ಪಕ್ಷದ ಚಟುವಟಿಕೆಗಳ ಬಗ್ಗೆ ಮಾಹಿತಿ ಬಹಿರಂಗಪಡಿಸಲು ಸಾಧ್ಯವಿಲ್ಲ : ಡಿವಿಎಸ್

ಬೆಂಗಳೂರು

     ಪಕ್ಷದಲ್ಲಿ ದೆಹಲಿ ಮಟ್ಟದಲ್ಲಿ ನಡೆಯುತ್ತಿರುವ [ಆಪರೇಷನ್ ಕಮಲ] ಚಟುವಟಿಕೆಗಳ ಬಗ್ಗೆ ಮಾಹಿತಿ ಬಹಿರಂಗಪಡಿಸಲು ಸಾಧ್ಯವಿಲ್ಲ. ಮಾಹಿತಿ ಬಹಿರಂಗವಾದರೆ ನಮ್ಮ ಯೋಜನೆಗಳು ವಿಫಲವಾಗುತ್ತವೆ ಎಂದು ಬಿಜೆಪಿ ಹಿರಿಯ ಮುಖಂಡ ಹಾಗೂ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಡಿ.ವಿ. ಸದಾನಂದಗೌಡ ಇಂದಿಲ್ಲಿ ಹೇಳಿದ್ದಾರೆ.

      ಬೆಂಗಳೂರು – ತುಮಕೂರು ರಾಷ್ಟ್ರೀಯ ಹೆದ್ದಾರಿಯ ನಾಗಸಂದ್ರ ಬಳಿ 200 ಹಾಸಿಗೆಗಳ ಅತ್ಯಾಧುನಿಕ ಸೂಪರ್ ಸ್ಪೆಷಾಲಿಟಿ “ ಪ್ರಕ್ರಿಯಾ” ಆಸ್ಪತ್ರೆ ಉದ್ಘಾಟಿಸಿದ ನಂತರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಸರ್ಕಾರ ರಚನೆಗೆ ಪ್ರಯತ್ನಗಳು ನಡೆಯುತ್ತಿರುವುದನ್ನು ಅವರು ಸೂಚ್ಯವಾಗಿ ಬಹಿರಂಗಪಡಿಸಿದರು. ಅಲ್ಲದೇ ಮಾಧ್ಯಮಗಳಿಗೆ ಸಧ್ಯಕ್ಕೆ ಬ್ರೇಕಿಂಗ್ ನ್ಯೂಸ್ ನೀಡುವುದಿಲ್ಲ. ಕಾಲ ಬಂದಾಗ ನಿಮಗೆ ಎಲ್ಲವೂ ತಿಳಿಯಲಿದೆ ಎಂದು ಪ್ರತಿಕ್ರಿಯೆ ನೀಡಿದರು.

     ಕಾಂಗ್ರೆಸ್ ಮತ್ತು ಜೆಡಿಎಸ್ ಪಾಳೆಯದಲ್ಲಿ ಎಲ್ಲವೂ ಸರಿಯಿಲ್ಲ. ಇವರ ಒಳಜಗಳದಿಂದ ಸರ್ಕಾರ ಪತನವಾದರೆ ನಾವು ಹೊಸ ಸರ್ಕಾರ ರಚನೆಗೆ ಸಿದ್ಧವಾಗಿದ್ದೇವೆ. ಹೀಗಾಗಿ ನಮ್ಮ ಶಾಸಕರು ರೆಸಾರ್ಟ್ ನಲ್ಲಿ ಉಳಿದಿಕೊಂಡಿದ್ದಾರೆ. ಅಗತ್ಯ ಬಂದಾಗ ನಾವು ಅವರನ್ನು ಕರೆಸಿಕೊಳ್ಳುತ್ತೇವೆ ಎಂದರು.

