ತಿಪಟೂರು
ನಾಲೆಯನ್ನು ಆಧುನೀಕರಣಗೊಳಿಸಿ ವಿಸ್ತರಿಸುತ್ತಿರುವುದರಿಂದ ನಮ್ಮ ಜಿಲ್ಲೆಗೆ ಸಲ್ಲಬೇಕಾದ ಸಂಪೂರ್ಣ 25.31 ಟಿ.ಎಂ.ಸಿ ನೀರನ್ನು ಬಳಸಿಕೊಳ್ಳಬಹುದು ಎಂದು ಕಾನೂನು ಮತ್ತು ಸಂಸದೀಯ, ಸಣ್ಣ ನೀರಾವರಿ ಮತ್ತು ಹಾಸನ ಮತ್ತು ತುಮಕೂರು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾದುಸ್ವಾಮಿ ತಿಳಿಸಿದರು.
ತಾಲ್ಲೂಕಿನ ಬೆಳಗರಹಳ್ಳಿ ಹತ್ತಿರ ಜಲ ಸಂಪನ್ಮೂಲ ಇಲಾಖೆ, ಕಾವೇರಿ ನೀರಾವರಿ ನಿಗಮ, ತುಮಕೂರು ವತಿಯಿಂದ ಹೇಮಾವತಿ ಯೋಜನೆಯ ವೈ ನಾಲೆ 15.727 ಕಿ.ಮೀ ಯಿಂದ 21.175 ಕಿ.ಮೀ ವರೆಗೆ ಹಾಗೂ ತುಮಕೂರು ಶಾಖಾ ನಾಲೆ 0.00 ಕಿ.ಮಿ ರಿಂದ 70 ಕಿ.ಮೀ ವರೆಗಿನ ನಾಲೆಯ ಆಧುನೀಕರಣದ 475 ಕೋಟಿ ರೂ. ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.
ಈ ನಾಲೆಯು ಪ್ರಾರಂಭವಾದಾಗಿನಿಂದ ನಮ್ಮ ಪಾಲಿನ 25.31 ಟಿ.ಎಂ.ಸಿ ನೀರನ್ನು ನಾವು ಬಳಸಿಕೊಳ್ಳಲು ಸಾಧ್ಯವೆ ಆಗಿಲ್ಲ. ಈಗಿರುವ ನಾಲೆಯಲ್ಲಿ ಪ್ರತಿದಿನ 6000 ದಿಂದ 8000 ಸಾವಿರ ಕ್ಯೂಸೆಕ್ಸ್ ನೀರು ಹರಿಸುವುದು ಹರಸಾಹಸವಾಗಿತ್ತು. ಈ ಬಾರಿ 19.5 ಟಿ.ಎಂ.ಸಿ ನೀರನ್ನು ಹರಿಸಿಕೊಂಡಿದ್ದು ನಮ್ಮ ಪಾಲಿನ ಉಳಿಕೆ ನೀರು 6 ಟಿ.ಎಂ.ಸಿಯನ್ನು ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆಯನ್ನು ಎದುರಿಸುವ ನಗರಗಳಿಗೆ ಬಳಸಿಕೊಳ್ಳುತ್ತೇವೆ ಎಂದ ಅವರು, ಕಾವೇರಿ ನೀರಾವಾರಿ ನಿಗಮದ ವ್ಯವಸ್ಥಾಪಕ ಜೈಪ್ರಕಾಶ್‍ರವರಿಗೆ ಕಾಮಗಾರಿಯನ್ನು ಇನ್ನೆರಡು ತಿಂಗಳಲ್ಲಿ ಮುಗಿಸಿಕೊಟ್ಟು ನೀರಿನ ಅರಿವಿಗೆ ಅನುಕೂಲ ಮಾಡಿಕೊಡಬೇಕೆಂದರು.
