ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ಕ್ರಮವಹಿಸಿ : ಲತಾ ರವಿಕುಮಾರ್.  

ತುಮಕೂರು
  ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆಯ ಬಗ್ಗೆ ದೂರುಗಳು ಕೇಳಿ ಬರುತ್ತಿದ್ದು, ಜನರಿಗೆ ಕುಡಿಯುವ ನೀರಿನ ಸಮಸ್ಯೆ ಬರದಂತೆ ಎಲ್ಲಾ ರೀತಿಯ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ಪಂಚಾಯತಿ ಅಧ್ಯಕ್ಷೆ ಲತಾ ರವಿಕುಮಾರ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.  ತುಮಕೂರು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.  
   
     ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗಿದ್ದು,  ಸಾರ್ವಜನಿಕರಿಂದ ದೂರುಗಳು ಬಂದಿವೆ ಈ ಬಗ್ಗೆ ಏನು ಕ್ರಮ ತೆಗೆದುಕೊಂಡಿದ್ದೀರಾ ಎಂದು ಅಧ್ಯಕ್ಷರು ಕೇಳಿದಾಗ ಇದಕ್ಕೆ ಉತ್ತರಿಸಿದ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಇಂಜಿನಿಯರ್ ಜಿಲ್ಲೆಯಲ್ಲಿ 5 ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಡಿ 3494.07 ಲಕ್ಷ ರೂ.ಗಳ ಅನುದಾನ ಬಿಡುಗಡೆಯಾಗಿದ್ದು, 4 ಬಹು ಗ್ರಾಮ ಯೋಜನೆಯ ಕಾಮಗಾರಿಗಳು ಪೂರ್ಣಗೊಳ್ಳುವ ಹಂತದಲ್ಲಿದ್ದು, 1 ಬಹುಗ್ರಾಮ ಯೋಜನೆಯ ಕಾಮಗಾರಿ ಪ್ರಗತಿಯಲ್ಲಿದೆ ಎಂದು ಸಭೆಗೆ ಮಾಹಿತಿ ನೀಡಿದರು.
    ಪಾವಗಡ ತಾಲೂಕಿನಲ್ಲಿ 30 ಆರ್.ಓ ಪ್ಲಾಂಟ್‍ಗಳು ದುರಸ್ಥಿಯಲ್ಲಿದ್ದು, ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಆರ್‍ಓ ಪ್ಲಾಂಟ್‍ಗಳನ್ನು ಪಂಚಾಯತಿ ಅನುದಾನದಡಿ ದುರಸ್ಥಿಪಡಿಸಲು ಕೂಡಲೇ ಕ್ರಮ ಕೈಗೊಳ್ಳಬೇಕು. ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಶುದ್ಧ ಕುಡಿಯುವ ನೀರಿನ ಘಟಕಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿವೆಯಾ..? ಎಂಬುದರ ಬಗ್ಗೆ ಪರಿಶೀಲನೆ ನಡೆಸಬೇಕು. ಸಣ್ಣ-ಪುಟ್ಟ ಸಮಸ್ಯೆಗಳಿದ್ದರೆ ತುರ್ತಾಗಿ ಬಗೆಹರಿಸಬೇಕು ಎಂದರು.
    ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಟ್ಯಾಪ್‍ನ ನೀರನ್ನು ಪರೀಕ್ಷೆ ಮಾಡಿಸಿ ಕುಡಿಯಲು ಯೋಗ್ಯವಾಗಿದೆಯೇ ಎಂಬುದನ್ನು ಮಾಹಿತಿ ನೀಡಬೇಕು ಎಂದು ಸಿಇಓ ಶುಭಾಕಲ್ಯಾಣ್ ಅವರು ಎಲ್ಲಾ ಇಓಗಳಿಗೆ ಸೂಚಿಸಿದರು. ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಶಾರದಾ ನರಸಿಂಹಮೂರ್ತಿ ಅವರು ಮಾತನಾಡಿ, ತುಮಕೂರು ತಾಲೂಕಿನ ಕಣಕುಪ್ಪೆ ಗ್ರಾಮದಲ್ಲಿ ಚಿರತೆ ಮಹಿಳೆಯನ್ನು ತಿಂದಿರುವ ಬಗ್ಗೆ ಯಾವ ಕ್ರಮ ಕೈಗೊಂಡಿದ್ದೀರಾ ಎಂದು ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಅರಣ್ಯ ಇಲಾಖೆಯ ಡಿಎಫ್‍ಓ ಗಿರೀಶ್  ಮೃತಪಟ್ಟ ಮಹಿಳೆಗೆ ಈಗಾಗಲೇ 5 ಲಕ್ಷ ರೂ.ಗಳ ಪರಿಹಾರ ಹಣವನ್ನು ನೀಡಲಾಗಿದ್ದು, 5 ವರ್ಷದವರೆಗೂ 2 ಸಾವಿರ ರೂ.ಗಳಂತೆ ಮಾಸಾಶನ ನೀಡಲಾಗುವುದು ಎಂದು ಮಾಹಿತಿ ನೀಡಿದರು.
    ಕಣಕುಪ್ಪೆ ಮತ್ತು ದೊಡ್ಡಮರಳವಾಡಿ ವ್ಯಾಪ್ತಿಯಲ್ಲಿ ಒಟ್ಟು 16 ಬೋನ್‍ಗಳನ್ನು ಇಡಲಾಗಿದೆ.  ಗ್ರಾಮಠಾಣಾ, ಗ್ರಾಮಗಳ ಖಾಲಿ ಪ್ರದೇಶಗಳಲ್ಲಿ ಪೊದೆಗಳು ಜಾಸ್ತಿ ಬೆಳೆದಿರುವುದರಿಂದ ಚಿರತೆ ಅದರಲ್ಲಿ ಅವಿತುಕೊಳ್ಳಲು ಅವಕಾಶವಿದೆ ಎಂದರು. ಗ್ರಾಮೀಣ ಪ್ರದೇಶದಲ್ಲಿ ರೈತರು ಬೆಳೆ ಕಟಾವು ಮಾಡುವ ಸಂದರ್ಭದಲ್ಲಿ ಅವರು ಹೊಲದಲ್ಲಿಯೇ ಬೆಳೆಯನ್ನು ಕಾವಲು ಕಾಯುತ್ತಿರುತ್ತಾರೆ. ಆದ್ದರಿಂದ ಅವರ ರಕ್ಷಣೆಗಾಗಿ ಅರಣ್ಯ ಇಲಾಖೆಯವರು ಚಿರತೆ ಕಾಣಿಸಿಕೊಳ್ಳುವ ವ್ಯಾಪ್ತಿಯಲ್ಲಿ ಬೋನ್‍ಗಳನ್ನು ಅಳವಡಿಸಿ ಮತ್ತು ದಟ್ಟವಾದ ಪೊದೆಗಳನ್ನು ಸ್ವಚ್ಛಗೊಳಿಸಬೇಕು ಎಂದು ಉಪಾಧ್ಯಕ್ಷರು ಅರಣ್ಯ ಇಲಾಖೆ ಅಧಿಕಾರಿಗೆ  ಸೂಚಿಸಿದರು. 
    ತುಮಕೂರು ಹಾಗೂ ತಿಪಟೂರು ತಾಲೂಕಿನ ವಿದ್ಯಾರ್ಥಿನಿಲಯಗಳಲ್ಲಿ ಬೇಡಿಕೆ ಇರುವುದರಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ಬೇಡಿಕೆ ಇಲ್ಲದಿರುವ ವಿದ್ಯಾರ್ಥಿನಿಲಯಗಳಲ್ಲಿ ಖಾಲಿ ಉಳಿದಂತಹ ಸ್ಥಾನಗಳನ್ನು ಹೆಚ್ಚು ಬೇಡಿಕೆ ಇರುವ ವಿದ್ಯಾರ್ಥಿನಿಲಯಗಳಿಗೆ ವರ್ಗಾಯಿಸುವಂತೆ 300 ಮೆಟ್ರಿಕ್ ನಂತರ ಸೀಟುಗಳನ್ನು ಹಾಗೂ 365 ಮೆಟ್ರಿಕ್‍ಪೂರ್ವ ಸೀಟುಗಳನ್ನು ವರ್ಗಾಯಿಸಿಕೊಡಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ, ಸರ್ಕಾರದಿಂದ ಅನುಮತಿ ಪಡೆದು ಒಟ್ಟು 665 ವಿದ್ಯಾರ್ಥಿಗಳಿಗೆ ಹೆಚ್ಚುವರಿಯಾಗಿ ವಿದ್ಯಾರ್ಥಿನಿಲಯಗಳಲ್ಲಿ ಪ್ರವೇಶ ಕಲ್ಪಿಸಲಾಗಿದೆ ಎಂದು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಸುಬ್ರನಾಯ್ಕ್ ಸಭೆಗೆ ಮಾಹಿತಿ ನೀಡಿದರು. 
     ತೋಟಗಾರಿಕೆ ಇಲಾಖೆಯಡಿ ಹವಾಮಾನ ಆಧಾರಿತ ಇನ್ಸೂರೆನ್ಸ್ ಯೋಜನೆಯಲ್ಲಿ ಒಟ್ಟು 16388 ಪ್ರಕರಣಗಳ ಪೈಕಿ 6922 ಪ್ರಕರಣಗಳಿಗೆ ಒಟ್ಟು 1364.51 ಲಕ್ಷ ರೂ.ಗಳು ರೈತರ ಖಾತೆಗಳಿಗೆ ಪಾವತಿಯಾಗಿದ್ದು, ಬಾಕಿಯಿರುವ 9466 ಪ್ರಕರಣಗಳಿಗೆ 2622.66 ಲಕ್ಷ ರೂ.ಗಳು ರೈತರಿಗೆ ಪಾವತಿಯಾಗಬೇಕು. ಸದರಿ ಪ್ರಕರಣಗಳಿಗೆ ಬೆಳೆ ಸಮೀಕ್ಷೆಗೂ ಹಾಗೂ ನೋಂದಣಿ ಸಮಯದಲ್ಲಿ ರೈತರು ನೀಡಿರುವ ಸ್ವಯಂ ದೃಢೀಕರಣ ಪತ್ರದಲ್ಲಿ ನಮೂದಿಸಿರುವ ಬೆಳೆಗೂ ಹೊಂದಾಣಿಕೆ ಆಗದ ಕಾರಣ ರೈತರಿಗೆ ಹಣ ಪಾವತಿಯಾಗಿರುವುದಿಲ್ಲ ಎಂದರಲ್ಲದೇ, ಬೆಳೆ ಸಮೀಕ್ಷೆ ಕಾರ್ಯ ನಡೆಯುತ್ತಿದ್ದು, ಸಮೀಕ್ಷೆ ಪೂರ್ಣಗೊಂಡ ನಂತರ ಇನ್ಸೂರೆನ್ಸ್ ಕಂಪನಿಯಿಂದ ಹಣ ರೈತರಿಗೆ ಪಾವತಿಯಾಗುತ್ತದೆ ಎಂದು ತೋಟಗಾರಿಕೆ ಇಲಾಖೆ ಉಪನಿರ್ದೇಶಕ ರಘು ಅವರು ಸಭೆಗೆ ಮಾಹಿತಿ ನೀಡಿದರು. 
    ಜಿ.ಪಂ ಅಧ್ಯಕ್ಷೆ ಲತಾರವಿಕುಮಾರ್ ಮಾತನಾಡಿ, ಎಸ್‍ಎಸ್‍ಎಲ್‍ಸಿ ಪರೀಕ್ಷೆ ಸಮೀಪಿಸುತ್ತಿದ್ದು ಮಕ್ಕಳಿಗೆ ವಿಶೇಷ ತರಗತಿ ನೀಡುವುದರ ಬಗ್ಗೆ ಡಿಡಿಪಿಐ ಕಾಮಾಕ್ಷಿ ಅವರಿಗೆ ಮಾಹಿತಿ ಕೇಳಿದಾಗ ಉತ್ತರಿಸಿದ ಅವರು, ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳಿಗೆ ಬೆಳಿಗ್ಗೆ-ಸಂಜೆ ಸಮಯದಲ್ಲಿ ವಿಶೇಷ ತರಗತಿಗಳನ್ನು ಮಾಡಲಾಗುತ್ತಿದೆ ಮತ್ತು ವಿದ್ಯಾಭ್ಯಾಸದಲ್ಲಿ ಹಿಂದುಳಿದ ವಿದ್ಯಾರ್ಥಿಗಳನ್ನು ಗುರುತಿಸಿ ಅವರಿಗೆ ಹೆಚ್ಚು ಒತ್ತು ನೀಡಲಾಗುತ್ತಿದೆ. ಸರ್ಕಾರಿ ಶಾಲೆಗಳಲ್ಲಿ ಅಡುಗೆ ಮಾಡುವ ಕೋಣೆಗಳನ್ನು ಸ್ವಚ್ಛವಾಗಿಡ ಲಾಗುತ್ತಿದೆ. ಅಡುಗೆ ಮಾಡಲು ಆರ್.ಓ ಪ್ಲಾಂಟ್‍ಗಳ ನೀರನ್ನೇ ಬಳಸಲು ಮುಖ್ಯ ಶಿಕ್ಷಕರಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು. 
      ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಎಸ್.ನಟರಾಜ್ ಅವರು ಮಾತನಾಡಿ, ಜಿಲ್ಲೆಯಲ್ಲಿ ಒಟ್ಟು 287 ಅಂಗನವಾಡಿ ಕಟ್ಟಡಗಳು ಮಂಜೂರಾಗಿದ್ದು, ಅದರಲ್ಲಿ 139 ಅಂಗನವಾಡಿ ಕಟ್ಟಡಗಳು ಪೂರ್ಣಗೊಂಡಿದ್ದು, 144 ಪ್ರಗತಿಯಲ್ಲಿದೆ ಎಂದು ಸಭೆಗೆ ಮಾಹಿತಿ ನೀಡಿದಾಗ ಜಿಲ್ಲಾ ಪಂಚಾಯತ್ ಶಿಕ್ಷಣ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಡಾ|| ನವ್ಯಬಾಬು ಮಾತನಾಡಿ, ಸ್ವಚ್ಛಭಾರತ್ ಮಿಷನ್ ಯೋಜನೆಯಡಿ ದುರಸ್ಥಿಯಲ್ಲಿರುವ ಶೌಚಾಲಯಗಳನ್ನು ಕೂಡಲೇ ದುರಸ್ಥಿಗೊಳಿಸಲು ಕ್ರಮವಹಿಸಲು ಸೂಚಿಸಿದರಲ್ಲದೇ ಅಂಗನವಾಡಿ ಕೇಂದ್ರಗಳಿಗೆ ಬರುವ ಮಕ್ಕಳಿಗೆ ಉತ್ತಮ ವಾತಾವರಣ ಕಲ್ಪಿಸಿ ಕಲಿಕೆಗೆ ಒತ್ತು ನೀಡಬೇಕು ಎಂದರು.  
     ಜಿಲ್ಲೆಯಲ್ಲಿರುವ ನಕಲಿ ವೈದ್ಯರ ಬಗ್ಗೆ ತೆಗೆದುಕೊಂಡ ಕ್ರಮಗಳ ಕುರಿತು ಜಿಲ್ಲಾ ಆರೋಗ್ಯಾಧಿಕಾರಿಗಳಿಂದ ಮಾಹಿತಿ ಪಡೆದ ಅಧ್ಯಕ್ಷರು, ಜಿಲ್ಲೆಯಲ್ಲಿ ಡೆಂಗ್ಯೂ, ಚಿಕನ್‍ಗುನ್ಯಾ ಸೇರಿದಂತೆ ಸಾಂಕ್ರಾಮಿಕ ರೋಗಗಳು ಹರಡದಂತೆ ಮುಂಜಾಗ್ರತಾ ಕ್ರಮಗಳನ್ನು ವಹಿಸುವಂತೆ ಸೂಚಿಸಿದರು.ಸಭೆಯಲ್ಲಿ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿದ್ದರು. 
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link