ಬೆಂಗಳೂರು
ಪಕ್ಷ ಸಂಘಟನೆಗಾಗಿ ವಿಪಕ್ಷ ನಾಯಕ ಸಿದ್ದರಾಮಯ್ಯ ಕಾಂಗ್ರೆಸ್ ರಾಷ್ಟ್ರೀಯ ನಾಯಕಿ ಸೋನಿಯಾ ಗಾಂಧಿಗೆ ಪತ್ರ ಬರೆದು ಕೆಲವು ಸಲಹೆಗಳನ್ನು ನೀಡಿದ್ದು, ಗಾಂಧಿ ಕುಟುಂಬದ ನೇತೃತ್ವದಲ್ಲಿ ಎಲ್ಲರೂ ಒಗ್ಗಟ್ಟಾಗಿ ಪಕ್ಷವನ್ನು ಮುನ್ನಡೆಸಬೇಕೆಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ತೊಂದರೆಗಳನ್ನು ಎದುರಿಸುತ್ತಿರುವುದು ಇದೇ ಮೊದಲೇನಲ್ಲ. ಪ್ರತಿ ಬಾರಿಯೂ ಪಕ್ಷ ದೇಶವೇ ಹಿಂತಿರುಗಿ ನೋಡುವಂತೆ ಮಾಡಿದೆ. ಪಕ್ಷ ಸಂಕಷ್ಟಕ್ಕೀಡಾದಾಗಲೆಲ್ಲ ಗಾಂಧಿ ಮತ್ತು ನೆಹರೂ ಕುಟುಂಬ ಒಟ್ಟಾಗಿ ಪಕ್ಷವನ್ನು ಮುನ್ನಡೆಸಿರುವುದು ಎಂದಿಗೂ ಸ್ಮರಣೀಯ ಎಂದಿದ್ದಾರೆ.
ಮಾಜಿ ಪ್ರಧಾನಿ ಉಕ್ಕಿನ ಮಹಿಳೆ ಇಂದಿರಾಗಾಂಧಿ ಅವರು ರಾಜಕೀಯದಲ್ಲಿ ಪುನರುಜ್ಜೀವನ ಕಂಡಿದ್ದು ಹಾಗೂ ಪಕ್ಷಕ್ಕೆ ಬಲನೀಡಿದ್ದನ್ನು ಸ್ಮರಿಸಿದ ಸಿದ್ದರಾಮಯ್ಯ, 1977 ರಲ್ಲಿ ಇಂದಿರಾಗಾಂಧಿ ಪರಾಜಯಗೊಂಡಿದ್ದರೂ ಸಹ ಸೋಲನ್ನು ಸವಲಾಗಿ ಸ್ವೀಕರಿಸಿ ಪಕ್ಷನವನ್ನು ಮುನ್ನಡೆಸಿದರು. ಇಂದಿರಾಗಾಂಧಿ ಅವರ ಮರಣದ ನಂತರ ರಾಜೀವ್ ಗಾಂಧಿ ಪಕ್ಷದ ನಾಯಕತ್ವವನ್ನು ವಹಿಸಿಕೊಂಡು ಪಕ್ಷಕ್ಕೆ ಮತ್ತೆ ಪುನರ್ಜನ್ಮ ನೀಡಿದರು. ದೂರದೃಷ್ಟಿಯ ರಾಜೀವ್ ಗಾಂಧಿ ಅವರು ಮೃತಪಟ್ಟಾಗ ಅಂಜದೇ ಎರಡೂ ಮಕ್ಕಳನ್ನು ಬೆಳೆಸುವ ಜವಾಬ್ದಾರಿಯ ಜೊತೆಗೆ ಪಕ್ಷವನ್ನು ಸಹ ಮುನ್ನಡೆಸುವ ಜವಾಬ್ದಾರಿಯನ್ನು ತೆಗೆದುಕೊಂಡು ಸೋನಿಯಾಗಾಂಧಿಯವರು ಸಾಕಷ್ಟು ಅಡೆತಡೆಗಳನ್ನು ಎದುರಿಸಿ ಎಲ್ಲದರ ನಡುವೆಯೂ ಪಕ್ಷಕ್ಕೆ ಬಲವಾಗಿ ನಿಂತರು ಎಂದು ಪತ್ರದಲ್ಲಿ ಅಭಿಪ್ರಾಯ ವ್ಯಕ್ತಪಡಿಸಿ ಸೋನಿಯಾ ಅವರ ಸೇವೆಯನ್ನು ಸ್ಮರಿಸಿದ್ದಾರೆ.
