ದೇಶದ ಆರ್ಥಿಕತೆ ಮಹತ್ವದ ಕೊಡುಗೆ ನೀಡುವ ಸಾಮರ್ಥ್ಯ ರಾಜ್ಯಕ್ಕಿದೆ..!

ಹುಬ್ಬಳ್ಳಿ

    ಭಾರತ ಐದು ಟ್ರಿಲಿಯನ್ ಡಾಲರ್ ಆರ್ಥಿಕ ವ್ಯವಸ್ಥೆ ಹೊಂದಿದ ರಾಷ್ಟ್ರವಾಗಿ ರೂಪುಗೊಳ್ಳಲು ಕರ್ನಾಟಕದಂತಹ ರಾಜ್ಯಗಳ ಪಾಲುದಾರಿಕೆ ಅತ್ಯಂತ ಪ್ರಮುಖವಾಗಿದ್ದು, ದೇಶದ ಅರ್ಥ ವ್ಯವಸ್ಥೆಗೆ ಮಹತ್ವದ ಕೊಡುಗೆ ನೀಡುವಂತಹ ಸಾಮರ್ಥ್ಯ ಕರ್ನಾಟಕಕ್ಕಿದೆ ಎಂದು ಮಾನ್ಯ ಮುಖ್ಯಮಂತ್ರಿ ಶ್ರೀ ಬಿ.ಎಸ್. ಯಡಿಯೂರಪ್ಪ ಬಲವಾಗಿ ಪ್ರತಿಪಾದಿಸಿದ್ದಾರೆ.

     ನಗರದ ಡೆನಿಸನ್ ಹೋಟೆಲ್ ನಲ್ಲಿ ಉತ್ತರ ಕರ್ನಾಟಕ ಭಾಗದಲ್ಲಿ ಇದೇ ಮೊದಲ ಬಾರಿಗೆ ಆಯೋಜಿಸಿರುವ “ಇನ್ವೆಸ್ಟ್ ಕರ್ನಾಟಕ ಹುಬ್ಬಳ್ಳಿ ಸಮಾವೇಶ – 2020” ಉದ್ಘಾಟಿಸಿ ಮಾತನಾಡಿದ ಅವರು, ಕರ್ನಾಟಕದಲ್ಲಿ ಈಸ್ ಆಪ್ ಡೂಯಿಂಗ್ ಬಿಸಿನೆಸ್ – ಸುಗಮ ವ್ಯವಹಾರ ನಡೆಸಲು ಅನುವಾಗುವಂತೆ ಸಕಲ ವ್ಯವಸ್ಥೆ ಕಲ್ಪಿಸಲು ನಾವು ಬದ್ಧ.ವಾಗಿದ್ದೇವೆ. ಉದ್ಯಮ ಆರಂಭಿಸಲು ಉಂಟಾಗುವ ಅನಗತ್ಯ ವಿಳಂಬ ತಪ್ಪಿಸಲು ಹಾಗೂ ಶೀಘ್ರವೇ ಅನುಮೋದನೆ ಸಿಗುವಂತಹ ವ್ಯವಸ್ಥೆ ರೂಪಿಸುವುದು ನಮ್ಮ ಸರಕಾರದ ಆದ್ಯತೆಯಾಗಿದೆ ಎಂದರು.

     ಕರ್ನಾಟಕ ದೇಶದ ಪ್ರಮುಖ ಐಟಿ ಕೇಂದ್ರವೆಂದು ಪ್ರಸಿದ್ಧವಾಗಿದ್ದು, ಏರೋಸ್ಪೇಸ್, ಆಟೋಮೊಬೈಲ್ಸ್, ಮೆಷಿನ್ ಟೂಲ್ಸ್, ಎಲೆಕ್ಟ್ರಿಕ್ ವೆಹಿಕಲ್ಸ್ ಮತ್ತು ಆಧುನಿಕ ಬಯೋಟೆಕ್ ತಂತ್ರಜ್ಞಾನಗಳ ರಾಜಧಾನಿ ಎಂದು ಗುರುತಿಸಿಕೊಂಡಿದೆ. ಹೂಡಿಕೆಗೆ ಅತ್ಯಂತ ವಿಪುಲ ಮತ್ತು ಪ್ರಶಸ್ತವಾದ ವಾತಾವರಣ ಹೊಂದಿದೆ ಎಂದು ಹೆಮ್ಮೆಯಿಂದ ಹೇಳಿದರು.

     ಕೈಗಾರಿಕೆಗಳ ಅನುಮೋದನೆ ಪ್ರಕ್ರಿಯೆಯನ್ನು ತ್ವರಿತವಾಗಿ ನಿಭಾಯಿಸಲು ಹಾಗೂ ರಾಜ್ಯಕ್ಕೆ ಹೆಚ್ಚಿನ ಹೂಡಿಕೆಗಳನ್ನು ಆಕರ್ಷಿಸಲು, ಕರ್ನಾಟಕ ಭೂ ಸುಧಾರಣಾ ಕಾಯ್ದೆಯ ಸೆಕ್ಷನ್ 109ಕ್ಕೆ ತಿದ್ದುಪಡಿ ತರಲಾಗುತ್ತಿದೆ. ಯಾವುದೇ ರೀತಿಯ ಉದ್ಯಮ ಆರಂಭಿಸುವವರಿಗೆ ಅನುಮತಿ ನೀಡಲು ಭೂ ಸ್ವಾಧೀನ ಮತ್ತು ಭೂ ಪರಿವರ್ತನೆಗೆ ಈವರೆಗೆ ಕನಿಷ್ಠ 60 ದಿನಗಳ ಕಾಲಾವಕಾಶದ ಅಗತ್ಯವಿತ್ತು. ಈ ಅವಧಿಯನ್ನು 30 ದಿನಗಳಿಗೆ ಇಳಿಸುತ್ತಿದ್ದು, ಒಂದು ವೇಳೆ 30 ದಿನಗಳಲ್ಲಿ ಅನುಮತಿ ನೀಡದಿದ್ದರೆ, “ಡೀಮ್ಡ್” ಅಂದರೆ ಪರಿಗಣಿತ ಅನುಮೋದನೆ ಮತ್ತು ಪರಿವರ್ತನೆ ಎಂದು ಪರಿಗಣಿಸುವ ವ್ಯವಸ್ಥೆಯನ್ನು ಸಹ ಅಡಕಗೊಳಿಸುತ್ತಿದ್ದೇವೆ ಎಂದರು.

      ಎರಡು ಮತ್ತು ಮೂರನೇ ಹಂತದ ನಗರಗಳಲ್ಲಿ ಕೈಗಾರಿಕೋದ್ಯಮ ಅಭ್ಯುದಯದ ಉದ್ದೇಶದಿಂದ ಉತ್ತರ ಕರ್ನಾಟಕದಲ್ಲಿ ವಿವಿಧ ವಲಯಗಳಲ್ಲಿ ಕ್ಲಸ್ಟರ್ಗಳನ್ನು ಸ್ಥಾಪಿಸುವ ಪ್ರಕ್ರಿಯೆ ಪ್ರಗತಿಯಲ್ಲಿದೆ. ಪ್ರಮುಖವಾಗಿ ಕೊಪ್ಪಳದಲ್ಲಿ ಟೋಯ್ಸ್ ಕ್ಲಸ್ಟರ್, ಬಳ್ಳಾರಿಯಲ್ಲಿ ಟೆಕ್ಸ್ಟೈಲ್ ಕ್ಲಸ್ಟರ್, ಹುಬ್ಬಳ್ಳಿಯಲ್ಲಿ ಎಫ್‌ಎಂಸಿಜಿ ಕ್ಲಸ್ಟರ್, ಕಲಬುರಗಿಯಲ್ಲಿ ಸೌರ ವಿದ್ಯುತ್ ಸರಕುಗಳ ಕ್ಲಸ್ಟರ್ ಮತ್ತು ಬೀದರ್ನಲ್ಲಿ ಕೃಷಿ ಉಪಕರಣಗಳ ಕ್ಲಸ್ಟರ್ ತೆರೆಯಲಾಗುತ್ತಿದೆ ಎಂದು ಶ್ರೀ ಬಿ.ಎಸ್. ಯಡಿಯೂರಪ್ಪ ಹೇಳಿದರು.

