ಚಳ್ಳಕೆರೆ
ಜನಸಂಖ್ಯೆಯನ್ನು ನಿಯಂತ್ರಣಗೊಳಿಸಿದಲ್ಲಿ ಮಾತ್ರ ಎಲ್ಲಾ ರೀತಿಯ ಸೌಲಭ್ಯ ಪಡೆಯಲು ಸಾಧ್ಯವಾಗುತ್ತದೆ. ಜನಸಂಖ್ಯೆ ಹೆಚ್ಚಾದಂತೆಲ್ಲಾ ಎಲ್ಲರಿಗೂ ಸೂಕ್ತ ವ್ಯವಸ್ಥೆಯನ್ನು ಮಾಡಲು ಸಾಧ್ಯವಾಗುವುದಿಲ್ಲ. ಜನಸಂಖ್ಯೆ ನಿಯಂತ್ರಣದಿಂದ ಮಾತ್ರ ಅಭಿವೃದ್ಧಿ ಪಥದತ್ತ ಹೆಜ್ಜೆ ಇಡಲು ಸಾಧ್ಯವೆಂದು ಕ್ಷೇತ್ರದ ಶಾಸಕ, ಹಟ್ಟಿ ಚಿನ್ನದ ಗಣಿ ನಿಗಮದ ಅಧ್ಯಕ್ಷ ಟಿ.ರಘುಮೂರ್ತಿ ತಿಳಿಸಿದರು.
ಅವರು, ಗುರುವಾರ ಇಲ್ಲಿನ ರೋಟರಿ ಬಾ¯ಭವನದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ತಾಲ್ಲೂಕು ಆರೋಗ್ಯ ಆಸ್ಪತ್ರೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಜನಸಂಖ್ಯೆ ನಿಯಂತ್ರಣ ಅಂದೋಲನವನ್ನು ಜ್ಯೋತಿ ಬೆಳಗಿವ ಮೂಲಕ ಉದ್ಘಾಟಿಸಿ ಮಾತನಾಡಿದರು. ಈಗಾಗಲೇ ಕಳೆದ ಕೆಲವಾರು ವರ್ಷಗಳಿಂದ ಸರ್ಕಾರ ಜನಸಂಖ್ಯೆ ನಿಯಂತ್ರಣದ ಬಗ್ಗೆ ಹಲವಾರು ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತಾ ಬಂದಿದೆ.
ರಾಷ್ಟ್ರವು ಅಭಿವೃದ್ಧಿ ಪಥದತ್ತ ಸಾಗಲು ಜನಸಂಖ್ಯೆ ನಿಯಂತ್ರಣ ಆಗಲೇಬೇಕು ಎಂಬುವುದು ಆರೋಗ್ಯ ಇಲಾಖೆಯ ಅಭಿಪ್ರಾಯವಾಗಿದೆ. ನಾವೆಲ್ಲರೂ ಆರೋಗ್ಯ ಇಲಾಖೆಯ ಸಲಹೆ, ಸೂಚನೆಯನ್ನು ಅನುಸರಿಸಿ ಜನಸಂಖ್ಯೆ ನಿಯಂತ್ರಣಕ್ಕೆ ಒತ್ತುಕೊಡೋಣವೆಂದು ಅವರು ತಿಳಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ತಾಲ್ಲೂಕು ಆರೋಗ್ಯಾಧಿಕಾರಿ ಎನ್.ಪ್ರೇಮಸುಧಾ, ಜನಸಂಖ್ಯೆ ನಿಯಂತ್ರಣ ಕುರಿತು ಈಗಾಗಲೇ ಆರೋಗ್ಯ ಇಲಾಖೆ ವತಿಯಿಂದ ಜಾಗೃತಿ ಜಾಥವನ್ನು ನಡೆಸಿ ಜನರಲ್ಲಿ ಜಾಗೃತಿ ಮೂಡಿಸಲಾಗಿದೆ. ಇಂದಿನ ಬಡ ಮತ್ತು ಮದ್ಯಮ ಕುಟುಂಬಗಳ ಲಕ್ಷಾಂತರ ಜನರು ಯಾವುದೇ ಆರ್ಥಿಕ ಸೌಲಭ್ಯವಿಲ್ಲದೆ ಹಿನ್ನಡೆ ಉಂಟಾಗಿರುವುದಕ್ಕೆ ಜನಸಂಖ್ಯೆ ಹೆಚ್ಚಳವೇ ಪರೋಕ್ಷ ಕಾರಣವಾಗಿದೆ.
