ದೇಶವೇ ಧರ್ಮ ಎಂದರಿತು ಮುನ್ನಡೆಯೋಣ: ಡಿಸಿ

ದಾವಣಗೆರೆ :

    ನನ್ನದು ಆ ಧರ್ಮ, ಈ ಧರ್ಮ ಎಂಬುವ ಮನೋಭಾವದಿಂದ ಹೊರಬಂದು, ದೇಶವೇ ನಮ್ಮ ಧರ್ಮ ಎಂದರಿತು ಮುನ್ನಡೆದು ಪ್ರಗತಿ ಪಥದತ್ತ ಸಾಗೋಣ ಎಂದು ಜಿಲ್ಲಾಧಿಕಾರಿ ಜಿ.ಎನ್.ಶಿವಮೂರ್ತಿ ಕರೆ ನೀಡಿದರು.ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಗುರುವಾರ ಜಿಲ್ಲಾಡಳಿತದಿಂದ ಏರ್ಪಡಿಸಿದ್ದ 73ನೇ ಸ್ವಾತಂತ್ರ್ಯ ದಿನಾಚರಣೆಯ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಇಡೀ ದೇಶವೇ ಒಂದು ಧರ್ಮವೆಂದರಿತು, ನಾವೆಲ್ಲರೂ ಕಾರ್ಯಪ್ರವೃತ್ತರಾದರೆ ಮಾತ್ರ ದೇಶ ಪ್ರಗತಿ ಕಾಣಲು ಸಾಧ್ಯ ಎಂದರು.

    ದೇಶದ ಇತಿಹಾಸ, ಪರಂಪರೆಯನ್ನು ತಿಳಿಸುವಲ್ಲಿ ನಾವುಗಳು ಸಂಪೂರ್ಣ ವಿಫಲರಾಗಿದ್ದೇವೆ. ಆದ್ದರಿಂದ ಪ್ರಸ್ತುತ ಶಿಕ್ಷಣ ವ್ಯವಸ್ಥೆಯ ಮೂಲಕ ಮಇಂದಿನ ಮಕ್ಕಳಿಗೆ ದೇಶದ ಇತಿಹಾಸ, ಮೂಲ ಸಂಸ್ಕೃತಿ, ಪರಂಪರೆಯ ಕುರಿತು ಜಾಗೃತಿ ಮೂಡಿಸ ಬೇಕಾದ ಅವಶ್ಯಕತೆ ಇದೆ. ಏಕೆಂದರೆ, ಇತಿಹಾಸ ಮರೆತರೆ ದೇಶ ಮರತಂತಾಗಲಿದೆ ಎಂದು ಸೂಚ್ಯವಾಗಿ ಎಚ್ಚರಿಸಿದರು.

      ವಿಜ್ಞಾನ-ತಂತ್ರಜ್ಞಾನದಲ್ಲಿ ನಾವುಗಳು ಇಂದು ಸಾಕಷ್ಟು ಅಭಿವೃದ್ಧಿ ಸಾಧಿಸಿದ್ದೇವೆ. ಅಮೆರಿಕ ಅಧ್ಯಕ್ಷ ಟ್ರಂಪ್, ಕೆಲವು ದಿನಗಳ ಹಿಂದೆ ಭಾರತ ಅಭಿವೃದ್ಧಿಶೀಲ ರಾಷ್ಟ್ರವಲ್ಲ ಬದಲಾಗಿ ಅಭಿವೃದ್ಧಿ ಹೊಂದಿದ ರಾಷ್ಟ್ರಗಳ ಸಾಲಿಗೆ ಸೇರಿದೆ ಎಂಬ ಹೇಳಿಕೆಯನ್ನ ನೀಡಿದ್ದಾರೆ. ನಮ್ಮ ರಾಷ್ಟ್ರವು ಅಭಿವೃದ್ಧಿ ಹೊಂದಿದ ರಾಷ್ಟ್ರಗಳ ಸಾಲಿಗೆ ಸೇರಿದೆ ಎಂದಾದರೆ ನಿಜಕ್ಕೂ ನಾವೆಲ್ಲರೂ ಖುಷಿಪಡುವ ಸಂಗತಿಯೇ ಸರಿ ಎಂದರು.

    ರಾಜ್ಯದಲ್ಲಿ ಸುರಿಯುತ್ತಿರುವ ಅಪಾರ ಮಳೆಯಿಂದ ಉಂಟಾದ ನೆರೆಯಿಂದ ಜನಜೀವನ ಅಸ್ತವ್ಯಸ್ತಗೊಂಡಿರುವ ಈ ಸಂದರ್ಭದಲ್ಲಿ ರಾಜ್ಯ ಸರ್ಕಾರ ಜಿಲ್ಲಾಡಳಿತದ ಮೂಲಕ ಪುನರ್ವಸತಿ ಕಾರ್ಯದಲ್ಲಿ ನಿರತವಾಗಿದೆ. ಜಿಲ್ಲೆಯಾದ್ಯಂತ ನೆರವಿನ ಸಹಕಾರ ದೊರೆಯುತ್ತಿರುವುದು ಸಂತಸದ ವಿಚಾರವಾಗಿದೆ ಎಂದು ಹೇಳಿದರು.

    ಜಿಲ್ಲೆಯಲ್ಲಿ ಒಟ್ಟು 27 ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳು ಪೂರ್ಣಗೊಂಡಿದ್ದು ಕಾರ್ಯನಿರ್ವಹಿಸುತ್ತಿವೆ. 10 ಯೋಜನೆಗಳು ವಿವಿಧ ಹಂತದಲ್ಲಿ ಪ್ರಗತಿಯಲ್ಲಿದೆ ಎಂದ ಅವರು, ಕಚ್ಚಾ ನೀರಿನ ಸಮಸ್ಯೆ ಇರುವಂತಹ ಜಗಳೂರು ತಾಲ್ಲೂಕು ಹಾಗೂ ಇತರೆ ಪ್ರದೇಶದ ಜನವಸತಿಗಳಲ್ಲಿ ಟ್ಯಾಂಕರ್ ಮುಖಾಂತರ ನೀರು ಸರಬರಾಜು ಮಾಡಿ ಘಟಕಗಳು ಕಾರ್ಯ ನಿರ್ವಹಿಸುವಂತೆ ಕ್ರಮ ವಹಿಸಲಾಗಿದೆ ಎಂದರು.

   ದಾವಣಗೆರೆ ಜಿಲ್ಲೆಯ ಕೈಗಾರಿಕೆ ವಲಯದಲ್ಲಿ ಉತ್ತಮ ಅಭಿವೃದ್ಧಿಯಾಗುತ್ತಿದ್ದು, ಒಟ್ಟು 1850 ಕೈಗಾರಿಕೆಗಳು ನೊಂದಣಿಯಾಗಿದೆ. 505 ಕೋಟಿ ರೂ.ಗಳಷ್ಟು ಬಂಡವಾಳ ಹೂಡಿಕೆಯಾಗಿರುತ್ತದೆ. ಹಾಗೂ 13200 ಜನ ಉದ್ಯೋಗದಲ್ಲಿ ತೊಡಗಿರುತ್ತಾರೆ. ಜಿಲ್ಲೆಯಲ್ಲಿ ಒಟ್ಟು 15 ಬೃಹತ್ ಹಾಗೂ ಮಧ್ಯಮ ಕೈಗಾರಿಕೆಗಳು ಇದ್ದು ಮುಂದಿನ ದಿನಗಳಲ್ಲಿ ಇನ್ನೂ ಕೆಲವು ಕೈಗಾರಿಕೆಗಳು ಬರುವ ನಿರೀಕ್ಷೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