      ಹುಬ್ಬಳ್ಳಿ ಧಾರವಾಡ ಭೂ ಪ್ರದೇಶ ದೇಶಿಯ ಮತ್ತು ಜಾಗತಿಕ ಬಂಡವಾಳ ಹೂಡಿಕೆಗೆ ಸೂಕ್ತ ಸ್ಥಳವಾಗಿದ್ದು, ಇಲ್ಲಿ ಸಕಲ ಮೂಲಸೌಕರ್ಯ, ನುರಿತ ಮಾನವ ಸಂಪನ್ಮೂಲದ ಲಭ್ಯತೆ ಇದೆ. ಉತ್ತರ ಕರ್ನಾಟಕದಲ್ಲಿ ಕೈಗಾರಿಕಾ ಬೆಳವಣಿಗೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದ್ದು, ರಾಜ್ಯದಲ್ಲಿ ಪಾರದರ್ಶಕ ಆಡಳಿತ ವ್ಯವಸ್ಥೆ ಇದ್ದು, ಇದರ ಲಾಭವನ್ನು ಪಡೆಯಲು ಹೂಡಿಕೆದಾರರು ಮುಂದಾಗಬೇಕು ಎಂದರು.
 

        ಇನ್ವೆಸ್ಟ್ ಹುಬ್ಬಳ್ಳಿ ಸಮಾವೇಶದಲ್ಲಿ ಪಾಲ್ಗೊಂಡಿರುವ ಉದ್ಯಮಿಗಳ ಉಪಸ್ಥಿತಿಯು ರಾಜ್ಯದ ಮೇಲಿನ ಬದ್ಧತೆ ಮತ್ತು ನಂಬಿಕೆಯನ್ನು ನಿರೂಪಿಸುತ್ತದೆ. ರಾಜ್ಯ ಸರ್ಕಾರ ಕೂಡ ನಿಮ್ಮೆಲ್ಲರನ್ನು ಎಲ್ಲಾ ರೀತಿಯಲ್ಲೂ ಬೆಂಬಲಿಸುತ್ತದೆ. ಇತ್ತೀಚೆಗೆ ದಾವೋಸ್ ನಲ್ಲಿ ನಡೆದ ವಿಶ್ವ ಆರ್ಥಿಕ ಶೃಂಗ ಸಭೆ ಅತ್ಯಂತ ಫಲಪ್ರದವಾಗಿದ್ದು, ಆ ಸಂದರ್ಭದಲ್ಲಿ 40 ಕ್ಕೂ ಹೆಚ್ಚು ಕಂಪನಿಗಳು ಕರ್ನಾಟಕದಲ್ಲಿ ಹೂಡಿಕೆ ಮಾಡುವ ಸಂಬಂಧ ತಮ್ಮೊಂದಿಗೆ ಚರ್ಚಿಸಿ ಆಸಕ್ತಿ ತೋರಿದ್ದವು ಎಂದು ಮುಖ್ಯಮಂತ್ರಿ ಅವರು ಹೇಳಿದರು.