ಈ ಹಿನ್ನೆಲೆಯಲ್ಲಿ ನಗರ ಹಾಗೂ ಗ್ರಾಮೀಣ ಮಟ್ಟದಲ್ಲಿ ಸಾರ್ವಜನಿಕರನ್ನು ಜನಸಂಖ್ಯೆ ನಿಯಂತ್ರಣ ಕಾರ್ಯಕ್ಕೆ ಗಮನ ನೀಡುವಂತೆ ವಿನಂತಿಸಲಾಗಿದೆ. ಆರೋಗ್ಯ ಇಲಾಖೆ ಸಿಬ್ಬಂದಿ ಮತ್ತು ತಾಲ್ಲೂಕು ಮಟ್ಟದ ವಿವಿಧ ಆಧಿಕಾರಿಗಳ ಸಹಯೋಗದೊಂದಿಗೆ ಈ ಕಾರ್ಯಕ್ರಮವನ್ನು ಯಶಸ್ಸಿಗೊಳಿಸಲು ಯೋಜನೆಗಳನ್ನು ಸಿದ್ದ ಪಡಿಸಿದ್ದು, ಎಲ್ಲರೂ ಸಹಕಾರ ನೀಡುವಂತೆ ಅವರು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ನನ್ನಿವಾಳ ಜಿಲ್ಲಾ ಪಂಚಾಯಿತಿ ಸದಸ್ಯ ಬಿ.ಪಿ.ಪ್ರಕಾಶ್‍ಮೂರ್ತಿ ಮಾತನಾಡಿ, ಮುಂದಿನ ದಿನಗಳಲ್ಲಿ ಹಲವಾರು ರೀತಿಯ ಅಪಾಯಗಳನ್ನು ಎದುರಿಸಬೇಕಾಗಿದೆ. ಈ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ಜನಸಂಖ್ಯೆ ನಿಯಂತ್ರಣಕ್ಕೆ ಮುಂದಾಗಿದೆ. ಜನಸಂಖ್ಯೆ ಎಲ್ಲಿ ಹೆಚ್ಚಿರುತ್ತದೆಯೋ ಅಲ್ಲಿ ಹಲವಾರು ಸಮಸ್ಯೆಗಳಿಂದ ಅಭಿವೃದ್ಧಿ ಸಾಧ್ಯವಾಗುವುದಿಲ್ಲ. ಈ ಹಿನ್ನೆಲೆಯಲ್ಲಿ ಜನಸಂಖ್ಯೆ ನಿಯಂತ್ರಣ ಆದ್ಯ ಕರ್ತವ್ಯವಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಕವಿತಾರಾಮಣ್ಣ ಮಾತನಾಡಿ, ಸಾರ್ವಜನಿಕರ ಆರೋಗ್ಯ ಜಾಗೃತಿ ಜೊತೆಗೆ ಜನಸಂಖ್ಯೆ ನಿಯಂತ್ರಣ ಮಾಡುವ ಬಗ್ಗೆ ಆರೋಗ್ಯ ಇಲಾಖೆ ಉತ್ತಮ ಕಾರ್ಯಕ್ರಮ ಹಮ್ಮಿಕೊಂಡಿದೆ. ಇಂದು ಎಲ್ಲಾ ಹಂತಗಳಲ್ಲೂ ಎಲ್ಲರ ಬದುಕು ಸಂಕಷ್ಟಕ್ಕೀಡಾಗಿದ್ದು, ಇದು ಜನಸಂಖ್ಯೆ ಹೆಚ್ಚಾಗಿರುವುದೇ ಕಾರಣ. ಅದ್ದರಿಂದ ಜನಸಂಖ್ಯೆ ನಿಯಂತ್ರಣ ಒಂದು ಉತ್ತಮ ಕಾರ್ಯವೆಂದರು.
ಕಾರ್ಯಕ್ರಮದಲ್ಲಿ ನಗರಸಭಾ ಸದಸ್ಯರಾದ ಬಿ.ಟಿ.ರಮೇಶ್‍ಗೌಡ, ವೈ.ಪ್ರಕಾಶ್, ಸುಮಭರಮಣ್ಣ, ಕವಿತಾಬೋರಯ್ಯ, ವಿರೂಪಾಕ್ಷಪ್ಪ, ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷೆ ತಿಪ್ಪಮ್ಮ, ಸದಸ್ಯೆ ರಂಜಿತಾ, ಆರೋಗ್ಯ ಇಲಾಖೆಯ ಎನ್.ಪ್ರೇಮಕುಮಾರ್, ಕುದಾಪುರ ತಿಪ್ಪೇಸ್ವಾಮಿ ಮುಂತಾದವರು ಪಾಲ್ಗೊಂಡಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








