ದಾವಣಗೆರೆ:
ಪ್ರಧಾನಿ ನರೇಂದ್ರ ಮೋದಿ ಅವರ ಹೆಸರಿನಲ್ಲಿ ದಾವಣಗೆರೆ ಬಿಜೆಪಿ ಅಭ್ಯರ್ಥಿ ಜಿ.ಎಂ.ಸಿದ್ದೇಶ್ವರ್ ಅವರ ಪರ ಮತ ಕೇಳಲು ನಮಗೆ ಯಾವುದೇ ಮುಜುಗರವಿಲ್ಲ. ಏಕೆಂದರೆ, ಮೋದಿಯವರು ಮುಜುಗರ ತರುವಂತಹ ಯಾವುದೇ ಕೆಲಸ ಮಾಡಿಲ್ಲ ಎಂದು ಬಿಜೆಪಿ ಮಹಿಳಾ ಮೋರ್ಚಾದ ಪ್ರಧಾನ ಕಾರ್ಯದರ್ಶಿ, ಚಿತ್ರನಟಿ ಶೃತಿ ಕಾಂಗ್ರೆಸ್‍ಗೆ ತಿರುಗೇಟು ನೀಡಿದ್ದಾರೆ.
ಶನಿವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗಲೆಂದು ಬಿಜೆಪಿಗೆ ಮತ ಹಾಕಿ ಎಂಬುದಾಗಿ ಮತ ಯಾಚಿಸುವುದರಲ್ಲಿ ತಪ್ಪೇನಿದೆ? ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಸತತ 3 ಅವಧಿಗೆ ಸಂಸದರಾದ ಜಿ.ಎಂ.ಸಿದ್ದೇಶ್ವರ ಪರ ಅಲೆ ಇದೆ.
ಆದರೆ, ಕಾಂಗ್ರೆಸ್-ಜೆಡಿಎಸ್ ಪಕ್ಷದ ಮೈತ್ರಿ ಅಭ್ಯರ್ಥಿಯನ್ನು ಇಲ್ಲಿ ಹರಕೆ ಕುರಿಯನ್ನಾಗಿ ಮಾಡಲು ಹೊರಟ್ಟಿದ್ದು, ಕಳೆದ ಬಾರಿಗಿಂತಲೂ ಈ ಬಾರಿ ಅತ್ಯಧಿಕ ಮತಗಳ ಅಂತರದಿಂದ ಸಿದ್ದೇಶ್ವರ್ ಅವರು ಗೆಲುವು ಸಾಧಿಸಲಿದ್ದಾರೆ ಎಂದರು.
ಕಳೆದ ಚುನಾವಣೆ ವೇಳೆ ಮೋದಿ ಹೆಸರಿನ ಪರಿಚಯ ಮಾತ್ರ ಇತ್ತು. ಈ ಬಾರಿ ಮೋದಿ ಸರ್ಕಾರದ ಅಭಿವೃದ್ಧಿ ಕಾರ್ಯ, ಸಾಧನೆಗಳೂ ಜೊತೆಗಿವೆ. ನಮ್ಮ ಕಾರ್ಯಕರ್ತರಷ್ಟೇ ಅಲ್ಲ, ಮತದಾರರೂ ಮೋದಿಗೆ ಮತ್ತೆ ಪ್ರಧಾನಿ ಮಾಡಲು ಉತ್ಸುಕರಾಗಿದ್ದಾರೆ. ಅಂತಹ ವಾತಾವರಣ ಕರ್ನಾಟಕ ಸೇರಿದಂತೆ ದೇಶದೆಲ್ಲೆಡೆಯೂ ಕಂಡು ಬರುತ್ತಿದೆ. ರಾಜ್ಯದಲ್ಲಿ ಕಳೆದ ಬಾರಿಗಿಂತಲೂ ಹೆಚ್ಚು ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲಲಿದೆಯೆಂಬ ಸಂದೇಶವನ್ನು ಜನರೇ ನೀಡಿದ್ದಾರೆ ಎಂದರು.
ಮಧ್ಯ ಕರ್ನಾಟಕದಲ್ಲಿ ಜಿ.ಎಂ.ಸಿದ್ದೇಶ್ವರ ಹೆಮ್ಮೆ ತರುವಂತಹ ಕೆಲಸ ಮಾಡಿದ್ದಾರೆ. ಸಿದ್ದೇಶ್ವರ ಬಗ್ಗೆ ಕ್ಷೇತ್ರದ ಮತದಾರರೂ ಹೆಮ್ಮೆಯಿಂದ ಮಾತನಾಡುತ್ತಾರೆ. ಇದಕ್ಕೆ ನಮ್ಮ ಅಭ್ಯರ್ಥಿ, ಸಂಸದರ ಮೇಲೆ ಜನರು ಇಟ್ಟಿರುವ ನಂಬಿಕೆ. ಅದನ್ನು ಉಳಿಸಿಕೊಳ್ಳುವ ಕೆಲಸ ಸಿದ್ದೇಶ್ವರ ಕಳೆದ ಒಂದೂವರೆ ದಶಕದಿಂದಲೂ ಮಾಡಿಕೊಂಡೇ ಬರುತ್ತಿದ್ದಾರೆ.
ಮೋದಿ ಸಾಧನೆಗೆ ರಾಜ್ಯದ ಎಲ್ಲಾ ಬಿಜೆಪಿ ಸಂಸದರೂ ಕಾರಣವಾಗಿದ್ದು, ಸಿದ್ದೇಶ್ವರ ಅವರನ್ನು ಕಳೆದ ಬಾರಿಗಿಂತಲೂ ಹೆಚ್ಚು ಮತಗಳ ಅಂತರದಿಂದ ಗೆಲ್ಲಿಸಬೇಕೆಂದು ಮನವಿ ಮಾಡಿದರು.
ಮತದಾನ ಪ್ರಮಾಣ ಹೆಚ್ಚಿಸಲು ಚುನಾವಣಾ ಆಯೋಗ ಸಾಕಷ್ಟು ಪ್ರಚಾರ ಮಾಡುತ್ತಿದೆ. ನಾವೂ ಮತದಾನ ಪ್ರಮಾಣ ಹೆಚ್ಚಾಗಬೇಕೆಂಬ ಕಾರಣಕ್ಕೆ ಮನೆ ಮನೆಗೆ ತೆರಳಿ ಅರಿವು ಮೂಡಿಸುತ್ತಿದ್ದೇವೆ. ಆದರೆ, ರಾಜ್ಯದ ರಾಜಧಾನಿ ಬೆಂಗಳೂರಿನ ವಿವಿಧ ಕ್ಷೇತ್ರಗಳಲ್ಲಿ ಮತದಾನ ಪ್ರಮಾಣ ನೋಡಿದರೆ ಬೇಸರವಾಗುತ್ತದೆ. ವಿದ್ಯಾವಂತರು, ಬುದ್ಧಿವಂತರು, ವಿಚಾರವಂತರೇ ಮತದಾನ ಮಾಡುವಲ್ಲಿ ನಿರಾಸಕ್ತಿ ತೋರುತ್ತಿರುವುದು ನಿಜಕ್ಕೂ ಬೇಸರ ತಂದಿದೆ ಎಂದರು.
ರಾಜ್ಯದಲ್ಲಿ ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬಂದಾಗಿನಿಂದಲೂ ಅಭಿವೃದ್ಧಿ ಕಾರ್ಯಗಳು ಕುಂಠಿತವಾಗಿದ್ದು, ಎಚ್.ಡಿ.ಕುಮಾರಸ್ವಾಮಿ ತಾವು ಇಡೀ ರಾಜ್ಯಕ್ಕೆ ಮುಖ್ಯಮಂತ್ರಿ ಎಂಬುದನ್ನೇ ಮರೆತು, ಮಂಡ್ಯ ಕ್ಷೇತ್ರದಲ್ಲಿ ಒಬ್ಬ ತಂದೆಯಾಗಿ ಅಷ್ಟೇ ಕೆಲಸ ಮಾಡುತ್ತಿದ್ದಾರೆಂದು ಆರೋಪಿಸಿದರು.
ಮಂಡ್ಯ ಕ್ಷೇತ್ರದಲ್ಲಿ ಒಬ್ಬ ತಂದೆಯಾಗಿ ಕುಮಾರಸ್ವಾಮಿ ಕೆಲಸ ಮಾಡಿದರೇ ಹೊರತು, ಒಬ್ಬ ಮುಖ್ಯಮಂತ್ರಿಯಾಗಿ ರಾಜ್ಯದ ಅಭಿವೃದ್ಧಿ ಬಗ್ಗೆ ಕೆಲಸ ಮಾಡಲಿಲ್ಲ. ಇನ್ನು ಕಾಂಗ್ರೆಸ್-ಜೆಡಿಎಸ್ ಪಕ್ಷಗಳ ನಾಯಕರು ಹೆಸರಿಗಷ್ಟೇ ಹೊಂದಾಣಿಕೆ ಮಾಡಿಕೊಂಡಿದ್ದಾರೆ. ಇದರಿಂದ ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳಂಗೂ ಆಗುತ್ತಿಲ್ಲ ಎಂದು ಅವರು ದೂರಿದರು.
ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತರಾಮನ್ ಕುರಿತಂತೆ ಮಾಜಿ ಸಚಿವ ಎಚ್.ಆಂಜನೇಯ ಟೀಕೆಯು ಕಾಂಗ್ರೆಸ್ ಪಕ್ಷದ ಸಂಸ್ಕತಿಯನ್ನು ತೋರಿಸುತ್ತದೆ. ನರೇಂದ್ರ ಮೋದಿ ಸರ್ಕಾರದಲ್ಲಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್, ರಕ್ಷಣಾ ಸಚಿವ ನಿರ್ಮಲಾ ಸೀತಾಮನ್ ಬದ್ಧತೆ, ಕಾರ್ಯವನ್ನು ಭಾರತವಷ್ಟೇ ಅಲ್ಲ, ಇಡೀ ವಿಶ್ವವೇ ಮೆಚ್ಚಿದೆ. ಆದರೆ, ಕಾಂಗ್ರೆಸ್ಸಿಗರಿಗೆ ಅದನ್ನು ಸಹಿಸಿಕೊಳ್ಳುವ ಮನಸ್ಥಿತಿ ಇಲ್ಲ ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ಎಚ್.ಸಿ.ಜಯಮ್ಮ, ಗಾಯತ್ರಿ ಸಿದ್ದೇಶ್ವರ, ಕಮಲಾ ಮುರುಗೇಶ ನಿರಾಣಿ, ಜಿಪಂ ಮಾಜಿ ಅಧ್ಯಕ್ಷೆ ಜಯಲಕ್ಷ್ಮಿ ಮಹೇಶ್, ಚೇತು ಬಾಯಿ ಶಿವಕುಮಾರ, ಶಾಂತಾ ದೊರೈ, ಭಾಗ್ಯ ಪಿಸಾಳೆ, ದೇವೀರಮ್ಮ, ಪುಷ್ಪಾ ವಾಲಿ, ಸಲೀನಾ ಮತ್ತಿತರರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ









