ಶಿರಾ:
ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲೆಗಳಲ್ಲಿ ಉತ್ತಮ ಭೋದನಾ ಕೌಶಲ್ಯವಿರುವ ಶಿಕ್ಷಕರಿದ್ದು, ಗುಣಮಟ್ಟದ ಶಿಕ್ಷಣ ಪ್ರತಿಯೊಬ್ಬ ವಿದ್ಯಾರ್ಥಿಗೆ ಸಿಗುತ್ತಿದೆ. ಪ್ರಾಥಮಿಕ ಶಿಕ್ಷಣ ಹಂತದಲ್ಲಿಯೇ ಮಕ್ಕಳು ಹೆಚ್ಚು ಕಲಿಕಾಸಕ್ತಿ ಬೆಳೆಸಿಕೊಂಡು ಸಾಧನೆಯ ಗುರಿಯೊಂದಿಗೆ ಶಿಕ್ಷಣ ಮುಂದುವರೆಸಿದಾಗ ಯಶಸ್ಸು ಲಭಿಸಲಿದೆ ಎಂದು ಸಮಾಜ ಸೇವಕ ಡಾ.ಸಿ.ಎಂ.ರಾಜೇಶ್ಗೌಡ ಹೇಳಿದರು.
ಶಿರಾ ತಾಲೂಕಿನ ಲಿಂಗದಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಸ್ಕೂಲ್ ಬ್ಯಾಗ್ ಮತ್ತು ಪಠ್ಯ ಸಲಕರಣೆಗಳನ್ನು ಗುರುವಾರ ನಡೆದ ಕಾರ್ಯಕ್ರಮದಲ್ಲಿ ಉಚಿತವಾಗಿ ವಿತರಣೆ ಮಾಡಿ ಮಾತನಾಡಿದರು.
ಮಕ್ಕಳ ಬದುಕಿಗೆ ಸುಂದರವಾದ ರೂಪ ನೀಡುವಂತಹುದು ಶಿಕ್ಷಣ. ಮಕ್ಕಳು ಬಡತನದ ನೆಪದಲ್ಲಿ ಶಿಕ್ಷಣ ವಂಚಿತರಾಗ ಬಾರದೆಂಬ ಉದ್ದೇಶದಿಂದ ನಮ್ಮ ದುಡಿಮೆಯ ಅಲ್ಪ ಪಾಲನ್ನು ಶಿಕ್ಷಣ ಕ್ಷೇತ್ರದಲ್ಲಿ ವಿನಿಯೊಗಿಸುತ್ತಿದ್ದೇನೆ. ನಮ್ಮ ದೇಶ ತಂತ್ರಜ್ಞಾನ ಸೇರಿದಂತೆ ಎಲ್ಲಾ ಕ್ಷೇತ್ರದಲ್ಲೂ ಉತ್ತಮ ಸಾಧನೆ ಮಾಡಿ ವಿಶ್ವವೇ ನೋಡುವಷ್ಟು ಬೆಳೆಯುತ್ತಿದೆ ಎಂದರೆ ನಮ್ಮಲ್ಲಿರುವ ಗುಣಮಟ್ಟದ ಶಿಕ್ಷಣವೇ ಕಾರಣ. ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ತಂದೆ ತಾಯಿ, ಗುರು ಹಿರಿಯರನ್ನು ಗೌರವಿಸುವಂತ ಸಂಸ್ಕಾರ ಕಲಿತು ಸಮಾಜ ಗೌರವಿಸುವಂತ ವ್ಯಕ್ತಿಯಾಗಿ ಬದುಕನ್ನು ಕಟ್ಟಿ ಕೊಳ್ಳಬೇಕೆಂದರು.
ತಾಲೂಕು ಜೆಡಿಎಸ್ ಕಾರ್ಯಾಧ್ಯಕ್ಷ ಸುಧಾಕರ ಗೌಡ ಮಾತನಾಡಿ ಬಡ ವಿದ್ಯಾರ್ಥಿಗಳ ಶಿಕ್ಷಣದ ನೆರವಿಗೆ ಸಮಾಜ ಸೇವಕರು ಕೈಜೋಡಿಸುತ್ತಿರುವುದು ಉತ್ತಮ ಬೆಳವಣಿಗೆಯಾಗಿದ್ದು, ಆಭಿವೃದ್ಧಿ ಕಾರ್ಯ ಮಾಡುವಂತ ಕ್ಷೇತ್ರದಲ್ಲಿ ಇಂತಹ ವಿದ್ಯಾವಂತ ವೈದ್ಯರ ಅವಶ್ಯಕತೆ ಇದೆ. ಸರ್ಕಾರಿ ಶಾಲೆಗಳು ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡಿ, ಸ್ಪರ್ಧಾತ್ಮಕ ಯುಗಕ್ಕೆ ಅಣಿ ಮಾಡುತ್ತಿವೆ ಎಂದರು. 75 ವಿದ್ಯಾರ್ಥಿಗಳಿಗೆ ಬ್ಯಾಗ್ ಮತ್ತು ಪಠ್ಯಸಲಕರಣೆ ವಿತರಣೆ ಮಾಡಲಾಯಿತು.
ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ತಿಪ್ಪೇಸ್ವಾಮಿ, ಮಾಜಿ ಜಿಲ್ಲಾ ಪಂಚಾಯತಿ ಸದಸ್ಯ ಪ್ರಕಾಶ್ಗೌಡ, ಮುಖ್ಯ ಶಿಕ್ಷಕ ಹಿಮಂತರಾಜು, ಮುಖಂಡರಾದ ಬಿ.ಹೆಚ್.ಸತೀಶ್, ಮಣಿಕಂಠ, ನಿತಿನ್ಗೌಡ, ದೈಹಿಕ ಶಿಕ್ಷಕ ಅಮರನಾಥ್, ಶಾಲಾಭಿವೃದ್ಧಿ ಸಮಿತಿಯ ರೇಖಾ, ರಮೇಶ್, ನರೇಂದ್ರ, ಪುಷ್ವಾವತಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








