ನಾವು ಎಲ್ಲಾ ಸವಾಲಿಗೂ ಸಿದ್ದರಿದ್ದೇವೆ : ಡಿಸಿಎಂ

ಬೆಂಗಳೂರು

    ನಮ್ಮ ಸರ್ಕಾರ ಸುಭದ್ರವಾಗಿದ್ದು, ಯಾವುದೇ ಭಯ, ಆತಂಕವಿಲ್ಲದೆ ಪೂರ್ಣಾವಧಿ ಆಡಳಿತ ನಡೆಸುತ್ತೇವೆ. ಯಾವುದೇ ರೀತಿಯ ಸವಾಲುಗಳನ್ನು ಎದುರಿಸಲು ಪಕ್ಷ ಸಜ್ಜಾಗಿದೆ ಎಂದು ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಹೇಳಿದ್ದಾರೆ. ಇದೇ ನವೆಂಬರ್ 18 ರಿಂದ ಆರಂಭವಾಗಲಿರುವ 3 ದಿನಗಳ ಬೆಂಗಳೂರು ತಾಂತ್ರಿಕ ಶೃಂಗಸಭೆ ಕುರಿತು ಮಂಗಳವಾರ ಕರೆಯಲಾಗಿದ್ದ ಸುದ್ದಿಗೋಷ್ಠಿ ನಂತರ ಸುದ್ದಿಗಾರರ ಜತೆ ಮಾತನಾಡಿದ ಅವರು, ಪ್ರತಿಪಕ್ಷಗಳಿರುವುದೆ ಆರೋಪ ಮಾಡುವುದಕ್ಕೆ. ಅವರದ್ದೆ ಸರ್ಕಾರವನ್ನು ಉಳಿಸಿಕೊಳ್ಳಲು ಅವರಿಗೆ ಆಗಲಿಲ್ಲ. ಅಂಥವರ ಮಾತಿಗೆ ಏನು ಹೇಳುವುದು ಎಂದು ಲೇವಡಿ ಮಾಡಿದರು.

    ನಮ್ಮ ಸರ್ಕಾರಕ್ಕೆ ಯಾವ ಬೆದರಿಕೆಯೂ ಇಲ್ಲ. ಪೂರ್ಣ ಅವಧಿಯ ಆಡಳಿತ ನಡೆಸುತ್ತೇವೆ. ನಾಳೆ ಸುಪ್ರೀಂ ಕೋರ್ಟ್ ತೀರ್ಪು ಬಂದ ನಂತರ ಪಕ್ಷ ಮತ್ತು ಸರ್ಕಾರದ ನಿಲುವು ಸ್ಪಷ್ಟವಾಗಲಿದೆ. ತೀರ್ಪಿನ ನಂತರ ನಮ್ಮ ಮುಂದಿನ ನಡೆ ತೀರ್ಮಾನಿಸಲಿದ್ದೇವೆ ಎಂದು ಅವರು ಹೇಳಿದರು.

    ತೀರ್ಪಿನ ನಂತರ ಮುಂದಿನ ನಿರ್ಧಾರ ಕೈಗೊಳ್ಳಬಹುದು. ನಮ್ಮ ಜತೆ ಬರುವವರು ಬರಬಹುದು, ನಮ್ಮ ಎದುರು ನಿಲ್ಲುವುದಾದರೆ, ನಿಲ್ಲಬಹುದು. ಏನೇ ಪರಿಸ್ಥಿತಿ ಬಂದರೂ ಎದುರಿಸಲು ನಾವು ಮತ್ತು ಪಕ್ಷ ಸಿದ್ಧವಾಗಿದ್ದೇವೆ ಎಂದು ಅವರು ತಿಳಿಸಿದರು. ಮಹಾರಾಷ್ಟ್ರದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಿಕೆ ಸಂಬಂಧ ಸರ್ಕಾರ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ನಾವು ಪರಿಣಿತರು, ಕರ್ನಾಟಕದವರು ಅನ್ವೇಷಣೆಯಲ್ಲಿ ಎತ್ತಿದ ಕೈ ಎಂದು ಚಟಾಕಿ ಹಾರಿಸಿದರು.

