ಚಿತ್ರದುರ್ಗ:
ರಾಜ್ಯದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಸೂಚನೆಯಂತೆ ದೂರದೃಷ್ಟಿಯುಳ್ಳ ಶಿಕ್ಷಣ ಸಚಿವ ಸುರೇಶ್‍ಕುಮಾರ್‍ರವರ ದಿಟ್ಟ ನಿರ್ಧಾರದಿಂದ ರಾಜ್ಯಾದ್ಯಂತ ಯಾವುದೇ ಅಡ್ಡಿ ಆತಂಕವಿಲ್ಲದೆ ಹತ್ತನೆ ತರಗತಿ ಪರೀಕ್ಷೆ ಸುಸೂತ್ರವಾಗಿ ನಡೆಯುತ್ತಿದೆ ಎಂದು ಚಿತ್ರದುರ್ಗ ಲೋಕಸಭಾ ಸದಸ್ಯ ಎ.ನಾರಾಯಣಸ್ವಾಮಿ ಹೇಳಿದರು.
ಎಸ್.ಎಸ್.ಎಲ್.ಸಿ.ಪರೀಕ್ಷೆಯ ಎರಡನೇ ದಿನವಾದ ಶನಿವಾರ ಸಂತ ಜೋಸೆಫ್ ಕಾನ್ವೆಂಟ್ ಶಾಲೆಯ ಪರೀಕ್ಷಾ ಕೇಂದ್ರಕ್ಕೆ ಭೇಟಿ ನೀಡಿ ಯಾವುದೇ ಆತಂಕ ಭಯಕ್ಕೆ ಒಳಗಾಗದೆ ಆತ್ಮಸ್ಥೈರ್ಯದಿಂದ ಪರೀಕ್ಷೆ ಬರೆದು ನಿಮ್ಮಲ್ಲಿರುವ ಪ್ರತಿಭೆಯನ್ನು ಹೊರಹಾಕಿ ಎಂದು ಪರೀಕ್ಷಾರ್ಥಿಗಳಿಗೆ ಧೈರ್ಯ ತುಂಬಿದರು.
ಕೊರೋನಾ ವೈರಸ್ ಹಾವಳಿಯಿಂದಾಗಿ ಹತ್ತನೆ ತರಗತಿ ಸೇರಿದಂತೆ ಎಲ್ಲಾ ಪರೀಕ್ಷೆಗಳನ್ನು ರದ್ದುಪಡಿಸುವಂತೆ ದೇಶಾದ್ಯಂತ ಚರ್ಚೆ ನಡೆಯುತ್ತಿರುವ ಇಂದಿನ ಸಂದರ್ಭದಲ್ಲಿ ಕರ್ನಾಟಕ ರಾಜ್ಯದ ಶಿಕ್ಷಣ ಸಚಿವ ಸುರೇಶ್‍ಕುಮಾರ್ ರಾಜ್ಯದ ಎಲ್ಲಾ ಜಿಲ್ಲೆಯ ಜಿಲ್ಲಾಧಿಕಾರಿ, ರಕ್ಷಣಾಧಿಕಾರಿ, ಜಿ.ಪಂ.ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಶಿಕ್ಷಣ ಇಲಾಖೆ ಅಧಿಕಾರಿಗಳ ಜೊತೆ ಚರ್ಚಿಸಿ ಎಲ್ಲಿಯೂ ಕೊರೋನಾ ಹರಡದಂತೆ ಯಾವ ರೀತಿ ಮುಂಜಾಗ್ರತೆ ಕ್ರಮ ಕೈಗೊಳ್ಳಬೇಕೆಂದು ಸೂಚಿಸಿರುವ ಹಿನ್ನೆಲೆಯಲ್ಲಿ ಚಿತ್ರದುರ್ಗ ಜಿಲ್ಲೆಯಾದ್ಯಂತ 22 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ನಿರ್ಭಯವಾಗಿ ಪರೀಕ್ಷೆ ಬರೆಯುತ್ತಿದ್ದಾರೆ. ಎಲ್ಲಾ ಕಡೆ ಥರ್ಮಲ್ ಸ್ಕ್ಯಾನಿಂಗ್, ಸಾಮಾಜಿಕ ಅಂತರ, ಮಾಸ್ಕ್‍ಗಳ ವಿತರಣೆ, ಸ್ಯಾನಿಟೈಸರ್ ನಡೆದಿದೆ. ಪೋಷಕರು ಮತ್ತು ವಿದ್ಯಾರ್ಥಿಗಳು ಆತಂಕ ಪಡುವುದು ಬೇಕಿಲ್ಲ ಎಂದು ತಾಕೀತು ಮಾಡಿದರು.
