ಬೆಂಗಳೂರು
ರಾಜ್ಯದಲ್ಲಿ ಪ್ರವಾಹ ಪರಿಸ್ಥಿತಿ ನಿಯಂತ್ರಣಕ್ಕೆ ಸೂಕ್ತ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ರಾಜ್ಯದ ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಕಳೆದ ವಾರದಿಂದ ಉಂಟಾಗಿರುವ ಪ್ರವಾಹ ಪರಿಸ್ಥಿತಿಯನ್ನು ನಿಭಾಯಿಸಲು ಕೈಗೊಂಡಿರುವ ಕ್ರಮಗಳ ಬಗ್ಗೆ 19 ಜಿಲ್ಲೆಗಳ ಜಿಲ್ಲಾಧಿಕಾರಿಗಳೊಂದಿಗೆ ವಿಡಿಯೋ ಸಂವಾದದ ಮೂಲಕ ಸಭೆ ನಡೆಸಿ ಸೂಕ್ತ ಸಲಹೆ, ಸೂಚನೆಗಳನ್ನು ನೀಡಲಾಗಿದೆ ಎಂದು ಸ್ಪಷ್ಟಪಡಿಸಿದರು.
ಕಳೆದ ವರ್ಷ ಇದೇ ಅವಧಿಯಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿತ್ತು, ಎದುರಾಗಲಿರುವ ನೆರೆ ಪರಿಸ್ಥಿತಿ ನಿಭಾಯಿಸಲು ಏಪ್ರಿಲ್‌ನಿಂದ ವಿವಿಧ ಪೂರ್ವಭಾವಿ ಸಿದ್ಧತೆಗಳನ್ನು ಕೈಗೊಳ್ಳಲಾಗಿತ್ತು. ರಾಜ್ಯದ ಮಳೆ ಪರಿಸ್ಥಿತಿ, ಮಳೆ ಮುನ್ಸೂಚನೆ ಮತ್ತು ಜಲಾಶಯಗಳ ನೀರಿನ ಮಟ್ಟದ ಬಗ್ಗೆ ಸಂಬಂಧಿಸಿದ ಅಧಿಕಾರಿಗಳೊಂದಿಗೆ ನಿರಂತರವಾಗಿ ಚರ್ಚೆ ನಡೆಸಲಾಗುತ್ತಿದೆ ಎಂದು ಅಶೋಕ್ ಮಾಹಿತಿ ನೀಡಿದರು. ರಾಜ್ಯದ ಮಲೆನಾಡು ಮತ್ತು ಕರಾವಳಿ ಜಿಲ್ಲೆಗಳು, ಕೊಡಗು, ಶಿವಮೊಗ್ಗ, ಚಿಕ್ಕಮಗಳೂರು ಹಾಗೂ ಹಾಸನ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಇಂದಿನಿಂದ ರೆಡ್ ಅಲರ್ಟ್ ಸೂಚನೆ ನೀಡಲಾಗಿದೆ. ಕಾವೇರಿ ತೀರದಲ್ಲಿ ಹೆಚ್ಚಿನ ಮಳೆ ಬೀಳುವ ಸಾಧ್ಯತೆ ಇದ್ದು, ಜಲಾಶಯಗಳ ಒಳಹರಿವು ಹೆಚ್ಚಲಿದೆ. ಇಂದು ಮಧ್ಯಾಹ್ನ ಮತ್ತೆ 11 ಜಿಲ್ಲೆಗಳ ಜಿಲ್ಲಾಧಿಕಾರಿಗಳೊಂದಿಗೆ ದೂರವಾಣಿ ಮೂಲಕ ಮಾತನಾಡಿ, ಮುನ್ನೆಚ್ಚೆರಿಕೆ ವಹಿಸಲು ಸೂಚನೆ ನೀಡಲಾಗಿದೆ ಎಂದರು.
ಜುಲೈ 25 ರಂದು ನಡೆದ ವಿಡಿಯೋ ಕಾನ್ಫರೆನ್ಸ್ ಸಭೆಯಲ್ಲಿ ತುರ್ತು ಪರಿಸ್ಥಿತಿಯನ್ನು ಎದುರಿಸಲು ಅಗತ್ಯವಿರುವ ಯಂತ್ರೋಪಕರಣಗಳನ್ನು ಖರೀಧಿಸಲು ಸಹ ಅನುಮತಿ ನೀಡಲಾಗಿದೆ. ಗ್ರಾಮಾಪಂಚಾಯತಿ ಮಟ್ಟದ ಯೋಜನೆ ರೂಪಿಸಲಾಗಿದೆ. ಎಲ್ಲಾ ಜಿಲ್ಲೆಗಳಲ್ಲಿ ಅಗತ್ಯ ಅನುದಾನ ಬಿಡುಗಡೆ ಮಾಡಲಾಗಿದೆ.
ಮುಂದಿನ ಮೂರು ದಿನಗಳ ಮಳೆ ಮುನ್ಸೂಚನೆ:
1. ಕರಾವಳಿ ಭಾಗ: ಉತ್ತರ ಕನ್ನಡ, ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ಹಲವು ಪ್ರದೇಶಗಳಲ್ಲಿ ಬಾರಿ ಮಳೆಯಾಗುವುದು ಮುನ್ಸೂಚನೆ ಇದೆ.
2. ಮಲೆನಾಡು ಭಾಗ: ಶಿವಮೊಗ್ಗ, ಕೊಡಗು, ಹಾಸನ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಹೆಚ್ಚಿನ ಮಳೆ
3. ಉತ್ತರ ಒಳನಾಡು: ಬೆಳಗಾವಿ, ಧಾರವಾಡ, ಹಾವೇರಿ, ಬೀದರ್ ಹಾಗೂ ಕಲಬುರಗಿಯಲ್ಲಿ ಮಧ್ಯಮ ಮಳೆ
4. ದಕ್ಷಿಣ ಒಳನಾಡು: ದಾವಣಗೆರೆ, ಮೈಸೂರು, ಚಾಮರಾಜನಗರ ಮತ್ತು ಇತರೆ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ.
ರಾಜ್ಯದ ಜಲಾಶಯಗಳು ಹಾಗೂ ಮಳೆಹಾನಿ ಕುರಿತು ವಿವಿಧ ತಂಡಗಳನ್ನು ರಚಿಸಲಾಗಿದ್ದು, ಅಂತರ ರಾಜ್ಯ ತಂಡವು ಮಹಾರಾಷ್ಟ್ರ ಜಲಾಶಯಗಳ ಹೊರಹರಿವಿನ ಬಗ್ಗೆ ಅಧ್ಯಯನ ನಡೆಸಲಿವೆ. ಎನ್‍ಡಿಆರ್‍ಎಫ್ ತಂಡವು ಕೊಡಗು, ಧಾರವಾಡ, ಬೆಳಗಾವಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಿಗೆ ಬೇಟಿ ನೀಡುವುದು. ಎಸ್‍ಡಿಆರ್‍ಎಫ್ ತಂಡವು ಸಹ ಸಕ್ರೀಯವಾಗಿ ತೊಡಗಿಸಿಕೊಂಡಿದೆ ಎಂದು ಸಚಿವರು ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
