ಗಡಿನಾಡಿನಲ್ಲಿ ನೀರಿಗಾಗಿ ಹಾಹಕಾರ..!!!

ಪಾವಗಡ

       ಬರದ ನಾಡಿಗೆ ದಾಹ ತೀರಿಸುವ ಯೋಜನೆ ಜಾರಿಯಾಗ ಬೇಕಾಗಿದ್ದು, ಸ್ವಾತಂತ್ರ್ಯ ಬಂದು ಮುಕ್ಕಾಲು ಶತಮಾನವೆ ಸಮೀಪಿಸುತ್ತಿದ್ದರೂ ಕುಡಿಯುವ ಯೋಜನೆ ಜಾರಿಗೊಳಿಸಲು ಯಾವುದೇ ಸರ್ಕಾರ ಗಮನ ಹರಿಸಿಲ್ಲ. ರಾಜಕಾರಣಿಗಳು, ರಾಜಕೀಯ ಪಕ್ಷಗಳು ಚುನಾವಣೆ ಸಂದರ್ಭದಲ್ಲಿ ಮತ ಪಡೆಯಲು ತುಂಗಭದ್ರಾ ನೀರು ಹರಿಸುವುದಾಗಿ ಟೊಳ್ಳು ಭರವಸೆಗಳನ್ನು ನೀಡಿ ಮತ ಪಡೆದು ಹೋದವರು, ಮತ್ತೆ ಚುನಾವಣೆ ತನಕ ತಿರುಗಿ ನೋಡುವುದಿಲ್ಲ. ತಾಲ್ಲೂಕಿನ ಜನತೆಯ ನೀರಿನ ಬವಣೆ ಕೇಳೋರಿಲ್ಲ ಎಂಬುದು ತಾಲ್ಲೂಕಿನ ಜನತೆಯ ಆರೋಪವಾಗಿದೆ.

      ಪಾವಗಡ ತಾಲ್ಲೂಕು ಆಂಧ್ರದ ಗಡಿ ಭಾಗದಲ್ಲಿ ಇದ್ದು, ಆಂಧ್ರ ಪ್ರದೇಶದ ಸರ್ಕಾರ ಆಂಧ್ರದ ಹಳ್ಳಿಗಳಿಗೆ ಕುಡಿಯುವ ನೀರು ಮತ್ತು ಕೆರೆಗಳಿಗೆ ನೀರು ಹರಿಸುತಿದೆ. ಆಂಧ್ರ ಸರ್ಕಾರದ ಜೊತೆ ಕರ್ನಾಟಕ ಸರ್ಕಾರ ಮಾತು ಕತೆ ನಡೆಸಿದ್ದರೂ ಇಷ್ಟೊತ್ತಿಗೆ ಪಾವಗಡ ತಾಲ್ಲೂಕು ಫ್ಲೋರೈಡ್ ಮುಕ್ತ ತಾಲ್ಲೂಕನ್ನಾಗಿ ಮಾಡಬಹುದಾಗಿತ್ತು. ಆದರೆ ಸರ್ಕಾರ ತಾಲ್ಲೂಕಿನ ಬಗ್ಗೆ ನಿರ್ಲಕ್ಷ್ಯ ವಹಿಸಿದ ಕಾರಣ ಇಂದು ನೀರಿಗಾಗಿ ಹೋರಾಟ ಮಾಡಬೇಕಾದ ಪರಿಸ್ಥಿತಿ ಉಂಟಾಗಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

      ಸುಮಾರು 20 ವರ್ಷಗಳಿಂದ ಪಾವಗಡ ತಾಲ್ಲೂಕಿಗೆ ಶುದ್ದ ಕುಡಿಯುವ ನೀರು ಮತ್ತು ನೀರಾವರಿ ಯೋಜನೆ ಜಾರಿ ಮಾಡಬೇಕೆಂದು ವಿವಿಧ ಸಂಘಟನೆಗಳು ಹೋರಾಟ ಮಾಡುತ್ತಲೇ ಬಂದಿವೆ. ಆದರೂ ಯಾವುದೇ ಸರ್ಕಾರ ಸ್ಪಂದಿಸದೆ ಇಂದು ಪಾವಗಡ ತಾಲ್ಲೂಕು ಬರಡು ಭೂಮಿಯಾಗ ಬೇಕಾದ ಪರಿಸ್ಥಿತಿ ಎದುರಾಗಿದೆ.

        ಪಕ್ಷ ರಹಿತವಾಗಿ ನೀರಿಗಾಗಿ ಎಲ್ಲಾ ಪಕ್ಷದ ರಾಜಕಾರಣಿಗಳು ಹಾಗೂ ಸಂಘ ಸಂಸ್ಥೆಗಳು ವಿವಿಧ ಹಂತದಲ್ಲಿ ಹೋರಾಟ ಮಾಡಿವೆ. 55 ದಿನಗಳ ಕಾಲ ತಾಲ್ಲೂಕು ಕಚೆರಿ ಮುಂದೆ ಮದಕರಿ ನಾಯಕ ಸಂಘದಿಂದ ಮುಷ್ಕರ ನಡೆದಿತ್ತು. ನಂತರ ಸ್ವಾಮಿ ಜಪಾನಂದಜಿ ರವರ ನೇತೃತ್ವದಲ್ಲಿ ಬೆಂಗಳೂರಿಗೆ ಬೈಕ್ ರ್ಯಾಲಿ ಮತ್ತು ಕಾಲು ನಡಿಗೆಯಲ್ಲಿ ಹೋಗಿ ವಿಧಾನ ಸೌಧಕ್ಕೆ ಮುತ್ತಿಗೆ ಹಾಕಿ ನೀರಿನ ಸಮಸ್ಯೆಯನ್ನು ಸರ್ಕಾರದ ಗಮನಕ್ಕೆ ತಂದ ನಂತರ ಸಮ್ಮಿಶ್ರ ಸರ್ಕಾರದ ಆಗಿನ ಮುಖ್ಯ ಮಂತ್ರಿ ಕುಮಾರಸ್ವಾಮಿ ಪಾವಗಡಕ್ಕೆ 0.5 ಟಿ.ಎಂ.ಸಿ ನೀರು ನೀಡಲು ಒಪ್ಪಿಗೆ ನೀಡಿದ್ದರು. ಅದು ಅನುಷ್ಠಾನವಾಗಿಲ್ಲ.

        ಪಾವಗಡ ತಾಲ್ಲೂಕು ಫ್ಲೋರೈಡ್ ತಾಲ್ಲೂಕು ಎಂದು ಎಲ್ಲ ಸರ್ಕಾರಗಳಿಗೂ, ಜನಪ್ರತಿನಿಧಿಗಳಿಗೂ ವಿಚಾರ ತಿಳಿದಿದ್ದರೂ ಕುಡಿಯುವ ನೀರು ಕೊಡಲು ಸಾಧ್ಯವಾಗಿಲ್ಲ. ಸುಮಾರು ವರ್ಷಗಳಿಂದ ಪಾವಗಡ ಜನತೆ ನೀರಿಗಾಗಿ ಹಾಹಕಾರದಿಂದ ಬಳಲುತ್ತಿದ್ದಾರೆ. ಸರ್ಕಾರಗಳು ಸಮಸ್ಯೆ ಬಗೆ ಹರಿಸಲು ಮುಂದಾಗಿಲ್ಲ. ಒಂದು ವರ್ಷದ ಕೆಳಗೆ ರೈತ ಸಂಘದ ಜೊತೆ ವಿವಿಧ ಸಂಘ ಸಂಸ್ಥೆಗಳು ಸೇರಿ ನೀರಿಗಾಗಿ ಪಾವಗಡ ಬಂದ್ ಮಾಡಿ 33 ದಿನ ದೊಡ್ಡ ಮಟ್ಟದಲ್ಲಿ ನೀರಿಗಾಗಿ ಹೋರಾಟ ನಡೆಸಿದ ಮೇಲೆ ಆಗಿನ ಮುಖ್ಯ ಮಂತ್ರಿ ಸಿದ್ದರಾಮಯ್ಯ 2350 ಕೋಟಿ ರೂ.ಗಳನ್ನು ಬಜೆಟ್‍ನಲ್ಲಿ ಮೀಸಲು ಇಟ್ಟು ಯೋಜನೆ ತ್ವರಿತವಾಗಿ ಅನುಷ್ಠಾನಕ್ಕೆ ತರಬೇಕು ಎಂದು ಆದೇಶ ನೀಡಿದ್ದರು. ಇದುವರೆಗೂ ಟೆಂಡರ್ ಆಗಿದೆ, ಇನ್ನೇನು ಶಂಕುಸ್ಥಾಪನೆ ಒಂದೇ ಬಾಕಿ ಎಂದು ಒಂದು ವರ್ಷದಿಂದ ಪಾವಗಡ ಜನತೆಗೆ ಸುಳ್ಳು ಮಾಹಿತಿ ನೀಡುತ್ತಲೆ ಇದ್ದಾರೆ.

       ಸುಮಾರು ಇಪ್ಪತು ವರ್ಷಗಳಿಂದ ತಾಲ್ಲೂಕಿನಲ್ಲಿ ಮಳೆ ಬೆಳೆಯಾಗದೆ ಇಲ್ಲಿನ ರೈತರು ಸಾಲ ಸೋಲಕ್ಕೆ ತುತ್ತಾಗಿ ಕಂಗಾಲಾಗಿ ನೆಲ ಕಚ್ಚಿದ್ದು, 2018 ನೆ ಸಾಲಿನಲ್ಲಿಯೂ ಮಳೆ ಕೈಕೊಟ್ಟ ಕಾರಣ ದಿಕ್ಕು ತೋಚದೆ ಪರಿತಪ್ಪಿಸುತ್ತಿದ್ದಾರೆ. 10 ವರ್ಷಗಳ ಹಿಂದೆ ತಾಲ್ಲೂಕಿನಲ್ಲಿ ರೈತರು ಜಾನುವಾರುಗಳನ್ನು ಇಟ್ಟುಕೊಂಡು ಬೇಸಾಯ ಮಾಡುತ್ತಿದ್ದರು. ವರ್ಷದಿಂದ ವರ್ಷಕ್ಕೆ ಮಳೆ ಪುನಃ ಇಲ್ಲದ ಕಾರಣ ಶೇ. 95 ರಷ್ಟು ರೈತರು ಮೇವಿನ ಕೊರತೆ ನಿಭಾಯಿಸಲು ಸಾಧ್ಯವಾಗದೆ ಜಾನುವಾರುಗಳನ್ನು ಕಾಳ ಸಂತೆಯಲ್ಲಿ ಮಾರಾಟ ಮಾಡಿದ್ದಾರೆ. ಕೆಲ ರೈತರು, ಕೂಲಿ ಕಾರ್ಮಿಕರು ಉದ್ಯೋಗ ಹುಡುಕಿ ಪ್ರಮುಖ ಪಟ್ಟಣಗಳಿಗೆ ವಲಸೆ ಹೋಗಿರುವ ನಿದರ್ಶನಗಳು ಇವೆ. ತಾಲ್ಲೂಕಿನಲ್ಲಿ ಇಂದು ಕುಡಿಯಲು ಸಹ ನೀರಿನ ಹಾಹಾಕಾರ ಉಂಟಾಗಿದ್ದು, ಬೇಸಿಗೆ ಕಾಲದಲ್ಲಿ ಯಾವ ರೀತಿ ನೀರಿನ ಅಭಾವ ಆಗಬಹುದೆಂದು ಊಹಿಸಲು ಸಾಧ್ಯವಾಗುತ್ತಿಲ್ಲ ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ.

       ಆಂಧ್ರ ಸರ್ಕಾರದ ನೀಲಕಂಠ ಪುರ ಶ್ರೀರಾಮರೆಡ್ಡಿ ಶುದ್ದ ಕುಡಿಯುವ ನೀರಿನ ಯೋಜನೆಗೆ ಕರ್ನಾಟಕದ ಪಾವಗಡ ತಾಲ್ಲೂಕಿನಲ್ಲಿ ಅಡ್ಡಿಯಿಲ್ಲದೇ ಯೋಜನೆಗೆ ಅನುವು ಮಾಡಿಕೊಟ್ಟಿದ್ದು, ಇಂದು ಆಂಧ್ರ ಸರ್ಕಾರದ ಕೆರೆಗಳಿಗೆ ನೀರು ಹರಿಸುತ್ತಿದ್ದು, ಆಂಧ್ರ ಗಡಿ ಭಾಗದ ಉತ್ತರ ಪಿನಾಕಿನಿ ನದಿಯ ಪೇರೂರು ಡ್ಯಾಂಗೆ ನೀರು ಹರಿಯುತ್ತಿದೆ. ಉತ್ತರ ಪಿನಾಕಿನಿ ನದಿಯಿಂದ 8 ಕಿಲೋ ಮೀಟರ್ ದೂರದವರೆಗೂ ನದಿಯ ಮೂಲಕ ನೀರು ಹರಿಯ ಬಿಟ್ಟಿದ್ದರೆ ನದಿಯ ಪಕ್ಕದ ರೈತರಿಗೆ ಅನುಕೂಲವಾಗುತ್ತಿತು. ಆಂಧ್ರ ಸಚಿವೆ ಪೆರಿಟಾಲ ಸುನಿತಮ್ಮನವರ ಕರ್ನಾಟಕದ ಉತ್ತರ ಪಿನಾಕಿನಿ ನದಿಯಿಂದ ಪೇರೂರು ಡ್ಯಾಂಗೆ 8 ಕಿಲೋ ಮೀಟರ್ ದೂರ ನದಿಯ ಮೂಲಕ ನೀರು ಹರಿಯಬಿಡಬಾದೆಂಬ ಹೇಳಿಕೆಯು ತಾಲ್ಲೂಕಿನ ರೈತರ ಕೆಂಗಣ್ಣನಿಗೆ ಗುರಿಯಾಗಿದೆ.

          ಸ್ಥಳೀಯ ಶಾಸಕ ಹಾಗೂ ರಾಜ್ಯದ ಕಾರ್ಮಿಕ ಸಚಿವ ವೆಂಕಟರವಣಪ್ಪ ತುಂಗಭದ್ರಾ ನದಿಯ ನೀರನ್ನು ಪೈಪುಗಳ ಮೂಲಕ ಒಂದು ವರ್ಷದೊಳಗಡೆ ಹರಿಸಲೆ ಬೇಕೆಂದು ಅಧಿಕಾರಿಗಳಿಗೆ ಕಟ್ಟು ನಿಟ್ಟಾಗಿ ಆದೇಶ ನೀಡಿದ್ದಾರೆ. ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಜೊತೆ ಸಚಿವರು ಮಾತುಕತೆ ನಡೆಸಿ, ಮಾರ್ಚ್ 2 ರಂದು ಚಳ್ಳಕೆರೆ ತಾಲ್ಲೂಕು ಮಧ್ಯ ಭಾಗದಲ್ಲಿ ಶಂಕುಸ್ಥಾಪನೆ ಮಾಡಲು ಮುಖ್ಯಮಂತ್ರಿ ಒಪ್ಪಿಗೆ ನೀಡಿದ್ದಾರೆ ಎಂದು ಸಚಿವರಿಂದ ಮಾಹಿತಿ ತಿಳಿದು ಬಂದಿದೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap