ಶಾಲಾ ಬಿಸಿಯೂಟಕ್ಕೂ ತಟ್ಟಿದೆ ನೀರಿನ ಅಭಾವದ ಬಿಸಿ.!!

ತುಮಕೂರು

     ನೀರನ್ನು ಎಲ್ಲಿಂದ ತರುವುದು, ಹಳ್ಳಿಗಳಲ್ಲಿ ನೀರೇ ಇಲ್ಲ. ಶಾಲೆಗಳಲ್ಲಿ ಅಕ್ಷರ ದಾಸೋಹದ ಅಡಿಗೆ ಮಾಡುವ ಹೆಣ್ಣುಮಕ್ಕಳು ಬಿಂದಿಗೆ ಹಿಡಿದು ಅಲ್ಲಿ ಇಲ್ಲಿ ಹೋಗಿ ನೀರು ಹೊಂಚಿ ತಂದು ಅಡಿಗೆ ಮಾಡುವಂತಾಗಿದೆ. ಅಡಿಗೆಗೇ ನೀರಿಲ್ಲವೆಂದಮೇಲೆ ಮಕ್ಕಳಿಗೆ ಶುದ್ಧ ಕುಡಿಯುವ ನೀರನ್ನು ಎಲ್ಲಿ ತರುತ್ತಾರೆ, ಆರ್‍ಓ ಪ್ಲಾಂಟ್‍ಗಳು ಎಲ್ಲಾ ಊರಿನಲ್ಲೂ ಇಲ್ಲ. ಇದಕ್ಕೆ ಯಾರನ್ನು ದೂರುವುದು?

     ಹಾಗಲವಾಡಿ ಕ್ಷೇತ್ರದ ಜಿಲ್ಲಾ ಪಂಚಾಯ್ತಿ ಸದಸ್ಯ ರಾಮಾಂಜನಪ್ಪ ಹೀಗೆಂದು ಹೇಳುತ್ತಾರೆ. ನಿಜ, ಶಾಲಾ ಮಕ್ಕಳ ಬಿಸಿಯೂಟಕ್ಕೂ ನೀರಿನ ಅಭಾವದ ಬಿಸಿ ತಟ್ಟಿದೆ. ಜಿಲ್ಲೆಯ ಅನೇಕ ಶಾಲೆಗಳಲ್ಲಿ ಅಡಿಗೆ ತಯಾರಿಸಲು ಅಡಿಗೆ ಸಿಬ್ಬಂದಿ ನೀರಿಗೆ ಪರದಾಡುತ್ತಿದ್ದಾರೆ. ಶಾಲಾ ಮಕ್ಕಳಿಗೆ ಶುದ್ಧ ಕುಡಿಯುವ ನೀರು ಪೂರೈಕೆಗೆ ಹರಸಾಹಸ. ಅನೇಕ ಶಾಲೆಗಳಲ್ಲಿ ಮಕ್ಕಳಿಗೆ ಶುದ್ಧ ಕುಡಿಯುವ ನೀರು ಕೊಡಲು ಸಾಧ್ಯವಾಗುತ್ತಿಲ್ಲ, ಮಕ್ಕಳೇ ಮನೆಯಿಂದ ನೀರು ತರಬೇಕು ಇಲ್ಲವೆ, ಅಡಿಗೆಗೆ ಬಳಸುವ ನೀರನ್ನೇ ಕುಡಿಯಬೇಕು ಅಂತಹ ಪರಿಸ್ಥಿತಿ ಇದೆ ಎಂದು ಬಿಸಿಯೂಟ ಸಿಬ್ಬಂದಿ ಹೇಳುತ್ತಾರೆ.

    ಶಾಲೆಗಳ ಬಿಸಿಯೂಟ ವ್ಯವಸ್ಥೆಗೆ ಆಯಾ ಗ್ರಾಮ ಪಂಚಾಯ್ತಿಗಳು ನೀರಿನ ಸೌಕರ್ಯ ಒದಗಿಸಬೇಕು ಎಂದು ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯ್ತಿ ಸಿಇಓ ಸೂಚನೆ ನೀಡಿದ್ದಾರೆ. ಕೆಲವು ಶಾಲೆಗಳಿಗೆಂದು ಕೊಳವೆಬಾವಿ ಕೊರೆಯಲಾಗಿದೆ. ಗ್ರಾಮ ಪಂಚಾಯ್ತಿಯಿಂದ ಶಾಲೆಗೆ ನೀರಿನ ಪೈಪ್‍ಲೈನ್ ಸಂಪರ್ಕ ನೀಡಿ ನೀರು ಪೂರೈಸಲಾಗುತ್ತಿದೆ. ಒಂದಷ್ಟು ಕಡೆ ಪಂಚಾಯ್ತಿಯವರು ಟ್ಯಾಂಕರ್‍ಗಳಲ್ಲಿ ಶಾಲೆಗೆ ನೀರು ಸರಬರಾಜು ಮಾಡುತ್ತಾರೆ.

     ಒಮ್ಮೊಮ್ಮೆ ಸಕಾಲದಲ್ಲಿ ನೀರು ಪೂರೈದೆ ಅಡಿಗೆ ಸಿದ್ಧಪಡಿಸಲು ತಡವಾಗುತ್ತದೆ. ಅಂತಹ ಸಂದರ್ಭದಲ್ಲಿ ನೀರಿಗೆ ಕಾಯದೆ, ಹೇಗಾದರೂ ನೀರಿನ ವ್ಯವಸ್ಥೆ ಮಾಡಿಕೊಂಡು ಅಡಿಗೆ ತಯಾರಿಸಲೇಬೇಕು ಎಂದು ಬಿಸಿಯೂಟ ಸಿಬ್ಬಂದಿ ಹೇಳುತ್ತಾರೆ.ಜಿಲ್ಲೆಯ ಎಲ್ಲಾ 3850 ಶಾಲೆಗಳ 1ರಿಂ 10ನೇ ತರಗತಿವರೆಗಿನ 2,38,210 ಮಕ್ಕಳಿಗೆ ಬಿಸಿಯೂಟದ ವ್ಯವಸ್ಥೆ ಇದೆ. ಮಕ್ಕಳಿಗೆ ಅಡಿಗೆ ಸಿದ್ಧಪಡಿಸಲು, ನಿತ್ಯ ನೀರು ಒದಗಿಸುವುದು ಸವಾಲಿನ ವಿಚಾರವೇ ಆಗಿದೆ.

    ಶಾಲೆಗಳಿಗೆ ನೀರು ಸರಬರಾಜು ಮಾಡಲು ಗ್ರಾಮ ಪಂಚಾಯ್ತಿಗಳು ಫಜೀತಿಪಡುವಂತಾಗಿದೆ. ಅನೇಕ ಕಡೆ ಪಂಚಾಯ್ತಿಗಳಿಗೆ ನೀರಿನ ಲಭ್ಯತೆಯೇ ಇಲ್ಲ, ಕೊಳವೆಬಾವಿ ನೀರು ಸಾಕಾಗುತ್ತಿಲ್ಲ. ಹೆಚ್ಚಿನ ಊರುಗಳ ಶಾಲೆಗಳ ಬಳಿ ಕಿರು ನೀರು ಸರಬರಾಜು ಘಟಕಗಳಿವೆ. ಅಲ್ಲಿಂದ ನೀರು ತಂದು ತುಂಬಿಕೊಳ್ಳಬೇಕು. ಅನೇಕ ಶಾಲೆಗಳಲ್ಲಿ ನೀರನ್ನು ಸಂಗ್ರಹಿಸಿಕೊಳ್ಳಲು ವ್ಯವಸ್ಥೆ ಇಲ್ಲ.

    ಡ್ರಮ್ಮುಗಳಲ್ಲಿ ಒಂದೆರಡು ದಿನಕ್ಕಾಗುವಷ್ಟು ಮಾತ್ರ ಸಂಗ್ರಹಿಸಿಕೊಳ್ಳಬಹುದಷ್ಟೆ, ಗ್ರಾಮ ಪಂಚಾಯ್ತಿಯವರು ದಿನಾ ನೀರು ಕೊಡುವುದಿಲ್ಲ, ಕೆಲವು ಶಾಲೆಗಳ ಎಸ್‍ಡಿಎಂಸಿಗಳು ನೀರಿನ ವ್ಯವಸ್ಥೆ ಬಗ್ಗೆ ಮುಂಜಾಗ್ರತೆ ವಹಿಸುತ್ತಿಲ್ಲ. ಕೆಲವು ಊರುಗಳಲ್ಲಿ ನೀರಿನ ಘಟಕಗಳು ಶಾಲೆಯಿಂದ ದೂರ ಇರುತ್ತವೆ. 40-50 ಮಕ್ಕಳಿಗೆ ಅಡಗೆಗೆ, ಕೈತೊಳೆಯಲು ಬೇಕಾಗುವಷ್ಟು ನೀರನ್ನು ದೂರದಿಂದ ಹೊತ್ತು ತರಬೇಕು.

     ಅಡಿಗೆ ಸಿಬ್ಬಂದಿಗೆ ನೀರು ತರುವುದೇ ನಿತ್ಯ ದೊಡ್ಡ ಕೆಲಸವಾಗುತ್ತದೆ ಎಂದು ಬಿಸಿಯೂಟ ತಯಾರಿಕರ ಸಂಘದ ಜಿಲ್ಲಾ ಸಂಚಾಲಕಿ ಗುಬ್ಬಿ ತಾಲ್ಲೂಕು ಚೇಳೂರು ಶಾಲೆಯಲ್ಲಿ ಅಡಿಗೆ ತಯಾರಿಸುವ ವನಜಾಕ್ಷಿ ಹೇಳುತ್ತಾರೆ ಚೇಳೂರು ಶಾಲೆಯ ಅಡಿಗೆ ಕೊಠಡಿಯು ಈ ಮೊದಲು ಕಿರು ನೀರು ಸರಬರಾಜು ಘಟಕದ ಪಕ್ಕದಲ್ಲೇ ಇತ್ತು, ಈಗ ಕಟ್ಟಿರುವ ಹೊಸ ಕಟ್ಟಡ ನೀರು ಘಟಕದಿಂದ ದೂರವಿದೆ. ಶಾಲೆಯಲ್ಲಿ ಸುಮಾರು 350 ಮಕ್ಕಳಿದ್ದಾರೆ, ಅಷ್ಟು ಮಕ್ಕಳಿಗೆ ನಿತ್ಯಾ 40 ಬಿಂದಿಗೆ ನೀರು ಹೊತ್ತು ತಂದು ಅಡಿಗೆ ಮಾಡುವ ವೇಳೆಗೆ ಗಡಿಬಿಡಿ ಯಾಗುತ್ತದೆ. ಇಂತಹುದನ್ನು ಹೊಂದಿಸಿಕೊಂಡು ಅಡಿಗೆ ಮಾಡಲೇ ಬೇಕಾಗಿದೆ ಎಂದು ವನಜಾಕ್ಷಿ ಹೇಳಿದರು.

    ಶಾಲೆಗಳಲ್ಲಿ ಮಕ್ಕಳಿಗೆ ಶುದ್ಧ ಕುಡಿಯುವ ನೀರಿನ ಸ್ಥಿತಿ ಕೇಳುವಂತೆಯೇ ಇಲ್ಲ. ದೊಡ್ಡ ಶಾಲೆಗಳಲ್ಲಿ  ಶುದ್ಧ ಕುಡಿಯುವ ನೀರಿಗಾಗಿ ಮಿನಿ ಆರ್‍ಓ ಪ್ಲಾಂಟ್ ಸ್ಥಾಪಿಸಲಾಗಿದೆ. ಕೆಲವು ಶಾಲೆಗಳಲ್ಲಿ ವಾಟರ್ ಫಿಲ್ಟರ್ ಅಳವಡಿಸಲಾಗಿದೆ. ಶಾಲೆಯ ಅಷ್ಟೂ ಮಕ್ಕಳಿಗೆ ಫಿಲ್ಟರ್ ನೀರು ಸಾಕಾಗುವುದಿಲ್ಲ. ಕೆಲವೆಡೆ ಸಮೀಪದ ಆರ್‍ಓ ಪ್ಲಾಂಟ್‍ಗಳಿಂದ ಶುದ್ಧ ನೀರನ್ನು ತಂದು ವಿದ್ಯಾರ್ಥಿಗಳಿಗೆ ಒದಗಿಸಲಾಗುತ್ತಿದೆ. ಆದರೆ ಎಲ್ಲಾ ಶಾಲೆಗಳಲ್ಲಿ ಇಂತಹ ವ್ಯವಸ್ಥೆ ಇಲ್ಲ. ನೀರಿನ ಘಟಕಗಳಿಲ್ಲದ ಹಳ್ಳಿಗಳ ಶಾಲೆಗಳ ಮಕ್ಕಳಿಗೆ ಶುದ್ಧ ನೀರು ಒದಗಿಸಲಾಗದು. ಅಡಿಗೆಗೆ ಬಳಸುವ ನೀರನ್ನೇ ಕುಡಿಯಲು ನೀಡಲಾಗುತ್ತದೆ.

    ಹಾಗಲವಾಡಿ ಹೋಬಳಿಯಲ್ಲಿ ನೀರಿಗೆ ತುಂಬಾ ಚಿಂತಾಜನಕ ಪರಿಸ್ಥಿತಿ ಇದೆ. ಹೀಗೆ ಆದರೆ ಮುಂದೆ ಅಡಿಗೆಯವರ ಜೊತೆ ಶಾಲಾ ಮಕ್ಕಳೂ ಬಿಂದಿಗೆ ಹಿಡಿದು ತೋಟದ ಬೋರ್‍ವೆಲ್‍ಗಳನ್ನು ಹುಡುಕಿಕೊಂಡು ಹೋಗಬೇಕಾಗಬಹುದು. ನಮ್ಮಲ್ಲಿ ಬೋರ್ ವೆಲ್‍ಗಳೂ, ಆರ್ ಓ ಪ್ಲಾಂಟ್‍ಗಳೂ ಕಮ್ಮಿ ಶಾಲೆಗಳಲ್ಲಿ ಬಿಸಿಯೂಟಕ್ಕೆ ನೀರು ಒದಗಿಸುವುದು ಕಷ್ಟವಾಗಿದೆ ಎಂದು ಜಿಲ್ಲಾ ಪಂಚಾಯ್ತಿ ಸದಸ್ಯ ರಾಮಾಂಜನಪ್ಪ ಹೇಳಿದರು.

     ಬೋರ್‍ವೆಲ್‍ಗಳು ಬತ್ತಿಹೋಗಿವೆ, ಹೊಸ ಬೋರ್ ಕೊರೆದರೂ ನೀರು ಸಿಗುತ್ತದೆ ಎಂಬ ಗ್ಯಾರಂಟಿ ಇಲ್ಲದಂತಹ ಪರಿಸ್ಥಿತಿ. ಆದರೂ ಬೋರ್ ಕೊರೆದು ನೀರು ಪಡೆಯಲೇಕು. ನಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿ ನೀರಿಗೆ ತೀವ್ರ ಬರ, ಈ ಭಾಗದಲ್ಲಿ ಹೇಮಾವತಿ ಚಾನಲ್ ಇಲ್ಲ, ಕೆರೆಕಟ್ಟೆಗಳಲ್ಲಿ ನೀರಿಲ್ಲ ಎಂದರು.

    ದೊಡೇರಿ ಹೋಬಳಿಯಲ್ಲಿ ಇದೂವರೆಗೂ ಶಾಲೆಗಳಲ್ಲಿ ನೀರಿನ ಸಮಸ್ಯೆಯಾಗಿಲ್ಲ, ಮಳೆ ಹೀಗೇ ಹೋದರೆ ನೀರು ಹೊಂಚುವುದು ಕಷ್ಟ ಎನ್ನುತ್ತಾರೆ ಮಧುಗಿರಿ ತಾಲ್ಲೂಕು ದೊಡ್ಡೇರಿ ಜಿಲ್ಲಾ ಪಂಚಾಯ್ತಿ ಸದಸ್ಯ ಚೌಡಪ್ಪ. ಶಾಲೆಗಳಿಗೆ ತೊಂದರೆ ಆಗದಂತೆ ನೀರು ಪೂರೈಸಲು ಗ್ರಾಮ ಪಂಚಾಯ್ತಿಗಳಿಗೆ ಹೇಳಲಾಗಿದೆ ಅವರು ನಿರ್ವಹಣೆ ಮಾಡುತ್ತಿದ್ದಾರೆ ಎಂದರು.

    ಹೊಳವನಹಳ್ಳಿ ಜಿಪಂ ಸದಸ್ಯ ನಾರಾಯಣಮೂರ್ತಿ ತಮ್ಮ ಕ್ಷೇತ್ರದಲ್ಲಿ ನೀರಿಗೆ ತೀವ್ರ ಬರ ಇದೆ. ನೀರು ಒದಗಿಸಲು ಗ್ರಾಮ ಪಂಚಾಯ್ತಿಯವರೂ ಪರದಾಡುತ್ತಿದ್ದಾರೆ. ಪ್ರತಿ ಶಾಲೆಗೆ ಒಂದೊಂದು ಬೋರ್‍ವೆಲ್ ಕೊರೆಸಿ, ನೀರು ಸಂಗ್ರಹಿಸಿಕೊಳ್ಳಲು ಅನುಕೂಲ ಮಾಡಿಕೊಟ್ಟರೆ ಶಾಲೆಗಳ ಬಿಸಿಯೂಟಕ್ಕೆ ನೀರಿನ ಸಮಸ್ಯೆಯಾಗದಂತೆ ನಿರ್ವಹಣೆ ಮಾಡಬಹುದು. ಜೊತೆಗೆ ಕುಡಿಯುವ ನೀರಿಗಾಗಿ ಶಾಲೆಗಳಲ್ಲಿ ಪ್ರತ್ಯೇಕ ಆರ್‍ಓ ಪ್ಲಾಂಟ್‍ಗಳನ್ನು ಸ್ಥಾಪಿಸಬೇಕು ಎಂದು ಹೇಳಿದರು.

    ಎಲ್ಲಾ ಶಾಲೆಗಳಲ್ಲೂ ಮಕ್ಕಳಿಗೆ ಶುದ್ಧ ಕುಡಿಯುವ ನೀರು ಪೂರೈಸಲು ಪ್ರಾಶಸ್ತ್ಯ ನಿಡಲಾಗುತ್ತಿದೆ. ಶಾಲೆ ಸಮೀಪದ ಆರ್‍ಓ ಪ್ಲಾಂಟ್‍ಗಳಿಂದ ನೀರು ತಂದು ಮಕ್ಕಳಿಗೆ ನೀಡುವ ವ್ಯವಸ್ಥೆ ಮಾಡಲಾಗಿದೆ. ಕೆಲ ಶಾಲೆಗಳಲ್ಲಿ ವಾಟರ್‍ಫಿಲ್ಟರ್ ಅಳವಡಿಸಿ ನೀರು ಶುದ್ಧೀಕರಿಸಿ ನೀಡಲಾಗುವುದು. ತಾಂತ್ರಿಕ ತೊಂದರೆಗಳಾದರೆ ತುರ್ತಾಗಿ ದುರಸ್ಥಿ ಮಾಡಲು ಕ್ರಮ ತೆಗೆದುಕೊಳ್ಳಲಾಗುತ್ತದೆ ಹಾಗೂ ಆ ವೇಳೆ ಪರ್ಯಾಯ ವ್ಯವಸ್ಥೆ ಮಾಡಲಾಗುತ್ತದೆ. ತೀರಾ ಅನಾನುಕೂಲ ಪರಿಸ್ಥಿತಿಯಲ್ಲಿ ಮನೆಯಂದಲೇ ಕುಡಿಯುವ ನೀರು ತರಲು ಮಕ್ಕಳಿಗೆ ತಿಳುವಳಿಕೆ ನೀಡಲಾಗುತ್ತದೆ ಎಂದು ಅಕ್ಷರ ದಾಸೋಹದ ಶಿಕ್ಷಣಾಧಿಕಾರಿ ನಾಗರಾಜಪ್ಪ ಹೇಳಿದರು.

   ಶಾಲೆಗಳ ಬಿಸಿಯೂಟ ಸಿದ್ಧಪಡಿಸಲು ಗ್ರಾಮ ಪಂಚಾಯ್ತಿಗಳಿಂದ ನೀರು ಒದಗಿಸಲಾಗುತ್ತಿದೆ. ಬೋರ್‍ವೆಲ್, ಪಂಚಾಯ್ತಿಯಿಂದ ನೀರಿನ ಸಂಪರ್ಕಪಡೆದು ಬಳಸಲಾಗುತ್ತಿದೆ. ನೀರು ಸಂಗ್ರಹಕ್ಕೆ ಶಾಲೆಗಳಲ್ಲಿ ಸಿಂಥೆಟಿಕ್ ಟ್ಯಾಂಕ್, ಡ್ರಂಗಳನ್ನು ಬಳಸಲಾಗುತ್ತಿದೆ ಎದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap