ತುಮಕೂರು
ಅಪವಿತ್ರ ಮೈತ್ರಿಯಿಂದ ಸರಕಾರ ರಚನೆಯಾಗಿ 9 ತಿಂಗಳಾದರೂ ಅವರ ನಡುವೆ ಸರಿಯಾಗಿ ಹೊಂದಾಣಿಕೆಯಾಗಿಲ್ಲ. ಕೇವಲ ಬಿಜೆಪಿ ಮತ್ತು ಮೋದಿಯನ್ನು ಸೋಲಿಸಬೇಕು ಎಂಬ ಉದ್ದೇಶದಿಂದ ಮೈತ್ರಿಯಾಗಿದ್ದಾರೆ ಹೊರತು ಅಭಿವೃದ್ಧಿ ಬಗ್ಗೆ ಯೋಚನೆ ಇಲ್ಲ ಎಂದು ಮೈತ್ರಿ ಸರ್ಕಾರದ ವಿರುದ್ಧ ಬಿಜೆಪಿ ರಾಜ್ಯ ಉಪಾಧ್ಯಕ್ಷ ಸೋಮಶೇಖರ್ ವಾಗ್ದಾಳಿ ನಡೆಸಿದರು.
ನಗರದ ಬಿಜೆಪಿ ಚುನಾವಣಾ ಪ್ರಚಾರ ಕಾರ್ಯಾಲಯದಲ್ಲಿ ಏರ್ಪಡಿಸಲಾಗಿದ್ದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ದೇಶಾದ್ಯಂತ ಚುನಾವಣಾ ಪ್ರಚಾರ ಅಬ್ಬರ ಶುರುವಾಗಿದ್ದು, ಅದರಲ್ಲಿ ತುಮಕೂರು ಕ್ಷೇತ್ರ ಅತ್ಯಂತ ಪ್ರಭಾವಿಯಾಗಿ ಹೊರಹೊಮ್ಮಿದೆ. ಪ್ರಧಾನಿ ಮೋದಿಯವರು ಐದು ವರ್ಷದಲ್ಲಿ ಮಾಡಿದ ಕೆಲಸವನ್ನು ಸಹಿಸಲು ಆಗದ ಜೆಡಿಎಸ್ ಹಾಗೂ ಕಾಂಗ್ರೆಸ್ ಮೈತ್ರಿ ಪಕ್ಷಗಳು ಪಳ್ಳೊ ಆಪಾದನೆಗಳನ್ನು ಮಾಡುತ್ತಿವೆ ಎಂದರು.
ಮೋದಿ ಆಡಳಿತದಲ್ಲಿ ಅಧಿಕಾರಿಗಳು ಪಾರದರ್ಶಕವಾಗಿ ಕೆಲಸ ಮಾಡುತ್ತಿರುವುದದರಿಂದ ಎಲ್ಲ ರಾಜಕೀಯ ಪಕ್ಷಗಳ ಮುಖಂಡರ ಬಣ್ಣ ಬಯಲಾಗುತ್ತಿದೆ. ಅದಕ್ಕಾಗಿ ಮೈತ್ರಿ ಮಾಡಿಕೊಂಡು ತಲೆಮರೆಸಿಕೊಳ್ಳುತ್ತಿದ್ದಾರೆ. ಆದರೆ ರಾಜ್ಯದಲ್ಲಿ ಜೆಡಿಎಸ್‍ನ ಕುಟುಂಬ ರಾಜಕಾರಣ ಮುಂದುವರೆದಿದ್ದು, ಹಾಸನದಲ್ಲಿ ಮೊಮ್ಮಗ ಪ್ರಜ್ವಲ್ ರೇವಣ್ಣನಿಗೆ ಟಿಕೆಟ್ ನೀಡಿದ್ದಾರೆ. ಮಂಡದಲ್ಲಿ ನಿಖಿಲ್ ಕುಮಾರಸ್ವಾಮಿಗೆ ಟಿಕೆಟ್ ನೀಡಿದ್ದಾರೆ. ಇದೀಗ ತುಮಕೂರು ಕ್ಷೇತ್ರದಲ್ಲಿ ದೇವೇಗೌಡರೇ ಸ್ಪರ್ಧೆ ಮಾಡುತ್ತಿದ್ದಾರೆ. ಇವುರ ತಮ್ಮ ಕುಟುಂಬ ರಾಜಕಾರಣದಿಂದ ನಿಷ್ಠಾವಂತ ರಾಜಕಾರಣಿಗಳನ್ನು ತುಳಿಯುತ್ತಿದ್ದಾರೆ ಎಂದು ಆರೋಪಿಸಿದರು.