      ಮಾನ್ಯ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವರಾದ ಶ್ರೀ ಜಗದೀಶ್ ಶೆಟ್ಟರ್ ಮಾತನಾಡಿ, ಈ ಸಮಾವೇಶಕ್ಕೆ ಸಾಕಷ್ಟು ಸಂಖ್ಯೆಯಲ್ಲಿ ಉದ್ಯಮಿಗಳ ಆಗಮನವನ್ನು ನೋಡಿದರೆ ಕೈಗಾರಿಕೋದ್ಯಮದಲ್ಲಿ ಕರ್ನಾಟಕಕ್ಕಿರುವ ಅವಕಾಶ ಮತ್ತು ಬದ್ಧತೆಯನ್ನು ತೋರುತ್ತದೆ. ಭಾರತದಲ್ಲಿ ಕರ್ನಾಟಕ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ರಾಜ್ಯಗಳಲ್ಲಿ ಒಂದಾಗಿದೆ, ಬಹುತೇಕ ಅಂತಾರಾಷ್ಟ್ರೀಯ ಕಂಪನಿಗಳು ಕರ್ನಾಟಕವನ್ನು ತಮ್ಮ ಕೇಂದ್ರ ಸ್ಥಾನವನ್ನಾಗಿ ಮಾಡಿಕೊಂಡಿದ್ದು, 2018 – 19 ರಲ್ಲಿ ಕರ್ನಾಟಕವು ಮತ್ತೆ ಅತ್ಯಂತ ಆಕರ್ಷಕ ಹೂಡಿಕೆ ತಾಣವಾಗಿ ದೇಶದ ಅಗ್ರ ಸ್ಥಾನವನ್ನು ಗಳಿಸಿದೆ ಎಂದು ಹೇಳಿದರು.

     ಮೆಟ್ರೋಪಾಲಿಟನ್ ಪ್ರದೇಶ ಸ್ಥಿರವಾದ ಆರ್ಥಿಕತೆಗೆ ಕೊಡುಗೆ ನೀಡಲಿದ್ದು, ಜೊತೆಗೆ ಪ್ರಾದೇಶಿಕ ಸ್ಪರ್ಧಾತ್ಮಕತೆ ಪರಿಹರಿಸಲು ಸಹಕಾರಿಯಾಗಲಿದೆ. ಸ್ಥಳೀಯ ಸಮುದಾಯಗಳನ್ನು ಸ್ವಾವಲಂಬಿಗಳನ್ನಾಗಿ ಮಾಡುವ ಮೂಲಕ ರಾಜ್ಯದ ಆರ್ಥಿಕ ಸಾಮರ್ಥ್ಯವನ್ನು ಹೆಚ್ಚಿಸಲು ಸಹಕಾರಿಯಾಗಲಿದೆ ಎಂದರು.

     ರಾಜ್ಯದ 9 ಕ್ಲಸ್ಟರ್ಗಳ ಪೈಕಿ ರಲ್ಲಿ 5 ಉತ್ತರ ಕರ್ನಾಟಕದ ಪ್ರಾದೇಶಿಕ ಸಾಮರ್ಥ್ಯದ ಆಧಾರದ ಮೇಲೆ ರೂಪುಗೊಳಿಸಲಾಗುತ್ತಿದೆ. ಉತ್ತರ ಕರ್ನಾಟಕಕ್ಕೆ ಏಕುಸ್ನಂತಹ ಉನ್ನತ ಕಂಪನಿಗಳು ಮೆರಗು ನೀಡಿದೆ. ಬೆಳಗಾವಿಯಲ್ಲಿ 300 ಎಕರೆ ಭೂಮಿಯಲ್ಲಿ ಭಾರತದ ಮೊದಲ ಖಾಸಗಿ ಏರೋಸ್ಪೇಸ್ ಎಸ್‌ಇ ಜೆಡ್ ಅನ್ನು ಏಕುಸ್ ಅಭಿವೃದ್ಧಿಪಡಿಸಿದ್ದು, ಪ್ರಸ್ತುತ ಈ ಕಂಪೆನಿ ಕಾರ್ಯನಿರ್ವಹಿಸುತ್ತಿದೆ ಎಂದರು.

    ಭಾರತದ ಸ್ಟೀಲ್ ಸಿಟಿ ಬಳ್ಳಾರಿಯಲ್ಲಿ ಟೆಕ್ಸ್ಟೈಲ್ ಕ್ಲಸ್ಟರ್ ತೆರೆಯುತ್ತಿರುವುದು ವಿಶೇಷವಾಗಿದೆ. ಈ ಜಿಲ್ಲೆಯನ್ನು ಭಾರತದ ಡೆನಿಮ್ ಕ್ಯಾಪಿಟಲ್ ಎಂದು ಸಹ ಕರೆಯಲಾಗುತ್ತದೆ. ಹುಬ್ಬಳ್ಳಿ-ಧಾರವಾಡದಲ್ಲಿ ಆಟೋ ಕಾಂಪೋನೆಂಟ್ಸ್ ಉತ್ಪಾದನಾ ಘಟಕಗಳ ಕ್ಲಸ್ಟರ್ ಹಾಗೂ ಎಫ್‌ಎಂಸಿಜಿ ಅನ್ನು ಸಹ ತೆರೆಯಲಾಗುತ್ತಿದೆ ಎಂದರು.

     ರಾಜ್ಯದ 2 ಮತ್ತು 3ನೇ ಶ್ರೇಣಿ ನಗರಗಳಲ್ಲಿ ಕೈಗಾರಿಕಾ ಅಭಿವೃದ್ಧಿಗೆ ಸೂಕ್ತವಾದ ಭೂಮಿ ಒದಗಿಸಲು ಲ್ಯಾಂಡ್ ಬ್ಯಾಂಕ್ ರಚಿಸಿದ್ದೇವೆ. ಪ್ರಸ್ತುತ ಹುಬ್ಬಳ್ಳಿ – ಧಾರವಾಡದಲ್ಲಿ ಸುಮಾರು 5400 ಎಕರೆ ಭೂಮಿ ಲಭ್ಯವಿದ್ದು, 3000 ಎಕರೆ ಭೂಮಿಯನ್ನು ಕೈಗಾರಿಕಾ ಉದ್ದೇಶಕ್ಕಾಗಿ ಸ್ವಾಧೀನ ಪಡಿಸಿಕೊಳ್ಳಲಾಗುವುದು ಎಂದರು.

     ಏರೋಸ್ಪೇಸ್, ರಕ್ಷಣಾ ಸಲಕರಣೆ, ಆಟೋ ಕಾಂಪೋನೆಂಟ್ಸ್, ವಿದ್ಯುತ್ ವಾಹನಗಳು, ಐಟಿ, ಕೃಷಿ-ವ್ಯವಹಾರದಂತಹ ಕ್ಷೇತ್ರಗಳು ಆರ್ಥಿಕಾಭಿವೃದ್ಧಿ ಹೆಚ್ಚಿಸಲು ಮತ್ತು ರಾಜ್ಯಾದ್ಯಂತ ಉದ್ಯೋಗ ಸೃಷ್ಟಿಸಲು ಸಹಕಾರಿಯಾಗಲಿವೆ. ಇಲ್ಲಿನ ಸೌಲಭ್ಯ ಹಾಗೂ ಸಹಕಾರವನ್ನು ಹೂಡಿಕೆದಾರರು ಬಳಸಿಕೊಳ್ಳಬೇಕು, ಅಷ್ಟೇ ಅಲ್ಲದೇ ಬೆಂಗಳೂರಿನಲ್ಲಿ 2020 ರ ನವೆಂಬರ್ 3 ರಿಂದ 5 ರವರೆಗೆ ನಿಗದಿಯಾಗಿರುವ ಇನ್ವೆಸ್ಟ್ ಕರ್ನಾಟಕ 2020 – ಜಾಗತಿಕ ಹೂಡಿಕೆದಾರರ ಸಮ್ಮೇಳನದಲ್ಲಿ ಭಾಗವಹಿಸಲು ಇದೇವೇಳೆ ಎಲ್ಲರನ್ನು ಮುಕ್ತ ಮನಸ್ಸಿನಿಂದ ಆಹ್ವಾನಿಸುತ್ತಿದ್ದೇನೆ ಎಂದು ಶ್ರೀ ಜಗದೀಶ್ ಶೆಟ್ಟರ್ ಹೇಳಿದರು.

    ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಶ್ರೀ ಪ್ರಹ್ಲಾದ ಜೋಶಿ ಮಾತನಾಡಿ, ಕರ್ನಾಟಕ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿದ್ದು, ವಿದೇಶಿ ನೇರ ಬಂಡವಾಳ – ಎಫ್ಡಿಐ ಹೂಡಿಕೆಯಲ್ಲಿ ದೇಶದಲ್ಲಿ 3 ನೇ ಸ್ಥಾನದಲ್ಲಿದೆ. ಕರ್ನಾಟಕದ ವಾಣಿಜ್ಯ ಕೇಂದ್ರವಾಗಿ, ಹುಬ್ಬಳ್ಳಿ- ಧಾರವಾಡ ಕೈಗಾರಿಕಾ ಪಟ್ಟಣ ಗುರುತಿಸಿಕೊಂಡಿದೆ. ಈ ಅವಳಿ ನಗರಗಳು ರಾಜಧಾನಿ ಬೆಂಗಳೂರಿನ ನಂತರ ರಾಜ್ಯದ ಅತಿದೊಡ್ಡ ಮಹಾನಗರ ಪ್ರದೇಶವಾಗಿದೆ. ಅಲ್ಲದೆ, ಹುಬ್ಬಳ್ಳಿ ಧಾರವಾಡ ನಗರ ಪಾಲಿಕೆಯನ್ನು [ಎಚ್ಡಿಎಂಸಿ] ದೇಶದ 100 ಸ್ಮಾರ್ಟ್ ಸಿಟಿಗಳಲ್ಲಿ ಒಂದನ್ನಾಗಿ ಆಯ್ಕೆ ಮಾಡಲಾಗಿದೆ ಎಂದರು

     ಈಗಾಗಲೇ ಸಾರ್ವಜನಿಕ ಪಾರ್ಕಿಂಗ್ ನಿರ್ವಹಣಾ ವ್ಯವಸ್ಥೆ, ಇ-ಆಡಳಿತ ಮತ್ತು ಇಂಟೆಲಿಜೆಂಟ್ ಟ್ರಾನ್ಸ್ಪೋರ್ಟ್ ಮ್ಯಾನೇಜ್ಮೆಂಟ್ ಸಿಸ್ಟಮ್ನಂತಹ ಅನೇಕ ಸ್ಮಾರ್ಟ್ ವ್ಯವಸ್ಥೆಗಳನ್ನು ಇಲ್ಲಿ ಜಾರಿಗೊಳಿಸಲಾಗಿದೆ. ಕೈಗಾರಿಕಾ ಬೆಳವಣಿಗೆ ಬೆಂಬಲಿಸಲು ಮತ್ತು ಹೂಡಿಕೆ ಆಕರ್ಷಿಸಲು ಹುಬ್ಬಳ್ಳಿ ಧಾರವಾಡದಲ್ಲಿ ಕರ್ನಾಟಕ ಕೈಗಾರಿಕಾ ಅಭಿವೃದ್ಧಿ ಮಂಡಳಿಯಿಂದ 4 ಕೈಗಾರಿಕಾ ಎಸ್ಟೇಟ್ ಗಳನ್ನು ಅಭಿವೃದ್ಧಿಪಡಿಸಲಾಗಿದೆ ಎಂದು ಶ್ರೀ ಪ್ರಹಲ್ಲಾದ ಜೋಷಿ ಹೇಳಿದರು.

     ಉತ್ತರ ಕರ್ನಾಟಕದಲ್ಲಿ ವ್ಯಾಪಾರ ಇನ್ಕ್ಯುಬೇಟರ್ ಮತ್ತು ಎಲ್ಲರನ್ನೂ ಒಳಗೊಂಡ ಕೌಶಲ್ಯಕ್ಕೆ ಒತ್ತು ನೀಡಲಾಗಿದೆ. ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿರುವ ಟಾಟಾ ಹಿಟಾಚಿಯಂತಹ ಕಂಪನಿಗಳು ಹುಬ್ಬಳ್ಳಿ-ಧಾರವಾಡ ನಗರವನ್ನು ತಮ್ಮ ಮೂಲವಾಗಿ ಆಯ್ಕೆ ಮಾಡಿಕೊಂಡಿವೆ. ಉತ್ತರ ಕರ್ನಾಟಕದ ಔಷಧ ವಲಯವನ್ನು ಬೆಂಬಲಿಸಲು ಹುಬ್ಬಳ್ಳಿ ಮತ್ತು ಬಳ್ಳಾರಿಯಲ್ಲಿ 2 ಪ್ರಾದೇಶಿಕ ಔಷಧ ಪರೀಕ್ಷಾ ಪ್ರಯೋಗಾಲಯಗಳನ್ನು ಸ್ಥಾಪನೆ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.

      ಉತ್ತರ ಕರ್ನಾಟಕದ ಹುಬ್ಬಳ್ಳಿ ಧಾರವಾಡ ಪ್ರದೇಶ ಭವಿಷ್ಯ ರೂಪಿಸಲು ಸೂಕ್ತ ಸ್ಥಾನದಲ್ಲಿದೆ. ಉತ್ತರ ಕರ್ನಾಟಕದ ಆರ್ಥಿಕ ಬೆಳವಣಿಗೆಯ ಸಾಮರ್ಥ್ಯ ಹೆಚ್ಚಿಸುವಲ್ಲಿ ಇನ್ವೆಸ್ಟ್ ಕರ್ನಾಟಕ ಹುಬ್ಬಳ್ಳಿ ಸಮ್ಮೇಳನ ಮಹತ್ವದ ಪಾತ್ರ ವಹಿಸುತ್ತದೆ ಎಂದರು.
ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಶ್ರೀ ಡಿ.ವಿ. ಸದಾನಂದಗೌಡ ಮಾತನಾಡಿ, ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ವಿಶ್ವಬ್ಯಾಂಕ್ ನ ಸುಗಮ ವ್ಯವಹಾರ ವಲಯದಲ್ಲಿ ಭಾರತ 142ನೇ ಸ್ಥಾನದಿಂದ 63ನೇ ಸ್ಥಾನಕ್ಕೆ ಬಡ್ತಿ ಪಡೆದು ಮಹೋನ್ನತ ಸಾಧನೆ ಮಾಡಿದೆ.

     ಭಾರತದಲ್ಲೇ ತಯಾರಿಸು – ಮೇಕ್ ಇನ್ ಇಂಡಿಯಾ ಕಾರ್ಯಕ್ರಮದಿಂದ ಉತ್ಪಾದನಾ ವಲಯದಲ್ಲಿ ಚೇತರಿಕೆಯಾಗಿದೆ. ಉತ್ತಮ ಆಡಳಿತ ಸೂಚ್ಯಂಕದಲ್ಲಿ 18 ದೊಡ್ಡ ರಾಜ್ಯಗಳನ್ನು ಹಿಂದಿಕ್ಕಿರುವ ಕರ್ನಾಟಕ 2ನೇ ಸ್ಥಾನಕ್ಕೇರಿದೆ. ಉತ್ತಮ ರೈಲು, ರಸ್ತೆ, ವಾಯುಮಾರ್ಗ ಸೌಲಭ್ಯ ಹೊಂದಿರುವ ರಾಜ್ಯದಲ್ಲಿ ಅತ್ಯುತ್ತಮ ದೂರ ಸಂಪರ್ಕ ವ್ಯವಸ್ಥೆ, ಶಾಂತಿಯುತ ಕಾರ್ಮಿಕ ಶಕ್ತಿ ಹೊಂದಿದ್ದು, ಹುಬ್ಬಳ್ಳಿ – ಧಾರವಾಡ ವಲಯ ಹೂಡಿಕೆಗೆ ಸೂಕ್ತ ವಾತಾವರಣ ಹೊಂದಿದೆ ಎಂದು ಹೇಳಿದರು.

       ರೈಲ್ವೆ ಖಾತೆ ರಾಜ್ಯ ಸಚಿವ ಶ್ರೀ ಸುರೇಶ್ ಅಂಗಡಿ ಮಾತನಾಡಿ, ಕರ್ನಾಟಕದಲ್ಲಿ 3,500 ಕಿಲೋಮೀಟರ್ ಉದ್ದದ ರೈಲ್ವೆ ಸಂಪರ್ಕ ಜಾಲವಿದ್ದು, ಇದು ಪ್ರಬುದ್ಧ ಆರ್ಥಿಕ ವ್ಯವಸ್ಥೆಗೆ ಬೆನ್ನೆಲುಬಾಗಿದೆ. ಹುಬ್ಬಳ್ಳಿ – ಮಂಗಳೂರು ನಡುವಿನ ರೈಲು ಯೋಜನೆ ಜಾರಿಗೆ ಕಾರ್ಯಪ್ರವೃತ್ತವಾಗಿದ್ದು, ಇದರಿಂದ ಮಂಗಳೂರು ಬಂದರು ಸಂಪರ್ಕ ಸಾಧ್ಯವಾಗಲಿದೆ. ಜತೆಗೆ ಜಲ ಮಾರ್ಗದ ವ್ಯಾಪಾರ ವಹಿವಾಟು ವಲಯದಲ್ಲಿ ಹೊಸ ಆಯಾಮಕ್ಕೂ ಈ ಬೆಳವಣಿಗೆ ನಾಂದಿಯಾಗಲಿದೆ. ಪುಣೆ – ಬೆಂಗಳೂರು ನಡುವೆ ಎಂಟು ಪಥದ ಹೆದ್ದಾರಿ ಯೋಜನೆಯಿಂದ ಹುಬ್ಬಳ್ಳಿ – ಧಾರವಾಡದ ನಡುವೆ ವಾಣಿಜ್ಯ ಚಟುವಟಿಕೆ ಉತ್ತೇಜನಕ್ಕೆ ಸಹಕಾರಿಯಾಗಲಿದೆ ಎಂದರು.

    ಇಲಾಖೆ ಪ್ರಧಾನ ಕಾರ್ಯದರ್ಶಿ ಶ್ರೀ ಗೌರವ್ ಗುಪ್ತಾ, ಆಯುಕ್ತರಾದ ಗುಂಜನ್ ಕೃಷ್ಣ, ಸೇರಿದಂತೆ ಹಲವು ಉದ್ಯಮಿಗಳು ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.ಉದ್ಘಾಟನಾ ಸಮಾರಂಭಕ್ಕೂ ಮುನ್ನ ಕರ್ನಾಟಕ ವಲಯದ ಸಾಮರ್ಥ್ಯ ಹಾಗೂ ಬಲವರ್ಧನೆ ಕುರಿತು ವಿಚಾರಗೋಷ್ಠಿ ನಡೆಸಲಾಯಿತು.ಸಮಾವೇಶದ ಬಳಿಕ ಮುಖ್ಯಮಂತ್ರಿ ಶ್ರೀ ಬಿ.ಎಸ್. ಯಡಿಯೂರಪ್ಪ ಅವರ ಸಮ್ಮುಖದಲ್ಲಿ ಎಂಟು ಒಡಂಬಡಿಕೆಗಳಿಗೆ ಸಹಿ ಹಾಕಲಾಯಿತು

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap