ಚಿತ್ರದುರ್ಗ
ಸಮಾಜದಲ್ಲಿ ಸಾಕಷ್ಟು ಹಣವಂತರು, ಉದ್ಯಮಿಗಳು, ಅಧಿಕಾರಿಗಳು ಇದ್ದಾರೆ. ಆದರೆ ಅವರೆಲ್ಲರಿಗೂ ಸಮಾಜವನ್ನು ಸರಿ ದಾರಿಗೆ ತರುವ ಆಸಕ್ತಿಯಿಲ್ಲ ಎಂದು ಕಾರ್ಮಿಕ ಇಲಾಖೆಯ ಸಹಾಯಕ ಆಯುಕ್ತ ಕೆ.ಬಿ.ನಾಗರಾಜ್ ಅಭಿಪ್ರಾಯ ಪಟ್ಟರು
ಇಲ್ಲಿನ ಎಸ್.ಆರ್.ಎಸ್. ಪ್ರಥಮ ದರ್ಜೆ ಕಾಲೇಜುನಲ್ಲಿ ಆಯೋಜಿಸಿದ್ದ ಭಾರತೀಯ ನಾಗರೀಕ ಸೇವೆಗಳ ಪರೀಕ್ಷೆ ಮತ್ತು ಅದರ ತರಬೇತಿಗಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ನಮ್ಮ ಜಿಲ್ಲೆಯ ಜನಸಮೂಹದಿಂದ ಬಿ.ಎ. ಲಿಂಗಾರೆಡ್ಡಿಯವರು ಅಭಿನಂದನಾರ್ಹರು. ಯಶಸ್ವಿ ಜೀವನ ಮುಖ್ಯ ದ್ವಾರದಿಂದ ಹೋದರೆ ಮಾತ್ರ ಸಾಧ್ಯ. ಅದು ಯಾವುದೇ ರಹದಾರಿಗಳಿಂದ ಸಿದ್ದಿಸುವುದಿಲ್ಲ. ಖಡ್ಗ ತನ್ನ ಮೊನಚಿಯಿಂದ ಹೆಸರು ಗಳಿಸಿದರೆ, ಬಟ್ಟೆ ತನ್ನ ದಾರದ ಗುಣದಿಂದ ಪ್ರಸಿದ್ದಿಯಾಗುತ್ತದೆ. ಮನುಷ್ಯ ತನ್ನ ಶಿಸ್ತು ಮತ್ತು ಪರಿಶ್ರಮದಿಂದ ಪ್ರಸಿದ್ಧನಾಗುತ್ತಾನೆ. ಹಣವಂತರಿಗೆ ಒಂದಿಷ್ಟು ಸಾಮಾಜಿಕ ಕಾಳಜಿ ಇರಬೇಕಾಗಿದೆ ಎಂದು ಹೇಳಿದರು
ಇಂಗ್ಲಿಷ್ ಭಾಷೆ ಒಂದು ಸಮೂಹ ಮಾಧ್ಯಮವೇ ಹೊರೆತು ನಮ್ಮ ಜ್ಞಾನವನ್ನು ಹೊರತೆಗೆಯುವ ಸಾಧನವಲ್ಲ. ಆದ್ದರಿಂದ ಇಂಗ್ಲೀಷ್ ಭಾಷೆಯ ಭೂತದಿಂದ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಬಿಡಿಸಿಕೊಳ್ಳಬೇಕಿದೆ. ಶಿಕ್ಷಕರು ಮತ್ತು ಶಿಕ್ಷಣ ಸಂಸ್ಥೆ ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರೇ ಹೊರೆತು ಅವರೇ ಎಲ್ಲವನ್ನು ರೂಪಿಸಲಾರರು. ಆದ್ದರಿಂದ ವಿದ್ಯಾರ್ಥಿಗಳು ಶ್ರದ್ಧೆ ಮತ್ತು ಪರಿಶ್ರಮದಿಂದ ಅಭ್ಯಾಸವನ್ನು ಕೈಗೊಳ್ಳಬೇಕು ಎಂದು ಅವರು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
ಐ.ಎಫ್.ಎಸ್. ಅಧಿಕಾರಿ ಡಾ. ಡಿ. ಮಂಜುನಾಥ್, ಮಾತನಾಡುತ್ತಾ ವಿದ್ಯಾರ್ಥಿಗಳು ಭಾರತೀಯ ನಾಗರೀಕ ಸೇವೆಯನ್ನು ಎದುರಿಸುವ ಬಗೆಯನ್ನು ಹಂತ ಹಂತವಾಗಿ ವಿವರಿಸುತ್ತಾ ತಾವು ಹುಟ್ಟಿ ಬೆಳೆದ ಚಿತ್ರದುರ್ಗದ ಪರಿಸರ ಇಲ್ಲಿಯ ಶ್ರೀ ಕೃಷ್ಣರಾಜೇಂದ್ರ ಕೇಂದ್ರೀಯ ಗ್ರಂಥಾಲಯ ಅವರ ಮೇಲೆ ಬೀರಿದ ಪ್ರಭಾವ ತನ್ನ ತಂದೆ-ತಾಯಿಯರ ಪರಿಶ್ರಮ ಇವೆಲ್ಲಾವುಗಳನ್ನು ಅವರು ನೆನಪು ಮಾಡಿಕೊಂಡರು
ಗ್ರಾಮೀಣ ಭಾಗದ ಹಿನ್ನಲೆಯಿಂದ ಬಂದ ನನ್ನಂತಹವರು ಇಂತಹ ಪರೀಕ್ಷೆಗಳಲ್ಲಿ ಉತ್ತಮ ಸಾಧನೆಯನ್ನು ಮಾಡಲು ಇಲ್ಲಿಯ ಬರ ಮತ್ತು ಶಿಕ್ಷಣದ ಪ್ರಭಾವ ಕಾರಣವಾಯಿತು. ಈ ಕಾರ್ಯಕ್ರಮದ ಮೂಲಕ ಸಂಸ್ಥೆಯ ಅಧ್ಯಕ್ಷರಾದ ಬಿ.ಎ. ಲಿಂಗಾರೆಡ್ಡಿಯವರು ವಿದ್ಯಾರ್ಥಿಗಳ ಜೀವನದ ಯಶಸ್ಸಿಗೆ ಒಂದು ಬುನಾದಿಯನ್ನು ನಿರ್ಮಿಸುತ್ತಿದ್ದಾರೆ. ಇದೊಂದು ಬೃಹದಾಕಾರವಾಗಿ ಬೆಳೆದು ಸಾಕಷ್ಟು ವಿದ್ಯಾರ್ಥಿಗಳ ಜೀವನಕ್ಕೆ ಬೆಳಕಾಗಲಿ ಎಂದು ಆಶಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಸಂಸ್ಥೆಯ ಅಧ್ಯಕ್ಷರಾದ ಬಿ.ಎ. ಲಿಂಗಾರೆಡ್ಡಿ ಮಾತನಾಡಿ ಐ.ಎಫ್.ಎಸ್. ಐ.ಎ.ಎಸ್. ಕೆ.ಎ.ಎಸ್. ಇಂತಹ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ನಮ್ಮ ಸಂಸ್ಥೆಯ ವಿದ್ಯಾರ್ಥಿಗಳು ಉತ್ತೀರ್ಣರಾಗಿ ಸಂಸ್ಥೆಗೆ ಮತ್ತು ಜಿಲ್ಲೆಗೆ ಉತ್ತಮ ಹೆಸರು ತರಬೇಕು. ಪ್ರತಿಭೆ ಇರುವ ವಿದ್ಯಾರ್ಥಿಗಳಿಗೆ ಯಾವುದೇ ರೀತಿಯ ಸಹಕಾರವನ್ನು ನೀಡಲು ಸಂಸ್ಥೆ ಕಟಿಬದ್ಧವಾಗಿದೆ ಎಂದರು
ಒಂದು ವರ್ಷಕ್ಕೆ 200 ರಿಂದ 250 ವಿದ್ಯಾರ್ಥಿಗಳು ತೇರ್ಗಡೆ ಹೊಂದುತ್ತಿದ್ದು,
ಪದವಿ ಕಾಲೇಜು ಪ್ರಾರಂಭವಾಗಿ 12 ವರ್ಷ ಕಳೆದರೂ ಒಬ್ಬ ಐ.ಎ.ಎಸ್. ಅಧಿಕಾರಿಯನ್ನು ಕೂಡ ಸೃಷ್ಟಿಸಲು ನಮ್ಮ ಸಂಸ್ಥೆಗೆ ಸಾಧ್ಯವಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ವಿದ್ಯಾರ್ಥಿಗಳು ಈ ಕಾರ್ಯಕ್ರಮದ ಮೂಲಕ ಪ್ರೇರಣೆ ಹೊಂದಿ ಇನ್ನು ಮುಂದೆ ಆದರೂ ಭಾರತೀಯ ನಾಗರೀಕ ಸೇವೆಗಳ ಪರೀಕ್ಷೆಯಲ್ಲಿ ಹೆಚ್ಚು ಉತ್ಸುಕರಾಗಿ ಪಾಲ್ಗೊಳ್ಳಬೇಕೆಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಶ್ರೀಮತಿ ಸುನೀತಾ ಬಿ.ಕೆ. ಪ್ರಾರ್ಥಿಸಿದರು. ಪ್ರಾಂಶುಪಾಲರಾದ ಶ್ರೀಯುತ ಟಿ.ಆರ್. ಗುರುಪ್ರಸಾದ್ ಸ್ವಾಗತಿಸಿದರು.
ಉಪನ್ಯಾಸಕರಾದ ನಟರಾಜ್ ಡಿ.ಹೆಚ್. ನಿರೂಪಿಸಿ ವಂದಿಸಿದರು. ಯಶೋಧರ್ ಜಿ.ಎನ್. ಮನೋಹರ್ ಬಿ. ಶ್ರೀಕಾಂತ್ ಟಿ.ಎನ್. ಕಲ್ಲಿನಾಥ್, ಸತೀಶ್ ಎಂ. ಶ್ರೀಮತಿ ನಾಗವೇಣಿ, ಸಾಧನ ಎ.ಜಿ. ಅರ್ಚನಾ ಎಂ. ಇವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