ಮೂಲ ಸೌಕರ್ಯ ಕಲ್ಪಿಸಿ ‘ಸ್ಮಾರ್ಟ್’ ಹಳ್ಳಿಗಳಾಗಿಸುವ ಗುರಿ : ಜಿಲ್ಲಾಧಿಕಾರಿ

ದಾವಣಗೆರೆ
     ಪ್ರಧಾನಮಂತ್ರಿಯವರ ಮಹಾತ್ವಾಕಾಂಕ್ಷಿ ಯೋಜನೆಯಾದ ಆದರ್ಶ ಗ್ರಾಮಕ್ಕೆ ಜಿಲ್ಲೆಯ ನಾಲ್ಕು ಹಳ್ಳಿಗಳು ಆಯ್ಕೆಯಾಗಿದ್ದು, ಆ ಹಳ್ಳಿಗಳಿಗೆ ವ್ಯವಸ್ಥಿತ ಮೂಲಸೌಲಭ್ಯ ನೀಡಿ ‘ಸ್ಮಾರ್ಟ್’ ಹಳ್ಳಿಗಳನ್ನಾಗಿ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ತಿಳಿಸಿದರು.
       ಜಿಲ್ಲಾಡಳಿತ ಭವನದಲ್ಲಿ ಸಂಬಂಧಿತ ಇಲಾಖೆಗಳ ಅಧಿಕಾರಿಗಳೊಂದಿಗೆ ಸೆ.24 ರಂದು ಸಭೆ ನಡೆಸಿದ ಅವರು ಈ ಯೋಜನೆಯಡಿ ಆಯ್ಕೆಯಾಗಿರುವ ಉಚ್ಚಂಗಿಪುರ, ಕಬ್ಬಳ, ಹೊಸಹಳ್ಳಿ ಮತ್ತು ಮರವಂಜಿ ಗ್ರಾಮಗಳಿಗೆ ತಲಾ ರೂ.40 ಲಕ್ಷ ಅನುದಾನವನ್ನು ಸರ್ಕಾರ ನೀಡಲಿದ್ದು, 6 ರೀತಿಯ ವಿವಿಧ ಘಟಕಗಳನ್ನು ನೀಡಲಾಗಿದೆ. ಈ 6 ಘಟಕಗಳಿಗೆ ಹಣ ಖರ್ಚು ಮಾಡಲು ಅವಕಾಶವಿದ್ದು ಒಟ್ಟಾರೆಯಾಗಿ 4 ಗ್ರಾಮಗಳನ್ನು ಸ್ಮಾರ್ಟ್, ಸುಂದರ, ಸುಸಜ್ಜಿತ ಹಾಗೂ ಸುವ್ಯವಸ್ಥಿತ ಮೂಲಭೂತ ಸೌಕರ್ಯಗಳಿರುವ ಮಾದರಿ ಗ್ರಾಮಗಳನ್ನಾಗಿ ರೂಪಿಸಲು ಕಾರ್ಯ ಯೋಜನೆ ಇದೆ ಎಂದರು.
   
      ಪ್ರಮುಖವಾಗಿ ಕುಡಿಯುವ ನೀರು ಹಾಗೂ ಶೌಚಾಲಯ ವ್ಯವಸ್ಥೆಗೆ ಆದ್ಯತೆ, ಘನತ್ಯಾಜ್ಯ ಮತ್ತು ದ್ರವ ತ್ಯಾಜ್ಯ ವಿಲೇವಾರಿ, ಶಾಲೆಗಳು ಮತ್ತು ಅಂಗನವಾಡಿಗಳಲ್ಲಿ ಶೌಚಾಲಯ ನಿರ್ಮಾಣ ಹಾಗೂ ರಿಪೇರಿ, ಅಂಗನವಾಡಿ ಕಟ್ಟಡಗಳ ನಿರ್ಮಾಣ, ಉತ್ತಮ ರಸ್ತೆಗಳ ನಿರ್ಮಾಣ, ಸೋಲಾರ್ ಬೀದಿದೀಪಗಳು ಸೇರಿ 6 ಪ್ರಮುಖ ವಿಷಯಗಳಿಗೆ ಆದ್ಯತೆ ನೀಡಲಾಗುವುದು.
   