    ಅಕ್ಕಪಕ್ಕದ ರಾಜ್ಯದ ನಡುವೆ ಸ್ಪರ್ಧೆಯ ಪ್ರಶ್ನೆಯೇ ಇಲ್ಲ. ನಮ್ಮದು ಬೇರೆ ದೇಶಗಳ ಜತೆ ಸ್ಪರ್ಧೆ. ನೀತಿ ನಿಯಮಾವಳಿಯ ಆಧಾರದಲ್ಲಿ ಕೆಲವು ಸಂಸ್ಥೆಗಳ ಸ್ಥಳಾಂತರ ಆಗಿರಬಹುದು. ಇನ್ನು ಮುಂದೆ ಇಂತಹದಕ್ಕೆ ಅವಕಾಶ ನೀಡುವುದಿಲ್ಲ. ಕರ್ನಾಟಕದಲ್ಲಿ ಇನ್ನೂ ಹೆಚ್ಚಿನ ಸುಧಾರಣೆ ತರುತ್ತೇವೆ. ಬೆಳವಣಿಗೆ ಎಂಬುದು ನಿರಂತರ ಪ್ರಕ್ರಿಯೆ. ಈ ಬಗ್ಗೆ ವಿಷನ್ ಗ್ರೂಪ್ ಜತೆ ಸಂಪರ್ಕದಲ್ಲಿದ್ದು, ಅವರ ಸಲಹೆ, ಮಾಹಿತಿ ಪರಿಗಣಿಸಿ ಸೂಕ್ತ ಕ್ರಮ ಕೈಗೊಳ್ಳುತ್ತೇವೆ. ಅನ್ವೇಷಣಾ ಕೇಂದ್ರ, ಇನ್‍ಕ್ಯೂಬೇಟರ್ ಸ್ಥಾಪನೆಗೆ ಅಗತ್ಯ ನೆರವು ಒದಗಿಸಲಾಗುವುದು. ಮೂಲಸೌಕರ್ಯ ಕಲ್ಪಿಸುವ ಜತೆಗೆ ಎಲ್ಲ ಅಡೆತಡೆ ನಿವಾರಿಸಿ ಪೂರಕ ವಾತವಾರಣ ನಿರ್ಮಿಸಲಾಗುವುದು. ಈ ಸಂಬಂಧ ಉನ್ನತಾಧಿಕಾರದ ಸಮಿತಿ ರಚಿಸಿ, ಬಂಡವಾಳ ಹೂಡಿಕೆಗೆ ಅಗತ್ಯ ಸೌಲಭ್ಯ ಒದಗಿಸುತ್ತೇವೆ ಎಂದು ಅವರು ವಿವರಿಸಿದರು.
 
     ಹಂತ ಹಂತವಾಗಿ ಐಟಿ ಮತ್ತು ಬಿಟಿ ಕ್ಷೇತ್ರದಲ್ಲಿ ಸುಧಾರಣೆಗಳನ್ನು ತರುತ್ತೇವೆ. ವಿಶ್ವ ಮಟ್ಟ ದಲ್ಲಿ ಸ್ಥಾನ ಪಡೆಯುವ ಆಶಯ ನಮ್ಮದು. ವಿಶ್ವಸಂಸ್ಥೆಯ ಈಸ್ ಆಫ್ ಡೂಯಿಂಗ್ ಬಿಸಿನೆಸ್ ಸೂಚ್ಯಂಕದಲ್ಲಿ ಭಾರತ ಮೊದಲ 50ರ ಪಟ್ಟಿಯಲ್ಲಿರಬೇಕು ಎಂಬ ಆಕಾಂಕ್ಷೆ ಇದೆ, ಇದರಲ್ಲಿ ಬೆಂಗಳೂರಿನ ಪಾತ್ರ ದೊಡ್ಡದು ಎಂದು ಅವರು ತಿಳಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap