ಚಳ್ಳಕೆರೆ
ಪ್ರಧಾನ ಮಂತ್ರಿಗಳ ಫಸಲ್ ಬೀಮಾಯೋಜನೆಯಡಿ ಬೆಳೆ ವಿಮೆ ಮಾಡಿಸಿದ ರೈತರಿಗೆ ಇನ್ನೂ ಹಣಬಾರದೇ ಇರುವ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಗುರುವಾರ ಇಲ್ಲಿನ ಕೃಷಿ ಉಪನಿರ್ದೇಶಕರ ಕಾರ್ಯಾಲಯದ ಎದುರು ಪ್ರತಿಭಟನೆ ನಡೆಸಿ ರೈತರ ಖಾತೆಗಳಿಗೆ ಕೂಡಲೇ ವಿಮೆ ಹಣ ಪಾವತಿ ಮಾಡುವಂತೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹ ಪಡಿಸಲಾಯಿತು.
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಹಿರಿಯ ಉಪಾಧ್ಯಕ್ಷ ಕೆ.ಪಿ.ಭೂತಯ್ಯ ನೇತೃತ್ವದಲ್ಲಿ ಸುಮಾರು 20ಕ್ಕೂ ಹೆಚ್ಚು ರೈತರು ಕಚೇರಿ ಮುಂದೆ ಪ್ರತಿಭಟಿಸಿ ಉಪಕೃಷಿ ನಿರ್ದೇಶಕರಿಗೆ ಮನವಿ ನೀಡಿ ಹಣ ಪಾವತಿಗೆ ಕ್ರಮ ಕೈಗೊಳ್ಳುವಂತೆ ಒತ್ತಾಯ ಪಡಿಸಿದರು.
ಕೆ.ಪಿ.ಭೂತಯ್ಯ ಮಾತನಾಡಿ, 2017-18ನೇ ಸಾಲಿನಲ್ಲಿ ಮುಂಗಾರು ಹಂಗಾಮಿಗೆ ಪ್ರಧಾನ ಮಂತ್ರಿ ಫಸಲ್ ಬೀಮಾ ಯೋಜನೆಯಲ್ಲಿ ತಾಲ್ಲೂಕಿನ ಸಾವಿರಾರು ರೈತರು ಬೆಳೆ ವಿಮೆ ಪಾವತಿ ಮಾಡಿದ್ದಾರೆ. ಆದರೆ, ಈಗಾಗಲೇ ಮುಂಗಾರು ಹಂಗಾಮಿಯ ಬೆಳೆಯೂ ಸಹ ಕೈಕೊಟ್ಟಿದ್ದು, ರೈತರು ಕಂಗಾಲಾಗಿದ್ಧಾರೆ. ಆದರೆ, ಬೆಳೆ ವಿಮೆ ಮಾಡಿಸಿಕೊಂಡ ಕಂಪನಿಯವರು ಮಾತ್ರ ಇದುವರೆಗೂ ರೈತರ ಖಾತೆಗೆ ಹಣವನ್ನು ಜಮಾ ಮಾಡಿಲ್ಲ.
ಹತ್ತು ತಿಂಗಳಿನಿಂದ ರೈತ ಬೆಳೆ ವಿಮೆ ಹಣಕ್ಕಾಗಿ ಪ್ರತಿನಿತ್ಯ ಬ್ಯಾಂಕ್ಗೆ ಅಲೆದಾಡುವುದಾಗಿದೆ. ಆದರೆ, ಬೆಳೆ ವಿಮೆ ಮಾಡಿಸಿಕೊಂಡ ಕಂಪನಿಗಳು ಮಾತ್ರ ಈ ಬಗ್ಗೆ ಚಕಾರವೆತ್ತುತ್ತಿಲ್ಲ. ಅದ್ದರಿಂದ ಅಧಿಕಾರಿಗಳು ಬೆಳೆ ವಿಮೆ ಕಂಪನಿಯವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು. ಮಾರ್ಚ್ 25ರೊಳಗೆ ಬೆಳೆ ವಿಮೆ ಮಾಡಿಸಿದ ಎಲ್ಲಾ ರೈತರ ಖಾತೆಗೆ ಹಣ ಜಮಾ ಮಾಡದೇ ಇದ್ದಲ್ಲಿ ಲೋಕಸಭಾ ಚುನಾವಣೆಯ ಮತದಾನವನ್ನು ಬಹಿಷ್ಕರಿಸುವ ನಿರ್ಧಾರವನ್ನು ಕೈಗೊಳ್ಳಲಾಗುವುದು ಎಂದು ಅವರು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ಧಾರೆ.
ಮನವಿ ಸ್ವೀಕರಿಸಿ ಮಾತನಾಡಿದ ಉಪ ಕೃಷಿ ನಿರ್ದೇಶಕಿ ಡಾ.ಸುಜಾತರೆಡ್ಡಿ, ರೈತ ಸಂಘದ ಮನವಿಯನ್ನು ಸ್ವೀಕರಿಸಿದ್ದು, ಬೆಳೆ ವಿಮೆ ಪಾವತಿಗೆ ಸಂಬಂದಪಟ್ಟಂತೆ ಹಿರಿಯ ಅಧಿಕಾರಿಗಳಿಗೆ ಮತ್ತು ಜಿಲ್ಲಾಧಿಕಾರಿಗಳಿಗೆ ವರದಿ ನೀಡಿ ರೈತರ ಹಣ ಪಾವತಿಗೆ ತುರ್ತು ಕ್ರಮ ಕೈಗೊಳ್ಳುವಂತೆ ವಿನಂತಿಸಲಾಗುವುದು. ಮುಂಗಾರು ಹಂಗಾಮಿನ ಬೆಳೆ ವಿಮೆ ಕುರಿತಂತೆ ಚಳ್ಳಕೆರೆ ತಾಲ್ಲೂಕಿನ 18072, ಹಿರಿಯೂರು ತಾಲ್ಲೂಕಿನ 6404, ಮೊಳಕಾಲ್ಮೂರು ತಾಲ್ಲೂಕಿನ 4239 ಒಟ್ಟು 28715 ರೈತರು ಬೆಳೆ ವಿಮೆ ಹಣ ಪಾವತಿಸಿದ್ದು, ಇವರೆಲ್ಲರೂ ವಿಮಾ ವ್ಯಾಪ್ತಿಯಲ್ಲಿ ಕಂಪನಿಗಳಿಂದ ನಷ್ಟ ಪರಿಹಾರವನ್ನು ಪಡೆಯುವ ಆರ್ಹತೆಯನ್ನು ಹೊಂದಿದ್ಧಾರೆ. ಈ ಬಗ್ಗೆ ಕಾನೂನಾತ್ಮಕ ಕ್ರಮ ಕೈಗೊಳ್ಳುವಂತೆ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ತುರ್ತಾಗಿ ಪತ್ರಬರೆಯುವ ಭರವಸೆ ನೀಡಿದರು.
ಪ್ರಗತಿಪರ ರೈತ ಆರ್.ಎ.ದಯಾನಂದಮೂರ್ತಿ, ರೈತ ಸಂಘದ ತಾಲ್ಲೂಕು ಅದ್ಯಕ್ಷ ಟಿ.ಹಂಪಣ್ಣ, ರೈತ ಮುಖಂಡರಾದ ಜಿ.ಎಚ್.ತಿಪ್ಪೇಸ್ವಾಮಿ, ಒ.ಟಿ.ತಿಪ್ಪೇಸ್ವಾಮಿ, ಎ.ತಿಪ್ಪೇಸ್ವಾಮಿ, ಜಿ.ಬಿ.ತಿಪ್ಪೇಸ್ವಾಮಿ ಮುಂತಾದವರು ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
