ಸ್ವಯಂ ಪರಿವರ್ತನೆಯಿಂದ ಜಗತ್ತು ಬದಲಾವಣೆ

ದಾವಣಗೆರೆ:

    ಎಲ್ಲವೂ ಆಗಿದ್ದು ನನ್ನಂದಿಲೇ, ನಾನು ಮಾತ್ರ ಸರಿಯಾಗಿದ್ದೇನೆ ಎಂಬ ಅಹಮ್ಮು ಬಿಟ್ಟು ಪ್ರತಿಯೊಬ್ಬರೂ ಸ್ವಯಂ ಪರಿವರ್ತನೆ ಕಂಡುಕೊಂಡರೆ ಮಾತ್ರ ಜಗತ್ತು ಪರಿವರ್ತನೆಯಾಗಲು ಸಾಧ್ಯ ಎಂದು ಕರ್ನಾಟಕ ಹೈಕೋರ್ಟ್‍ನ ವಿಶ್ರಾಂತ ನ್ಯಾಯಾಧೀಶರಾದ ಎ.ಎಸ್.ಪಚ್ಚಾಪುರೆ ಪ್ರತಿಪಾದಿಸಿದರು.

    ನಗರದ ದೇವರಾಜು ಅರಸು ಬಡಾವಣೆಯ ಶಿವಧ್ಯಾನ ಮಂದಿರದಲ್ಲಿ ಭಾನುವಾರ ರಾಜಸ್ತಾನದ ಅಬು ಪರ್ವತದ ಆರ್‍ಇಆರ್‍ಎಫ್‍ನ ಜುರಿಸ್ಟ್ ವಿಂಗ್ ಹಾಗೂ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯ ಇವುಗಳ ಸಹಯೋಗದಲ್ಲಿ ‘ಶ್ರೇಷ್ಠ ಜಗತ್ತಿನ ನಿರ್ಮಾಣದಲ್ಲಿ ಕಾನೂನು ತಜ್ಞರ ಪಾತ್ರ’ ವಿಷಯ ಕುರಿತು ಏರ್ಪಡಿಸಿದ್ದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಜ್ಞಾನದ ಕಣ್ಣಿಗೆ ಪೊರೆ:

    ಮೊದಲು ನಮ್ಮನ್ನು ನಾವು ಬದಲಾಯಿಸಿಕೊಳ್ಳುವ ಮತ್ತು ನಮ್ಮನ್ನು ನಾವು ನೋಡಿಕೊಳ್ಳುವ ಆತ್ಮಿಕ ಭಾವನೆ ರೂಢಿಸಿ ಕೊಳ್ಳಬೇಕು. ಇಲ್ಲದಿದ್ದರೆ, ಮನಸ್ಸು ಎಲ್ಲೆಲ್ಲೋ ಕರೆದುಕೊಂಡು ಹೋಗಿ ಬಿಡುತ್ತದೆ. ನಮ್ಮ ಒಳಗನ್ನು ನಾವು ಅರಿಯಬೇಕಾದರೆ, ನಮ್ಮಲ್ಲಿರುವ ಜ್ಞಾನದ ಕಣ್ಣು ತೆರೆಯಬೇಕಾಗಿದೆ. ಆದರೆ, ಈ ಜ್ಞಾನದ ಕಣ್ಣಿಗೆ ಕಾಮ, ಕ್ರೋಧ, ಮದ, ಮತ್ಸರದ ಪೊರೆ ಆವರಿಸಿರುವುದೇ ಇಂದು ಸಮಾಜದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ, ಅಶಾಂತಿಗೆ ಕಾರಣವಾಗಿದೆ ಎಂದು ವಿಶ್ಲೇಷಿಸಿದರು.

ದೇಗುಲಕ್ಕೆ ಹೋಗುವಂತಾಗಬೇಕು:

   ನಾವು ದೇವಾಲಯಕ್ಕೆ ಭಕ್ತಿ ಹಾಗೂ ಪವಿತ್ರ ಭಾವನೆಯಿಂದ ಹೋಗುತ್ತೇವೆ. ಏಕೆಂದರೆ, ಅಲ್ಲಿ ನಮಗೆ ನೆಮ್ಮದಿ ಸಿಗುತ್ತದೆ ಎಂಬ ಕಾರಣಕ್ಕೆ. ಆದರೆ, ಇಂದಿನ ಶಾಸಕಾಂಗ, ಕಾರ್ಯಾಂಗ ಹಾಗೂ ನ್ಯಾಯಾಂಗಗಳಿಗೆ ಹೋದರೆ ನೆಮ್ಮದಿ ಸಿಗುತ್ತದೋ, ಇಲ್ಲವೋ ಎಂಬ ಆತಂಕ ಸಾರ್ವಜನಿಕರಲ್ಲಿ ಮನೆ ಮಾಡಿದೆ. ಹೀಗಾಗಿ ಈ ಮೂರು ಅಂಗಗಳ ಕಚೇರಿಗಳಿಗೆ ದೇವಸ್ಥಾನಕ್ಕೆ ಹೋಗುವಂತಹ ಪವಿತ್ರ ಭಾವನೆಯಿಂದ ಹೋಗುವ ವಾತಾವರಣ ನಿರ್ಮಾಣವಾದರೆ, ಶ್ರೇಷ್ಠ ಜಗತ್ತು ನಿರ್ಮಾಣಕ್ಕೆ ದಾರಿಯಾಗುತ್ತದೆ ಎಂದರು.

ಮಂತ್ರಿ ಹಿಂದೆ ಸಾವಿರ ಜನ:

   ನಾನು ಅಮೇರಿಕಕ್ಕೆ ಹೋಗಿದ್ದೆ ಅಲ್ಲಿ ಮಂತ್ರಿಯ ಹಿಂದೆ ಅವರ ಆಪ್ತ ಕಾರ್ಯದರ್ಶಿ ಬಿಟ್ಟರೆ, ಬೇರೆ ಯಾರೂ ಇರುವುದಿಲ್ಲ. ಆದರೆ, ನಮ್ಮ ದೇಶದಲ್ಲಿ ಯಾವುದೇ ಶಾಸಕ, ಸಂಸದ, ಮಂತ್ರಿಗಳ ಹಿಂದೆ ಸಾವಿರ ಜನ ಇರುತ್ತಾರೆ. ಅದು ಅವರಿಂದ ಲಾಭ ಪಡೆಯಬೇಕೆಂಬ ಕಾರಣಕ್ಕೆ ಅವರ ಹಿಂದೆ ಜನ ಇರುತ್ತಾರೆ. ಹೀಗಾಗಿ ಇಲ್ಲಿನ ಜನಪ್ರತಿನಿಧಿಗಳಿಗೆ ಸರ್ಕಾರದ ನೀತಿ ನಿಯಮಗಳನ್ನು ಅರಿತು ಜನಪರ ಕೆಲಸ ಮಾಡಬೇಕೆಂಬ ಭಾವನೆಯೇ ಇಲ್ಲವಾಗಿದೆ. ಏಕೆಂದರೆ, ಅವರ ಸುತ್ತ ಇರುವ ಸಾವಿರ ಜನರ ಕೆಲಸ ಮಾಡುವುದರಲ್ಲಿಯೇ ಅವರು ಸುಸ್ತಾಗಿ ಹೋಗುತ್ತಾರೆ ಎಂದು ಹೇಳಿದರು.

ಪ್ರತಿಭಟನೆಗೆ ಆಕ್ಷೇಪ:

    ಬ್ರಿಟೀಷರನ್ನು ಸುಲಭವಾಗಿ ಭಾರತದಿಂದ ಓಡಿಸಲಾಗದು ಎಂಬುದನ್ನು ಅರಿತು ಗಾಂಧೀಜಿಯವರು ಸತ್ಯಾಗ್ರಹ ಹೂಡಿ ಆಂಗ್ಲರನ್ನು ಇಲ್ಲಿಂದ ಓಡಿಸಿದರು. ನಂತರ ದೇಶದಲ್ಲಿ ನಮ್ಮದೇ ಸರ್ಕಾರ ಬಂತು. ಸಂವಿಧಾನವು ರಚನೆಯಾಯಿತು. ಶಾಸಕಾಂಗ, ಕಾರ್ಯಾಂಗ ಜನರ ಸಮಸ್ಯೆಗಳಿಗೆ ಪರಿಹಾರ ನೀಡದಿದ್ದರೆ, ನ್ಯಾಯಾಂಗದ ಮೊರೆ ಹೋಗಿ ನ್ಯಾಯ ಪಡೆಯಲು ಅವಕಾಶ ಕಲ್ಪಿಸಿದೆ. ಆದರೆ, ಜನಪ್ರತಿನಿಧಿಗಳು, ಅಧಿಕಾರಿಗಳಿಂದ ಆಗುವ ಅನ್ಯಾಯದ ವಿರುದ್ಧ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸದವರು ಎಲ್ಲದಕ್ಕೂ ತಮ್ಮದೇ ಸರ್ಕಾರದ ವಿರುದ್ಧ ಪ್ರತಿಭಟನೆ, ಸತ್ಯಾಗ್ರಹ ನಡೆಸುವುದು ಸರಿಯಾದ ಮಾರ್ಗವಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ಹಕ್ಕಿನಂತೆ ಕರ್ತವ್ಯ ಪಾಲಿಸಿ:

   ಅವಶ್ಯಕತೆಗಿಂತ ಹೆಚ್ಚು ಹಣ ಇದ್ದರೆ, ಮನುಷ್ಯನಲ್ಲಿ ಹೊಲಸು ಪ್ರವೃತ್ತಿಗಳು ಬೆಳೆಯುತ್ತವೆ. ಹೊರತು, ಸಮಾಧಾನ-ನೆಮ್ಮದಿ ಸಿಗಲು ಸಾಧ್ಯವೇ ಇಲ್ಲ. ಇಂದು ಎಲ್ಲರು ಹಕ್ಕುಗಳನ್ನು ಕೇಳುತ್ತಿದ್ದೇವೆಯೇ ಹೊರತು, ಯಾರೂ ಸಹ ಸರಿಯಾಗಿ ಕರ್ತವ್ಯಗಳನ್ನು ನಿರ್ವಹಿಸುತ್ತಿಲ್ಲ. ಅವರವರ ಕೆಲಸ, ಕರ್ತವ್ಯಗಳನ್ನು ನಿರ್ವಹಿಸಿದರೆ ಎಲ್ಲರಿಗೂ ಖುಷಿ, ನೆಮ್ಮದಿ ಸಿಕ್ಕಂತಾಗಿ ಶ್ರೇಷ್ಠಜಗತ್ತು ನಿರ್ಮಾಣ ಆಗುವುದರಲ್ಲಿ ಯಾವುದೇ ಅನುಮಾನಗಳಿಲ್ಲ ಎಂದರು.

ಸುಲಭವಾಗಿ ನ್ಯಾಯ ಸಿಗಲಿ:

    ಪೂರ್ವ ವಲಯ ಐಜಿಪಿ ಅಮೃತ್‍ಪಾಲ್ ಮಾತನಾಡಿ, ಸಮಾಜದಲ್ಲಿ ಕಾನೂನು ಇಲ್ಲದಿದ್ದರೆ ಬದುಕಲು ಸಾಧ್ಯವೇ ಇಲ್ಲ. ಎಲ್ಲಾ ನಾಗರೀಕತೆಗಳ, ವೇದಗಳ ಕಾಲದಲ್ಲಿಯೂ ಕಾನೂನು ಇತ್ತು. ಕೇವಲ ಪುಸ್ತಕದಲ್ಲಿರುವುದು ಮಾತ್ರ ಕಾನೂನು ಅಲ್ಲ. ನಮ್ಮ ನಡುವಳಿಕೆ, ಆಚಾರ, ವಿಚಾರಗಳು ಕಾನೂನುಗಳಾಗಿವೆ. ಇಂದು ಬದುಕಿನಲ್ಲಿ ಸಾಕಷ್ಟು ಅಸಮಾನತೆಗಳಿದ್ದು, ಕಾನೂನು ಇಲ್ಲದೇ ಹೋಗಿದ್ದರೆ ಎಲ್ಲರಿಗೂ ರಕ್ಷಣೆ ನೀಡಲು ಸಾಧ್ಯವಾಗುತ್ತಿರಲಿಲ್ಲ. ಪ್ರಸ್ತುತ ನ್ಯಾಯ ಪಡೆಯುವುದು ಅತೀ ಹೆಚ್ಚು ವೆಚ್ಚದಾಯಕ ಎಂಬ ಭಾವನೆ ಜನರಲ್ಲಿ ಮನೆ ಮಾಡಿದೆ. ಹೀಗಾಗಿ ಬಡವರಿಗೆ ಸುಲಭವಾಗಿ ನ್ಯಾಯಸಿಗುವಂತಾಗಲಿ ಎಂದು ಆಶಯ ವ್ಯಕ್ತಪಡಿಸಿದರು.ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಡಿ.ವೈ.ಬಸಾಪುರ ಮಾತನಾಡಿದರು.

   ಶಿರಸಿಯ ಬ್ರಹ್ಮಾಕುಮಾರೀಸ್ ಸಂಚಾಲಕಿ ವೀಣಾ ಪ್ರಾಸ್ತಾವಿಕ ನುಡಿಗಳನ್ನಾಡಿದರು. ದಾವಣಗೆರೆ ಬ್ರಹ್ಮಾ ಕುಮಾರೀಸ್ ಸಂಚಾಲಕಿ ಲೀಲಾಜಿ ಅಧ್ಯಕ್ಷತೆ ವಹಿಸಿದ್ದರು. ಹೆಚ್ಚುವರಿ ಪೊಲೀಸ್ ಅಧೀಕ್ಷಕ ರಾಜೀವ್.ಎಂ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎನ್.ಟಿ.ಮಂಜುನಾಥ್, ಬೆಳಗಾವಿಯ ರಾಜಯೋಗ ಶಿಕ್ಷಕಿ ಬ್ರಹ್ಮಾಕುಮಾರಿ ವಿದ್ಯಾ ಮತ್ತಿತರರು ಉಪಸ್ಥಿತರಿದ್ದರು. ಕು|| ಧನ್ಯಾ ಸ್ವಾಗತ ನೃತ್ಯ ಮಾಡಿದರು. ಬ್ರಹ್ಮಾಕುಮಾರಿ ಗೀತಾ ಸ್ವಾಗತಿಸಿದರು. ನ್ಯಾಯಾಧೀಶರಾದ ಕು.ರೋಹಿಣಿ ಬಸಾಪುರ ಕಾರ್ಯಕ್ರಮ ನಿರೂಪಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link