ದೇವೇಗೌಡರ ರಾಜಕಾರಣ 1978ರಲ್ಲಿಯೇ ಪ್ರಾರಂಭವಾಗಿದೆ. ಅವರು ಮಂತ್ರಿಯಾಗಿ ಏನೂ ಅಭಿವೃದ್ಧಿ ಕೆಲಸ ಮಾಡಿಲ್ಲ. ರೇವಣ್ಣನವರು ಸಚಿವರಾಗಿ 1350 ಕೋಟಿ ರೂ,ಗಳನ್ನು ಪಡೆದು ಯಾವುದೇ ಕಾಮಗಾರಿ ಮಾಡಿಸಿಲ್ಲ. ಭ್ರಷ್ಟಾಚಾರ ಆರಂಭವಾಗಿರುವುದೇ ದೇವೇಗೌಡರಿಂದ . ಅಂತವರು ಯಾವುದೇ ಭ್ರಷ್ಟಾಚಾರ ಇಲ್ಲದೆ ಕೆಲಸ ಮಾಡಿದ ಬಿಜೆಪಿಯ ಪ್ರಧಾನಿಯ ಮೇಲೆ ಆರೋಪಗಳನ್ನು ಮಾಡುತ್ತಿದ್ದಾರೆ ಎಂದರು.
ದೇವೇಗೌಡರು ತುಮಕೂರು ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿದ್ದಾರೆ. ಅವರ ಮಗ ರಾಜ್ಯದ ಮುಖ್ಯಮಂತ್ರಿಯಾಗಿದ್ದಾರೆ. ಇನ್ನೊಬ್ಬ ಮಗ ಸಚಿವರಾಗಿದ್ದಾರೆ. ಇದೀಗ ಇಬ್ಬರು ಮೊಮ್ಮಕ್ಕಳನ್ನು ಲೋಕಸಭೆಗೆ ನಿಲ್ಲಿಸಿದ್ದಾರೆ. ಇವರದ್ದು ಕುಟುಂಬ ರಾಜಕಾರಣ ಮಾತ್ರ ವಲ್ಲದೆ ಜಾತಿ ರಾಜಕಾರಣ ಮಾಡುತ್ತಿದ್ದಾರೆ ಎಂದು ಆರೋಪಿಸಿದರಲ್ಲದೆ, ಅವರದೆ ಜಾತಿಯವರಾದ ಮುದ್ದಹನುಮೇಗೌಡ, ವೈಕೆ ರಾಮಯ್ಯ ಅವರನ್ನು ಮುಗಿಸಿದ್ದಾರೆ. ಹೀಗಾಗಿ ಎಲ್ಲಾ ಜನಾಂಗದ ಜನರು ಅವರ ವಿರುದ್ಧ ತಿರುಗಿ ಬಿದ್ದಿದ್ದು, ಮತ್ತೊಮ್ಮೆ ಮೋದಿ ಎಂಬ ಘೋಷ ವಾಕ್ಯ ಹಿಡಿದಿದ್ದಾರೆ ಎಂದರು.
ದೇವೇಗೌಡರು ಪ್ರಧಾನಿಯಾಗಿದ್ದಾಗ ನಾನು ಕಂದಾಯ ಮಂತ್ರಿಯಾಗಿದ್ದೆ. ಆಗ ಕೇವಲ 20 ಎಕರೆಗಿಂತ ಹೆಚ್ಚು ಜಮೀನು ಬಿಟ್ಟುಕೊಡುವಂತಿಲ್ಲ ಎಂಬ ಆದೇಶವಿದ್ದರೂ ಸಂವಿಧಾನದಲ್ಲಿ ಅದನ್ನು ತಿದ್ದುಪಡಿ ನೈಸ್ ಕಂಪನಿಗೆ ಸಾವಿರಾರು ಎಕರೆ ಭೂಮಿ ಮಾರಾಟ ಮಾಡಿದರು. ಇದರಿಂದ ಅನೇಕ ಮಂದಿ ರೈತರು ಭೂಮಿ ಕಳೆದುಕೊಂಡು ಕಾರ್ಖಾನೆಗಳಲ್ಲಿ ಕೆಲಸಕ್ಕೆ ಸೇರಬೇಕಾಯಿತು. ದೇವೇಗೌಡರ ರಾಜಕಾರಣ ಭ್ರಷ್ಟಾಚಾರದಿಂದ ಕೂಡಿದ್ದು, ಸಂವಿಧಾನ ವಿರುದ್ಧವಾಗಿದೆ ಎಂದು ಆರೋಪಿಸಿದರು.
ರೈತ ಪರ ಸರ್ಕಾರ ಎಂದು ಹೇಳುವ ಜೆಡಿಎಸ್‍ನವರು ರೈತರು ಕಷ್ಟದಲ್ಲಿದ್ದಾಗ ಎಲ್ಲಿ ಹೋಗಿದ್ದರು. ಇಂದು ರೈತರು ಅನುಭವಿಸುತ್ತಿರುವ ಸಮಸ್ಯೆಗಳಿಗೆ ದೇವೇಗೌಡರೇ ನೇರ ಕಾರಣ. ರೈತರಿಗೆ ಬಹುದೊಡ್ಡ ಅನ್ಯಾಯ ಮಾಡಿದ್ದಾರೆ. ಭ್ರಷ್ಟಾಚಾರ ಎಂದರೆ ಜೆಡಿಎಸ್ ಪಕ್ಷ. ಇದಕ್ಕೆ ಅನೇಕ ನಿದರ್ಶನಗಳಿವೆ ಎಂದರು.
ಕುಟುಂಬ ರಾಜಕಾರಣಕ್ಕೆ ಅಂತ್ಯವಾಡಬೇಕಾದರೆ ಮೊದಲು ಬೇರಿನಂತಿರುವ ಪಕ್ಷದ ವರಿಷ್ಠರಾದ ದೇವೇಗೌಡರನ್ನು ಸೋಲಿಸಬೇಕು. ಈಗಾಗಲೇ ಮಂಡ್ಯದಲ್ಲಿ ನಿಖಿಲ್‍ಗೆ ಸೋಲು ನಿಶ್ಚಯವಾಗಿದೆ. ಹಾಸನದಲ್ಲಿಯೂ ಪ್ರಜ್ವಲ್ ರೇವಣ್ಣ ಸೋಲನ್ನು ಅನುಭವಿಸಲಿದ್ದಾರೆ. ಈ ಮೂಲಕ ಕುಟುಂಬ ರಾಜಕಾರಣ ಅಂತ್ಯವಾಗಲಿದೆ ಎಂದರಲ್ಲದೆ ಹೇಮಾವತಿ ವಿಚಾರದಲ್ಲಿ ದೇವೇಗೌಡರ ಕುಟುಂಬ ಮಾಡಿದ ಅನ್ಯಾಯ ಅಷ್ಟಿಷ್ಟಲ್ಲ. ಅದನ್ನು ಯೋಚಿಸದೆ ಇಲ್ಲಿ ಬಂದು ಸ್ಪರ್ಧೆ ಮಾಡಿದ್ದಾರೆ. ಅಲ್ಲದೆ ದಲಿತರ ಮೀಸಲಾತಿ ತಡೆದಿದ್ದೇ ದೇವೇಗೌಡರು. ಈ ವಿಷಯ ಮನಗಂಡ ದಲಿತರು ದೇವೇಗೌಡರಿಗೆ ಮತ ಹಾಕುವುದಿಲ್ಲ ಎಂದರು.
