ರೈತರ ಸಂಪೂರ್ಣ ಸಾಲಮನ್ನಾ ಮಾಡಲು ಒತ್ತಾಯ

ಗುಬ್ಬಿ

         ಕಳೆದ ಹಲವು ವರ್ಷಗಳಿಂದ ಸಮರ್ಪಕವಾಗಿ ಮಳೆ ಬಾರದೆ ಸಾಲ ಮಾಡಿ ಬೆಳೆದ ಬೆಳಗಳನ್ನು ಕಳೆದುಕೊಂಡು ತೀವ್ರತರ ಸಮಸ್ಯೆ ಎದುರಿಸುತ್ತಿರುವ ರಾಜ್ಯದ ರೈತರ ಪರಿಸ್ಥಿತಿ ಹೇಳತೀರದಾಗಿದೆ. ಇಂತಹ ಸಂದರ್ಭದಲ್ಲಿ ರಾಜ್ಯ ಸರ್ಕಾರ ರೈತರ ಸಾಲವನ್ನು ಸಂಪೂರ್ಣವಾಗಿ ಮನ್ನಾ ಮಾಡಬೇಕೆಂದು ರಾಷ್ಟ್ರೀಯ ಕಿಸಾನ್ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಕೊಂಚೆಶಿವರುದ್ರಪ್ಪ ಒತ್ತಾಯಿಸಿದರು.

          ಪಟ್ಟಣದ ತಾಲ್ಲೂಕು ಕಚೇರಿ ಮುಂದೆ ರಾಷ್ಟ್ರೀಯ ಕಿಸಾನ್ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ತೀವ್ರತರ ಬರಗಾಲದಲ್ಲಿ ರಾಜ್ಯದ ರೈತರು ಹತ್ತು ಹಲವು ಭೀಕರ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ರೈತರು ಬೆಳೆದ ಯಾವುದೆ ಬೆಳೆಗಳು ಸಹ ಅವರ ಕೈ ಸೇರಿಲ್ಲ. ಇದುವರೆಗೂ ಯಾವ ಸರಕಾರಗಳು ಬಂದರೂ ಸಹ ವೈಜ್ಞಾನಿಕವಾದ ಬೆಲೆಯನ್ನೆ ನೀಡಿಲ್ಲ.

        ರೈತರ ಕಷ್ಟಗಳು ಸರಕಾರಗಳಿಗೆ ಬೇಕಾಗಿಲ್ಲ. ಹಾಗಾಗಿ ರಾಜ್ಯದ ಎಲ್ಲಾ ಭಾಗದಲ್ಲಿಯು ಸಹ ರೈತರು ತಾಲ್ಲೂಕು ಕಚೇರಿಗಳ ಮುಂದೆ ಪ್ರತಿಭಟನೆ ಮಾಡುತ್ತಿದ್ದು ನಮ್ಮ ರೈತರ ಹಿತಕಾಯುವವರೆಗೂ ನಮ್ಮ ಹೋರಾಟ ನಿರಂತರ ಎಂದು ತಿಳಿಸಿದರು.

          ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ಮಂಜುಳಾ ಡಾ.ಸ್ವಾಮಿ ಮಾತನಾಡಿ, ಮಹಿಳೆಯರಿಗೆ ಹೋರಾಟಕ್ಕೆ ನಿಂತರೆ ಅವರಿಗೆ ಅವಮಾನ ಮಾಡಲಾಗುತ್ತಿದೆ. ಎಲ್ಲಾ ಕಡೆಯು ಮಹಿಳೆಯರು ಅವಮಾನ ಎದುರಿಸಿಯೇ ಜೀವನ ಮಾಡಬೇಕಾಗಿದೆ. ಗ್ರಾಮ ಪಂಚಾಯತಿಗಳಲ್ಲಿ ಸಾಕಷ್ಟು ರೈತರಿಗೆ ಅನ್ಯಾಯವಾಗುತ್ತಿದ್ದು ಅದನ್ನು ಸರಕಾರ ಗಂಭೀರವಾಗಿ ತೆಗೆದುಕೊಂಡು ಸರಕಾರದಿಂದ ಬರುವಂತಹ ಅನುದಾನಗಳನ್ನು ಅವರಿಗೆ ನ್ಯಾಯ ಬದ್ಧವಾಗಿ ಒದಗಿಸಬೇಕು ಎಂದು ಒತ್ತಾಯಿಸಿದರು.

           ತಾಲ್ಲೂಕು ಅಧ್ಯಕ್ಷ ಮಹೇಶ್ ಮಾತನಾಡಿ ರೈತರಿಗೆ ಸಮರ್ಪಕವಾದ ವಿದ್ಯುತ್ ನೀಡುವಲ್ಲಿ ಸರಕಾರ ನಿರ್ಲಕ್ಷ್ಯತೆ ಮಾಡುತ್ತಿದ್ದು, ರೈತರ ತೋಟಗಳಲ್ಲಿ ಹೊಲಗಳಲ್ಲಿ ಸಾಕಷ್ಟು ಕೆಳಹಂತದಲ್ಲಿ ವಿದ್ಯುತ್ ತಂತಿಗಳು ಹೋಗಿದ್ದು ಅವುಗಳನ್ನು ತ್ವರಿತವಾಗಿ ಸರಿಪಡಿಸುವಂತೆ ಒತ್ತಾಯಿಸಿದರು. ಸಾಕಷ್ಟು ವರ್ಷಗಳಿಂದ ಮನೆಕಟ್ಟಿಕೊಂಡು ಜೀವನ ಮಾಡುತ್ತಿದ್ದರೂ ಆ ಮನೆಗಳಿಗೆ ಕೆಲವು ಗ್ರಾಮ ಪಂಚಾಯತಿಗಳು ಖಾತೆ ಮಾಡಿಲ್ಲ. ಕೂಡಲೆ ಸರ್ಕಾರ ಈ ಬಗ್ಗೆ ಚಿಂತನೆ ನಡೆಸಬೇಕೆಂದು ಒತ್ತಾಯಿಸಿದರು.

          ರಾಷ್ಟ್ರೀಯ ಕಿಸಾನ್ ಸಂಘದ ಜಿಲ್ಲಾ ಸಂಚಾಲಕಿ ಹೆಚ್.ಕೆ.ಚಂದ್ರಕಲಾ ಮಾತನಾಡಿ, ರೈತರು ಸಾಲ ಮಾಡಿ ಬೆಳೆದ ತೆಂಗಿನ ಮರಗಳು ಬಿದ್ದು ಹೋದರೆ ಸರ್ಕಾರ ಕೇವಲ 400 ರೂ. ನೀಡುತ್ತಿದೆ. ಇದು ಅವೈಜ್ಞಾನಿಕವಾಗಿದ್ದು ಕನಿಷ್ಠಪಕ್ಷ 2 ಸಾವಿರ ಪರಿಹಾರ ನೀಡುವಂತೆ ಒತ್ತಾಯಿಸಿದರು.

         ಪ್ರತಿಭಟನೆಯಲ್ಲಿ ತುರುವೇಕೆರೆ ತಾಲ್ಲೂಕು ಅಧ್ಯಕ್ಷ ಪ್ರಶಾಂತ್, ಜಿಲ್ಲಾ ಸಮಿತಿಯ ಅನ್ನಪೂರ್ಣಮ್ಮ ಹಾಗೂ ತಾಲ್ಲೂಕು ಸಂಘದ ಸದಸ್ಯರು ಭಾಗವಹಿಸಿದ್ದರು. ಪ್ರತಿಭಟನೆಯ ನಂತರ ತಹಸೀಲ್ದಾರ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