ಲೋಕಸಭೆ ಚುನಾವಣಾ ಮೈತ್ರಿ : ಹೈಕಮಾಂಡ್ ನಿರ್ಧಾರಕ್ಕೆ ಬದ್ಧ : ಖರ್ಗೆ

ಬೆಂಗಳೂರು

        ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಹೊಂದಾಣಿಕೆ ವಿಚಾರದಲ್ಲಿ ಹೈಕಮಾಂಡ್ ತೆಗೆದುಕೊಳ್ಳುವ ನಿರ್ಧಾರಕ್ಕೆ ಎಲ್ಲರೂ ಬದ್ಧರಾಗಿರುತ್ತೇವೆ ಎಂದು ಲೋಕಸಭೆಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ತಿಳಿಸಿದ್ದಾರೆ.

         ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸೀಟು ಹಂಚಿಕೆ ಬಗ್ಗೆ ಉಭಯ ಪಕ್ಷಗಳ ನಡುವೆ ಇದುವರೆಗೂ ಯಾವುದೇ ಮಾತುಕತೆ ನಡೆದಿಲ್ಲ. ಸಮ್ಮಿಶ್ರ ಸರ್ಕಾರದಲ್ಲಿ ಎರಡೂ ಪಕ್ಷಗಳಿವೆ. ಜೆಡಿಎಸ್ ಒಟ್ಟು 12 ಸ್ಥಾನಗಳನ್ನು ಕೇಳಿರುವ ಬಗ್ಗೆ ನಾವು ಈಗ ಮಾತನಾಡುವುದು ಸರಿಯಲ್ಲ. ಅವರು ತಮ್ಮ ನಿಲುವು ತಿಳಿಸಿದ್ದಾರೆ. ಅದು ತಪ್ಪಲ್ಲ. ಈ ಕುರಿತು ಚರ್ಚೆ ನಡೆದ ಬಳಿಕ ಅಂತಿಮ ತೀರ್ಮಾನ ಹೊರಬೀಳಲಿದೆ. ಪ್ರಜಾಪ್ರಭುತ್ವ ಉಳಿವಿಗಾಗಿ ನಾವೆಲ್ಲಾ ಒಂದಾಗಿದ್ದೇವೆ ಎಂದು ಹೇಳಿದರು.

          ಶಾಸಕ ರಮೇಶ್ ಜಾರಕಿಹೊಳಿ ಅವರು ಕಾಂಗ್ರೆಸ್ ಪಕ್ಷ ಬಿಟ್ಟು ಹೋಗುವುದಿಲ್ಲ. ಪಕ್ಷದಲ್ಲಿ ಅವರು 25 ವರ್ಷಗಳ ಕಾಲ ಕೆಲಸ ಮಾಡಿದ್ದಾರೆ. ಅವರಿಗೆ ಪಕ್ಷ ಕೂಡ ಹಲವು ಹುದ್ದೆಗಳನ್ನು ನೀಡಿದೆ. ಪಕ್ಷ ಬಿಡುವ ಕೆಟ್ಟ ನಿರ್ಧಾರ ಅವರು ತೆಗೆದುಕೊಳ್ಳುವುದಿಲ್ಲ ಎಂಬ ವಿಶ್ವಾಸ ತಮಗಿದೆ ಎಂದು ಹೇಳಿದ ಖರ್ಗೆ ಅವರು, ಬಿಜೆಪಿಯವರು ಲೋಕಸಭಾ ಚುನಾವಣೆಗೂ ಮುನ್ನ ರಾಜ್ಯದಲ್ಲಿ ಅಧಿಕಾರ ಹಿಡಿಯಬೇಕು ಎಂಬ ಪ್ರಯತ್ನದಲ್ಲಿದ್ದಾರೆ. ಆದರೆ ಅವರ ಈ ಪ್ರಯತ್ನ ಕೈಗೂಡುವುದಿಲ್ಲ ಎಂದು ಹೇಳಿದರು.

          ಉತ್ತರ ಪ್ರದೇಶ ಮತ್ತು ಮಹಾರಾಷ್ಟ್ರದಲ್ಲಿಯೂ ಜೆಡಿಎಸ್‍ನೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವ ವಿಚಾರ ತಮ್ಮ ಗಮನಕ್ಕೆ ಬಂದಿಲ್ಲ. ಈ ವಿಷಯದಲ್ಲಿಯೂ ಹೈಕಮಾಂಡ್ ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ಧರಾಗಿದ್ದೇವೆ. ಈ ಬಗ್ಗೆ ಕಾರ್ಯತಂತ್ರ ಸಮಿತಿ ಸಭೆಯಲ್ಲಿ ತೀರ್ಮಾನವಾಗಬೇಕು. ಈ ಬಗ್ಗೆ ರಾಹುಲ್ ಗಾಂಧಿ ಮತ್ತು ಎಚ್.ಡಿ.ದೇವೇಗೌಡ ಅವರ ನಡುವೆ ಮಾತುಕತೆ ನಡೆದಿರಬಹುದು. ಇದು ಇನ್ನೂ ತಮ್ಮ ಗಮನಕ್ಕೆ ಬಂದಿಲ್ಲ ಎಂದು ಮಲ್ಲಿಕಾರ್ಜುನ ಖರ್ಗೆ ಸ್ಪಷ್ಟಪಡಿಸಿದರು.

          ಸರ್ಕಾರ ಸರಿಯಾದ ದಿಕ್ಕಿನಲ್ಲೇ ಸಾಗುತ್ತಿದೆ. ಈಗ ಜೆಡಿಎಸ್ ಲೋಕಸಭೆಗೆ ಸ್ಪರ್ಧಿಸಲು 12 ಸ್ಥಾನ ಕೇಳಿದೆ ಎಂಬ ವಿಷಯ ಮುಂದಿಟ್ಟು ವಾತಾವರಣ ಕೆಡಿಸುವ ಪ್ರಯತ್ನ ಮಾಡುವುದು ಬೇಡ. 2019ರಲ್ಲಿ ದೇಶದ ಹಿತದೃಷ್ಟಿಯಿಂದ ನಾವೆಲ್ಲಾ ಒಂದಾಗಬೇಕಿದೆ ಎಂದು ಪ್ರಶ್ನೆಯೊಂದಕ್ಕೆ ಮಲ್ಲಿಕಾರ್ಜುನ ಖರ್ಗೆ ಹೇಳಿದರು.

        ರಾಜ್ಯದಲ್ಲಿ ದಲಿತ ಮುಖ್ಯಮಂತ್ರಿಯಾಗಬೇಕು ಎಂದು ಕಳೆದ 50 ವರ್ಷಗಳಿಂದ ಕೇಳುತ್ತಾ ಬಂದಿದ್ದೇವೆ. ನಮ್ಮ ಪಕ್ಷದಲ್ಲಿ ದಲಿತರೊಬ್ಬರನ್ನು ಮುಖ್ಯಮಂತ್ರಿ ಮಾಡುವುದು ನಮ್ಮ ಪಕ್ಷಕ್ಕೆ ಸಂಬಂಧಿಸಿದ ವಿಚಾರ. ಅವರ ಪಕ್ಷದಲ್ಲಿ ದಲಿತ ಸಿಎಂ ಮಾಡುವುದು ಅವರಿಗೆ ಸೇರಿದ ವಿಚಾರ. ಸಮ್ಮಿಶ್ರ ಸರ್ಕಾರ ಇದ್ದಾಗ ಇಬ್ಬರೂ ಕೂಡಿಕೊಂಡೇ ಹೋಗಬೇಕು ಎಂದು ಹೇಳಿದರು.

         ರಾಜ್ಯ ಸಮ್ಮಿಶ್ರ ಸರ್ಕಾರ ಸುಭದ್ರವಾಗಿದೆ. ಸರ್ಕಾರಕ್ಕೆ ಯಾವುದೇ ಧಕ್ಕೆ ಬರುವುದಿಲ್ಲ. ರಮೇಶ್ ಜಾರಕಿಹೊಳಿ ಅವರೊಂದಿಗೆ ತಾವು ಹಿಂದೆಯೂ ಮಾತನಾಡಿದ್ದೇನೆ. ಅವರು ನಮ್ಮ ಪಕ್ಷದಿಂದ ಗೆದ್ದು ಬಂದವರು. ಅವರು ಎಲ್ಲಿಯೂ ಹೋಗಲ್ಲ. ತಾನು ಕೂಡ ಇನ್ನೊಮ್ಮೆ ಅವರ ಜೊತೆ ಮಾತುಕತೆ ನಡೆಸುತ್ತೇನೆ. ಬಿಜೆಪಿಯವರು ಸುಮ್ಮನೆ ಗಿಮಿಕ್ ಮಾಡುತ್ತಿದ್ದಾರೆ. ಚುನಾವಣೆಗೆ ಮೊದಲು ಬಿಜೆಪಿ ಸರ್ಕಾರ ಬರುತ್ತದೆ ಎಂದು ಬಿಂಬಿಸಲು ಈ ರೀತಿಯ ವದಂತಿಗಳನ್ನು ಬಿಜೆಪಿಯವರು ಹಬ್ಬಿಸುತ್ತಿದ್ದಾರೆ ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap