ಬೆಂಗಳೂರು
ಕೈಗಾರಿಕಾ ಇಲಾಖೆಗೆ ಸಂಬಂಧಿಸಿದ ವಿಚಾರಗಳಿಗೆ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪನವರಿಂದ ಒಳ್ಳೆಯ ಸ್ಪಂದನೆ ಸಿಗುತ್ತಿದ್ದು, ರಾಜ್ಯವನ್ನು ದೇಶದಲ್ಲೇ ನಂ 1 ಕೈಗಾರಿಕಾ ಸ್ನೇಹಿ ರಾಜ್ಯವನ್ನಾಗಿಸಬೇಕು ಎನ್ನುವ ಗುರಿಯನ್ನು ಹೊಂದಿದ್ದೇನೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವರಾದ ಜಗದೀಶ್ ಶೆಟ್ಟರ್ ಹೇಳಿದ್ದಾರೆ. ಪೀಣ್ಯ ಇಂಡಸ್ಟ್ರಿ ಅಸೋಸಿಯೇಷನ್ ಇಂದು ಆಯೋಜಿಸಿದ್ದ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಏಳಿಗೆ ಹಾಗೂ ಅಭಿವೃದ್ಧಿಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಕೈಗಾರಿಕೋದ್ಯಮಿಗಳೊಂದಿಗೆ ಸಂವಾದ ನಡೆಸಿದರು.
ಕೈಗಾರಿಕಾ ಸಚಿವರಾಗಿ ಅಧಿಕಾರ ಸ್ವೀಕರಿಸಿದ ನಂತರ ಈಗಾಗಲೇ ಬಹಳಷ್ಟು ಬಾರಿ ಪೀಣ್ಯ ಕೈಗಾರಿಕೋದ್ಯಮಿಗಳನ್ನು ಭೇಟಿಯಾಗಿ ಚರ್ಚೆ ನಡೆಸಿದ್ದೇನೆ. ಇಲ್ಲಿ ಮೂಲಭೂತ ಸೌಕರ್ಯಗಳ ಅಭಿವೃದ್ದಿಗೆ ಬೇಕಾಗಿದ್ದ ಅನುದಾನವನ್ನು ಮುಖ್ಯಮಂತ್ರಿಗಳ ಗಮನಕ್ಕೆ ತರುವ ಮೂಲಕ ಸಚಿವ ಸಂಪುಟ ಸಭೆಯಲ್ಲಿ 50 ಕೋಟಿ ಮಂಜೂರು ಮಾಡಿಸಲಾಗಿದೆ. ಸುಮಾರು 9 ಲಕ್ಷ ಜನರಿಗೆ ಉದ್ಯೋಗ ನೀಡಿರುವ ಪೀಣ್ಯ ಕೈಗಾರಿಕಾ ಕ್ಷೇತ್ರದ ಕೊಡುಗೆ ರಾಜ್ಯ ಅಷ್ಟೇ ಅಲ್ಲ ದೇಶಕ್ಕೂ ಬಹಳಷ್ಟಿದೆ ಎಂದು ಶ್ಲಾಘಿಸಿದರು.
ಕೈಗಾರಿಕೆಗಳ ಅಭಿವೃದ್ದಿಗೆ ಹಾಗೂ ಕೈಗಾರಿಕೆಗಳ ವಿಷಯಗಳಿಗೆ ಮುಖ್ಯಮಂತ್ರಿಗಳಾದ ಬಿ. ಎಸ್ . ಯಡಿಯೂರಪ್ಪನವರು ಸೂಕ್ತ ಸ್ಪಂದನೆ ನೀಡುತ್ತಿದ್ದಾರೆ ಎಂದು ಸಚಿವರು ಸಂತಸ ವ್ಯಕ್ತಪಡಿಸಿದರು. ಕೈಗಾರಿಕೆಗಳ ಅಭಿವೃದ್ಧಿಗೆ ಸರಕಾರ ನೀಡುತ್ತಿರುವ ಸ್ಪಂದನೆಗೆ ದೇಶದಲ್ಲೇ ಒಳ್ಳೆಯ ಹೆಸರಿದೆ. ಕೆಲವು ಕ್ಷೇತ್ರದಲ್ಲಿ ನಮ್ಮ ರಾಜ್ಯ ಮೊದಲ ಸ್ಥಾನದಲ್ಲಿದೆ. ಎಲ್ಲಾ ವಲಯದ ಕೈಗಾರಿಕೆಗಳಿಗೂ ಅನುಕೂಲ ಮಾಡಿಕೊಡುವ ಪರಿಸರ ನಿರ್ಮಿಸುವ ಮೂಲಕ ದೇಶದಲ್ಲೇ ನಂ 1 ಸ್ಥಾನಕ್ಕೆ ಕೊಂಡೊಯ್ಯುವುದು ನನ್ನ ಗುರಿಯಾಗಿದೆ ಎಂದು ಹೇಳಿದರು.