ನಮ್ಮ ಜನರಿಗೆ ಗೊತ್ತು, ನಾವು ನಾಲೆಯಲ್ಲಿ ನೀರು ಹರಿಸಿಕೊಳ್ಳುವ ಸಂದರ್ಭ ಬಂತೆಂದರೆ ಚನ್ನರಾಯಪಟ್ಟ ಣದಲ್ಲಿ ಚೆನ್ನಾಗಿರುವ ನಾಲೆಯೆ ಮುರಿದು ಬೀಳುತ್ತಿತ್ತು. ಅಧಿಕಾರಿಗಳನ್ನು ತಮ್ಮ ಹಿಡಿತದಲ್ಲಿಟ್ಟುಕೊಂಡ ಜೆಡಿಎಸ್‍ನ ರೇವಣ್ಣನವರು ಇಲ್ಲದ ಸುಳ್ಳು ಲೆಕ್ಕಗಳನ್ನು ತಯಾರಿಸಿ, ಸಂಪೂರ್ಣ ನೀರನ್ನು ಬಿಟ್ಟ್ಟಿದ್ದೇವೆಂದು ಹೇಳುತ್ತಿದ್ದರು. ಆದರೆ ಈ ಬಾರಿ ಆಗಸ್ಟ್‍ನಿಂದ ಜನವರಿ 7 ರವರೆಗೆ ನೀರು ಹರಿದರೂ, 19.5 ಟಿ.ಎಂ.ಸಿ ನೀರು ಮಾತ್ರ ಹರಿದಿದೆ ಎಂದರೆ, ಅದು ಹೇಗೆ ಅವರು ಸಂಪೂರ್ಣ ನೀರನ್ನು ಬಿಡಲು ಸಾಧ್ಯವಾಯಿತು ಎಂಬುದನ್ನು ನೀವೆ ತಿಳಿಯಬೇಕೆಂದರು.
ನಿರೂಪಕನನ್ನು ಗದರಿದ ಸಚಿವರು :
ವೇದಿಕೆ ಕಾರ್ಯಕ್ರಮ ಪ್ರಾರಂಭವಾಗಿ ನಿರೂಪಕರು ನಿರೂಪಣೆಯನ್ನು ಪ್ರಾರಂಭಿಸಿ ನಾಡಗೀತೆಯನ್ನು ಹೇಳುವ ಹೊತ್ತಿಗೆ ಯಾರ್ರೀ ಇವನ ಕೈಗೆ ಮೈಕ್ ಕೊಟ್ಟಿದ್ದು ಎಂದು ಗದರಿದರು
ಬಿ.ಎಸ್.ವೈ ಗೆ ಅಭಿನಂದನೆ :
ಕಾಮಗಾರಿಗೆ ಹಣವನ್ನು ಬಿಡುಗಡೆ ಮಾಡಲು ಸಹಕರಿಸಿದ ಮತ್ತು ಬಿಡುಗಡೆಯಾಗಲೆಬೇಕೆಂದು ಪಟ್ಟು ಹಿಡಿದು ನಮ್ಮ ಜಿಲ್ಲೆಗೆ ನೀರು ಬರಲು ಸಹಕರಿಸಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರಿಗೆ ಸಚಿವರು ಅಭಿನಂದನೆ ಸಲ್ಲಿಸಿದರು. ಕಳೆಪೆ ಕಾಮಗಾರಿ ಮಾಡಿದರೆ ರೈತರು ತಕ್ಷಣ ತಿಳಿಸಬೇಕು, ರೈತರು ನೀರನ್ನು ಮಿತವಾಗಿ ಬಳಸಿಕೊಳ್ಳಿ : ಜಿ.ಎಸ್.ಬಸವರಾಜು ಚುನಾವಣಾ ಸಂದರ್ಭದಲ್ಲಿ ಇಲ್ಲಿಗೆ ಬಂದ ದೇವೇಗೌಡರು ಹೊನ್ನವಳ್ಳಿ ಭಾಗಕ್ಕೆ ಸಾಕಷ್ಟು ನೀರನ್ನು ಬಿಡುತ್ತೇವೆ ಎಂದರು.
ಆದರೆ ಅದಕ್ಕೂ ಮೊದಲೆ ದೇವೇಗೌಡರ ಕುಟುಂಬದವರು ತುಮಕೂರಿಗೆ ಹೇಮಾವತಿ ನೀರನ್ನು ಬಿಡುವುದಿಲ್ಲವೆಂದು ಧರಣಿ ಮಾಡಿದ್ದರು. ಆದರೆ ಚುನಾವಣೆ ಬಂದ ತಕ್ಷಣ ನಾವು ನೀರನ್ನು ಬಿಡುತ್ತೇವೆ ಎನ್ನುವರು. ರೈತರು ಯಾರಿಗಾದರೂ ಮತವನ್ನು ಹಾಕಿ, ರೈತರಿಗೆ ಅನ್ಯಾಯವಾದಾಗ ಮಾತ್ರ ಎಲ್ಲರೂ ಒಟ್ಟಾಗಿ, ಅಲ್ಲಿ ಪಕ್ಷಭೇದ ಮಾಡಬೇಡಿ. ನಾನು ರಾಜಕಾರಣಿ, ನ್ಯಾಯವಾದಿ ಇರಬಹುದು. ಆದರೆ ನಾನು ಹುಟ್ಟು ರೈತ. ನೀರು ಇದೆ ಎಂದು ತೆಂಗಿನ ಮರದ ಬುಡಕ್ಕೆ ಮೊಳಕಾಲು ತನಕ ನೀರು ನಿಲ್ಲಿಸಿದರೆ ಫಲ ಹೆಚ್ಚಾಗಿ ಬಿಡುವುದಿಲ್ಲ. ನೀರು ಹೆಚ್ಚು ನಿಂತಷ್ಟು ಅಡಕೆ, ತೆಂಗು ಮತ್ತು ಇತರ ಬೆಳೆಗಳು ಇಳುವರಿ ಕಡಿಮೆಯಾಗುತ್ತವೆ. ನಮ್ಮ ಪೂರ್ವಜರು ಹಾಕಿದ ಬೆಳೆಯನ್ನು ಕಳೆಯಬೇಡಿ ಎಂದು ರೈತರಿಗೆ ಮನವಿ ಮಾಡಿದರು.
ಅಧ್ಯಕ್ಷತೆ ವಹಿಸಿದ್ದ ಶಾಸಕ ಬಿ.ಸಿ.ನಾಗೇಶ್, ನೀರು ಹೆಚ್ಚಾಗಿ ಹರಿಯುವುದರಿಂದ ಬೇಗೆ ಬೇಗ ಕೆರೆಗಳು ತುಂಬುತ್ತವೆ. ಕಿಬ್ಬನಹಳ್ಳಿ ಮತ್ತು ಅರಳಗುಪ್ಪೆ ಕೆರೆಗಳಿಗೆ ನೀರು ತುಂಬಿಸಲಾಗುವುದೆಂದು ತಿಳಿಸಿದ ಅವರು, ನಮ್ಮ ತಾಲ್ಲೂಕಿನಲ್ಲಿ 70 ಕಿ.ಮೀ ದೂರ ಸಾಗುವ ಎತ್ತಿನ ಹೊಳೆ ಯೋಜನೆಯಲ್ಲಿ ನೀರಿನ ಅಲಾಟ್‍ಮೆಂಟ್ ಆಗಿರಲಿಲ್ಲ.
ಆದರಿಂದಲೆ ನಾವು ಕಾಮಗಾರಿಯನ್ನು ಮಾಡಲು ಬಿಡಲಿಲ್ಲ. ಈಗ ಅಲಾಟ್‍ಮೆಂಟ್ ಆಗಿದೆ ಎಂದು ತಿಳಿಸಿದರು.
ಮೊನ್ನೆ ತಾನೆ ಎತ್ತಿನಹೊಳೆ ಕಾಮಗಾರಿಯ ಶಂಕುಸ್ಥಾಪನೆಗೆ ಜನಪ್ರತಿನಿಧಿಗಳನ್ನು ಕರೆದಿಲ್ಲ ಎಂದು ಕೆ.ಡಿ.ಪಿ. ಸಭೆಯಲ್ಲಿ ಗದ್ದಲವಾಗಿತ್ತು. ಆದರೆ ಈ ಕಾಮಗಾರಿಯ ಆಹ್ವಾನ ಪತ್ರಿಕೆಯಲ್ಲಿ ತಾ.ಪಂ ಅಧ್ಯಕ್ಷ, ಜಿ.ಪಂ ಸದಸ್ಯರುಗಳು, ಸಂಸದ ಡಿ.ಕೆ.ಸುರೇಶ್, ಹೇಮಾವತಿ ನಾಲೆಯು ಹೋಗುವ ಎಲ್ಲಾ ತಾಲ್ಲೂಕಿನ ಶಾಸಕರ ಹೆಸರಿದ್ದು ಯಾವುದೇ ಜನಪ್ರತಿನಿಧಿಗಳು ಭಾಗವಹಿಸದೆ ಇದ್ದುದು ಎಲ್ಲರಿಗೂ ಒಂದು ಪ್ರಶ್ನೆಯಾಗಿ ಉಳಿದಿತ್ತು. ಕಾರ್ಯಕ್ರಮದಲ್ಲಿ ತಾ.ಪಂ ಸದಸ್ಯೆ ಕಾವ್ಯ ಪ್ರಸನ್ನ, ಕಾವೇರಿ ನೀರಾವಾರಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಜೈಪ್ರಕಾಶ್, ಮತ್ತಿತರರ ಅಧಿಕಾರಿಗಳು ಹಾಜರಿದ್ದರು.