ಹುಳಿಯಾರು
ಶೆಟ್ಟಿಕೆರೆ ಹೋಬಳಿಯ ಜೆ.ಸಿ. ಗ್ರಾಪಂ ವ್ಯಾಪ್ತಿಯ ಸಾಸಲು, ಸಾಸಲು ಗೊಲ್ಲರಹಟ್ಟಿ, ಮಾಸ್ತಯ್ಯನಪಾಳ್ಯದಲ್ಲಿ ನೀರಿಗೆ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ವಾರದಿಂದ ಹನಿ ನೀರಿಗಾಗಿ ಹಾಹಾಕಾರ ನಿರ್ಮಾಣವಾಗಿದ್ದರೂ ಅಧಿಕಾರಿಗಳಿಗೆ ಹಾಗೂ ಜನಪ್ರತಿನಿಧಿಗಳಿಗೆ ಮೌನ ವಹಿಸಿದ್ದು ಇಲ್ಲಿನ ನಿವಾಸಿಗಳ ಆಕ್ರೋಶಕ್ಕೆ ಕಾರಣವಾಗಿದೆ.
ಸಾಸಲು ಗ್ರಾಮವು ಸರಿಸುಮಾರು ಐನೂರಕ್ಕೂ ಹೆಚ್ಚು ಮನೆಗಳಿದ್ದು ಈ ಗ್ರಾಮದ ನೀರಿನ ವ್ಯವಸ್ಥೆಗೆ 4 ಕೊಳವೆ ಬಾವಿ ಕೊರೆಸಿ ಎರಡು ಓವರ್ ಹೆಡ್ ಟ್ಯಾಂಕ್ 38 ಸಿಸ್ಟನ್‍ಗಳನ್ನು ಇಟ್ಟು ನೀರು ಪೂರೈಸಲಾಗುತ್ತಿತ್ತು. ಆದರೆ ಕಳೆದ ಹತ್ತದಿನೈದು ದಿನಗಳ ಹಿಂದೆ 3 ಬೋರ್‍ವೆಲ್‍ಗಳಲ್ಲಿ ಅಂತರ್ಜಲ ಬರಿದಾಗಿದ್ದು ಇರುವ ಒಂದೇ ಬೋರ್‍ನಲ್ಲಿ 500 ಮನೆಗೆ ನೀರು ಸರಬರಾಜು ಮಾಡುವಂತ್ತಾಗಿದೆ. ಹಾಗಾಗಿ ಒಂದು ಬೀದಿಗೆ ನೀರು ಕೊಟ್ಟರೆ ಇನ್ನೊಂದು ಬೀದಿಗೆ ನೀರಿಲ್ಲದಾಗಿ ಅಕ್ಕಪಕ್ಕದ ತೋಟದ ಬೋರ್‍ಗಳಿಂದ ಜನ ನೀರು ತರುವ ಅನಿವಾರ್ಯತೆ ಸೃಷ್ಠಿಯಾಗಿದೆ.
ಇನ್ನು ಸಾಸಲು ಗೊಲ್ಲರಹಟ್ಟಿ 80 ಮನೆಗಳ ಗ್ರಾಮವಾಗಿದ್ದು 2 ಕೊಳವೆ ಬಾವಿಯಿಂದ 9 ಸಿಸ್ಟನ್ ತುಂಬಿಸಿ ಗ್ರಾಮದ ಜನರಿಗೆ ನೀರು ಕೊಡಲಾಗುತ್ತಿತ್ತು. ಈ ಎರಡೂ ಬೋರ್‍ಗಳಲ್ಲೂ ಹತ್ತದಿನೈದು ದಿನಗಳ ಹಿಂದೆ ಅಂತರ್ಜಲ ಬರಿದಾಗಿ ಹನಿ ನೀರು ಬಾರದಂತ್ತಾಗಿದೆ. ಪರಿಣಾಮ ಒಂದೆರಡು ಕಿ.ಮೀ ದೂರದಿಂದ ತೋಟದ ಮಾಲೀಕರನ್ನು ಕಾಡಿಬೇಡಿ ನೀರು ತರುವ ವಿಷಮ ಪರಿಸ್ಥಿತೆ ಇಲ್ಲಿನ ನಿವಾಸಿಗಳದ್ದಾಗಿದೆ. ಮೊದಲೇ ಕೂಲಿನಾಲಿ ಮಾಡುವ ಇಲ್ಲಿನ ಜನ ನೀರಿಗೋದರೆ ಕೂಲಿ ಇಲ್ಲ ಕೂಲಿಗೋದರೆ ನೀರಿಲ್ಲ ಎನ್ನುವ ಸಂಕಷ್ಟ ಎದುರಿಸುತ್ತಿದ್ದಾರೆ.
ಅಲ್ಲದೆ ಈ ಭಾಗದಲ್ಲಿ ದನಕರುಗಳು ಹಾಗೂ ಕುರಿಮೇಕೆಗಳು ಸಾಕಷ್ಟಿದ್ದು ಈ ಜಾನುವಾರುಗಳ ದಾಹ ತಣಿಸುವ ರೈತರ ಗೋಳು ಹೇಳತೀರದಾಗಿದೆ. ಜೊತೆಗೆ ಇಲ್ಲಿನ ಶಾಲೆಯ ಬಿಸಿಯೂಟಕ್ಕೂ ನೀರಿಲ್ಲದೆ ಬಿಸಿಯೂಟದ ಸಿಬ್ಬಂದಿ ದೂರದ ತೋಟಗಳಿಂದ ಹೊತ್ತು ತಂದು ಅಡಿಗೆ ಮಾಡಬೇಕಿದೆ. ಶಾಲೆಗೆ ಬರುವ ಮಕ್ಕಳಂತೂ ತುಪ್ಪದ ರೀತಿ ನಿರನ್ನು ಬಳಸುವಂತ್ತಾಗಿದೆ. ಮೊದಲೇ ಬಿಸಿಲ ಧಗೆ ಹೆಚ್ಚಾಗಿದ್ದು ಬಾಯಾರಿಕೆ ಹೋಗಲಾಡಿಸಲಿಕ್ಕಾದರೂ ಹೊಟ್ಟೆ ತುಂಬ ನೀರು ಕುಡಿಯದಂತ ಹಾಹಾಕಾರ ಇಲ್ಲಿದೆ. ಮಾಸ್ತಯನ್ನ ಪಾಳ್ಯದ ಪರಿಸ್ಥಿತಿ ಸಹ ಇದನ್ನು ಹೊರತಾಗಿಲ್ಲ.
ಈ ಬಗ್ಗೆ ತಾಪಂ ಇಓ, ಗ್ರಾಪಂ ಪಿಡಿಓ, ಜನಪ್ರತಿನಿಧಿಗಳಿಗೆ ದೂರು ನೀಡಿದರೂ ಸಮಸ್ಯೆ ಪರಿಹರಿಸದೆ ನಿರ್ಲಕ್ಷ್ಯ ಧೋರಣೆ ತಾಳಿದ್ದಾರೆ. ಹಾಗಾಗಿ ಮೇಲಧಿಕಾರಿಗಳು ಇತ್ತ ಗಮನ ಹರಿಸಿ ತಕ್ಷಣ ಟ್ಯಾಂಕರ್ ಮೂಲಕ ನೀರನ್ನು ಪೂರೈಸಿ ಹಾಹಾಕಾರ ನೀಗಿಸಬೇಕಿದೆ. ಅಲ್ಲದೆ ಹೊಸ ಕೊಳವೆ ಬಾವಿ ಕೊರೆಸಿ ಗ್ರಾಮದ ನೀರಿನ ಸಮಸ್ಯೆಯನ್ನು ಶಾಶ್ವತವಾಗಿ ಪರಿಹರಿಸುವಂತೆ ಮನವಿ ಮಾಡಿದ್ದಾರೆ.