ತುಮಕೂರು
ಮುಂದಿನ ದಿನಗಳಲ್ಲಿ ನಡೆಯುವ ಪಕ್ಷದ ಕಚೇರಿಯಲ್ಲಿ ನಡೆಯುವ ರಾಷ್ಟ್ರೀಯ ಹಬ್ಬಗಳಲ್ಲಿ ಪಕ್ಷದ ಎಲ್ಲಾ ಕಾರ್ಯಕರ್ತರು ಭಾಗವಹಿಸುವ ಮೂಲಕ ದೇಶ ಮೊದಲು ಎಂಬ ಸಂದೇಶವನ್ನು ನಾವೆಲ್ಲರೂ ಸಾರಬೇಕಾಗಿದೆ ಎಂದು ತುಮಕೂರು ಗ್ರಾಮಾಂತರ ಶಾಸಕ ಡಿ.ಸಿ.ಗೌರಿಶಂಕರ್ ತಿಳಿಸಿದರು.
ನಗರದ ಜೆಡಿಎಸ್ ಕಚೇರಿಯಲ್ಲಿ ಜಿಲ್ಲಾಧ್ಯಕ್ಷ ಆರ್.ಸಿ.ಅಂಜನಪ್ಪ ಅವರ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ 74ನೇ ಸ್ವಾತಂತ್ರ ದಿನಾಚರಣೆ ಕಾರ್ಯಕ್ರಮದಲ್ಲಿ ದ್ವಜಾರೋಹಣ ನೆರವೇರಿಸಿ ಮಾತನಾಡುತಿದ್ದ ಅವರು, ಲಕ್ಷಾಂತರ ಜನರ ಹೋರಾಟ, ತ್ಯಾಗ, ಬಲಿದಾನದ ಫಲವಾಗಿ ಇಂದು ನಾವುಗಳ ಸ್ವಾತಂತ್ರವನ್ನು ಅನುಭವಿಸು ವಂತಾಗಿದೆ. ಇಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸುವಾಗ ಎಲ್ಲರೂ ಸಮಯಪ್ರಜ್ಞೆ ಮತ್ತು ಶಿಸ್ತು ಕಾಪಾಡಿಕೊಳ್ಳಬೇಕಿದೆ.
ಅದರಲ್ಲಿಯೂ ಯುವ ಘಟಕ ಹೆಚ್ಚಿನ ಮುತ್ತುವರ್ಜಿ ವಹಿಸಬೇಕಾಗಿದೆ ಎಂದು ಸಲಹೆ ನೀಡಿದರು.ದೇಶ ಅಪತ್ತಿನಲ್ಲಿದ್ದಾಗ ನಾವೆಲ್ಲರೂ ಯೋಧರ ರೀತಿ ಕೆಲಸ ಮಾಡಬೇಕಾಗಿದೆ. ಕೊರೋನ ಮಹಾಮಾರಿ ವಿರುದ್ದ ನಾವೆಲ್ಲರೂ ಯೋಧರ ರೀತಿ ಕೆಲಸ ಮಾಡಿ, ಜನತೆಗೆ ತಮ್ಮ ಕೈಲಾದ ಸೇವೆ ಮಾಡುವ ಮೂಲಕ ದೇಶವನ್ನು ಆಪತ್ತಿನಿಂದ ಕಾಪಾಡಬೇಕಿದೆ. ಹಿರಿಯರ ರೀತಿ ತ್ಯಾಗ ಮನೋಭಾವವನ್ನು ಬೆಳೆಸಿಕೊಂಡು ನಾವೆಲ್ಲರೂ ಭಾರತೀಯರು ಎಂಬ ಭಾವನೆಯನ್ನು ಬೆಳೆಸಿಕೊಳ್ಳಬೇಕಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜೆಡಿಎಸ್ ಜಿಲ್ಲಾಧ್ಯಕ್ಷ ಆರ್.ಸಿ.ಅಂಜನಪ್ಪ ಮಾತನಾಡಿ, 1857 ರ ಸಿಪಾಯಿ ಧಂಗೆಯಿಂದ ಆರಂಭಗೊಂಡ ಸ್ವಾತಂತ್ರ ಹೋರಾಟ ವಿವಿಧ ಹಂತಗಳಲ್ಲಿ ನಡೆದು 1947ರಲ್ಲಿ ಸ್ವಾತಂತ್ರ ಗಳಿಸುವಂತಾಯಿತು. ಲಕ್ಷಾಂತರ ಮಂದಿಯ ತ್ಯಾಗ, ಬಲಿದಾನದ ಪ್ರತೀಕವಾದ ಈ ಸ್ವಾತಂತ್ರ ದಿನವನ್ನು ಪ್ರಪಂಚದಲ್ಲಿಯೇ ಭಾರತೀಯರು ಇರುವಡೆ ಶ್ರದ್ದಾ, ಭಕ್ತಿಯಿಂದ ಆಚರಿಸಲಾಗುತ್ತಿದೆ.
ದೇಶದಲ್ಲಿ ಸಮಾನತೆ, ಸಹೋದರತೆಯಿಂದ ಬಾಳುವಂತಹ ವಾತಾವರಣ ನಿರ್ಮಾಣವಾಗಬೇಕಾಗಿದೆ ಎಂದರು.
ಕಾರ್ಯಕ್ರಮ ಕುರಿತು ಬೆಳ್ಳಿ ಲೋಕೇಶ್, ಟಿ.ಆರ್.ನಾಗರಾಜು, ಆನಂದ್, ಗಂಗಣ್ಣ, ಹಾಜೀರಾಭಾನು, ದೇವರಾಜು ಅವರುಗಳು ಮಾತನಾಡಿದರು. ಜೆಡಿಎಸ್ ಪಕ್ಷದ ವಿವಿಧ ಮಂಚೂಣಿ ಘಟಕಗಳ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