     ಈ ಸಂಬಂಧ ಸಂಬಂಧಿಸಿದ ಗ್ರಾಮಗಳಲ್ಲಿ ಆ ಗ್ರಾಮ ಪಂಚಾಯತ್ ಅಧ್ಯಕ್ಷರ ನೇತೃತ್ವದಲ್ಲಿ ಒಂದು ಸಮಿತಿ ರಚಿಸಲಾಗುವುದು. ಈ ಸಮಿತಿಯಲ್ಲಿ ಗ್ರಾ.ಪಂ. ಸದಸ್ಯರು, ಪಿ.ಡಿ.ಓ, ಪಂಚಾಯತ್ ಕಾರ್ಯದರ್ಶಿ ಇರುವರು. ಗ್ರಾಮ ಅಭಿವೃದ್ಧಿ ಸಮಿತಿಯು ಗ್ರಾಮಕ್ಕೆ ಅಗತ್ಯವಾಗಿರುವ ಕಾಮಗಾರಿಗಳನ್ನು ಸಿದ್ದಪಡಿಸಿ ಸಮಿತಿ ಅನುಮೋದನೆಯೊಂದಿಗೆ ಜಿಲ್ಲಾ ಸಮಿತಿಗೆ ಸಲ್ಲಿಸಲಿದೆ. ಜಿಲ್ಲಾ ಸಮಿತಿಯು ಆ ಕಾಮಗಾರಿಗಳಲ್ಲಿ ಯಾವುದಾದರೂ ಕಾಮಗಾರಿ ರಾಜ್ಯ ಸರ್ಕಾರದ ಅನುದಾನದಲ್ಲಿ ಸೇರ್ಪಡೆಯಾಗಿದ್ದರೆ ಅದನ್ನು ಕೈಬಿಟ್ಟು ಬೇರೆ ಕಾಮಗಾರಿ ತೆಗೆದುಕೊಳ್ಳಲು ಸೂಚಿಸಲಾಗುವುದು ಎಂದರು.
   
      ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಶಿವಾನಂದ ಕುಂಬಾರ ಮಾಹಿತಿ ನೀಡಿ ಈ ಹಿಂದೆ ಹರಪನಹಳ್ಳಿ ತಾಲ್ಲೂಕು ಜಿಲ್ಲೆಗೆ ಸೇರಿದ್ದಾಗ ಪಟ್ಟಿ ಕಳುಹಿಸಿಕೊಡಲಾಗಿತ್ತು. ಅದರಂತೆ 10 ಹಳ್ಳಿಗಳು ಆಯ್ಕೆಯಾಗಿದ್ದವು. ಅದರಲ್ಲಿ ಹರಪನಹಳ್ಳಿ ತಾಲ್ಲೂಕಿನ 6 ಗ್ರಾಮಗಳು ಸೇರಿವೆ. ಅವುಗಳನ್ನು ಕೈಬಿಟ್ಟು 4 ಗ್ರಾಮಗಳ  ಕ್ರಿಯಾಯೋಜನೆ ಸಿದ್ದಪಡಿಸಲಾಗುವುದು. ಇದಕ್ಕೆ ಸಬಂಧಿಸದಂತೆ ಇಲಾಖೆಗಳವರು ಗ್ರಾಮಕ್ಕೆ ಭೇಟಿ ನೀಡಿ ಸಮಿತಿ ಸೂಚಿಸುವ ಕಾಮಗಾರಿಗಳ ಮಾಹಿತಿ ಪಡೆಯಬೇಕು ಎಂದರು.
     
    ಸಭೆಯಲ್ಲಿ ಜಿ.ಪಂ ಸಿ.ಇ.ಓ ಪದ್ಮ ಬಸವಂತಪ್ಪ, ಎನ್.ಐ.ಸಿ.ರಮೇಶ್, ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆಯ ಕಾರ್ಯಪಾಲಕ ಅಭಿಯಂತರ ರಾಜು, ಡಿಡಿಪಿಐ ಪರಮೇಶ್ವರಪ್ಪ, ಡಿಹೆಚ್‍ಓ ಡಾ.ರಾಘವೇಂದ್ರಸ್ವಾಮಿ ಸಂಬಂಧಿಸಿದ ಗ್ರಾ.ಪಂ ಗಳ ಪಿ.ಡಿ.ಓಗಳು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link