ಸಚಿವ ಸುರೇಶ್‍ಕುಮಾರ್‍ರವರಿಗೆ ಶಿಕ್ಷಣದ ಮೇಲಿರುವ ಕಾಳಜಿ, ಅಭಿಮಾನದಿಂದ ರಾಜ್ಯಾದ್ಯಂತ ಹತ್ತನೆ ತರಗತಿ ಪರೀಕ್ಷೆ ನಡೆಯುತ್ತಿದೆ. ಗ್ರಾಮಾಂತರ ಪ್ರದೇಶಗಳಲ್ಲಿ ಯಾರು ಅಷ್ಟಾಗಿ ಕೋವಿಡ್-19 ಕ್ಕೆ ಹೆದರುತ್ತಿಲ್ಲ. ಹೊರಗಡೆಯಿಂದ ಬಂದವರಿಗೆ ಕೊರೋನಾ ವೈರಸ್ ಕಾಣಿಸಿಕೊಂಡಿದೆಯೇ ವಿನಃ ಸಮುದಾಯಕ್ಕೆ ಎಲ್ಲಿಯೂ ಹರಡಿಲ್ಲ. ಹಾಗಾಗಿ ಎಸ್.ಎಸ್.ಎಲ್.ಸಿ.ಪರೀಕ್ಷೆ ಬರೆಯುತ್ತಿರುವ ಮಕ್ಕಳು ಪರೀಕ್ಷೆ ಭಯ ಬಿಟ್ಟು ನಿರಾಳವಾಗಿ ಪ್ರಶ್ನೆಗಳಿಗೆ ಉತ್ತರಿಸಿ ಸರ್ಕಾರ ನಿಮ್ಮ ಜೊತೆಯಿದೆ.
ಪೋಷಕರು ಮಕ್ಕಳನ್ನು ಸಜ್ಜುಗೊಳಿಸಿ ಪರೀಕ್ಷೆಗೆ ಕಳಿಸಿಕೊಡಿ ಎಂದು ಮನವಿ ಮಾಡಿದ ಸಂಸದ ನಾರಾಯಣಸ್ವಾಮಿರವರು ಪ್ರಧಾನಿ ನರೇಂದ್ರಮೋದಿರವರು ಕೈಗೊಂಡ ಲಾಕ್‍ಡೌನ್‍ನಿಂದ ದೊಡ್ಡ ಜನಸಂಖ್ಯೆಯುಳ್ಳ ಭಾರತದಲ್ಲಿ ಕೊರೋನಾ ಸೋಂಕಿತರು ಹಾಗೂ ಸಾವಿನ ಪ್ರಮಾಣ ಹತೋಟಿಯಲ್ಲಿದೆ. ಕೊರೋನಾ ಪರಿಹಾರವಾಗಿ ಕೇಂದ್ರ ಸರ್ಕಾರ ಇಪ್ಪತ್ತು ಲಕ್ಷ ಕೋಟಿ ರೂ.ಗಳ ಪ್ಯಾಕೇಜ್ ಘೋಷಿಸಿದೆ. ಎಲ್ಲಿಯೂ ಯಾವ ಕಾಮಗಾರಿಯೂ ನಿಂತಿಲ್ಲ. ಆರ್ಥಿಕವಾಗಿ ದೇಶವನ್ನು ಬಲಗೊಳಿಸುವ ಜೊತೆಗೆ ಜನರ ಪ್ರಾಣ ಉಳಿಸುವ ಕೆಲಸವನ್ನು ರಾಜ್ಯ ಮತ್ತು ಕೇಂದ್ರ ಸರ್ಕಾರ ಮಾಡುತ್ತಿದೆ ಎಂದು ಹೇಳಿದರು.
ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಕೆ.ರವಿಶಂಕರ್‍ರೆಡ್ಡಿ, ಕ್ಷೇತ್ರ ಶಿಕ್ಷಣಾಧಿಕಾರಿ ಸಿದ್ದಪ್ಪ, ಕ್ಷೇತ್ರ ಸಂಪನ್ಮೂಲ ಅಧಿಕಾರಿ ಈಶ್ವರಪ್ಪ, ಬಿಜೆಪಿ.ವಕ್ತಾರ ನಾಗರಾಜ್‍ಬೇದ್ರೆ, ಮಾಧ್ಯಮ ವಕ್ತಾರ ದಗ್ಗೆಶಿವಪ್ರಕಾಶ್, ಸಂಸದರ ಆಪ್ತ ಸಹಾಯಕರಾದ ಜಿ.ಹೆಚ್.ಮೋಹನ್, ಷಣ್ಮುಖ ದಾಸಣ್ಣ ಮಾಳಿಗೆ, ನಗರಸಭೆ ಮಾಜಿ ಅಧ್ಯಕ್ಷೆ ಸುನಿತಾಮಲ್ಲಿಕಾರ್ಜುನ್ ಈ ಸಂದರ್ಭದಲ್ಲಿ ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
