ತುಮಕೂರು
ತುಮಕೂರು ತಾಲ್ಲೂಕು ಯಲ್ಲಾಪುರ ಗ್ರಾಮ ಮತ್ತು ಆಸುಪಾಸು ಕೊಳವೆಬಾವಿಗಳು ವಿಫಲವಾಗಿ ಅಂತರ್ಜಲ ಬತ್ತಿರುವುದರಿಂದ, ಅಲ್ಲಿಗೆ ಹೇಮಾವತಿ ನೀರನ್ನು ಪೂರೈಸಬೇಕಾದ ಅನಿವಾರ್ಯ ಪರಿಸ್ಥಿತಿಯಿದೆ ಎಂಬ ಗಂಭೀರ ಸಂಗತಿ ಬೆಳಕಿಗೆ ಬಂದಿದೆ.
ಬುದವಾರ ಬೆಳಗ್ಗೆ ತುಮಕೂರು ನಗರದ ತುಮಕೂರು ತಾಲ್ಲೂಕು ಪಂಚಾಯಿತಿ ಕಚೇರಿಯ ಸಭಾಂಗಣದಲ್ಲಿ ಅಧ್ಯಕ್ಷ ಗಂಗಾಂಜನೇಯ ಅವರ ಅಧ್ಯಕ್ಷತೆಯಲ್ಲಿ ಏರ್ಪಟ್ಟಿದ್ದ ತಾಲ್ಲೂಕು ಪಂಚಾಯಿತಿಯ ಸಾಮಾನ್ಯ ಸಭೆಯಲ್ಲಿ ಅಧಿಕಾರಿಯೊಬ್ಬರು ಈ ಸಮಸ್ಯೆ ಬಗ್ಗೆ ಬೆಳಕು ಚೆಲ್ಲಿದರು.
ಸಭೆಯಲ್ಲಿ ತಾಲ್ಲೂಕಿನ ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಚರ್ಚೆ ಆರಂಭವಾಯಿತು. ಅನೇಕ ಸದಸ್ಯರುಗಳು ತಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿ ಉದ್ಭವಿಸಿರುವ ಕುಡಿಯುವ ನೀರಿನ ಸಮಸ್ಯೆಗಳ ಬಗ್ಗೆ ಪ್ರಸ್ತಾಪಿಸಿದರು. “ತುಮಕೂರು ತಾಲ್ಲೂಕಿನಲ್ಲಿ ಕುಡಿಯುವ ನೀರಿಗೆ ಸಂಬಂಧಿಸಿದಂತೆ 86 ಸಮಸ್ಯಾತ್ಮಕ ಗ್ರಾಮಗಳನ್ನು ಗುರುತಿಸಲಾಗಿದೆ. ಇವುಗಳಲ್ಲಿ 24 ಗ್ರಾಮಗಳಲ್ಲಿ ತುರ್ತಾಗಿ ಕೊಳವೆ ಬಾವಿ ಕೊರೆಸಬೇಕೆಂದು ಯೋಜನೆ ಹಾಕಿಕೊಳ್ಳಲಾಗಿದೆ” ಎಂದು ಗ್ರಾಮೀಣ ನೀರು ಸರಬರಾಜು ಇಲಾಖೆಯ ಸಹಾಯಕ ಎಕ್ಸಿಕ್ಯುಟೀವ್ ಇಂಜಿನಿಯರ್ ಲಲಿತೇಶ್ವರ್ ಉತ್ತರಿಸುತ್ತಿದ್ದರು.
ಮಾತಿನ ಮಧ್ಯ ಅವರು ತುಮಕೂರು ನಗರದಿಂದ ಮಧುಗಿರಿ ಕಡೆಗೆ ಹೋಗುವ ರಸ್ತೆಯಲ್ಲಿ ತುಮಕೂರು ನಗರಕ್ಕೆ ಹೊಂದಿಕೊಂಡಂತಿರುವ ಯಲ್ಲಾಪುರದ ಪರಿಸ್ಥಿತಿಯ ಬಗ್ಗೆ ಸಭೆಯ ಗಮನ ಸೆಳೆದರು.
ಯಲ್ಲಾಪುರ ಹಾಗೂ ಸುತ್ತಮುತ್ತ ಈವರೆಗೆ ಕೊರೆದಿರುವ ಐದು ಕೊಳವೆಬಾವಿಗಳು ನೀರಿಲ್ಲದೆ ವಿಫಲವಾಗಿವೆ. ಆ ಭಾಗದಲ್ಲಿ ಅಂತರ್ಜಲ ಬತ್ತಿದ್ದು, ಹೊಸ ಕೊಳವೆ ಬಾವಿಗಳನ್ನು ಕೊರೆದರೂ ಪ್ರಯೋಜನವಾಗದಂತಹ ಸನ್ನಿವೇಶವಿದೆ. ಇದರಿಂದ ಉದ್ಭವಿಸಿರುವ ಕುಡಿಯುವ ನೀರಿನ ಸಮಸ್ಯೆಯನ್ನು ನಿವಾರಿಸಬೇಕಾದರೆ, ಆ ಭಾಗಕ್ಕೆ ಹೇಮಾವತಿ ನೀರನ್ನು ಪೂರೈಸುವ ಬಗ್ಗೆ ಚಿಂತನೆ ಮಾಡಬೇಕು” ಎಂದು ಇಂಜಿನಿಯರ್ ಸಲಹೆಯಿತ್ತರು. ಈ ಬಗ್ಗೆ ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಅಧ್ಯಕ್ಷ ಗಂಗಾಂಜನೇಯ ಪ್ರತಿಕ್ರಿಯಿಸಿದರು.
ರೈಸಿಂಗ್‍ಮೈನ್ ನಿಂದ ಮನೆ ಕಟ್ಟಲು ನೀರು ಬಳಕೆ!
ಚರ್ಚೆಯ ಮಧ್ಯ ಸದಸ್ಯ ಶಿವಕುಮಾರ್ (ಕಣಕುಪ್ಪೆ) ತಾವು ಪ್ರತಿನಿಧಿಸುವ ಕಣಕುಪ್ಪೆ ಕ್ಷೇತ್ರವ್ಯಾಪ್ತಿಯಲ್ಲಿ ಗ್ರಾಮ ಪಂಚಾಯಿತಿ ಸದಸ್ಯರೋರ್ವರು ಮನೆ ಕಟ್ಟಿಸಲು ರೈಸಿಂಗ್ ಮೈನ್‍ನಿಂದ ಅಕ್ರಮವಾಗಿ ನೀರು ಹರಿಸಿಕೊಳ್ಳುತ್ತಿದ್ದಾರೆಂಬ ಸಂಗತಿಯನ್ನು ಪ್ರಸ್ತಾಪಿಸಿದರು. ತುಮಕೂರು ತಾಲ್ಲೂಕಿನ ಗಡಿಯಲ್ಲಿ ಓವರ್‍ಹೆಡ್ ಟ್ಯಾಂಕ್ ಇದೆ. ಅದಕ್ಕೆ ಸಂಬಂಧಿಸಿದ ರೈಸಿಂಗ್‍ಮೈನ್‍ನಿಂದ ಅಲ್ಲೇ ಪಕ್ಕದ ಆದರೆ ಗುಬ್ಬಿ ತಾಲ್ಲೂಕಿಗೆ ಸೇರಿದ ಜಾಗದಲ್ಲಿ ನಿರ್ಮಿಸುತ್ತಿರುವ ಮನೆಗಾಗಿ ಅಕ್ರಮವಾಗಿ ನೀರನ್ನು ಬಳಸಿಕೊಳ್ಳಲಾಗುತ್ತಿದೆ. ಎಲ್ಲೆಡೆ ನೀರಿನ ಸಮಸ್ಯೆ ಇರುವಾಗ ಇಂಥ ಸಂಗತಿಗಳ ಬಗ್ಗೆ ಸ್ಥಳೀಯ ಗ್ರಾ.ಪಂ. ಪಿ.ಡಿ.ಓ.ಗಳಾಗಲಿ, ವಾಟರ್‍ಮ್ಯಾನ್‍ಗಳಾಗಲಿ ಏಕೆ ಗಮನಿಸುತ್ತಿಲ್ಲ ಎಂದು ಪ್ರಶ್ನಿಸಿದರು.
ಸ್ವಾಂದೇನಹಳ್ಳಿ ಸುತ್ತಮುತ್ತ ಕಳೆದ ಎರಡು ತಿಂಗಳುಗಳಿಂದ ಕುಡಿಯುವ ನೀರಿನ ಸಮಸ್ಯೆ ಬಿಗಡಾಯಿಸಿದೆ. ಈ ಬಗ್ಗೆ ಅಧಿಕಾರಿಗಳ ಗಮನ ಸೆಳೆದರೂ ಪ್ರಯೋಜನ ಆಗುತ್ತಿಲ್ಲ ಎಂದು ಸದಸ್ಯೆ ಕವಿತಾ ರಮೇಶ್ (ಸ್ವಾಂದೇನಹಳ್ಳಿ) ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಸ್ಥಾಯಿ ಸಮಿತಿ ಅಧ್ಯಕ್ಷ ರಮೇಶ್ ಮಾತನಾಡಿ, ವಾಟರ್‍ಮ್ಯಾನ್‍ಗಳು ಪಿ.ಡಿ.ಓ.ಗಳ ಮಾತನ್ನು ಧಿಕ್ಕರಿಸುತ್ತಿದ್ದಾರೆ ಎಂದು ದೂರಿದರು.
ಕೆಂಪನದೊಡ್ಡೇರಿ ಗ್ರಾಮದಲ್ಲಿ ಕುಡಿಯುವ ನೀರಿನ ಕೊಳವೆಬಾವಿಗೆ ಹತ್ತಿರದಲ್ಲೇ ಮತ್ತೊಂದು ಕೊಳವೆಬಾವಿ ಕೊರೆಯಲು ಅಕ್ರಮವಾಗಿ ಅನುಮತಿಸಲಾಗಿದೆ ಎಂದು ಸದಸ್ಯ ಮಂಜುನಾಥ್ (ಬಿಟ್ಟನಕುರಿಕೆ) ದೂರಿ, ಸೂಕ್ತ ಕ್ರಮಕ್ಕೆ ಒತ್ತಾಯಿಸಿದರು.
ಶೀಘ್ರ ಪಿ.ಡಿ.ಓ.ಗಳ ಸಭೆ
ಸದಸ್ಯರ ಮಾತುಗಳನ್ನು ಆಲಿಸಿದ ಅಧ್ಯಕ್ಷ ಗಂಗಾಂಜನೇಯ, ಅತಿ ಶೀಘ್ರದಲ್ಲೇ ತುಮಕೂರು ತಾಲ್ಲೂಕಿನ ಎಲ್ಲ 41 ಗ್ರಾಮ ಪಂಚಾಯಿತಿಗಳ ಪಿ.ಡಿ.ಓ.ಗಳ ಮತ್ತು ವಾಟರ್‍ಮ್ಯಾನ್‍ಗಳ ಪ್ರತ್ಯೇಕ ಸಭೆ ನಡೆಸಿ, ಕುಡಿಯುವ ನೀರಿನ ಸಮಸ್ಯೆ ಹಾಗೂ ಪರಿಹಾರ ಕ್ರಮಗಳ ಬಗ್ಗೆ ಚರ್ಚಿಸಲಾಗುವುದು ಎಂದು ಪ್ರಕಟಿಸಿದರು.
ಸದ್ಯಕ್ಕೆ ಮೇವಿನ ಸಮಸ್ಯೆ ಇಲ್ಲ
ತುಮಕೂರು ತಾಲ್ಲೂಕಿನಲ್ಲಿ ಸದ್ಯಕ್ಕೆ ಮೇವಿನ ಸಮಸ್ಯೆ ಕಂಡುಬರುತ್ತಿಲ್ಲ ಎಂದು ಪಶು ಸಂಗೋಪನೆ ಇಲಾಖೆಯ ಜಂಟಿ ನಿರ್ದೇಶಕ ಡಾ. ಸಂಜೀವರಾಯ ಸಭೆಗೆ ಮಾಹಿತಿ ನೀಡಿದರು. ತಾಲ್ಲೂಕಿನಲ್ಲಿ ಆಗಿರುವ ಬಿತ್ತನೆ, ಕಟಾವು ಮತ್ತು ಮೇವಿನ ಬೀಜ ವಿತರಣೆಯ ಲೆಕ್ಕಾಚಾರದ ಪ್ರಕಾರ ಈಗ 51,132 ಟನ್‍ಗಳಷ್ಟು ಮೇವು ರೈತರ ಬಳಿ ಲಭ್ಯವಿದೆ. ಮೇ ಅಂತ್ಯದವರೆಗೂ ಮೇವಿನ ಸಮಸ್ಯೆ ಉದ್ಭವಿಸಲಾರದು ಎಂದು ಅವರು ಹೇಳಿದರು. ಮೇ ತಿಂಗಳ ಬಳಿಕ ಒಂದು ವೇಳೆ ಸಮಸ್ಯೆ ತಲೆದೋರಿದರೆ ತುಮಕೂರು ತಾಲ್ಲೂಕಿನ ಕೋರಾ, ತುಮಕೂರು ಕಸಬ, ಹೆಬ್ಬೂರು, ಗೂಳೂರು ಮತ್ತು ಬೆಳ್ಳಾವಿ ಹೋಬಳಿಗಳಲ್ಲಿ ತಲಾ ಒಂದರಂತೆ ಮೇವು ಬ್ಯಾಂಕ್ ಆರಂಭಿಸಲು ಯೋಜನೆ ರೂಪಿಸಲಾಗಿದೆ ಎಂದರು.
ಬಾರದ ತಹಸೀಲ್ದಾರ್, ಗರಂ ಆದ ಸದಸ್ಯರು!!
ಈ ಬಾರಿಯೂ ತಾ.ಪಂ.ಸಭೆಗೆ ತುಮಕೂರು ತಾಲ್ಲೂಕು ತಹಸೀಲ್ದಾರ್ ಬರಲಿಲ್ಲ ಎಂಬ ಸಂಗತಿಯಿಂದ ಸದಸ್ಯರುಗಳು ಗರಂ ಆದ ಪ್ರಸಂಗವೂ ಜರುಗಿತು. ಸಭೆಯ ಆರಂಭದಲ್ಲೇ ಈ ವಿಷಯ ಬಿಸಿ-ಬಿಸಿ ಚರ್ಚೆಗೆ ಎಡೆಮಾಡಿಕೊಟ್ಟಿತು.ಕಳೆದ ಸಭೆಯಲ್ಲಿ ಶಾಲಾ ಸಮೀಪದ ಮೊಬೈಲ್ ಟವರ್ ತೆರವಾಗಬೇಕೆಂದು ತಾವು ಆಗ್ರಹಿಸಿದ್ದರೂ, ಪ್ರಯೋಜನ ಆಗಲಿಲ್ಲವೆಂದು ಹಾಗೂ ಈ ಸಭೆಗೂ ತಹಸೀಲ್ದಾರ್ ಆಗಮಿಸಲಿಲ್ಲವೆಂದು ಸದಸ್ಯೆ ಕವಿತಾ ರಮೇಶ್ (ಕೋರಾ) ಏರಿದ ದನಿಯಲ್ಲಿ ಹೇಳಿದ್ದು ಚರ್ಚೆಗೆ ಕಾರಣವಾಯಿತು. ತಹಸೀಲ್ದಾರ್ ಸೇರಿದಂತೆ ವಿವಿಧ ಇಲಾಖಾಧಿಕಾರಿಗಳು ಸಭೆಗೆ ಆಗಮಿಸದಿರುವ ಬಗ್ಗೆ ಸದಸ್ಯ ಮಂಜುನಾಥ್(ಬಿಟ್ಟನಕುರಿಕೆ) ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಮಾತಿನ ಮಧ್ಯ ಕವಿತಾ ರಮೇಶ್ (ಕೋರಾ) ಅಧ್ಯಕ್ಷರನ್ನು ಉದ್ದೇಶಿಸಿ “ನಾವು-ನೀವು ಅಧಿಕಾರಕ್ಕೆ ಬಂದು ಮೂರು ವರ್ಷಗಳಾಯಿತು. ಈ ಮೂರು ವರ್ಷಗಳಲ್ಲಿ ಯಾವುದಾದರೂ ಒಂದು ಸಮಸ್ಯೆಯನ್ನು ಬಗೆಹರಿಸಿದ್ದೀರಾ?” ಎಂದು ಕೆಣಕಿದ್ದು ಸಭೆಯಲ್ಲಿ ಕೆಲಕಾಲ ಬಿರುಸಿನ ವಾಗ್ವಾದಕ್ಕೆಡೆಮಾಡಿತು. ಅಧ್ಯಕ್ಷ ಗಂಗಾಂಜನೇಯ ಮತ್ತು ಉಪಾಧ್ಯಕ್ಷ ಶಾಂತಕುಮಾರ್ ಇದಕ್ಕೆ ಆಕ್ಷೇಪಿಸಿದರು. ಸ್ವತಃ ತಾ.ಪಂ. ಉಪಾಧ್ಯಕ್ಷ ಶಾಂತಕುಮಾರ್ ವಾಗ್ವಾದಕ್ಕಿಳಿದರು. ಕೆಲಹೊತ್ತು ಈರ್ವರ ನಡುವೆ ಮಾತಿನ ಚಕಮಕಿ ನಡೆಯಿತು. “ನೀವು ಪ್ರಚಾರಕ್ಕಾಗಿ ಈ ರೀತಿ ಮಾತನಾಡುತ್ತಿದ್ದೀರಿ” ಎಂದು ಕವಿತಾ ಅವರನ್ನು ಕುರಿತು ಶಾಂತಕುಮಾರ್ ಛೇಡಿಸಿದರು. ಅಧ್ಯಕ್ಷ ಗಂಗಾಂಜನೇಯ ಮಾತನಾಡಿ, ತಾವು ಇತ್ತೀಚೆಗಷ್ಟೇ ಎರಡು ಮೊಬೈಲ್ ಟವರ್‍ಗಳ ವಿರುದ್ಧ ಕ್ರಮ ಜರುಗಿಸಿರುವುದನ್ನು ಪ್ರಸ್ತಾಪಿಸಿದರು.
ಈ ಮಧ್ಯ ಸದಸ್ಯ ವಿಜಯಕುಮಾರ್ (ಊರುಕೆರೆ) ಮಾತನಾಡುತ್ತ, ಇದು ಅನವಶ್ಯಕ ಚರ್ಚೆ ಆಗಿದೆ. ಹಿಂದೆ ಆಗಿರುವ ಮೊಬೈಲ್ ಟವರ್‍ಗಳನ್ನು ತೆರವು ಮಾಡುವುದು ಸಾ ವೇ? ಎಂದು ಪ್ರಶ್ನಿಸಿದರು. ಇದಕ್ಕೆ ತಾ.ಪಂ. ಕಾರ್ಯನಿರ್ವಹಣಾಧಿಕಾರಿ ವೆಂಕಟೇಶಯ್ಯ “ಸಾಧ್ಯವಿಲ್ಲ” ಎಂದು ಉತ್ತರಿಸಿದರು.
ಮತ್ತೆ ಮಾತು ಮುಂದುವರೆಸಿದ ವಿಜಯಕುಮಾರ್, ಜಿಲ್ಲಾಧಿಕಾರಿ ಕಚೇರಿ ಆವರಣದ ನೆಮ್ಮದಿ ಕೇಂದ್ರದ ಮುಂದೆ ನೂರಾರು ಗ್ರಾಮೀಣ ಪ್ರದೇಶದವರು ರೇಷನ್ ಕಾರ್ಡ್‍ಗಾಗಿ ಕ್ಯೂ ನಿಂತಿರುವುದನ್ನು ಉಲ್ಲೇಖಿಸುತ್ತ, ಈ ಸಭೆಗೆ ತಹಸೀಲ್ದಾರ್ ಆಗಮಿಸಿದ್ದಿದ್ದರೆ ಈ ಬಗ್ಗೆ ಅವರನ್ನು ಪ್ರಶ್ನಿಸಬಹುದಿತ್ತು.
ಆದರೆ ಅವರು ಬಂದಿಲ್ಲ. ಈ ವಿಷಯವಾಗಿ ನಾವು ಜಿಲ್ಲಾಧಿಕಾರಿ ಕಚೇರಿಗೆ ತೆರಳಬೇಕಾಗಿಲ್ಲ. ನಾವು ಜಿ.ಪಂ.ನ ಮುಖ್ಯಕಾರ್ಯನಿರ್ವಹಣಾಧಿಕಾರಿಗಳ (ಸಿ.ಇ.ಓ.) ಕಚೇರಿಗೆ ಹೋಗಿ ಭೇಟಿ ಮಾಡುವುದು ಒಳಿತು ಎಂದು ಅಭಿಪ್ರಾಯಪಟ್ಟರು. ಅಧ್ಯಕ್ಷ ಗಂಗಾಂಜನೇಯ ತಾವು ಈವರೆಗೆ ಮಾಡಿರುವ ಪ್ರಯತ್ನಗಳನ್ನು ಸಭೆಗೆ ವಿವರಿಸಿದರು.
ಮತ್ತೆ ಎದ್ದುನಿಂತ ಕವಿತಾ ರಮೇಶ್ (ಕೋರಾ) ತಾ.ಪಂ. ಆಡಳಿತ ಸಂಪೂರ್ಣವಾಗಿ ಹದಗೆಟ್ಟಿದೆ ಎಂದು ಟೀಕಿಸಿದರು.ತಾಲ್ಲೂಕು ಆಡಳಿತ, ಜಿಲ್ಲಾ ಆಡಳಿತ ಹದಗಟ್ಟಿದೆ. ಹೇಳುವವರು ಕೇಳುವವರು ಇಲ್ಲದಂತಾಗಿದೆ. ಜನರಿಗೆ ನಾವು ನ್ಯಾಯ ಕೊಡುವುದು ಹೇಗೆ? ಬೇಸಿಗೆ ಬಂದಿದ್ದು ಕುಡಿಯುವ ನೀರಿನ ಸಮಸ್ಯೆ ಬಿಗಡಾಯಿಸುತ್ತಿದೆ.
ಶಾಲಾ ಪ್ರವೇಶ ಸಮೀಪಿಸಿದ್ದು ಶಾಲಾ ಪ್ರವೇಶದ ದರವನ್ನು ಆಯಾ ಶಾಲೆಗಳು ಪ್ರಕಟಿಸಬೇಕಿದೆ. ಇವುಗಳ ಬಗ್ಗೆ ಚರ್ಚಿಸೋಣವೆಂದರೆ ಈ ಸಭೆಗೆ ತಹಸೀಲ್ದಾರರು ಬರುತ್ತಿಲ್ಲ. ಅವರ ಕಚೇರಿಗೆ ತೆರಳಿ ಬೀಗ ಹಾಕಬೇಕಷ್ಟೇ” ಎಂದು ವಿಜಯಕುಮಾರ್ ಆಕ್ರೋಶದಿಂದ ನುಡಿದರು.
ಸದಸ್ಯ ರಂಗಶಾಮಯ್ಯ (ಸಿರಿವರ)ಮಾತನಾಡಿ, ತಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿ ಓರ್ವ ವ್ಯಕ್ತಿ ಇನ್ನೂ ಜೀವಂತವಾಗಿದ್ದರೂ ಆ ವ್ಯಕ್ತಿಯು ಮೃತಪಟ್ಟಿದ್ದಾರೆಂದು ದಾಖಲಿಸಿ ಅವರ ಆಸ್ತಿಗೆ ಖಾತೆ ಮಾಡಿಕೊಟ್ಟಿರುವ ಪ್ರಸಂಗ ನಡೆದಿದೆ. ಇಂಥವುಗಳ ಬಗ್ಗೆ ನಾವು ಯಾರನ್ನು ಕೇಳಬೇಕು? ಎಂದು ಪ್ರಶ್ನಿಸಿದರು.
ಕವಿತಾ ರಮೇಶ್ (ಕೋರಾ) ಮಾತನಾಡುತ್ತ, ಸೀಬಿ ಅರಣ್ಯ ಪ್ರದೇಶದಲ್ಲಿ ಅರಣ್ಯ ಭೂಮಿಯನ್ನು ಲೂಟಿ ಮಾಡುತ್ತಿದ್ದು, ಈ ಬಗ್ಗೆ ಪ್ರಶ್ನಿಸೋಣವೆಂದರೆ ತಹಸೀಲ್ದಾರರಾಗಲಿ, ಅರಣ್ಯ ಇಲಾಖೆಯವರಾಗಲಿ ಈ ಸಭೆಗೆ ಬಂದಿಲ್ಲ. ತಹಸೀಲ್ದಾರ್ ಬರುವವರೆಗೂ ಸಭೆಯನ್ನು ನಡೆಸಬೇಡಿ ಎಂದು ಅಧ್ಯಕ್ಷರನ್ನು ಒತ್ತಾಯಿಸಿದರು.
ಹೀಗೆಯೇ ಚರ್ಚೆ ಮುಂದುವರೆದಿದ್ದಾಗ, ಸಭೆಯನ್ನು ಸ್ಥಗಿತಗೊಳಿಸಿ ಈಗಿಂದೀಗಲೇ ಜಿ.ಪಂ. ಕಚೇರಿಗೆ ತೆರಳಿ ಮುಖ್ಯಕಾರ್ಯ ನಿರ್ವಹಣಾಧಿಕಾರಿಗಳನ್ನು ಭೇಟಿ ಮಾಡೋಣ ಎಂದು ಅಧ್ಯಕ್ಷರು ಹೇಳಿದರು. ಆದರೆ ವಿಜಯಕುಮಾರ್ ಇದಕ್ಕೆ ಒಪ್ಪಲಿಲ್ಲ. ಸಭೆ ನಡೆದು ಮೂರು ತಿಂಗಳಾಗುತ್ತಿದೆ. ಮೊದಲಿಗೆ ಈ ಸಭೆಯನ್ನು ನಡೆಸೋಣ. ಬಳಿಕ ಎಲ್ಲರೂ ಸೇರಿ ಜಿ.ಪಂ.ಗೆ ಹೋಗಿ, ಗೈರುಹಾಜರಾದ ಅಧಿಕಾರಿಗಳ ಬಗ್ಗೆ ದೂರು ಕೊಡೋಣ” ಎಂದಾಗ ಅಧ್ಯಕ್ಷರಾದಿಯಾಗಿ ಎಲ್ಲರೂ ಅದಕ್ಕೆ ಒಪ್ಪಿಕೊಂಡರು.
ಸದಸ್ಯರ ಬಗ್ಗೆ ಅಗೌರವ
ಬುಗುಡನಹಳ್ಳಿ ಕ್ಷೇತ್ರ ವ್ಯಾಪ್ತಿಯಲ್ಲಿ ನಡೆದ ಸಮಾರಂಭಕ್ಕೆ ಶಿಷ್ಟಾಚಾರದ ಪ್ರಕಾರ ತಮ್ಮನ್ನು ಆಹ್ವಾನಿಸಲಿಲ್ಲ ಎಂದು ಸದಸ್ಯೆ ಸುಜಾತಾ (ಬುಗುಡನಹಳ್ಳಿ) ದೂರಿದಾಗ, ಅನೇಕ ಸದಸ್ಯರು ತಮಗೂ ಇದೇ ರೀತಿಯ ಅನುಭವ ಆಗುತ್ತಿದೆಯೆಂದು ಆಕ್ರೋಶದಿಂದ ನುಡಿದರು.
ಸದಸ್ಯರಾದ ರಂಗಶಾಮಯ್ಯ (ಸಿರಿವರ), ದೀಪು (ನಾಗವಲ್ಲಿ), ವಿಜಯಕುಮಾರ್ (ಊರುಕೆರೆ), ಶಿವಕುಮಾರ್ (ಕಣಕುಪ್ಪೆ) ಮೊದಲಾದವರು ತಮಗೂ ಇದೇ ರೀತಿಯ ಅನುಭವ ಆಗಿದೆ ಎಂದು ದೂರಿದರು. “ಈ ಕಾರ್ಯನಿರ್ವಹಣಾಧಿಕಾರಿಗಳಿಗೆ ಸದಸ್ಯರ ಮುಖಪರಿಚಯವೂ ಇಲ್ಲ, ಹೆಸರೂ ಗೊತ್ತಿಲ್ಲ” ಎಂದು ಕವಿತಾ ರಮೇಶ್ (ಕೋರಾ) ಕುಟುಕಿದರು.ವೇದಿಕೆಯಲ್ಲಿ ಉಪಾಧ್ಯಕ್ಷ ಶಾಂತಕುಮಾರ್, ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ರಮೇಶ್, ಕಾರ್ಯನಿರ್ವಹಣಾಧಿಕಾರಿ ವೆಂಕಟೇಶಯ್ಯ ಮೊದಲಾದವರು ಇದ್ದರು. ತಾಲ್ಲೂಕು ಮಟ್ಟದ ವಿವಿಧ ಅಧಿಕಾರಿಗಳು ಹಾಜರಿದ್ದರು.