       ಮಾಧ್ಯಮದವರು ಏನು? ಹೇಗೆ?. ಏನು ಎನ್ನುವುದು ನಮಗೆ ಚೆನ್ನಾಗಿ ಗೊತ್ತಿದೆ. ಎಂಟು ಎಂಟು ಸೇರಿದಂತೆ 18 ಎಂದು ವರದಿ ಮಾಡುತ್ತಾರೆ. ನಾವೇನು ಆಪರೇಷನ್ ಕಮಲ ಮಾಡುತ್ತಿಲ್ಲ. ಇಷ್ಟಕ್ಕೂ ನಮಗೇನು ಕಾಯಿಲೆಯಿಲ್ಲ, ಆದರೆ ಆಪರೇಷನ್ ಬೇಕಾಗಿರುವುದು ಮೈತ್ರಿ ಸರ್ಕಾರಕ್ಕೆ. ಮೈತ್ರಿ ಸರ್ಕಾರ ರಚನೆಯಾದಾಗಿನಿಂದಲೂ ಗೊಂದಲದ ಗೂಡಾಗಿ, ಅನಾರೋಗ್ಯದಿಂದ ಬಳಲುತ್ತಿದೆ. ಹೀಗಾಗಿ ಆಪರೇಷನ್ ಬೇಕಾಗಿದೆ ಎಂದು ಸದಾನಂದಗೌಡ ತಿರುಗೇಟು ನೀಡಿದರು.

         ವಾಮಮಾರ್ಗದಲ್ಲಿ ಸರ್ಕಾರವನ್ನು ಉರುಳಿಸಿ ಅಧಿಕಾರಕ್ಕೆ ಬರುವ ಕೆಟ್ಟ ಆಲೋಚನೆಯನ್ನು ಬಿಜೆಪಿ ಮಾಡಿಲ್ಲ, ಮಾಡುವುದೂ ಇಲ್ಲ. ಕಾಂಗ್ರೆಸ್ ಮತ್ತು ಜೆಡಿಎಸ್ ನ ಆಂತರಿಕ ಭಿನ್ನಾಭಿಪ್ರಾಯಗಳಿಂದ ಸರ್ಕಾರ ಬಿದ್ದು ಹೋದರೆ ಬದಲಿ ಸರ್ಕಾರ ರಚನೆಗೆ ನಾವು ಸಿದ್ಧರಿದ್ದೇವೆ. ಇದಕ್ಕಾಗಿ ನಮ್ಮ ಶಾಸಕರನ್ನು ಬೇರೆಯವರನ್ನು ಸೆಳೆಯಬಾರದು ಎಂಬ ಉದ್ದೇಶದಿಂದ ಜೋಪಾನ ಮಾಡಿಕೊಂಡಿದ್ದೇವೆ ಎಂದರು.

         ರಾಜ್ಯದಲ್ಲಿ ಅಧಿಕಾರ ಮಾಡುತ್ತಿರುವ ಕಾಂಗ್ರೆಸ್ -ಜೆಡಿಎಸ್ ಏನನ್ನೂ ಮಾಡಲು ಹೇಸುವುದಿಲ್ಲ. ಅವರ ಮನೆ ಮಕ್ಕಳನ್ನೇ ಸರಿಯಾಗಿ ಇಟ್ಟುಕೊಳ್ಳಲು ಯೋಗ್ಯತೆಯಿಲ್ಲದವರು ನಮಗೆ ಬುದ್ಧಿ ಹೇಳುವ ಅಗತ್ಯವಿಲ್ಲ. ಅವರ ಮನೆಯವರನ್ನು ಅವರೇ ಸರಿಯಾಗಿ ನೋಡಿಕೊಳ್ಳಬೇಕು. ತಮ್ಮ ಸ್ವಾರ್ಥ ರಾಜಕಾರಣದಿಂದ ಅವರ ಶಾಸಕರಿಗೆ ಅವರೇ ಅಪಮಾನ ಮಾಡುತ್ತಿದ್ದಾರೆ. ಶಾಸಕರಿಗೆ ಸೂಕ್ತ ಸವಲತ್ತುಗಳನ್ನು ನೀಡಿದ್ದರೆ ಇಂತಹ ಪರಿಸ್ಥಿತಿ ನಿರ್ಮಾಣವಾಗುತ್ತಿರಲಿಲ್ಲ ಎಂದು ಕುಟುಕಿದರು.

          ಮೈತ್ರಿ ಪಕ್ಷಗಳ ಶಾಸಕರನ್ನು ನಮ್ಮ ಜೊತೆ ಬರಲು ಅವರು ಏಕೆ ಬಿಡಬೇಕು. ಮೈತ್ರಿ ಕೂಟದಲ್ಲಿ ದೋಸ್ತಿಯೇ ಇಲ್ಲ. ಪರಸ್ಪರ ಅಪನಂಬಿಕೆ ಹೆಚ್ಚಾಗುತ್ತಲೇ ಇದೆ. ಅವರು ದಿನೇ ದಿನೇ ದೋಸ್ತಿಗಿಂತ ವೈರಿಗಳಾಗುತ್ತಿದ್ದಾರೆ ಎಂದು ಸದಾನಂದಗೌಡ ತರಾಟೆಗೆ ತೆಗೆದುಕೊಂಡರು.

          ಇದಕ್ಕೂಮುನ್ನ ದೇಶ – ವಿದೇಶಗಳ 200 ಹೆಚ್ಚು ವರ್ಷಗಳ ವೈದ್ಯಕೀಯ ಬೆಳವಣಿಗೆಗಳನ್ನು ಬಲ್ಲ, ಅಪಾರ ಅನುಭವ ಹೊಂದಿರುವ ನುರಿತ, ತಜ್ಞ ವೈದ್ಯರ ಸಮೂಹವನ್ನೊಳಗೊಂಡ “ ಪ್ರಕ್ರಿಯಾ” ಆಸ್ಪತ್ರೆ ಲೋಕಾರ್ಪಣೆ ಸಮಾರಂಭದಲ್ಲಿ ಮಾತನಾಡಿದ ಸಚಿವ ಡಿ.ವಿ. ಸದಾನಂದಗೌಡ, ನಿನ್ನೆ ತಡ ರಾತ್ರಿ ಬೆಂಗಳೂರಿಗೆ ಬಂದೆ. ದೆಹಲಿಯಲ್ಲಿ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳಿಂದ ತಾವು ಬರುವುದು ತಡವಾಯಿತು. ಏನು ನಡೆಯುತ್ತಿದೆ ಎಂಬುದು ತಮಗೆ ತಿಳಿದಿದೆ ಎಂದರು.

          ಕೇಂದ್ರ ಸರ್ಕಾರ ಆಯುಷ್ಮಾನ್ ಭಾರತ್ ಯೋಜನೆ ಅತ್ಯಂತ ಯಶಸ್ವಿಯಾಗಿ ನಡೆಯುತ್ತಿದೆ. ಈವರೆಗೆ 7.15 ಲಕ್ಷಕ್ಕೂ ಹೆಚ್ಚು ಜನ ಈ ಯೋಜನೆಯಡಿ ಸೌಲಭ್ಯ ಪಡೆದಿದ್ದಾರೆ. ಬಡ ಕುಟುಂಬದವರಿಗೆ ಅಂಚೆ ಇಲಾಖೆಯ ಮೂಲಕ ಆಯುಷ್ಮಾನ್ ಭಾರತ್ ಗೋಲ್ಡ್ ಕಾರ್ಡ್ ವಿತರಣೆ ಮಾಡಲಾಗುತ್ತಿದೆ ಎಂದರು.

           ಇತ್ತೀಚಿನ ಅಧ್ಯಯನದ ಪ್ರಕಾರ ಜನತೆ ತಮ್ಮ ಗಳಿಕೆಯ ಶೇ 16 ರಷ್ಟು ಹಣವನ್ನು ಆರೋಗ್ಯ ರಕ್ಷಣೆಗೆ ಬಳಕೆ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ಬಡತನ ರೇಖೆಗಿಂತ ಮೇಲಿರುವವರು ವೈದ್ಯಕೀಯ ಚಿಕಿತ್ಸೆ ಪಡೆದ ನಂತರ ಶೇ 12 ರಷ್ಟು ಮಂದಿ ಮತ್ತೆ ಬಿಪಿಎಲ್ ವ್ಯಾಪ್ತಿಗೆ ವಾಪಸ್ ಸೇರ್ಪಡೆಯಾಗುತ್ತಿದ್ದಾರೆ.

          ಇಂತಹ ಪರಿಸ್ಥಿತಿಯಲ್ಲಿ 50 ಕೋಟಿ ಕುಟುಂಬಗಳಿಗೆ ಅನುಕೂಲವಾಗುವ ಕೇಂದ್ರ ಸರ್ಕಾರದ ಆಯುಷ್ಮಾನ್ ಭಾರತ್, ಬಡಜನರ ಆರೋಗ್ಯ ರಕ್ಷಣೆಗೆ ಸಹಕಾರಿಯಾಗಿದೆ. ಬಡವರಿಗೆ ಜನರಿಕ್ ಔಷಧಿಗಳನ್ನು ಪೂರೈಕೆ ಮಾಡುವ ಜನರಿಕ್ ಔಷಧಿ ಮಳಿಗೆಗಳಿಂದ ಜನರಿಗೆ ಆರ್ಥಿಕ ಹೊರೆ ಕಡಿಮೆಯಾಗುತ್ತಿದೆ. ಅತಿ ಹೆಚ್ಚು ದುಬಾರಿ ಎಂದರೆ ಅದು ವೈದ್ಯಕೀಯ ಕ್ಷೇತ್ರವಾಗಿದೆ. ಪ್ರಕ್ರಿಯಾ ದಂತಹ ಆಸ್ಪತ್ರೆಗಳು ಸಹ ಆಯುಷ್ಮಾನ್ ಭಾರತ್ ಯೋಜನೆಗೆ ಸೇರ್ಪಡೆಯಾದರೆ ಆರೋಗ್ಯ ಸೇವೆಯನ್ನು ಇನ್ನಷ್ಟು ಪರಿಣಾಮಕಾರಿಯಾಗಿ ನೀಡಬಹುದು ಎಂದು ಸದಾನಂದಗೌಡ ಕರೆ ನೀಡಿದರು.

          ಹೆಚ್ಚಿನ ಆರ್ಥಿಕ ಹೊರೆ ಇಲ್ಲದೇ ಎಲ್ಲಾ ವರ್ಗದ ಬಡವರಿಗೆ ಚಿಕಿತ್ಸೆ ನೀಡುವ ಉದ್ದೇಶ ಹೊಂದಿರುವ ಪ್ರಕ್ರಿಯಾ ಆಸ್ಪತ್ರೆಯಲ್ಲಿ ವೈದ್ಯರೇ ಇಲ್ಲಿ ಮಾಲೀಕರು ಎಂದು ಕೇಳಿ ಸಂತಸವಾಯಿತು. ಆರೋಗ್ಯ ರಕ್ಷಣೆಯೇ ಈ ಆಸ್ಪತ್ರೆಯ ದ್ಯೇಯೋದ್ದೇಶವಾಗಿದೆ. ಸಾಮಾನ್ಯ ಜನರಿಗೆ ಆರ್ಥಿಕವಾಗಿ ಹೊರೆ ಮಾಡದೇ ಜೀವ ರಕ್ಷಣೆಯ ಮೂಲ ಧ್ಯೇಯದೊಂದಿಗೆ ಈ ಆಸ್ಪತ್ರೆ ಕಾರ್ಯನಿರ್ವಹಿಸುತ್ತಿರುವುದು ಶ್ಲಾಘನೀಯ ಎಂದರು. ಗೋಲ್ಡನ್ ಸ್ಟಾರ್ ಗಣೇಶ್, ಆಸ್ಪತ್ರೆಯ ವೈದ್ಯರು ಮತ್ತಿತರರು ಪಾಲ್ಗೊಂಡಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap