ಮಹಾತ್ಮ ಗಾಂಧಿಯವರ ಆದರ್ಶ ಪಾಲಿಸಬೇಕಿದೆ : ಡಿ.ಕೆ ಶಿವಕುಮಾರ್

ಬೆಳಗಾವಿ :

     ಮಹಾತ್ಮ ಗಾಂಧೀಜಿ ಅವರ ಚಿಂತನೆ, ವಿಚಾರವೇ ಕಾಂಗ್ರೆಸ್ ತತ್ವ. ಅವರ ಮಾರ್ಗದರ್ಶನವನ್ನು ನಾವು ಬಳಸಿಕೊಂಡು ಇಂದು ಈ ದೇಶದ ಐಕ್ಯತೆ, ಸಮಗ್ರತೆ ಹಾಗೂ ಶಾಂತಿಯನ್ನು ಕಾಪಾಡಬೇಕಿದೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ತಿಳಿಸಿದ್ದಾರೆ.

    ಇಲ್ಲಿನ ಸೇವಾದಳ ತರಬೇತಿ ಕೇಂದ್ರದಲ್ಲಿ ಆಯೋಜಿಸಲಾಗಿದ್ದ ಮಹಾತ್ಮ ಗಾಂಧೀಜಿ ಅವರ ಜನ್ಮದಿನ ಆಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ಡಿ.ಕೆ ಶಿವಕುಮಾರ್ ಅವರು ಗಾಂಧಿಜಿ ಅವರ ಕೊಡುಗೆಯನ್ನು ಸ್ಮರಿಸುತ್ತಾ ದೇಶದ ರಕ್ಷಣೆಗಾಗಿ ಪಕ್ಷದ ಕಾರ್ಯಕರ್ತರು ಶ್ರಮಿಸಬೇಕು ಎಂದು ಕರೆ ಕೊಟ್ಟರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ‘ನಾನು ಪ್ರತಿಜ್ಞೆ ಪಡೆದು ಅಧಿಕೃತವಾಗಿ ಅಧಿಕಾರ ಸ್ವೀಕರಿಸಿದ ನಂತರ ಬೆಂಗಳೂರಿನಿಂದ ಹೊರಗಡೆ ನಡೆಯುತ್ತಿರುವ ಮೊದಲ ಕಾರ್ಯಕ್ರಮ. ಇದು ಹರ್ಡಿಕರ್ ಅವರ ಪುಣ್ಯ ಭೂಮಿ. ಈ ದೇಶಕ್ಕೆ ಶಿಸ್ತಿನ ನಾಯಕರನ್ನು ತಯಾರು ಮಾಡಬೇಕು, ಸೇವೆ ಮಾಡಬೇಕು ಎಂದು ತಮ್ಮ ಚಿತನೆ, ಆಲೋಚನೆ, ಆಚಾರ, ವಿಚಾರಗಳನ್ನುಪ್ರಚಾರ ಮಾಡಿದ ಶ್ರೇಷ್ಠ ಭೂಮಿ ಇದು ಎಂದರು

     ಬೆಳಗಾವಿ ಮತ್ತು ಉತ್ತರ ಕರ್ನಾಟಕ ಜಿಲ್ಲೆ ಜನ ಈ ದೇಶದ ಸ್ವಾತಂತ್ರ್ಯಕ್ಕೊಸ್ಕರ ಗಾಂಧಿಜಿ ಅವರ ಜೊತೆ ಹರ್ಡಿಕರ್ ಅವರ ಜತೆ ಹೋರಾಡಿದ್ದಾರೆ. ಇಡೀ ಕರ್ನಾಟಕದಲ್ಲಿ ಅತಿ ಹೆಚ್ಚು ಸ್ವಾತಂತ್ರ್ಯ ಹೋರಾಟಗಾರರು ಎಲ್ಲಿದ್ದರು ಎಂದರೆ ಅದು ಈ ಜಿಲ್ಲೆಗಳಲ್ಲಿ. ಅವರೆಲ್ಲರಿಗೂ ಕಾಂಗ್ರೆಸ್ ಪಕ್ಷದ ಅಧ್ಯಕ್ಷನಾಗಿ ನಾನು ಕೈಮುಗಿದು ನಮಸ್ಕಾರ ಮಾಡುತ್ತೇನೆ. ಅವರು ಸ್ವಾತಂತ್ರ್ಯ ತಂದುಕೊಡದೇ ಇದ್ದಿದ್ದರೆ, ನಾವು ಇಂದು ಶಾಸಕರಾಗಿ ಈ ಕುರ್ಚಿಯ ಮೇಲೆ ಕೂರಲು ಸಾಧ್ಯವಾಗುತ್ತಿರಲಿಲ್ಲ ಎಂದರು.

   ದೇಶಕ್ಕೆ ಪ್ರಜಾಪ್ರಭುತ್ವದ ವ್ಯವಸ್ಥೆಯನ್ನು ಅಡಿಪಾಯ ಹಾಕಿಕೊಟ್ಟಿದ್ದರಿಂದಲೇ ನಾವಿಂದು ಗ್ರಾಮ ಪಂಚಾಯ್ತಿ, ಜಿಲ್ಲಾ ಪಂಚಾಯ್ತಿ ಸದಸ್ಯರಾಗಿ ಇಲ್ಲಿ ಸೇರಲು ಸಾಧ್ಯವಾಗಿದೆ. ಜವಾಹರ್ ಲಾಲ್ ನೆಹರೂ ಅವರ ವಿಶ್ವಾಸಕ್ಕೆ, ಸ್ನೇಹಕ್ಕೆ ಹಿಂದೂಸ್ಥಾನ್ ಸೇವಾದಳ, ಕಾಂಗ್ರೆಸ್ ಸೇವಾದಳ, ಅಂತಾ ಪ್ರಾರಂಭ ಮಾಡಿ ಈ ರಾಷ್ಟ್ರಕ್ಕೆ ಶಿಸ್ತಿನ ನಾಯಕರುಗಳನ್ನು ತಯಾರು ಮಾಡಿದರು. ಈಗ ಈ ಸೇವಾದಳಕ್ಕೆ ಶಕ್ತಿ ನೀಡಬೇಕು ಅಂತಾ ನಾವೆಲ್ಲ ಇಲ್ಲಿ ಸೇರಿದ್ದೇವೆ ಎಂದು ತಿಳಿಸಿದರು

    ಇವತ್ತು ಗಾಂಧಿಜಿ ಅವರ ಜನ್ಸದಿನ. ಕಾಂಗ್ರೆಸ್ ಅಧ್ಯಕ್ಷರು, ವಿರೋಧ ಪಕ್ಷದ ನಾಯಕರುಗಳು ಈ ಕಾರ್ಯಕ್ರಮವನ್ನು ಬೆಂಗಳೂರಿನ ಕಾಂಗ್ರೆಸ್ ಕಚೇರಿಯಲ್ಲಿ ಆಚರಿಸುವುದು ಸಂಪ್ರದಾಯ. ಆದರೆ ನಾವು ಈ ಬಾರಿ ಈ ಕಾರ್ಯಕ್ರಮವನ್ನು ಈ ಬೆಳಗಾವಿ ಜಿಲ್ಲೆ ಹಾಗೂ ಎಲ್ಲ ಸ್ವಾತಂತ್ರ್ಯ ಹೋರಾಟಗಾರರು ತಂದುಕೊಟ್ಟ ಪ್ರವಿತ್ರ ಭೂಮಿಯಲ್ಲಿ ಕಾಂಗ್ರೆಸ್ ಧ್ವಜವನ್ನು ಧರಿಸಿ ಈ ರಾಷ್ಟ್ರಧ್ವಜ ಹಾರಿಸಿ ನಿಮ್ಮ ಜತೆ ಈ ಕಾರ್ಯಕ್ರಮ ಆಚರಿಸುತ್ತಿದ್ದೇವೆ ಎಂದರು

     ಗಾಂಧಿಜಿ ಅವರ ಚಿಂತನೆ ನಾವು ಮಾತನಾಡಲು ಹೊರಟರೆ ಎಷ್ಟು ದಿನವಾದರೂ ಸಾಲದು. ಅವರ ಚಿಂತನೆ, ವಿಚಾರವೇ ಕಾಂಗ್ರೆಸ್ ತತ್ವ. ಅವರ ಮಾರ್ಗದರ್ಶನ ಈ ದೇಶಕ್ಕೆ ಮಾರ್ಗದರ್ಶನ. ಇದನ್ನು ನಾವು ಅಳವಡಿಸಿಕೊಂಡಿದ್ದೇವೆ. ಗಾಂಧಿಜಿ ಅವರ ತ್ಯಾಗ ಮನೋಭಾವ ಇದೆಯಲ್ಲಾ ಅದನ್ನು ನಾವು ಮರೆಯಲು ಸಾಧ್ಯವಿಲ್ಲ. ಮಹಾತ್ಮ ಗಾಂಧಿಜಿ ಹಾಗೂ ಅಂಬೇಡ್ಕರ್ ಅವರು ಸ್ವಾತಂತ್ರ್ಯಕ್ಕೂ ಮುನ್ನ ಹಾಗೂ ನಂತರ ಅವರ ಚಿಂತನೆ ದೇಶಕ್ಕೆ ಪ್ರಮುಖ. ಅಂಬೇಡ್ಕರ್ ಅವರು ಕೇವಲ ಒಂದು ವರ್ಗ ಆಸ್ತಿ ಅಲ್ಲ. ದೇಶದಲ್ಲಿ ನೊಂದ ಪ್ರತಿಯೊಬ್ಬರಿಗೂ ಧ್ವನಿಯಾಗಿ ಸಮಾನತೆ ತಂದುಕೊಡುವ ನಾಯಕ. ಹೀಗಾಗಿ ನಾವು ಅವರ ತತ್ವದ ಮೇಲೆ ನಂಬಿಕೆ ಇಟ್ಟಿದ್ದೇವೆ ಎಂದರು.

      ಇಂದು ದೇಶದ ಐಕ್ಯತೆ, ಸಮಗ್ರತೆ ಹಾಗೂ ಶಾಂತಿಗೆ ಇಂದು ಧಕ್ಕೆ ಉಂಟಾಗುತ್ತಿದೆ. ಇದನ್ನು ನಾವು ಇಳಿಸಬೇಕಿದೆ. ಈ ದೇಶಕ್ಕೆ ಸ್ವಾತಂತ್ರ್ಯ ಬಂದ ಮೇಲೆ ಜನ ರಸ್ತೆಗಿಳಿದು ಹೋರಾಟ ನಡೆಸಿದ್ದರೆ ಅದು ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ. ಈ ವರ್ಷ ಸಿಎಎ, ಎನ್ ಆರ್ ಸಿಯಿಂದ ಹಿಡಿದು, ರೈತರು ಕಾರ್ಮಿಕರವರೆಗೂ ಎಲ್ಲರೂ ಬೀದಿಗಿಳಿದು ಹೋರಾಟ ಮಾಡಲು ಆರಂಭಿಸಿದ್ದಾರೆ. ನಾನು ಭಾರತೀಯ ಎಂಬುದಕ್ಕೆ ಸರ್ಟಿಫಿಕೇಟ್ ತೋರಿಸಿ ಎಂದು ಸರ್ಕಾರ ಜನರ ಸ್ವಾಭಿಮಾನ ಕೆಣಕುತ್ತಿದೆ. ಹೀಗಾಗಿ ನಾನು ಸಂವಿಧಾನದ ಪೀಠಿಕೆ ಓದಿಸಿದೆ. ರಾಜ್ಯದಲ್ಲಿ ಆರೂವರೆ ಕೋಟಿ ಜನ ಇದ್ದಾರೆ. ಅದರಲ್ಲಿ 1 ಕೋಟಿ 40 ಲಕ್ಷ ಜನ ಟಿ.ವಿ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ನೋಡಿದ ದಾಖಲೆ ಇದೆ ಎಂದರು

       ಈ ದೇಶದಲ್ಲಿ ಅಭದ್ರತೆ ಹೆಚ್ಚಾಗುತ್ತಿದ್ದು, ಈ ದೇಶವನ್ನು ಉಳಿಸಬೇಕಿದೆ. ಹಿರಿಯರು ಹಾಕಿಕೊಟ್ಟ ಬುನಾದಿ ಉಳಿಸಿಕೊಳ್ಳಬೇಕು ಎಂದು ಜನ ಆತಂಕದಲ್ಲಿದ್ದಾರೆ. ಗಾಂಧೀಜಿ ಅವರ ಒಂದು ಮಾತಿದೆ. ನೀವು ನಿಮ್ಮನ್ನು ನಿಯಂತ್ರಿಸಬೇಕಿದ್ದರೆ, ನಿಮ್ಮ ತಲೆಯನ್ನು ಉಪಯೋಗಿಸಿ, ನೀವು ಬೇರೆಯವರನ್ನು ನಿಯಂತ್ರಿಸಬೇಕು ಎಂದರೆ ಹೃದಯವನ್ನು ಬಳಸಿ ಎಂದು ಹೇಳುತ್ತಾರೆ. ಇಂದು ಬಿಜೆಪಿಯವರು ಈ ಕೆಲಸ ಮಾಡುತ್ತಿದ್ದಾರಾ? ಜಾತಿ, ಧರ್ಮದ ಹೆಸರಲ್ಲಿ ಸಮಾಜವನ್ನು ಛಿದ್ರ ಮಾಡುತ್ತಿದ್ದಾರೆ. ಇದಕ್ಕಾಗಿ ನಾವು ಗಾಂಧೀಜಿ, ಲಾಲ್ ಬಹದ್ದೂರ್ ಶಾಸ್ತ್ರಿ, ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಆಚಾರ ವಿಚಾರವನ್ನು ಎತ್ತಿಹಿಡಿಯುವುದು ನಮ್ಮ ಕರ್ತವ್ಯ ಎಂದು ತಿಳಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap