ಬೆಂಗಳೂರು
ಜಿಂದಾಲ್ ಕಂಪೆನಿಗೆ ಸರ್ಕಾರದಿಂದ ಭೂಮಿ ಕ್ರಯ ವಿಚಾರ ಸಂಬಂಧ ರಚನೆಯಾಗಲಿರುವ ಸಂಪುಟ ಉಪ ಸಮಿತಿ ಸರ್ಕಾರದ ಪರವಾಗಿಯೇ ವರದಿ ನೀಡುತ್ತದೆ. ಆದ್ದರಿಂದ ಈ ಸಮಿತಿ ಬಗ್ಗೆ ನಂಬಿಕೆ ಇಲ್ಲ ಎಂದು ಬಿಜೆಪಿ ಹಿರಿಯ ನಾಯಕ ಆರ್.ಅಶೋಕ್ ಹೇಳಿದ್ದಾರೆ.
ವಿಧಾನಸೌಧದಲ್ಲಿಂದು ಸಾರ್ವಜನಿಕ ಲೆಕ್ಕಪತ್ರ ಸಮಿತಿ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಂದಾಲ್ ಕಂಪೆನಿಗೆ ಸರ್ಕಾರ ಭೂಮಿಯನ್ನು ಮತ್ತೆ 10 ವರ್ಷಗಳ ಕಾಲ ಭೋಗ್ಯಕ್ಕೆ ಕೊಡಲಿ. ಆದರೆ ಸಂಪುಟ ಉಪಸಮಿತಿ ರಚಿಸುವುದು ಬೇಡ. ಸಂಪುಟ ಉಪ ಸಮಿತಿಯಲ್ಲಿ ಸಚಿವರಿಗೆ ಮಾತ್ರ ಅವಕಾಶವಿದ್ದು, ಇದರಲ್ಲಿ ಪ್ರತಿಪಕ್ಷ ನಾಯಕರು ಇರುವುದಕ್ಕೆ ಅವಕಾಶವಿರುವುದಿಲ್ಲ. ಅಂದ ಮೇಲೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಸಮಿತಿಯಲ್ಲಿ ಇರಲು ಹೇಗೆ ಸಾಧ್ಯ ಎಂದು ಅವರು ಪ್ರಶ್ನಿಸಿದರು.
ಕಾಂಗ್ರೆಸ್ ಮುಖಂಡ ಹೆಚ್.ಕೆ.ಪಾಟೀಲ್ ಮಾತನಾಡಿ, ಸರ್ಕಾರ ಸಂಪುಟ ಉಪ ಸಮಿತಿ ರಚಿಸಿ, ಭೂ ಪರಭಾರೆ ಸಂಬಂಧ ಅಧ್ಯಯನ ನಡೆಸಲು ಮುಂದಾಗಿದೆ. ಸಮಿತಿ ಸದಸ್ಯರು ಸಾರ್ವಜನಿಕರ ಅಹವಾಲು ಪಡೆದು ವರದಿ ಸಲ್ಲಿಸಬೇಕಾಗುತ್ತದೆ. ಹೀಗಾಗಿ ನಾವು ಸರ್ಕಾರದ ಮೇಲೆ ಭರವಸೆ ಇಡಬೇಕು. ವರದಿ ಬರುವ ಮೊದಲೇ ವಿರೋಧಿಸುವುದು ಸರಿಯಲ್ಲ ಎಂದರು.
ಸಚಿವ ಸಂಪುಟ ಸಮಿತಿಗೆ ಪ್ರತಿಪಕ್ಷ ನಾಯಕ ಯಡಿಯೂರಪ್ಪ ಸೇರ್ಪಡೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಹೆಚ್.ಕೆ.ಪಾಟೀಲ್, ಸಚಿವರಲ್ಲದವರು ಸಮಿತಿಗೆ ಸೇರುವುದಕ್ಕೆ ಅವಕಾಶವಿಲ್ಲ. ತಜ್ಞರ ಸಮಿತಿ ಆಗಿದ್ದರೆ ಮಾತ್ರ ಯಡಿಯೂರಪ್ಪ ಅವರಿಗೆ ಅವಕಾಶ ಮಾಡಿಕೊಡಬಹುದಿತ್ತು ಎಂದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
