚನೆ ಮಾಡಿದ್ದೇವೆ. ಗ್ರಾಮಗಳಲ್ಲಿಯೂ ಸಮಿತಿಗಳನ್ನು ರಚನೆ ಮಾಡಿ ಕೊರೋನಾ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.
ಕೊರೋನಾಕ್ಕಾಗಿ ಸಂಸದರ ವೇತನ ಭತ್ಯೆಯಲ್ಲಿ ಕಡಿತ ವಿಚಾರವಾಗಿ ಪ್ರತಿಕ್ರಿಯಿಸಿದ ಈಶ್ವರಪ್ಪ, ರಾಜ್ಯದಲ್ಲಿಯೂ ಜನಪ್ರತಿನಿಧಿಗಳ ವೇತನದಲ್ಲಿ ಕಡಿತ ಮಾಡಿದರೆ ನಮ್ಮೆಲ್ಲರ ಬೆಂಬಲ ಇರಲಿದೆ. ಈ ಬಗ್ಗೆ ಯಡಿಯೂರಪ್ಪ ಯಾವುದೇ ನಿರ್ಧಾರ ಕೈಗೊಂಡರೂ ಅದಕ್ಕೆ ನಮ್ಮ ಬೆಂಬಲ ಇರಲಿದೆ.
ತಾವು ಈಗಾಗಲೇ ನಾಲ್ಕು ತಿಂಗಳ ವೇತನವನ್ನು ಪರಿಹಾರ ನಿಧಿಗೆ ನೀಡಿರುವುದಾಗಿ ಸ್ಪಷ್ಟಪಡಿಸಿದರು.ಗ್ರಾಮೀಣ ಜನರ ಸಮಸ್ಯೆಗಳಿಗೆ ಸಚಿವ ಈಶ್ವರಪ್ಪ ಸ್ಪಂದಿಸುತ್ತಿಲ್ಲ, ಎಲ್ಲಿ ಮಲಗಿದ್ದಾರೋ ಎಂಬ ವಿಪಕ್ಷಗಳ ಟೀಕೆಗೆ ತಿರುಗೇಟು ನೀಡಿದ ಈಶ್ವರಪ್ಪ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸುದ್ದಿಗೋಷ್ಠಿ ಕರೆಯುತ್ತಾರೆ ಎನ್ನುವ ಕಲ್ಪನೆಯೂ ಸಹ ತಮಗೆ ಇರಲಿಲ್ಲ. ಶಿವಕುಮಾರ್ ಕೊರೊನಾ ವಿಚಾರದಲ್ಲಿ ರಾಜಕೀಯ ಮಾಡಲ್ಲ ಎಂದು ಹೇಳಿಯೂ ರಾಜಕೀಯ ಮಾಡಿದ್ದಾರೆ. ಅವರಂತೆ ರಾಜಕೀಯ ಮಾಡಲು ತಾವು ಸುದ್ದಿಗೋಷ್ಠಿ ಕರೆದಿಲ್ಲ. ತಾವು ಎಲ್ಲಿ ಮಲಗಿದೀನಿ ಎಂದು ಶಿವಕುಮಾರ್ ಬಂದು ನೋಡಲಿ. ತಮಗೆ ಎರಡು ಮೂರು ಜಿಲ್ಲೆಗಳ ಉಸ್ತುವಾರಿ ನೀಡಿದ್ದಾರೆ.
ಅವರು ಟೀಕಿಸಿದಂತೆ ತಾವೇನು ಸುಮ್ಮನೆ ಕೂತಿಲ್ಲ, ಜಿಲ್ಲೆಗಳಿಗೆ ಭೇಟಿ ಮಾಡಿ ಪರಿಶೀಲನೆ ಮಾಡುತ್ತಿದ್ದೇನೆ. ವಿರೋಧ ಪಕ್ಷದ ನಾಯಕರಾಗಿ ಶಿವಕುಮಾರ್ ನೇರವಾಗಿ ತಮಗೆ ಕರೆ ಮಾಡಿ ಕೇಳಬಹುದಿತ್ತು. ಅವರು ಪ್ರಸ್ತಾಪ ಮಾಡಿರುವ ಸಮಸ್ಯೆಗಳನ್ನು ಬಗೆಹರಿಸಲು ಕ್ರಮ ಕೈಗೊಂಡಿದ್ದೇವೆ. ಜನರ ಸಮಸ್ಯೆಗಳಿಗೆ ಸರ್ಕಾರ ಉತ್ತಮವಾಗಿ ಸ್ಪಂದಿಸುತ್ತಿದೆ. ಎಲ್ಲಾದರೂ ಮಲಗಿ ಬಂದಿದ್ದರೆ ಇಲ್ಲೇಕೆ ಬಂದು ಸುದ್ದಿಗೋಷ್ಠಿ ಮಾಡುತ್ತಿದೆ ಎಂದು ಕಿಡಿಕಾರಿದರು.ನಮ್ಮ ಕೆಲಸ, ಕರ್ತವ್ಯ ನಾವು ಮಾಡುತ್ತಿದ್ದೇವೆ. ಅವರ ಕೆಲಸ ಅವರು ಮಾಡುತ್ತಿದ್ದಾರೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಪಂಚಾಯತ್ ರಾಜ್ ತಿದ್ದುಪಡಿ ವಿಧೇಯಕದ ಬಗ್ಗೆ ಸರ್ಕಾರದಿಂದ ಈಗಾಗಲೆ ಸುಗ್ರೀವಾಜ್ಞೆ ಹೊರಡಿಸಲಾಗಿದೆ. ಸರ್ಕಾರದ ಸುಗ್ರೀವಾಜ್ಞೆ ಗೆ ರಾಜ್ಯಪಾಲರ ಒಪ್ಪಿಗೆ ಸಿಕ್ಕಿದೆ. ಕೊರೋನಾ ಸಮಸ್ಯೆ ಮುಗಿದ ಬಳಿಕ ಹೊಸ ಪಂಚಾಯತ್ ರಾಜ್ ತಿದ್ದುಪಡಿ ಕಾಯ್ದೆಯನ್ವಯ ಚುನಾವಣೆ ನಡೆಸಲಾಗುತ್ತದೆ. ಈ ಸಂಬಂಧ ರಾಜ್ಯ ಚುನಾವಣಾ ಆಯೋಗಕ್ಕೂ ಮನವಿ ಮಾಡಲಾಗಿದೆ ಎಂದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
