ಕೊಲ್ಡ್ ಸ್ಟೋರೇಜ್ ಸ್ಥಾಪನೆಗೆ ಸರ್ಕಾರ ಬದ್ಧ : ಎಸ್ ಟಿ ಸೋಮಶೇಖರ್

ಚಿಕ್ಕಮಗಳೂರು

     ರೈತರು ಬೆಳೆದ ಬೆಳೆಗಳನ್ನು ಸಂರಕ್ಷಿಸಲು ಶೀಥಲ ಘಟಕಗಳನ್ನು ಸ್ಥಾಪಿಸಲು ಸರ್ಕಾರ ಆದ್ಯತೆ ನೀಡುತ್ತಿದೆ ಎಂದು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದ್ದಾರೆ.

     ಚಿಕ್ಕಮಗಳೂರು ಎಪಿಎಂಸಿಗೆ ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಅವರೊಂದಿಗೆ ಭೇಟಿ ನೀಡಿದ ಬಳಿಕ ಮಾತನಾಡಿದ ಸಚಿವರು, ಎಲ್ಲ ಜಿಲ್ಲೆಗಳಲ್ಲಿರುವ ಎಪಿಎಂಸಿಗಳಿಗೆ ಭೇಟಿ ನೀಡಿ ಅಲ್ಲಿನ ಸಮಸ್ಯೆಗಳನ್ನು ಬಗೆಹರಿಸಲು ಆದ್ಯತೆ ನೀಡಲಾಗುತ್ತಿದೆ. ಚಿಕ್ಕಮಗಳೂರು ಜಿಲ್ಲೆಗೆ ಕೋಲ್ಡ್ ಸ್ಟೋರೇಜ್ ಹಾಗೂ ಜಾಗ ಬೇಕು ಎಂದು ಸಿ.ಟಿ.ರವಿ ಕೇಳಿಕೊಂಡಿದ್ದಾರೆ. ಬೇಡಿಕೆ ಪತ್ರ ನೀಡಿದ 2 ದಿನಗಳಲ್ಲಿ ಶೀಥಲ ಘಟಕ ಮಂಜೂರು ಮಾಡಲಾಗುವುದು ಎಂದು ತಿಳಿಸಿದರು.

      ಎಪಿಎಂಸಿ ಕಾಯ್ದೆ ತಿದ್ದುಪಡಿಯಿಂದ ರೈತರಿಗೆ ಯಾವುದೇ ಸಮಸ್ಯೆ ಇಲ್ಲ. ಇದು ಕೇಂದ್ರ ಸರ್ಕಾರ ಮಾಡಿರುವ ಉತ್ತಮ ಕ್ರಮವಾಗಿದೆ. ರೈತರಿಗೆ ಅನುಕೂಲವಾಗಲು ಮಾತ್ರ ತಂದಿರುವ ಕಾಯ್ದೆಯಾಗಿದೆ ಎಂದು ಸಚಿವರು ಸಮರ್ಥಿಸಿಕೊಂಡರು.

      ಏನಾದರೂ ಸಮಸ್ಯೆಗಳು ಎದುರಾದರೆ ಎಪಿಎಂಸಿ ಬೋರ್ಡ್‍ಗೆ ಸಂಪೂರ್ಣ ಅಧಿಕಾರವಿದೆ. ಪರವಾನಗಿ ಕೊಡುವ, ರದ್ದು ಮಾಡುವ ಅಧಿಕಾರ ಎಪಿಎಂಸಿ ಮಂಡಳಿಗೆ ಇದೆ. ಹೀಗಾಗಿ ಯಾವುದೇ ಖಾಸಗಿ ಸಂಸ್ಥೆಗಳಿಗೆ ಪರವಾನಗಿ ಕೊಡಬೇಕಿದ್ದರೆ ರೈತರ ಹಿತವನ್ನು ಗಮನಿಸಲಾಗುವುದು ಎಂದು ತಿಳಿಸಿದರು.

      ಶಿವಮೊಗ್ಗ ಡಿಸಿಸಿ ಬ್ಯಾಂಕ್ ಸಹಿತ ಸಹಕಾರ ಇಲಾಖೆಯಲ್ಲಿ ಕೋಟ್ಯಂತರ ರೂಪಾಯಿ ಹಗರಣ ಆಗಿರುವುದು ತಮ್ಮ ಗಮನಕ್ಕೆ ಬಂದಿದೆ. ಇದಕ್ಕಾಗಿ 25 ಬೇರೆ ಬೇರೆ ಕಡೆ ನಿಯೋಜನೆಗೊಂಡಿರುವ ಆಡಿಟ್ ಅಧಿಕಾರಿಗಳನ್ನು ಮರಳಿ ಸಹಕಾರ ಇಲಾಖೆಗೆ ಕರೆಸಿಕೊಳ್ಳಲಾಗಿದೆ. ಎಲ್ಲ ಡಿಸಿಸಿ ಬ್ಯಾಂಕ್ ಹಾಗೂ ವಿಎಸ್‍ಎಸ್‍ಎನ್ ಸೊಸೈಟಿಗಳಲ್ಲಿ ನಡೆದಿರುವ ವ್ಯವಹಾರಗಳ ತನಿಖೆಗೆ ಪ್ರತ್ಯೇಕ ತಂಡ ರಚಿಸಿ ತನಿಖೆ ನಡೆಸಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

     ಬಳಿಕ ವರ್ತಕರು ಹಾಗೂ ರೈತರ ಬಳಿ ತೆರಳಿದ ಸಚಿವರು, ಸಮಸ್ಯೆಗಳನ್ನು ಖುದ್ದು ಆಲಿಸಿದರು. ಸೊಪ್ಪು, ತರಕಾರಿಗಳ ಬೆಳೆ, ಮಾರಾಟ ಹಾಗೂ ದರದ ಸ್ಥಿತಿಗತಿ ಬಗ್ಗೆ ವಿಚಾರಿಸಿದರು. ಸ್ಥಳೀಯ ಬೆಳೆಗಳು ಹಾಗೂ ಅವುಗಳನ್ನು ಕೆಡದಂತೆ ಯಾವ ರೀತಿ ವ್ಯವಸ್ಥೆ ಮಾಡಲಾಗಿದೆ. ಜೊತೆಗೆ ಯಾವ ಯಾವ ಪ್ರದೇಶಗಳಿಗೆ ಸಾಗಾಟವಾಗುತ್ತದೆ ಎಂಬಿತ್ಯಾದಿ ವಿವರಗಳನ್ನು ಪಡೆದುಕೊಂಡರು. ರೈತರು ಬೆಳೆದ ಬೆಳೆಗೆ ಉತ್ತಮ ಬೆಲೆ ಸಿಗುತ್ತಿದ್ದು, ಟೊಮ್ಯಾಟೊ ಕೆಜಿಗೆ 16 ರೂಪಾಯಿ ಇದೆ ಎಂದು ತಿಳಿದು ಸಂತಸವಾಗಿದೆ ಎಂದು ಸಚಿವ ಸೋಮಶೇಖರ್ ತಿಳಿಸಿದರು.

      ಸಚಿವ ಸಿ.ಟಿ.ರವಿ ಪ್ರತ್ಯೇಕವಾಗಿ ಮಾತನಾಡಿ, ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತರುವುದರಿಂದ ರೈತರಿಗೆ ಹೆಚ್ಚು ಅನುಕೂಲವಾಗಲಿದೆ. ರೈತರು ತಮ್ಮ ಉತ್ಪನ್ನಗಳನ್ನು ಎಲ್ಲಿ ಬೇಕಾದರೂ ಮಾರಾಟ ಮಾಡಬಹುದು. ಅವರೇ ಬೇಕಿದ್ದರೆ ಪ್ರತ್ಯೇಕ ಸೊಸೈಟಿ ಮಾದರಿಯಲ್ಲಿ ತಂಡ ಕಟ್ಟಿಕೊಂಡು ಬೆಳೆದ ಬೆಳೆಗೆ ಉತ್ತಮ ಬೆಲೆ ಪಡೆಯಬಹುದು. ಜೊತೆಗೆ ರೈತರ ಬೆಳೆಗೆ ಮೊದಲೇ ಬೆಲೆ ಖಾತ್ರಿಯಾಗುವುದರಿಂದ ಅನ್ಯಾಯದ ಪ್ರಶ್ನೆ ಉದ್ಭವಿಸದು ಎಂದು ತಿಳಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap