ದಾವಣಗೆರೆ:
ನಮ್ಮ ನಡುವೆಯೇ ನಗರ ನಕ್ಸಲರಿದ್ದಾರೆ. ಹೀಗಾಗಿ ಬಹಳ ಎಚ್ಚರದಿಂದ ಇರಬೇಕೆಂದು ಯುವ ಬ್ರಿಗೇಡ್ ಮಾರ್ಗದರ್ಶಕ ಚಕ್ರವರ್ತಿ ಸೂಲಿಬೆಲೆ ತಿಳಿಸಿದರು.
ನಗರದ ಸೋಮೇಶ್ವರ ವಿದ್ಯಾಲಯದ ಆವರಣದಲ್ಲಿ ಶನಿವಾರ ಸಂಜೆ ಯುವ ಬ್ರಿಗೇಡ್ ಹಾಗೂ ಸೋದರಿ ನಿವೇದಿತಾ ಪ್ರತಿಷ್ಠಾನದಿಂದ ದೇಶಾದ್ಯಂತ ಸಂಚರಿಸುತ್ತಿರುವದ ಸ್ವಾಮಿ ವಿವೇಕಾನಂದರ ಮತ್ತೊಮ್ಮೆ ದಿಗ್ವಿಜಯ ರಥಯಾತ್ರೆಯ ಸಭಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ನಮ್ಮ ನಡುವೆಯೇ ಸ್ವಾಮೀಜಿ, ಪ್ರಾಂಶುಪಾಲ, ರಾಜಕಾರಣಿಗಳ ರೂಪದಲ್ಲಿ ನಗರ ನಕ್ಸಲರಿದ್ದು, ಅವರ ಚಟುವಟಿಕೆ ಎಗ್ಗಿಲ್ಲದೇ ನಡೆಯುತ್ತಿದೆ. ಅವರೆಲ್ಲಾ ರಾಷ್ಟ್ರೀಯತೆಯ ವಿರೋಧಿಗಳಾಗಿದ್ದಾರೆ ಎಂದರು.
ಚಿಕಾಗೋ ವಿಶ್ವ ಧರ್ಮ ಸಮ್ಮೇಳನದಲ್ಲಿ ಭಾಗವಹಿಸಿದ್ದ ಸ್ವಾಮಿ ವಿವೇಕಾನಂದರು, ಹಿಂದೂ ಧರ್ಮದ ಜೀವಂತಿಕೆಯನ್ನು ಜಗತ್ತಿಗೇ ಸಾರುವುದರ ಜೊತೆಗೆ, ಹಿಂದೂ ಧರ್ಮಕ್ಕೆ ಹೊಸಭಾಷ್ಯ ಬರೆದ ಮಹನೀಯರಾಗಿದ್ದಾರೆ. ಸ್ವಾಮಿ ವಿವೇಕಾನಂದರು ಚಿಕಾಗೋ ಧರ್ಮ ಸಮ್ಮೇಳನದಲ್ಲಿ ಭಾಗವಹಿಸುವುದಕ್ಕೂ ಮೊದಲು ಜಗತ್ತು ಹಿಂದೂ ಧರ್ಮವನ್ನು ಸತ್ತ ಧರ್ಮವೆಂದೇ ಭಾವಿಸಿತ್ತು. ಬ್ರಿಟೀಶ್ ಶಿಕ್ಷಣ ಪಡೆದ ಭಾರತೀಯ ವಿದ್ಯಾವಂತರೇ ಹಿಂದೂ ಧರ್ಮದ ಲೋಪದೋಷಗಳನ್ನು ಜಗತ್ತಿನ ಮುಂದಿಡುತ್ತಿದ್ದರು. ಇಂತಹ ಸಂದರ್ಭದಲ್ಲಿ ಹಿಂದೂ ಧರ್ಮದ ಪ್ರತಿನಿಧಿಯಾಗಿ ಸ್ವಾಮೀ ವಿವೇಕಾನಂದರು ಹಿಂದೂ ಧರ್ಮದ ಬಗ್ಗೆ ಜಗತ್ತಿಗೆ ತಿಳಿಸಿಕೊಟ್ಟರು ಎಂದು ಹೇಳಿದರು.
ರಾಮಕೃಷ್ಣ ಪರಮಹಂಸರು ಸಾಕ್ಷಾತ್ಕರಿಸಿಕೊಂಡಿದ್ದ ಹಿಂದೂ ಚಿಂತನೆಗಳನ್ನು ಜಗತ್ತಿಗೆ ಸಾರಿದ ಉತ್ಸವಮೂರ್ತಿಯೇ ವಿವೇಕಾನಂದರು ಎಂದ ಅವರು, ಭಾರತದ ಮೇಲೆ ಲೂಟಿಕೋರರು ನಿರಂತರ ಸೈನಿಕ ಆಕ್ರಮಣ ನಡೆಸಿದ್ದಾರೆ. ಮೊಘಲರು ಇಲ್ಲಿನ ದೇವಸ್ಥಾನಗಳನ್ನು ಧ್ವಂಸ ಮಾಡುವ ಮೂಲಕ ಜನರ ಭಕ್ತಿಯನ್ನು ಹೊಸಕಿಹಾಕುವ ಪ್ರಯತ್ನ ಮಾಡಿದರು ಎಂದು ಆರೋಪಿಸಿದರು.
ಸುಮಾರು 40 ಸಾವಿರ ದೇವಸ್ಥಾನಗಳು ಧ್ವಂಸಗೊಂಡರೂ ಭಾರತೀಯರ ಭಕ್ತಿ ಮಾತ್ರ ಅಚಲವಾಗಿತ್ತು. ಆದರೆ ಬ್ರಿಟೀಶರು ತಮ್ಮ ಶಿಕ್ಷಣ ಪದ್ಧತಿಯನ್ನು ಹೇರುವ ಮೂಲಕ ಇಲ್ಲಿನ ಜನರ ಮನಃಸ್ಥಿತಿಯನ್ನೇ ಬದಲಾಯಿಸಿದರು. ವಿದ್ಯಾವಂತರೆನಿಸಿಕೊಂಡವರು ಹಿಂದೂ ಎಂಬುದಾಗಿ ಗುರುತಿಸಿಕೊಳ್ಳಲು ಕೀಳರಿಮೆ ಪಡುವ ಸನ್ನಿವೇಶ ಸೃಷ್ಟಿಸಿದರು. ಇಂತಹ ಪರಿಸ್ಥಿತಿಯಲ್ಲಿ ಸ್ವಾಮಿ ವಿವೇಕಾನಂದರು ಹಿಂದೂ ಧರ್ಮದ ಹಣೆಬರಹ ಬದಲಿಸಿದರು ಎಂದರು.ರಾಮಕೃಷ್ಣಾಶ್ರಮದ ಕಾರ್ಯದರ್ಶಿ ಸ್ವಾಮಿ ನಿತ್ಯಸ್ಥಾನಂದಜೀ ಮಹಾರಾಜ್ ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