ದಾವಣಗೆರೆ:
ಮಹಾನಗರ ಪಾಲಿಕೆ ವ್ಯಾಪ್ತಿಯ 43ನೇ ವಾರ್ಡ್‍ನ ಹೊಸ ಕುಂದುವಾಡ ತಮ್ಮ ಊರಿಗೆ ಮೂಲಭೂತ ಸೌಲಭ್ಯ ಕಲ್ಪಿಸದೇ ಇರುವ ಮಹನಾಗರ ಪಾಲಿಕೆಯ ಚುನಾವಣೆಯ ಮತದಾನ ಬಹಿಷ್ಕರಿಸಲು ಮುಂದಾಗಿದ್ದರು. ಈ ವಿಷಯ ತಿಳಿದು ಗ್ರಾಮಕ್ಕೆ ಭೇಟಿಕೊಟ್ಟ ಕಣದಲ್ಲಿರುವ ಅಭ್ಯರ್ಥಿಗಳು ಸೌಲಭ್ಯ ಕಲ್ಪಿಸುವ ಬಗ್ಗೆ ಇ-ಸ್ಟಾಂಪ್ ಪೇಪರ್ ಮೇಲೆ ಒಪ್ಪಂದ ಪತ್ರ ಬರೆದುಕೊಟ್ಟ ಹಿನ್ನೆಲೆಯಲ್ಲಿ ಮತಚಲಾಯಿಸಿದರು.
ಪಾಲಿಕೆ ಚುನಾವಣೆ ಘೋಷಣೆ ಆಗುತ್ತಿದ್ದಂತೆ 43ನೇ ವಾರ್ಡ್ ವ್ಯಾಪ್ತಿಯ ಕುಂದುವಾಡ ಗ್ರಾಮಸ್ಥರು ತಮ್ಮ ಊರಿಗೆ ಸೌಲಭ್ಯ ಕಲ್ಪಿಸದ ಮಹಾನಗರ ಪಾಲಿಕೆ ಚುನಾವಣೆಯನ್ನು ಬಹಿಷ್ಕರಿಸಿ ಪ್ರತಿಭಟಿಸಲು ನಿರ್ಧರಿಸಿರುವುದಾಗಿ ಸುದ್ದಿಗೋಷ್ಠಿ ನಡೆಸಿ ಎಚ್ಚರಿಕೆ ನೀಡಿದ್ದರೂ, ಸಹ ಅಧಿಕಾರಿಗಳು ಇವರನ್ನು ಸಮಾಧಾನ ಪಡಿಸಲು ಮುಂದಾಗಿರಲಿಲ್ಲ. ಹೀಗಾಗಿ ಸೋಮವಾರ ಸಂಜೆಯ ವರೆಗೂ ಹೊಸ ಕುಂದುವಾಡ ಗ್ರಾಮಸ್ಥರು ಮತದಾನ ಬಹಿಷ್ಕರಿಸುವ ತಮ್ಮ ನಿಲುವು ಸಡಿಲಿಸಲಿರಲಿಲ್ಲ.
ಈ ವಿಷಯ ತಿಳಿದ 43ನೇ ವಾರ್ಡ್‍ನಿಂದ ಕಣದಲ್ಲಿರುವ ಕಾಂಗ್ರೆಸ್ ಮತ್ತು ಬಿಜೆಪಿ ಅಭ್ಯರ್ಥಿಗಳು ಹೊಸ ಕುಂದುವಾಡಕ್ಕೆ ಭೇಟಿ ನೀಡಿ ನವ್ಯಾರೇ ಗೆದ್ದು ಬಂದರೂ ನಿಮ್ಮ ಸಮಸ್ಯೆಗಳನ್ನು ಬಗೆಹರಿಸುವುದರ ಜೊತೆಗೆ ಮೂಲಭೂತ ಸೌಲಭ್ಯ ಕಲ್ಪಿಸಲು ಸೂಕ್ರ ಕ್ರಮ ಕೈಗೊಳ್ಳುವುದಾಗಿ ಇಸ್ಟಾಂಪ್ ಮೇಲೆ ಒಪ್ಪಂದ ಪತ್ರ ಬರೆದುಕೊಟ್ಟು ಸಹಿ ಹಾಕಿರುವುದರಿಂದ ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದೇವೆ ಎಂದು ಹೊಸ ಕುಂದುವಾಡದ ಸುರೇಶ್, ಕುಮಾರ್ ಹಾಗೂ ಬಸಪ್ಪ ತಿಳಿಸಿದರು.
ಕರೂರು:
ಇನ್ನೂ 45ನೇ ವಾರ್ಡ್‍ನ ಕರೂರು ಗ್ರಾಮಸ್ಥರು ತಮ್ಮೂರಿಗೆ ಸ್ಮಶಾನ ಇಲ್ಲ್ಲ, ಸಮಪರ್ಕವಾಗಿ ಕುಡಿಯುವ ನೀರು ಪೂರೈಸುತ್ತಿಲ್ಲ, ಸುಸಜ್ಜಿತ ರಸ್ತೆಗಳಿಲ್ಲ, ಬೀದಿ ದೀಪ ವ್ಯವಸ್ಥೆ ಇಲ್ಲ ಬಸ್ ಸೌಲಭ್ಯಗಳಿಲ್ಲ. ಹೀಗಾಗಿ ಪಾಲಿಕೆ ಚುನಾವಣೆ ಬಹಿಷ್ಕರಿಸುವುದಾಗಿ ಘೋಷಿಸಿ ಈ ಹಿಂದೆ ಪ್ರತಿಭಟನೆ ನಡೆಸುತ್ತಿದ್ದ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ, ಪಾಲಿಕೆ ಆಯುಕ್ತ ಮಂಜುನಾಥ್ ಆರ್. ಬಳ್ಳಾರಿ ಸ್ಥಳಕ್ಕೆ ಭೇಟಿ ನೀಡಿ ಚುನಾವಣೆಯ ನಂತರ ತಾವೇ ಖುದ್ದಾಗಿ ಇಲ್ಲಿಗೆ ಭೇಟಿ ನೀಡಿ ಸಮಸ್ಯೆ ಆಲಿಸಿ ಬಗೆಹರಿಸುತ್ತೇನೆ ಎಂಬುದಾಗಿ ಭರವಸೆ ನೀಡಿದ್ದರಿಂದ ಮಂಗಳವಾರ ನಡೆದ ಪಾಲಿಕೆ ಚುನಾವಣೆಯ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಂಡರು.
ನೋಂದು ವೋಟ್ ಹಾಕ್ತಿದಿನಿ!
ಪಾಲಿಕೆ ವ್ಯಾಪ್ತಿಯ 45ನೇ ವಾರ್ಡ್‍ನ ಕರೂರಿಗೆ ಯಾವುದೇ ಸೌಲಭ್ಯ ಕಲ್ಪಿಸಿಲ್ಲ. ರಸ್ತೆ, ಚರಂಡಿ ಸೌಲಭ್ಯವಿಲ್ಲ ಆದರೂ ಪಾಲಿಕೆ ಚುನಾವಣೆಯಲ್ಲಿ ನೋಂದು ಮತ ಚಲಾಯಿಸುತ್ತಿದ್ದೇನೆ ಎಂದು ಕರೂರಿನ ಮತದಾರ ಜಯಪ್ಪ ಬೇಸರ ವ್ಯಕ್ತಪಡಿಸಿದರು.ಹಿಂದೆ ಮತದಾನ ಬಹಿಷ್ಕರಿಸುವುದಾಗಿ ಘೋಷಿಸಿದ್ದ ಕರೂರು ಗ್ರಾಮಸ್ಥರನ್ನು ಸುದ್ದಿಗಾರರು ಮಾತಿಗೆ ಎಳೆದಾಗ ಮಾತನಾಡಿದ ಜಯಪ್ಪ, ಈ ಭಾಗದಲ್ಲಿ ಒಂದೇ ಮನೆಯಲ್ಲಿ ನಾಲ್ಕು, ನಾಲ್ಕು ಕುಟುಂಗಳು ಬದುಕುತ್ತಿವೆ. ಅವು ಸಣ್ಣ, ಸಣ್ಣ ಮನೆಗಳು. ಆದರೆ, ಈ ಭಾಗದಿಂದ ಆಯ್ಕೆಯಾಗಿ ಹೋಗುವ ಜನಪ್ರತಿನಿಧಿಗಳು ಯಾರೂ ನಮಗೆ ವಸತಿ ಸೌಲಭ್ಯ ಕಲ್ಪಿಸುತ್ತಿಲ್ಲ ಎಂದು ನೊಂದು ನುಡಿದರು.ನಮ್ಮ ಊರಿನಲ್ಲಿ ಬರೀ ಸಣ್ಣ ಹಿಡುವಳಿಗಾರರಿದ್ದೇವೆ. ಜಮೀನ್ದಾರರ್ಯಾರೂ ಇಲ್ಲ. ಅದಕ್ಕೆ ಜನಪ್ರತಿನಿಧಿಗಳು ನಮ್ಮ ಊರನ್ನು ಕಡೆಗಣಿಸುತ್ತಿದ್ದಾರೆಂದು ಅಳಲು ತೋಡಿಕೊಂಡರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