    ಜಿಲ್ಲೆಯ ಪ್ರಗತಿ ಹಾಗೂ ಸ್ವಾತಂತ್ರ್ಯ ಹೋರಾಟದ ಹಾದಿಯನ್ನು ಸ್ಮರಿಸುತ್ತಾ, ಪ್ರಸ್ತುತದ ಸವಾಲುಗಳನ್ನು ಸ್ವೀಕರಿಸುತ್ತಾ ದೇಶ ಇಂದು ಅಭಿವೃದ್ಧಿ ಪಥದಲ್ಲಿ ಸಾಗುತ್ತ ವಿಶ್ವಕ್ಕೇ ಶಾಂತಿಯ, ಸೌಹಾರ್ದತೆಯ ಸಂದೇಶ ಸಾರುತ್ತಿದೆ. ಈ ನಿಟ್ಟಿನಲ್ಲಿ ಜಿಲ್ಲೆಯು ಉತ್ತಮ ಜನಪರ ಮತ್ತು ಅಭಿವೃದ್ಧಿ ಯೋಜನೆಗಳೊಂದಿಗೆ ಸರ್ವತೋಮುಖ ಅಭಿವೃದ್ಧಿ ಕಾಣಲಿ ಎಂದು ಆಶಯ ವ್ಯಕ್ತಪಡಿಸಿದರು.

    ಸರ್ಕಾರದ ಪ್ರಮುಖ ಯೋಜನೆಗಳ ಅನುಷ್ಟಾನದಲ್ಲಿ ಪರಿಣಾಮಕಾರಿ ಸುಧಾರಣೆ ತಂದು ಅವುಗಳ ಉದ್ದೇಶಗಳನ್ನು ಈಡೇರಿಸಿ ನಮ್ಮ ಸಮಾಜವನ್ನು, ರಾಷ್ಟ್ರವನ್ನು ಬಲಪಡಿಸೋಣ. ನಾವೆಲ್ಲ ನಮ್ಮ ನಮ್ಮ ಕರ್ತವ್ಯಗಳನ್ನು ಅತ್ಯಂತ ಜವಾಬ್ದಾರಿಯಿಂದ ನಿರ್ವಹಿಸಿ ದೇಶಪ್ರೇಮದ ದ್ಯೋತಕದಂತೆ ಬಾಳೋಣ ಎಂದು ಕರೆ ನೀಡಿದರು.

   ಕಾರ್ಯಕ್ರಮದದಲ್ಲಿ ಸಂಸದ ಜಿ.ಎಂ.ಸಿದ್ದೇಶ್ವರ, ಶಾಸಕ ಎಸ್.ಎ ರವೀಂದ್ರನಾಥ್, ಜಿ.ಪಂ ಅಧ್ಯಕ್ಷೆ ಶೈಲಜಾ ಬಸವರಾಜ್, ವಿಧಾನ ಪರಿಷತ್ ಸದಸ್ಯ ಕೆ. ಅಬ್ದುಲ್ ಜಬ್ಬಾರ್, ಮಾಜಿ ಶಾಸಕ ಹರೀಶ್ ಬಿ.ಪಿ, ಜಿ.ಪಂ ಸಿಇಓ ಹೆಚ್.ಬಸವರಾಜೇಂದ್ರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ, ಅಪರ ಜಿಲ್ಲಾಧಿಕಾರಿ ಪದ್ಮ ಬಸವಂತಪ್ಪ, ಉಪ ವಿಭಾಗಾಧಿಕಾರಿ ಬಿ.ಟಿ ಕುಮಾರಸ್ವಾಮಿ, ಮಹಾನಗರಪಾಲಿಕೆ ಆಯುಕ್ತ ಮಂಜುನಾಥ್ ಬಳ್ಳಾರಿ, ತಹಶೀಲ್ದಾರ್ ಸಂತೋಷ್‍ಕುಮಾರ್, ತೊಟಗಾರಿಕೆ ಇಲಾಖೆಯ ಉಪ ನಿರ್ದೇಶಕ ಲಕ್ಷ್ಮೀಕಾಂತ್ ಬೊಮ್ಮನ್ನಾರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಕೆ.ಎಚ್ ವಿಜಯ್‍ಕುಮಾರ್, ಡಿಎಚ್‍ಓ ಡಾ.ರಾಘವೇಂದ್ರಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link