ಚಿತ್ರದುರ್ಗ:
ಮಕ್ಕಳನ್ನು ಕಾಡುವ ಗಂಟಲುಮಾರಿ, ಧನುರ್ವಾಯು ರೋಗಗಳನ್ನು ತಡೆಗಟ್ಟುವ ಡಿಪಿಟಿ ಬೂಸ್ಟರ್ ಹಾಗೂ ಟಿ.ಡಿ. ಲಸಿಕೆ ಹಾಕುವ ಶಾಲಾ ಲಸಿಕಾ ಅಭಿಯಾನವನ್ನು ಡಿ. 11 ರಿಂದ 31 ರವರೆಗೆ ಜಿಲ್ಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದು, ಜಿಲ್ಲೆಯ 2.67 ಲಕ್ಷ ಮಕ್ಕಳಿಗೆ ಲಸಿಕೆ ಹಾಕುವ ಗುರಿ ಹೊಂದಲಾಗಿದೆ ಎಂದು ಜಿಲ್ಲಾಧಿಕಾರಿ ವಿನೋತ್ ಪ್ರಿಯಾ ಅವರು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಜಿಲ್ಲಾಧಿಕಾರಿಗಳು, ಜಿಲ್ಲೆಯ ಯಾವುದೇ ಸರ್ಕಾರಿ ಅಥವಾ ಖಾಸಗಿ ಶಾಲೆಗಳು ಲಸಿಕೆ ಅಭಿಯಾನವನ್ನು ನಿರ್ಲಕ್ಷಿಸುವಂತಿಲ್ಲ ಎಂದು ಎಚ್ಚರಿಸಿದರು ಗಂಟಲುಮಾರಿ ಹಾಗೂ ಧನುರ್ವಾಯು ರೋಗಗಳನ್ನು ತಡೆಗಟ್ಟಬಹುದಾದ ಲಸಿಕೆಯನ್ನು ಮಕ್ಕಳಿಗೆ ಹಾಕುವ ಸಲುವಾಗಿ ಜಿಲ್ಲೆಯಲ್ಲಿ ಡಿ. 11 ರಿಂದ 31 ರವರೆಗೆ ಜಿಲ್ಲೆಯಲ್ಲಿ ವಿಶೇಷ ಲಸಿಕಾ ಅಭಿಯಾನವನ್ನು ಆರೋಗ್ಯ ಇಲಾಖೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದು, ಒಟ್ಟು 267989 ಮಕ್ಕಳಿಗೆ ಲಸಿಕೆ ಹಾಕಲಾಗುವುದು ಎಂದು ತಿಳಿಸಿದರು
ಡಿಪಿಟಿ ಬೂಸ್ಟರ್ ಹಾಗೂ ಟಿ.ಡಿ. ಲಸಿಕೆಯನ್ನು ಜಿಲ್ಲೆಯ ಎಲ್ಲ ಸರ್ಕಾರಿ, ಖಾಸಗಿ ಶಾಲೆಗಳು, ಅಂಗನವಾಡಿಗಳಲ್ಲಿ ಮಕ್ಕಳಿಗೆ ಲಸಿಕೆ ಹಾಕಲಾಗುವುದು. ಅಂಗನವಾಡಿ ವ್ಯಾಪ್ತಿಯಿಂದ ಹೊರಗುಳಿದಿರುವ ಮಕ್ಕಳನ್ನು ಸಹ ಈಗಾಗಲೆ ಗುರುತಿಸಲಾಗಿದೆ. ಎಲ್ಲ ಅಂಗನವಾಡಿ ಕೇಂದ್ರಗಳಲ್ಲಿ, ಶಾಲೆಗಳಲ್ಲಿ ತರಬೇತಿ ಹೊಂದಿದ ವ್ಯಾಕ್ಸಿನೇಟರ್ಸ್‍ಗಳು ಲಸಿಕೆ ನೀಡುತ್ತಾರೆ. ಎಲ್ಲ ಪೋಷಕರು ತಪ್ಪದೆ ತಮ್ಮ ಮಕ್ಕಳಿಗೆ ಲಸಿಕೆ ಹಾಕಿಸಬೇಕು. ಒಟ್ಟಾರೆ ಜಿಲ್ಲೆಯಲ್ಲಿ ಯಾವುದೇ ಮಗು ಲಸಿಕೆಯಿಂದ ವಂಚಿತವಾಗಬಾರದು ಎನ್ನುವುದು ಜಿಲ್ಲಾಡಳಿತದ ಆಶಯವಾಗಿದೆ ಎಂದರು
