ರಸ್ತೆ ಅಗೆತ: ನೀರು ಪೂರೈಕೆಗೆ ಅಡ್ಡಿ

ತುಮಕೂರು
     ತುಮಕೂರು ನಗರದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗಾಗಿ ಯದ್ವಾತದ್ವಾ ರಸ್ತೆಯನ್ನು ಅಗೆಯಲಾಗುತ್ತಿದ್ದು, ಇದರಿಂದ ಅಲ್ಲಲ್ಲಿ ನೀರು ಪೂರೈಕೆ ಪೈಪ್‍ಗಳಿಗೆ ಹಾನಿಯಾಗಿ, ನೀರು ಪೂರೈಕೆಯಲ್ಲಿ ವ್ಯತ್ಯಯ ಆಗುತ್ತಿರುವ ದೂರುಗಳು ಕೇಳಿಬಂದಿದೆ.ವಿವಿಧ ಕಂಪನಿಗಳು ಸ್ಮಾರ್ಟ್‍ಸಿಟಿ ಯೋಜನೆಯಡಿ ರಸ್ತೆಗಳನ್ನು ಅಗೆಯುತ್ತಿವೆ. ರಸ್ತೆ ಅಗೆಯಲು ಜನರನ್ನು ಬಳಸಿಕೊಳ್ಳುವುದು ಒಂದೆಡೆಯಾದರೆ, ವಿವಿಧ ಯಂತ್ರಗಳನ್ನೂ ಬಳಸಲಾಗುತ್ತಿದೆ. ಯಂತ್ರಗಳನ್ನು ಬಳಸುವಾಗ ಅವುಗಳು ಕೆಲವೇ ಹೊತ್ತಿನಲ್ಲಿ ರಸ್ತೆಯನ್ನು ಅಗೆದುಬಿಡುತ್ತವೆ. ಅಗೆಯುವ ಅವಸರದಲ್ಲಿ ಭೂಮಿಯೊಗಿನ ಅನೇಕ ಪೈಪ್‍ಲೈನ್‍ಗಳು ಜಖಂಗೊಳ್ಳುತ್ತಿವೆ. ಇದರಿಂದ ನೀರು ಪೂರೈಕೆಯಲ್ಲಿ ಸಮಸ್ಯೆ ತಲೆಯೆತ್ತುತ್ತಿದೆ ಎಂದು ಹೇಳಲಾಗುತ್ತಿದೆ.
      ರಸ್ತೆ ಅಗೆಯುವಾಗ ಆಯಾ ಕಂಪನಿಗಳ ಸಂಬಂಧಿತ ವ್ಯಕ್ತಿಗಳು ಹಾಜರಿದ್ದು ಇಂತಹ ಸಮಸ್ಯೆ ಉಂಟಾದರೆ ತಕ್ಷಣವೇ ಪಾಲಿಕೆಯ ಸಂಬಂಧಿಸಿದ ಅಧಿಕಾರಿ, ಸಿಬ್ಬಂದಿಗಳ ಗಮನ ಸೆಳೆಯಬೇಕು. ಅದೇ ರೀತಿ ಪಾಲಿಕೆಯ ಸ್ಥಳೀಯ ವಾರ್ಡ್‍ಗಳ ಇಂಜಿನಿಯರ್‍ಗಳು, ನೀರು ಪೂರೈಕೆ ಸಿಬ್ಬಂದಿ ಸಹ ಇಂತಹ ಕಾಮಗಾರಿಗಳ ಮೇಲೆ ನಿಗಾ ಇರಿಸಿರಬೇಕು. ಆದರೆ ಈಗ ಇವೆರಡೂ ಕೆಲಸಗಳು ಸಮರ್ಪಕವಾಗಿ ನಡೆಯದಿರುವುದರಿಂದ ಇಂತಹ ನೀರಿನ ಸಮಸ್ಯೆ ಉದ್ಭವಿಸುತ್ತಿದೆ ಎನ್ನಲಾಗಿದೆ. 
      ನಗರದ ನೃಪತುಂಗ ಬಡಾವಣೆಯಲ್ಲಿ ಕೆಲವು ಭಾಗಗಳಿಗೆ ಮೂರು ದಿನಗಳಿಂದ ನೀರು ಪೂರೈಕೆ ವ್ಯತ್ಯಯವಾಗಿದೆ. ಪಾಲಿಕೆ ಸಿಬ್ಬಂದಿ ಎಂದಿನಂತೆ ನೀರನ್ನು ಬಿಟ್ಟಿದ್ದಾರೆ. ಆದರೆ ಮನೆಗಳವರಿಗೆ ಆ ನೀರು ತಲುಪಿಲ್ಲ. ಸಾರ್ವಜನಿಕರ ದೂರಿನ ಹಿನ್ನೆಲೆಯಲ್ಲಿ ಪಾಲಿಕೆ ಸಿಬ್ಬಂದಿ ಪರಿಶೀಲಿಸಿದಾಗ, ಕಂಪನಿಯೊಂದು ರಸ್ತೆಯನ್ನು ಅಗೆಯುವಾಗ ಮಾಡಿದ್ದ ಎಡವಟ್ಟಿನಿಂದ ಹೀಗಾಗಿದೆಯೆಂಬುದು ಬೆಳಕಿಗೆ ಬಂದಿದೆ. 
     ಇನ್ನು ನಗರದ ಚಿಕ್ಕಪೇಟೆಯ ಹರಿಸಿಂಗರ ಬೀದಿಯಲ್ಲಿ ನಲ್ಲಿಯ ಮೂಲಕ ಹೊಂಡುನೀರು ಸರಬರಾಜಾಗಿದ್ದು, ಸಾರ್ವಜನಿಕರನ್ನು ತಲ್ಲಣಗೊಳಿಸಿದೆ. ಪೈಪ್‍ಲೈನ್‍ನಲ್ಲಿ ಎಲ್ಲೋ ಉಂಟಾದ ಸಮಸ್ಯೆಯಿಂದ ಹಾಗೂ ಸಿಬ್ಬಂದಿ ನಿರ್ಲಕ್ಷ್ಯದಿಂದ ಈ ರೀತಿ ಆಗಿದೆಯೆನ್ನಲಾಗಿದೆ.ಇವೆರಡೂ ಸಮಸ್ಯೆಗಳ ಬಗ್ಗೆ ಸಾರ್ವಜನಿಕರು ಪಾಲಿಕೆಯ ಹಿರಿಯ ಅಧಿಕಾರಿಗಳ ಗಮನ ಸೆಳೆದಿದ್ದು, ಸದರಿ ಅಧಿಕಾರಿಗಳು ತಕ್ಷಣವೇ ಸಂಬಂಧಿಸಿದ ಸಿಬ್ಬಂದಿಗಳನ್ನು ತರಾಟೆಗೆ ತೆಗೆದುಕೊಂಡು, ಎಚ್ಚರಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link