1998 ರಿಂದ 2004 ರ ನಡುವೆ ಪಕ್ಷವನ್ನು ಬಲಗೊಳಿಸಲು ಸೋನಿಯಾಗಾಂಧಿ ಅವರು ಎದುರಿಸಿದ್ದ ತೊಂದರೆಗಳು ಅಡೆತಡೆಗಳನ್ನು ತಾವೆಲ್ಲ ಚೆನ್ನಾಗಿ ಅರಿತಿದ್ದು, 2004 ರಲ್ಲಿ ಸೋನಿಯಾ ಅವರ ನಾಯಕತ್ವದಲ್ಲಿ ಪಕ್ಷ ವಿಜಯದತ್ತ ಸಾಗಿತು. ಪಕ್ಷಕ್ಕಾಗಿ ಸೋನಿಯಾ ಅವರು ಪ್ರಧಾನಿ ಹುದ್ದೆಯನ್ನು ತ್ಯಜಿಸಿದರು. 1977 ಮತ್ತು 1998 ರಲ್ಲಿ ಇದ್ದಂತಹ ಸ್ಥಿತಿಯೇ ಈಗ ಪಕ್ಷಕ್ಕೆ ಎದುರಾಗಿದೆ. ಕಾಂಗ್ರೆಸ್ ಪಕ್ಷವಷ್ಟೇ ಅಲ್ಲದೇ ದೇಶವೇ ಬಿಕ್ಕಟ್ಟಿನಲ್ಲಿದೆ.
ಬಿಜೆಪಿ ಆರ್ಎಸ್ಎಸ್ ನಿಂದಾಗಿ ಇಡೀ ದೇಶದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ತಲೆದೋರಿದ್ದು, ಬಿಜೆಪಿ ಪ್ರಜಾಪ್ರಭುತ್ವದ ಸ್ಥಂಭಗಳ ಮೇಲೆಯೇ ನಿರಂತರ ದಾಳಿ ಮಾಡುತ್ತಿದೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಸಂವಿಧಾನದಲ್ಲಿ ಪ್ರತಿಪಾದಿಸಲಾಗಿರುವ ತತ್ವಗಳನ್ನು ರಕ್ಷಿಸಲು ಹಾಗೂ ದೇಶದ ಧ್ವನಿಯಾಗಲು ಕಾಂಗ್ರೆಸ್ಸಿನ ಅವಶ್ಯಕತೆಯಿದೆ. ಹೀಗಾಗಿ ಎಲ್ಲರೂ ಒಗ್ಗಟ್ಟಾಗಿ ಪರಿಣಾಮಕಾರಿಯಾಗಿ ಕೆಲಸ ಮಾಡಲು ಗಾಂಧಿ ಕುಟುಂಬವು ಪಕ್ಷವನ್ನು ಮುನ್ನಡೆಸುವುದು ಸೂಕ್ತ ಎಂಬುದು ತಮ್ಮ ಹಾಗೂ ಪಕ್ಷದ ಎಲ್ಲರ ಅಭಿಪ್ರಾಯವಾಗಿದೆ ಎಂದು ಸಿದ್ದರಾಮಯ್ಯ ಪತ್ರದ ಮೂಲಕ ಸೋನಿಯಾ ಗಾಂಧಿಗೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