ದಾವೋಸ್ ಭೇಟಿ ಫಲಪ್ರದ:
ಮುಖ್ಯಮಂತ್ರಿಗಳ ನೇತೃತ್ವದಲ್ಲಿ ದಾವೋಸ್ ಭೇಟಿ ಬಹಳ ಫಲಪ್ರದವಾಗಿದೆ. ಮೂರು ದಿನಗಳ ಕಾಲ ದಾವೋಸ್ ನಲ್ಲಿ ನಿರ್ಮಿಸಿದ್ದ ಕರ್ನಾಟಕ ಪೆವಿಲಿಯನ್ ನಲ್ಲಿ ಜಾಗತಿಕ ಉದ್ದಿಮೆದಾರ ನಾಯಕರನ್ನು ಭೇಟಿಯಾಗಿ ಅವರೊಂದಿಗೆ ನಡೆಸಿದ ಚರ್ಚೆಯಿಂದಾಗಿ ಸಮಸ್ಯೆಗಳ ಇನ್ನೊಂದು ಆಯಾಮ ನಮ್ಮದೆರು ಮೂಡುಲು ಸಾಧ್ಯವಾಯಿತು.
40 ಪ್ರಮುಖ ಕೈಗಾರಿಕೋದ್ಯಮಿಗಳು ಮುಖ್ಯಮಂತ್ರಿಗಳು ನೇತೃತ್ವದ ತಂಡದ ಜೊತೆಯಲ್ಲಿ ವಿವರವಾಗಿ ಚರ್ಚೆ ನಡೆಸಿದ ತಮಗೆ ಬೇಕಾದ ಬೇಡಿಕೆಗಳನ್ನು ಮುಂದಿಟ್ಟರು. ಕೆಲವು ಆಡಳಿತಾತ್ಮಕ ಸಮಸ್ಯೆಗಳಿಂದ ಕೈಗಾರಿಕೋದ್ಯಮಿಗಳು ಬಂಡವಾಳ ಹೂಡಲು ಆಗುತ್ತಿರುವ ಸಮಸ್ಯೆಗಳನ್ನು ಪರಿಹರಿಸಲು ಮುಖ್ಯಮಂತ್ರಿಗಳು ಒಪ್ಪಿಗೆ ನೀಡಿದ್ದಾರೆ. ಕೈಗಾರಿಕೆ ಸ್ಥಾಪಿಸಲು ಬೇಕಾಗುವ ಭೂಮಿಯನ್ನು ಕೊಂಡುಕೊಳ್ಳಲು ಹಾಗೂ ಭೂ ಪರಿವರ್ತನೆ ಮಾಡಲು ಇರುವ ಕೆಲವು ನಿಯಮಗಳಿಗೆ ತಿದ್ದುಪಡಿಯನ್ನು ಮಾಡಲು ಮುಖ್ಯಮಂತ್ರಿಗಳ ಒಪ್ಪಿಗೆಯನ್ನು ನೀಡಿದ್ದಾರೆ ಎಂದು ಹೇಳಿದರು.
ದಾವೋಸ್ ಭೇಟಿಗೆ ಮೊದಲು ಹಿಂಜರಿದಿದ್ದ ಮುಖ್ಯಮಂತ್ರಿಗಳು, ಭೇಟಿಯ ನಂತರ ಇಲ್ಲಿಗೆ ಬರದಿದ್ದರೆ ನಾನು ದೊಡ್ಡ ತಪ್ಪು ಮಾಡಿದಂತಾಗುತ್ತಿತ್ತು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಅಲ್ಲಿನ ಜಾಗತಿಕ ನಾಯಕರೊಂದಿಗಿನ ಭೇಟಿ ನಮ್ಮಲ್ಲಿ ಹೊಸದೊಂದು ಅನುಭವ ನೀಡಿತು ಎಂದು ಹೇಳಿದರು.
ಪೀಣ್ಯ ಕೈಗಾರಿಕಾ ಪ್ರದೇಶದ ಅಭಿವೃದ್ದಿ:
ಈ ಪ್ರದೇಶದ ಅಭಿವೃದ್ದಿಗೆ ಬಿಡುಗಡೆಯಾಗಿರುವ 30 ಕೋಟಿ ರೂಪಾಯಿಗಳ ಅನುದಾನ ಸಮರ್ಪಕ ಬಳಕೆ ಆಗುವುದಕ್ಕೆ ಇರುವ ತೊಡಕುಗಳನ್ನು ನಿವಾರಿಸುವುದು ನಮ್ಮ ಮೊದಲ ಆದ್ಯತೆ ಆಗಿರಲಿದೆ. ಈ ಅನುದಾನದ ಬಳಕೆಗೆ ನೇಮಕ ಮಾಡಿರುವ ಬಿಬಿಎಂಪಿ, ಎಕ್ಸಿಕ್ಯೂಟಿವ್ ಇಂಜಿನೀಯರ್ ಗಳ ಜೊತೆ ಸಭೆಯನ್ನ ಮಾಡಿ ಇದರ ಬಗ್ಗೆ ಚರ್ಚೆ ಮಾಡುವ ಭರವಸೆಯನ್ನು ನೀಡಿದರು.
ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿ ಮೂಲಭೂತ ಸೌಕರ್ಯಗಳ ಅಭಿವೃದ್ದಿಗೆ ಸಚಿವ ಸಂಪುಟ ಸಭೆ 50 ಕೋಟಿ ರೂಪಾಯಿಗಳ ಅನುದಾನವನ್ನು ಮಂಜೂರು ಮಾಡಿದೆ. ಇದರ ಸದ್ಬಳಕೆಗೆ ಬೇಕಾಗಿರುವ ಡಿಪಿಆರ್ ನ್ನು ಸಿದ್ಧಪಡಿಸಿ ಟೆಂಡರ್ ಪ್ರಕ್ರಿಯೆ ಪ್ರಾರಂಭಿಸಲು ಸೂಚನೆ ನೀಡಿದರು.
ಇಂಡಸ್ಟ್ರಿ ಟೌನ್ ಶಿಪ್ ಗೆ ಕೈಗಾರಿಕಾ ಇಲಾಖೆ ಒಪ್ಪಿಗೆ:
ಪೀಣ್ಯ ಇಂಡಸ್ಟ್ರಿ ಅಸೋಸಿಯೇಷನ್ ಬೇಡಿಕೆಯಾದ ಟೌನ್ ಶಿಪ್ ಗೆ ಅನುಮತಿ ನೀಡುವ ಕುರಿತು ಪ್ರತಿಕ್ರಿಯಿಸಿದ ಸಚಿವರು, ಕೈಗಾರಿಕಾ ಇಲಾಖೆಗೆ ಇಂಡಸ್ಟ್ರಿ ಟೌನ್ ಶಿಪ್ ಗೆ ಸಂಪೂರ್ಣ ಒಪ್ಪಿಗೆ ಇದೆ. ಆದರೆ, ಇದಕ್ಕೆ ಆಕ್ಷೇಪ ವ್ಯಕ್ತಪಡಿಸುತ್ತಿದ್ದ ನಗರಾಭಿವೃದ್ದಿ ಇಲಾಖೆಯೂ ಇದೀಗ ತನ್ನ ನಿರ್ಧಾರದಲಿ ಬದಲಾವಣೆಯನ್ನು ತೊರಿಸುತ್ತಿದೆ. ಇಂಡಸ್ಟ್ರಿ ಟೌನ್ ಶಿಪ್‍ಗಳಿಂದ ಬಹಳಷ್ಟು ಅನುಕೂಲಗಳಿವೆ.
ಸಂಬಂಧ ಪಟ್ಟ ಇಲಾಖೆಗಳೊಂದಿಗೆ ಈಗಾಗಲೇ ಒಂದು ಸಭೆಯನ್ನು ನಡೆಸಿದ್ದು ಇನ್ನು ಕೆಲವೇ ದಿನಗಳಲ್ಲಿ ಈ ವಿಷಯವನ್ನು ಸಚಿವ ಸಂಪುಟ ಸಭೆಯ ಮುಂದಿಡುವ ವಿಶ್ವಾಸವಿದೆ ಎಂದು ಹೇಳಿದರು. ಜಲಮಂಡಳಿಯ ಪೆÇ್ರೀ ರೇಟಾ ಚಾರ್ಜ್ ಹಾಗೂ ವಿದ್ಯುತ್ ಇಲಾಖೆಗೆ ಸಂಬಂಧಿಸಿದ ಓಸಿ ಗೆ ಸಂಬಂಧಿಸಿದಂತೆ ಶೀಘ್ರದಲ್ಲೇ ಸಂಬಂಧಪಟ್ಟ ಇಲಾಖೆಗಳ ಸಭೆಯನ್ನು ಕರೆಯುವುದಾಗಿ ತಿಳಿಸಿದರು.
ವಿದ್ಯುತ್ ಇಲಾಖೆಗೆ ಸಂಬಂಧಿಸಿದಂತೆ ಈಗಾಗಲೇ ಒಂದು ಬಾರಿ ಮುಖ್ಯಮಂತ್ರಿಗಳ ಜೊತೆ ಚರ್ಚೆಯನ್ನು ನಡೆಸಿದ್ದೇನೆ. ಈ ವಿಷಯದಲ್ಲಿ ನಾನೇ ಮುಂದಾಳತ್ವವನ್ನು ವಹಿಸುವ ಮೂಲಕ ಸಮಸ್ಯೆಯ ಪರಿಹಾರಕ್ಕೆ ಮುಂದಾಗುವುದಾಗಿ ಭರವಸೆಯನ್ನು ನೀಡಿದರು.
ಪೀಣ್ಯ ಇಂಡಸ್ಟ್ರಿ ಏರಿಯಾದಲ್ಲಿ ಕೌಶಲ್ಯಾಭಿವೃದ್ದಿ ಕೇಂದ್ರ:
ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿ ಕೌಶಲ್ಯಾಭಿವೃದ್ದಿ ಕೇಂದ್ರ ಅವಶ್ಯಕತೆ ಬಹಳಷ್ಟಿದೆ. ಈ ಬಗ್ಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಸಚಿವರು, ಈ ಕೌಶಲಾಭಿವೃದ್ದಿ ಕೇಂದ್ರವನ್ನು ಖಾಸಗಿ ಸಹಭಾಗಿತ್ವದಲ್ಲೋ ಅಥವಾ ಪೀಣ್ಯ ಇಂಡಸ್ಟ್ರಿ ಅಸೋಸಿಯೇಷನ್ ಸಹಭಾಗಿತ್ವದಲ್ಲಿ ನಿರ್ಮಿಸಬೇಕೋ ಎನ್ನುವುದನ್ನು ಚರ್ಚೆ ನಡೆಸುವುದಾಗಿ ತಿಳಿಸಿದರು.ನವೆಂಬರ್ 3,4 ಮತ್ತು 5 ರಂದು ನಗರದ ಅರಮನೆ ಮೈದಾನದಲ್ಲಿ ನಡೆಯಲಿರುವ ಇನ್‍ವೆಸ್ಟ್ ಕರ್ನಾಟಕ 2020 ಜಾಗತಿಕ ಹೂಡಿಕೆದಾರರ ಸಮಾವೇಶಕ್ಕೆ ಕೈಜೋಡಿಸುವಂತೆ ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಪೀಣ್ಯ ಇಂಡಸ್ಟ್ರಿಸ್ ಅಸೋಸಿಯೇಷನ್ ಅಧ್ಯಕ್ಷರಾದ ಶ್ರೀನಿವಾಸ್ ಅಸ್ರಣ್ಣ, ನಿಕಟಪೂರ್ವ ಅಧ್ಯಕ್ಷರಾದ ಗಿರಿ ಎಂ.ಎಂ, ಹಿರಿಯ ಉಪಾಧ್ಯಕ್ಷರಾದ ಪ್ರಕಾಶ್ ಸಿ, ಉಪಾಧ್ಯಕ್ಷರಾದ ಪ್ರಾಣೇಶ್ ಸಿ, ಗೌರವ ಕಾರ್ಯದರ್ಶಿ ವಿಜಯಕುಮಾರ್ ಎಸ್ ಮಾಕಾಳ್ ಅವರು ಸೇರಿದಂತೆ ಹಲವರು ಭಾಗವಹಿಸಿದ್ದರು.ಕಾರ್ಯಕ್ರಮದಲ್ಲಿ ಸಂಘದ ವತಿಯಿಂದ ಸಚಿವ ಜಗದೀಶ್ ಶೆಟ್ಟರ್ ಅವರನ್ನು ಸನ್ಮಾನಿಸಲಾಯಿತು. ಇದೇ ವೇಳೆ ತಮ್ಮ ಬೇಡಿಕೆಗಳನ್ನು ಸಲ್ಲಿಸಲಾಯಿತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