ಬೆಂಗಳೂರು
ಬೇಸಿಗೆಯ ಬೇಗೆ ಹೆಚ್ಚಿದಂತೆ ನಗರದ ಹಲವೆಡೆ ನೀರಿನ ಹಾಹಾಕಾರ ಉಂಟಾಗಿದ್ದು ಇದನ್ನೇ ಬಂಡವಾಳವಾಗಿಸಿ ಕೊಂಡಿರುವ ಖಾಸಗಿ ನೀರಿನ ಟ್ಯಾಂಕರ್ ಮಾಲೀಕರು, ಎರಡುರಷ್ಟು ಬೆಲೆ ನಿಗಧಿ ಪಡಿಸಿ ಜನ- ಸಾಮಾನ್ಯರ ಸುಲಿಗೆ ಮಾಡ ತೊಡಗಿದ್ದಾರೆ..
ಬಿಬಿಎಂಪಿ ವ್ಯಾಪ್ತಿಯ ಪ್ರತಿ ವಾರ್ಡ್‍ನಲ್ಲೂ ಖಾಸಗಿ ನೀರಿನ ಟ್ಯಾಂಕರ್‍ಗಳ ಸದ್ದು, ದಂಧೆ ದಿನೇ ದಿನೇ ಹೆಚ್ಚಾಗುತ್ತಿದೆ. ಇನ್ನೂ, ಟ್ಯಾಂಕರ್ ಮಾಲೀಕರೇ ತಮ್ಮ ಇಷ್ಟಕ್ಕೆ ತಕ್ಕಂತೆ ಬೆಲೆ ಹೇಳುತ್ತಾರೆ.ಆದರೆ, ನೀರಿನ ಮೂಲ ಕೇಳುವಂತಿಲ್ಲ. ನೀರು ಪರಿಶುದ್ಧವೇ? ಗುಣಮಟ್ಟದಿಂದ ಇದೀಯೇ? ಮುಂತಾದ ಪ್ರಶ್ನೆಗಳಿಗೆ ಅವರ ಬಳಿ ಉತ್ತರವೇ ಇಲ್ಲದಂತೆ ಆಗಿದೆ.
ಹಗಲಿನಲ್ಲಿಯೇ ಸಾವಿರಾರು ರೂಪಾಯಿ ವಸೂಲಿ ಮಾಡುವ ಖಾಸಗಿ ನೀರಿನ ಟ್ಯಾಂಕರ್ ಮಾಲೀಕರ ದಂಧೆಗೆ ಕಡಿವಾಣ ಹಾಕಲು ಬಿಬಿಎಂಪಿ ಆಗಲಿ, ಜಲಂಡಳಿ ಅಧಿಕಾರಿಗಳು ಮುಂದಾಗಿಲ್ಲ. ಇದು, ನಮ್ಮ ವ್ಯಾಪ್ತಿಗೆ ಬರುದೇ ಇಲ್ಲ ಎನ್ನುವಂತೆ ಅವರ ನಡುವಳಿಕೆ ಹೇಳುತ್ತಿದೆ. ಇನ್ನು, ಖಾಸಗಿ ನೀರು ಟ್ಯಾಂಕರ್ ನಿಯಂತ್ರಣಕ್ಕೆ ಜಾರಿಗೆ ತಂದ ಕಾಯಿದೆಯು ಕಾಗದ ಬಿಟ್ಟು ಹೊರಬರಲಿಲ್ಲ.
ಅಷ್ಟೇ ಏಕೆ, ರಾಜಧಾನಿಯಲ್ಲಿ ಎಷ್ಟು ಖಾಸಗಿ ನೀರಿನ ಟ್ಯಾಂಕರ್‍ಗಳಿವೆ ಎಂಬ ಮಾಹಿತಿ ಪಾಲಿಕೆಯಲ್ಲೂ ಇಲ್ಲ, ಜಲಮಂಡಳಿ ಬಳಿಯೂ ಇಲ್ಲ. ಅಂದಾಜಿನ ಪ್ರಕಾರ ಸುಮಾರು 5.5 ಸಾವಿರಕ್ಕೂ ಅಧಿಕ ಟ್ಯಾಂಕರ್‍ಗಳು ನಗರದಲ್ಲಿವೆ ಎಂದು ತಿಳಿದುಬಂದಿದೆ.
ಏರಿದ ದರ
ನಗರ ವ್ಯಾಪ್ತಿಯ ಅಪಾರ್ಟ್‍ಮೆಂಟ್‍ಗಳು, ಕಂಪೆನಿಗಳು ಮತ್ತು ಮನೆಗಳಿಗೆ ಕಳೆದೊಂದು ತಿಂಗಳಿನಿಂದ ಸಮರ್ಪಕವಾಗಿ ಕಾವೇರಿ ನೀರು ಸರಬರಾಜು ಆಗುತ್ತಿಲ್ಲ. ಹಾಗಾಗಿ, ಟ್ಯಾಂಕರ್‍ಗಳಿಗೆ ಡಿಮ್ಯಾಂಡ್ ಜಾಸ್ತಿಯಾಗಿವೆ.ಕಳೆದ ಡಿಸೆಂಬರ್, ಜನವರಿಯಲ್ಲಿ ದಿನಕ್ಕೆ 10 ಟ್ಯಾಂಕರ್ ನೀರು ಪೂರೈಸುತ್ತಿದ್ದೆವು. ಮಾರ್ಚ್‍ನಿಂದ ಡಿಮ್ಯಾಂಡ್ ಜಾಸ್ತಿಯಾಗಿದ್ದು, ದಿನಕ್ಕೆ ಎರಡು ಟ್ಯಾಂಕರ್‍ಗಳಿಂದ 30 ಲೋಡ್‍ನಷ್ಟು ನೀರು ಮಾರಾಟವಾಗುತ್ತಿದೆ.
ಕೊಳವೆಬಾವಿ ಮಾಲೀಕರು ಈ ಹಿಂದೆ ಒಂದು ಟ್ಯಾಂಕರ್‍ಗೆ 220ರೂ. ಪಡೆಯುತ್ತಿದ್ದರು. ಸದ್ಯ 325 ರೂ.ಗಳಿಗೆ ಹೆಚ್ಚಿಸಿದ್ದಾರೆ. ಆದ ಕಾರಣ, ನಾವು ಕೂಡ ಟ್ಯಾಂಕರ್ ನೀರಿನ ದರವನ್ನು 1000-1400 ರೂ.ವರೆಗೆ ಏರಿಕೆ ಮಾಡಿದ್ದೆವೆ. ಟ್ರ್ಯಾಕ್ಟರ್ ಟ್ಯಾಂಕರ್‍ಗಳ ನೀರು ಸಹ 600 ರೂ. ನಿಂದ 700 ರೂ.ಗಳಿಗೆ ಹೆಚ್ಚಾಗಿದೆ ಟ್ಯಾಂಕರ್ ಮಾಲೀಕರೊಬ್ಬರು ಹೇಳಿದರು.