ದೇಶ ಅಭಿವೃದ್ಧಿ ಕಾಣುತ್ತಿದೆ ಎಂದರೆ ಅದಕ್ಕೆ ಮೋದಿಯವರೇ ಕಾರಣ. ಅವರು ಸರ್ವರಿಗೂ ಸಮಪಾಲಿ ಸರ್ವರಿಗೂ ಸಮಬಾಳು ಎಂಬ ಮಾತಿನಂತೆ ಸಬ್‍ಕಾ ಸಾತ್ ಸಬ್‍ಕಾ ವಿಕಾಸ್ ಮೂಲಕ ಪ್ರತಿಯೊಂದು ವರ್ಗಕ್ಕೂ ವಿವಿಧ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಅನೇಕ ಯೋಜನೆಗಳನ್ನು ನೀಡಿದ್ದಾರೆ. ಆದರೆ ಇದನ್ನು ಅರಿಯದ ಕಾಂಗ್ರೆಸ್‍ನವರು ಬರೀ ಸುಳ್ಳು ಹೇಳುತ್ತಲೇ ಜನರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ,. ಅವರು ಅಪಪ್ರಚಾರ ಮಾಡುತ್ತಿದ್ದಾರೆ. ಈ ಬಗ್ಗೆ ಜನರು ಅರಿತುಕೊಳ್ಳಬೇಕು. ಈ ಬಾರಿ ರಾಜ್ಯದಲ್ಲಿ 25 ಸೀಟುಗಳನ್ನು ಗೆಲ್ಲಿಸಿಕೊಡುವ ಮೂಲಕ ಕೇಂದ್ರದಲ್ಲಿ ಮೋದಿಯರವನ್ನು ಮತ್ತೊಮ್ಮೆ ಪ್ರಧಾನಿಯನ್ನಾಗಿ ಮಾಡಿ ದೇಶದ ಇನ್ನಷ್ಟು ಅಭಿವೃದ್ಧಿಗೆ ನಾಂದಿ ಹಾಡಬೇಕು ಎಂದರು.
ಪತ್ರಿಕಾಗೋಷ್ಠಿಯಲ್ಲಿ ರೈತ ಮೋರ್ಚಾದ ಮುಖಂಡ ಶಿವಪ್ರಸಾದ್, ಜಿಪಂ ಸದಸ್ಯ ಹುಚ್ಚಯ್ಯ, ಮುಖಂಡರಾದ ಸುರೇಶ್, ಬಾವಿಕಟ್ಟೆ ನಾಗಣ್ಣ, ಹಾಲನೂರು ಲೇಪಾಕ್ಷಿ, ಕೆಟಿ ಶಿವಕುಮಾರ್, ಪ್ರೇಮಾ ಹೆಗಡೆ, ಪಾಲಿಕೆ ಸದಸ್ಯ ರಮೇಶ್ ಮತ್ತಿತರರು ಉಪಸ್ಥಿತರಿದ್ದರು.
ಸಂವಿಧಾನ ಬದಲಾವಣೆ ಕನಸು
ಸಂವಿಧಾನ ತಿದ್ದುಪಡಿ ಮಾಡಬಹುದು ಆದರೆ ಬದಲಾವಣೆ ಮಾಡುವುದು ಅಸಾಧ್ಯ. ಮೋದಿಯವರಿಗೆ ಅಂಬೇಡ್ಕರ್ ಅವರ ಸಂವಿಧಾನದ ಬಗ್ಗೆ ಗೌರವವಿದೆ. ಸಂವಿಧಾನಕ್ಕೆ ಹೆಚ್ಚು ಗೌರವ ಕೊಟ್ಟಿದ್ದು ಮೋದಿ. ಹಾಗಾಗಿ ಅಂಬೇಡ್ಕರ್ ಹುಟ್ಟಿದ ಸ್ಥಳ, ಅವರ ವಿದ್ಯಾಭ್ಯಾಸ ಮಾಡಿದ ಕ್ಷೇತ್ರ, ಅವರ ಅಂತ್ಯಕ್ರಿಯೆ ನಡೆದ ಕ್ಷೇತ್ರ ಸೇರಿದಂತೆ ಒಟ್ಟು ಐದು ಕ್ಷೇತ್ರಗಳನ್ನು ಅಭಿವೃದ್ಧಿ ಪಡಿಸಲು ಸಾವಿರಾರು ಕೋಟಿ ರೂ.ಗಳನ್ನು ಖರ್ಚು ಮಾಡುತ್ತಿದ್ದಾರೆ.