ಲಸಿಕಾ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಈಗಾಗಲೆ ಸಂಬಂಧಪಟ್ಟ ಇಲಾಖೆಗಳಿಗೆ ನಿರ್ದೇಶನ ನೀಡಲಾಗಿದ್ದು, ಖಾಸಗಿ ಶಾಲೆಗಳಿಗೂ ಈ ಕುರಿತು ಸೂಚನೆ ನೀಡಲಾಗಿದೆ ಎಂದು ವಿನೋತ್ ಪ್ರಿಯಾ ಹೇಳಿದರು.ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸಿ. ಸತ್ಯಭಾಮ ಅವರು, ಮಕ್ಕಳಿಗೆ ಖಾಸಗಿ ಆಸ್ಪತ್ರೆಗಳಲ್ಲಿ ಈ ಲಸಿಕೆಗಳನ್ನು ಹಾಕಿಸಿದ್ದಲ್ಲಿ, ಅಂತಹವರು ಲಸಿಕೆ ಹಾಕಿಸಿದ ಬಗ್ಗೆ ದಾಖಲೆಯನ್ನು ತೋರಿಸಿದಲ್ಲಿ ಆ ಮಕ್ಕಳಿಗೆ ಪುನಃ ಲಸಿಕೆ ನೀಡುವುದಿಲ್ಲ. ಖಾಸಗಿ ವೈದ್ಯರು ಮಕ್ಕಳಿಗೆ ಲಸಿಕೆ ಹಾಕುವ ಮೊದಲು, ಈ ಮಕ್ಕಳಿಗೆ ಈಗಾಗಲೆ ಲಸಿಕೆ ಹಾಕಲಾಗಿದೆಯೇ ಎಂಬುದನ್ನು ಪರಿಶೀಲಿಸಬೇಕು. ತಾಯಿ ಕಾರ್ಡ್ ನಲ್ಲಿ ಲಸಿಕೆ ಹಾಕಿಸಿದ ಬಗ್ಗೆ ವಿವರ ನಮೂದಿಸಿರಬೇಕು ಎಂದರು.
ಜಿಲ್ಲಾ ಆರ್.ಸಿ.ಹೆಚ್. ಅಧಿಕಾರಿ ಡಾ. ಕುಮಾರಸ್ವಾಮಿ ಅವರು ಮಾತನಾಡಿ, 05 ರಿಂದ 06 ವರ್ಷದೊಳಗಿನ ಮಕ್ಕಳಿಗೆ ಡಿಪಿಟಿ ಬೂಸ್ಟರ್ ಲಸಿಕೆ ಹಾಕಲಾಗುವುದು. ಜಿಲ್ಲೆಯಲ್ಲಿ ಇದಕ್ಕಾಗಿ 38785 ಮಕ್ಕಳನ್ನು ಗುರುತಿಸಲಾಗಿದೆ. 07 ರಿಂದ 16 ವರ್ಷದೊಳಗಿನ ಎಲ್ಲ ಮಕ್ಕಳಿಗೆ ಟಿ.ಡಿ. ಲಸಿಕೆಯನ್ನು ಹಾಕಲಾಗುತ್ತಿದ್ದು, ಜಿಲ್ಲೆಯಲ್ಲಿ 229204 ಮಕ್ಕಳಿಗೆ ಈ ಲಸಿಕೆ ಹಾಕಲು ಗುರಿ ನಿಗದಿಪಡಿಸಲಾಗಿದೆ. ಇದೇ ಮೊದಲ ಬಾರಿಗೆ ಟಿ.ಡಿ. ಲಸಿಕೆಯನ್ನು ಶಾಲಾ ಮಕ್ಕಳಿಗೆ ಹಾಕಲಾಗುತ್ತಿದೆ ಎಂದರು
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