ಹೊನ್ನಾಳಿ:
ಸರಕಾರಿ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಸೂಕ್ತ ಸವಲತ್ತುಗಳನ್ನು ಒದಗಿಸಲು ತಾವು ಬದ್ಧ ಎಂದು ಶಾಸಕ ಎಂ.ಪಿ. ರೇಣುಕಾಚಾರ್ಯ ಹೇಳಿದರು.
ಪಟ್ಟಣದ 100 ಹಾಸಿಗೆ ಆಸ್ಪತ್ರೆಗೆ ಅವರು ಭೇಟಿ ನೀಡಿ 2018-19ನೇ ಸಾಲಿನ ಆರೋಗ್ಯ ಸುರಕ್ಷಾ ಸಮಿತಿಯ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಭಾಗವಹಿಸಿ ಆಸ್ಪತ್ರೆಯ ವಿವಿಧ ವಿಭಾಗಗಳಿಗೆ ಭೇಟಿ ನೀಡಿ ವ್ಯವಸ್ಥೆಯನ್ನು ಪರಿಶೀಲಿಸಿ ಮಾತನಾಡಿದರು.
ಪಟ್ಟಣದ ಜನಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದ್ದು, ಕ್ಷೇತ್ರದ ಎಲ್ಲಾ ಗ್ರಾಮಗಳಿಂದ ಬಡರೋಗಿಗಳು ಮತ್ತು ಜನ ಸಾಮಾನ್ಯರು ಸರಕಾರಿ ಆತ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ದಿನ ನಿತ್ಯ ಧಾವಿಸುತ್ತಿದ್ದು ಆಗಮಿಸುವ ರೋಗಿಗಳಿಗೆ ಉತ್ತಮ ಚಿಕಿತ್ಸೆ ದೊರೆಯಬೇಕು ಹಾಗೂ ಇಲ್ಲಿನ ಮೂಲಭೂತ ಸೌಲಭ್ಯಕ್ಕೆ ಹೆಚ್ಚಿನ ಒತ್ತು ನೀಡುವ ಅವಶ್ಯಕತೆಯಿದೆ ಎಂದರು.
ಆಸ್ಪತ್ರೆಯ ಸುತ್ತಲೂ ಉತ್ತಮ ಚರಂಡಿ ವ್ಯವಸ್ಥೆ, ಸೋಲಾರ್ ದೀಪಗಳು, ರೋಗಿಗಳಿಗೆ ಶುದ್ಧ ಕುಡಿಯುವ ನೀರು ಮುಂತಾದ ಅನುಕೂಲತೆಗಳನ್ನು ಕಲ್ಪಿಸುವ ಅಗತ್ಯವಿದೆ. ವೈದ್ಯರು ಮತ್ತು ದಾದಿಯರ ವಸತಿ ಗೃಹಗಳನ್ನು 5 ಕೋಟಿ ವ್ಯಚ್ಚದಲ್ಲಿ ನಿರ್ಮಿಸಲು ಕ್ರಮ ಕೈಗೊಳ್ಳಲಾಗಿದೆ. ಆಸ್ಪತ್ರೆಯ ಆಧುನಿಕ ಶಸ್ತ್ರ ಚಿಕಿತ್ಸಾ ಉಪಕರಣಗಳು, ವಿವಿಧ ವಿಭಾಗಗಳಿಗೆ ಹೆಚ್ಚುವರಿ ವೈದ್ಯರು-ಸಿಬ್ಬಂದಿ ಹಾಗೂ ಖಾಲಿ ಇರುವ ಸಿಬ್ಬಂದಿಯನ್ನು ಒದಗಿಸಲು ಆರೋಗ್ಯ ಸಚಿವರು ಮತ್ತು ಮುಖ್ಯಮಂತ್ರಿಗಳೊಡನೆ ಚರ್ಚಿಸಿದ್ದೇನೆ ಎಂದು ವಿವರಿಸಿದರು.
ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ. ಚಂದ್ರಪ್ಪ, ವೈದ್ಯರಾದ ಡಾ. ರಾಜ್‍ಕುಮಾರ್, ಡಾ. ಶಂಷದ್, ಡಾ. ಯೋಗಿತ, ಡಾ. ಮೀನಾ, ತಾಪಂ ಇಒ ಕೆ.ಸಿ. ಮಲ್ಲಿಕಾರ್ಜುನ್, ಎಎಸ್‍ಐ ಏಕಾಂತಪ್ಪ, ಆರೋಗ್ಯ ಸುರಕ್ಷಾ ಸಮಿತಿಯ ಸದಸ್ಯೆಯರಾದ ರೇಣುಕಾಬಾಯಿ, ಉಮಾ ಓಂಕಾರ್, ಆಸ್ಪತ್ರೆ ಸಿಬ್ಬಂದಿ ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