ಚಿತ್ರದುರ್ಗ:
ಹಳೆ ಬಾಕಿ ಮನ್ನ ಮಾಡಿ. ಹೊಸ ಮೀಟರ್ ಅಳವಡಿಸಿ ಮುಂದೆ ಪ್ರತಿ ತಿಂಗಳು ವಿದ್ಯುತ್ ಶುಲ್ಕ ಪಾವತಿಸುತ್ತೇವೆಂದು ಬಸವನಶಿವನಕೆರೆಯ ನೂರಾರು ರೈತರು ಬೆಸ್ಕಾಂ ಇಂಜಿನಿಯರ್‍ಗಳಿಗೆ ತಾಕೀತು ಮಾಡಿದರು.
ವಿದ್ಯುತ್ ಪೂರೈಕೆಯಲ್ಲಿ ನಗರ ಮತ್ತು ಗ್ರಾಮೀಣ ಪ್ರದೇಶಗಳಿಗೆ ತಾರತಮ್ಯ ಹಾಗೂ ಬೆಳೆನೀತಿಯಲ್ಲಿ ಮೋಸವನ್ನು ಖಂಡಿಸಿ 2002 ರಲ್ಲಿ ಅಂದಿನ ರೈತ ಮುಖಂಡ ನಂಜುಂಡಸ್ವಾಮಿ ನೇತೃತ್ವದಲ್ಲಿ 280 ಮೀಟರ್‍ಗಳನ್ನು ಸರ್ಕಾರಕ್ಕೆ ಹಿಂದಿರುಗಿಸಿ ಅಂದಿನಿಂದ ಇಂದಿನವರೆಗೂ ಗ್ರಾಮದಲ್ಲಿ ಮೀಟರ್‍ಗಳೆ ಇಲ್ಲದೆ ವಾಸಿಸುತ್ತಿರುವ ಬಸವನಶಿವನಕೆರೆಯ ರೈತರು ಬೆಸ್ಕಾಂ ಇಂಜಿನಿಯರ್‍ಗಳೊಡನೆ ಗ್ರಾಮದ ಬಸವೇಶ್ವರ ದೇವಸ್ಥಾನದಲ್ಲಿ ಬುಧವಾರಸ ಸಭೆ ಸೇರಿ ಚರ್ಚಿಸಿ ಸರ್ಕಾರ ಮತ್ತು ವಿದ್ಯುತ್ ಇಲಾಖೆಯವರು ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಇಂದಿನಿಂದಲೇ ಹಳೆ ಬಾಕಿ ಮನ್ನ ಮಾಡಿ ಹೊಸ ಮೀಟರ್ ಹಾಕಿ ವಿದ್ಯುತ್ ಬಿಲ್ ಪ್ರಾಮಾಣಿಕವಾಗಿ ಪಾವತಿಸುತ್ತೇವೆ ಎಂದು ಭರವಸೆ ನೀಡಿದರು.
ಬೆಸ್ಕಾಂನ ಕಾರ್ಯನಿರ್ವಾಹಕ ಇಂಜಿನಿಯರ್ ಮಲ್ಲಿಕಾರ್ಜುನ್ ಬಸವನಶಿವನಕೆರೆ ರೈತರ ಜೊತೆ ಸಂವಾದ ನಡೆಸಿ ಇದೊಂದು ಪಾಲಿಸಿ ವಿಷಯವಾಗಿರುವುದರಿಂದ ಬೆಸ್ಕಾಂನ ವ್ಯವಸ್ಥಾಪಕ ನಿರ್ದೇಶಕರು ಹಾಗೂ ಸರ್ಕಾರದ ಮಟ್ಟದಲ್ಲಿ ಚರ್ಚಿಸಿ ಅಂತಿಮ ನಿರ್ಧಾರ ಕೈಗೊಳ್ಳಬೇಕಾಗುತ್ತದೆ. ಏಕಾಏಕಿ ನಾನು ಯಾವುದೇ ತೀರ್ಮಾನ ಕೈಗೊಳ್ಳುವ ಅಧಿಕಾರವಿಲ್ಲ. ಆರ್.ಆರ್.ನಂ. ಮೀಟರ್ ಇದೆಯೋ ಇಲ್ಲವೋ, ಬಾಕಿ ಕಟ್ಟಿದ್ದಾರೋ ಇಲ್ಲವೋ ಎನ್ನುವುದನ್ನು ಮೊದಲು ಸರ್ವೆ ಮಾಡಿ ವರದಿ ಕೊಡಿ ಎಂದು ಸ್ಥಳದಲ್ಲಿದ್ದ ಎ.ಇ.ಇ.ರಮೇಶ್ ಹಾಗೂ ಸೆಕ್ಷನ್ ಆಫೀಸರ್ ಶ್ರೀನಿವಾಸಚಾರ್‍ಗೆ ಸೂಚಿಸಿದರು.
2002 ರಲ್ಲಿ ನೀವು ಮೀಟರ್‍ಗಳನ್ನು ಸರ್ಕಾರಕ್ಕೆ ಹಿಂದಿರುಗಿಸುವ ಬದಲು ಪ್ರತಿ ತಿಂಗಳು ವಿದ್ಯುತ್ ಬಿಲ್ ಪಾವತಿಸಿಕೊಂಡು ಹೋಗಿದ್ದರೆ ಈ ಸಮಸ್ಯೆಯೇ ಇರುತ್ತಿರಲಿಲ್ಲ. ಈ ಹಿಂದೆ ಸಾಕಷ್ಟು ಸಭೆಗಳನ್ನು ನಡೆಸಲಾಗಿದೆ. ಕಾನೂನು ಚೌಕಟ್ಟಿನಲ್ಲಿ ನಾವುಗಳು ಕೆಲಸ ಮಾಡಬೇಕಾಗಿರುವುದರಿಂದ ಚೀಫ್ ಇಂಜಿನಿಯರ್, ರೈತ ಮುಖಂಡರು ಹಾಗೂ ವ್ಯವಸ್ಥಾಪಕ ನಿರ್ದೇಶಕರ ಜೊತೆ ಮತ್ತೊಂದು ಸುತ್ತಿನ ಸಭೆ ನಡೆಸಿ ಸಾಧ್ಯವಾದಷ್ಟು ರೈತರಿಗೆ ಅನುಕೂಲ ಮಾಡುವುದಾಗಿ ಭರವಸೆ ನೀಡಿ ಇದಕ್ಕೆ ನಿಮ್ಮ ಸಹಕಾರ ಮುಖ್ಯ ಎಂದು ಕೋರಿದರು.
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆಯ ತಾಲೂಕು ಅಧ್ಯಕ್ಷ ಬಸ್ತಿಹಳ್ಳಿ ಜಿ.ಸುರೇಶ್‍ಬಾಬು ಸಭೆಯನ್ನುದ್ದೇಶಿಸಿ ಮಾತನಾಡಿ ಎಂಟು ಹತ್ತು ವರ್ಷಗಳಿಂದ ಸತತವಾಗಿ ಬರಗಾಲವಿರುವುದರಿಂದ ರೈತರು ಉಳಿಯುವುದೇ ಕಷ್ಟವಾಗಿದೆ. ಇನ್ನು ಬಾಕಿ ಕಟ್ಟುವುದು ಎಲ್ಲಿಂದ ಎಂದು ಬೆಸ್ಕಾಂ ಇಂಜಿನಿಯರ್‍ಗಳನ್ನು ಪ್ರಶ್ನಿಸಿ ಹೊಸ ಮೀಟರ್ ಹಾಕಿ, ಬಾಕಿ ಶುಲ್ಕ ಮನ್ನ ಮಾಡಿ. ಬಸವನಶಿವನಕರೆಯ ರೈತರೆಲ್ಲಾ ನಿಮಗೆ ಸಂಪೂರ್ಣವಾಗಿ ಸಹಕಾರ ನೀಡುತ್ತೇವೆ ಎಂದು ಮನವರಿಕೆ ಮಾಡಿದರು.
ನಗರ ಪ್ರದೇಶಗಳಿಗೆ ವಿದ್ಯುತ್ ಸರಬರಾಜು ಮಾಡಿದಂತೆ ಗ್ರಾಮೀಣ ಪ್ರದೇಶಗಳಿಗೆ ಪೂರೈಸುತ್ತಿಲ್ಲ. ವಿದ್ಯುತ್ ನೀರು ಇವೆರಡೆ ರೈತರಿಗೆ ನಿಜವಾದ ಅಸ್ತ್ರ. ಇವುಗಳು ಸರಿಯಾಗಿದ್ದಿದ್ದರೆ ಮೀಟರ್‍ಗಳನ್ನು ಸರ್ಕಾರಕ್ಕೆ ಹಿಂದಿರುಗಿಸುತ್ತಿರಲಿಲ್ಲ. ಹದಿನಾರು ವರ್ಷಗಳಿಂದ ವಿದ್ಯುತ್ ಬಾಕಿಯನ್ನು ಉಳಿಸಿಕೊಳ್ಳುತ್ತಿರಲಿಲ್ಲ ಎಂದು ಬೆಸ್ಕಾಂ ಕಾರ್ಯಪಾಲಕ ಇಂಜಿನಿಯರ್ ಮಲ್ಲಿಕಾರ್ಜುನಪ್ಪನವರಿಗೆ ಮನವರಿಕೆ ಮಾಡಿದರು.
ಸರ್ಕಾರ ಮತ್ತು ಜಿಲ್ಲಾಡಳಿತ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ರೈತರನ್ನು ಸಂರಕ್ಷಣೆ ಮಾಡಬೇಕು. ಇದೊಂದು ಪಾಲಿಸಿ ಮ್ಯಾಟರ್ ಆಗಿರುವುದರಿಂದ ಇಂಧನ ಸಚಿವರು ಹಾಗೂ ಬೆಸ್ಕಾಂನ ವ್ಯವಸ್ಥಾಪಕ ನಿರ್ದೇಶಕರ ಬಳಿ ರೈತರ ನಿಯೋಗ ಹೋಗಿ ಹಳೆ ಬಾಕಿ ಮನ್ನ ಮಾಡಿ ಹೊಸ ಮೀಟರ್ ಅಳವಡಿಸಿ ಸಮಸ್ಯೆಗೆ ತಾರ್ಕಿಕ ಅಂತ್ಯ ಕಾಣಿಸಬೇಕೆಂದು ಪಟ್ಟು ಹಿಡಿಯುವುದಾಗಿ ಸಭೆಯಲ್ಲಿ ಎಚ್ಚರಿಕೆ ನೀಡಿದರು.
ಗ್ರಾಮೀಣ ಪ್ರದೇಶದ ರೈತರಿಗೆ ದಿನಕ್ಕೆ ಏಳು ಗಂಟೆ ನಿರಂತರಾಗಿ ವಿದ್ಯುತ್ ಪೂರೈಸಿ. ಹೊಸ ಮೀಟರ್ ಹಾಕಿ. ಯಾವುದೇ ಕಾರಣಕ್ಕೂ ಹಿಂದಿನ ಬಾಕಿ ಪಾವತಿಸಿ ಎಂದು ಕಿರಿಕಿರಿ ಮಾಡಬಾರದು. ನಿಯಮಾನುಸಾರ ಹೊಸ ಶುಲ್ಕವನ್ನು ಆಯಾ ತಿಂಗಳಿನಲ್ಲೆ ಬೆಸ್ಕಾಂಗೆ ಕಟ್ಟುತ್ತೇವೆ ಎಂದು ಸಭೆಯಲ್ಲಿದ್ದ ಎಲ್ಲಾ ರೈತರು ಒಕ್ಕೊರಲಿನ ಅಭಿಪ್ರಾಯ ವ್ಯಕ್ತಪಡಿಸಿದರು.
ರೈತ ಮುಖಂಡರುಗಳಾದ ಸಿ.ಆರ್.ತಿಮ್ಮಣ್ಣ, ಆರ್.ಹೆಚ್.ಜಯಪ್ಪ, ಎನ್.ಆರ್.ಮಂಜಣ್ಣ, ಸೋಮಶೇಖರಪ್ಪ, ಹನುಮಂತಪ್ಪ, ಮಹದೇವಪ್ಪ, ಶೇಖರಪ್ಪ, ಶಿವಕುಮಾರ್ ಇನ್ನು ಮುಂತಾದವರು ಸಭೆಯಲ್ಲಿ ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








