ದಾವಣಗೆರೆ :
ನಾವು ಜನರ ದಾರಿ ತಪ್ಪಿಸುವ ಕೆಲಸ ಮಾಡುತ್ತಿಲ್ಲ. ಮಹಾನಗರ ಪಾಲಿಕೆಯಿಂದ ಮಾಡಿರುವ ತಾರತಮ್ಯವನ್ನು ಜನರ ಮುಂದಿಟ್ಟು, ಸತ್ಯ ದರ್ಶನ ಮಾಡಿಸುತ್ತಿದ್ದೇವೆ ಎಂದು ಪಾಲಿಕೆ ವಿಪಕ್ಷ ನಾಯಕ ಎ.ನಾಗರಾಜ್ ಅವರು ಮಹಾಪೌರರಿಗೆ ತಿರಿಗೇಟು ನೀಡಿದ್ದಾರೆ.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಿನ್ನೆ ಮೇಯರ್ ಅಜಯಕುಮಾರ್ ಪತ್ರಿಕಾಗೋಷ್ಠಿ ನಡೆಸಿ ಕಾಂಗ್ರೆಸ್ ಸದಸ್ಯರು ಸುಳ್ಳು ಹೇಳುವ ಮೂಲಕ ಜನರ ದಾರಿ ತಪ್ಪಿಸುತ್ತಿದ್ದಾರೆ ಎಂಬುದಾಗಿ ಅರೋಪಿಸಿದ್ದಾರೆ. ನಾವು ಸುಳ್ಳು ಹೇಳುತ್ತಿಲ್ಲ, ಪಾಲಿಕೆಯ ಬಿಜೆಪಿ ಆಡಳಿತವು ಕಾಂಗ್ರೆಸ್ ಸದಸ್ಯರು ಪ್ರತಿನಿಧಿಸಿರುವ ವಾರ್ಡ್‍ಗಳಿಗೆ ಕಡಿಮೆ ಅನುದಾನ ನೀಡಿ, ಮಾಡಿರುವ ತಾರತಮ್ಯವನ್ನು ತಿಳಿಸಿ ನ್ಯಾಯ ಕೇಳಿದ್ದೇವೆ ಎಂದರು.
ಮಹಾತ್ಮಗಾಂಧಿ ನಗರ ವಿಕಾಸ ಯೋಜನೆಯಡಿ ಕಾಂಗ್ರೆಸ್ ಸದಸ್ಯ ಜೆ.ಡಿ.ಪ್ರಕಾಶ್ ಪ್ರತಿನಿಧಿಸಿರುವ 1ನೇ ವಾರ್ಡ್‍ಗೆ 5.50 ಕೋಟಿ ರೂ. ಅನುದಾನ ನೀಡಿರುವುದಾಗಿ ಮೇಯರ್ ಹೇಳಿಕೆ ನೀಡಿದ್ದಾರೆ. ಆದರೆ, ವಾಸ್ತವದಲ್ಲಿ ಈ ಯೋಜನೆಯಡಿ ಈ ವಾರ್ಡ್ ಅಭಿವೃದ್ಧಿಗೆ ನೀಡಿರುವುದು 1.50 ಕೋಟಿ ರೂ. ಅನುದಾನ ಮಾತ್ರ. ಇನ್ನೂ ಎಸ್‍ಸಿಪಿ ಯೋಜನೆಯಡಿ 3.50 ಕೋಟಿ ರೂ. ವೆಚ್ಚದಲ್ಲಿ ಪೌರ ಕಾರ್ಮಿಕರಿಗಾಗಿ ನಿರ್ಮಾಣ ಮಾಡುತ್ತಿರುವ ಅನುದಾನವನ್ನು ಸೇರಿಸಿ 5.50 ಕೋಟಿ ನೀಡಿರುವುದಾಗಿ ಸುಳ್ಳು ಹೇಳಿದ್ದಾರೆ ಎಂದು ಟಾಂಗ್ ನೀಡಿದರು.
ಕಾಂಗ್ರೆಸ್ ಸದಸ್ಯರಾದ ಸವಿತಾ ಗಣೇಶ್ ಹುಲ್ಮನಿ ಅವರ 35ನೇ ವಾರ್ಡ್‍ಗೆ ಹಾಗೂ ಕಲ್ಲಳ್ಳಿ ನಾಗರಾಜ್ ಅವರ 43ನೇ ವಾರ್ಡ್‍ಗೆ ನಗರೋತ್ಥಾನ ಯೋಜನೆಯಡಿ ನೀಡಿರುವುದೇ ತಲಾ 60 ಲಕ್ಷ ರೂ.ಗಳು ಮಾತ್ರ. ಆದರೆ, ಈ ಎರಡೂ ವಾರ್ಡ್‍ಗಳಿಗೆ ಪರಿಶಿಷ್ಟ ಪಂಗಡದವರ ಕಲ್ಯಾಣಕ್ಕಾಗಿ ನೀಡಿರುವ ಟಿಎಸ್‍ಪಿ ಯೋಜನೆಯಡಿ ನೀಡಿರುವ ಅನುದಾನ ತೋರಿಸಿ ಕ್ರಮವಾಗಿ 2 ಮತ್ತು 2.50 ಕೋಟಿ ಅನುದಾನ ನೀಡಿರುವುದಾಗಿ ಸುಳ್ಳು ಮಾಹಿತಿ ನೀಡಿದ್ದಾರೆ ಎಂದು ಆಪಾದಿಸಿದರು.
ಕಾಂಗ್ರೆಸ್ ಸದಸ್ಯರು ಪ್ರತಿನಿಧಿಸಿರುವ 22 ವಾರ್ಡ್‍ಗಳ ಪೈಕಿ ಆರೇಳು ವಾರ್ಡ್‍ಗಳಿಗೆ ಮಾತ್ರ ಕೋಟಿ ರೂ.ಗಳ ಲೆಕ್ಕದಲ್ಲಿ ನಗರೋತ್ಥಾನ ಯೋಜನೆಯಡಿ ಅನುದಾನ ನೀಡಿದ್ದಾರೆ. ಇನ್ನುಳಿದ ಸದಸ್ಯರಿಗೆ ಕೆಲವೇ ಲಕ್ಷ ರೂ.ಗಳಲ್ಲಿ ಅನುದಾನ ಹಂಚಿಕೆ ಮಾಡಿದ್ದಾರೆ. ಮೇಯರ್ ಆಗಲು ಅನುಕೂಲ ಮಾಡಿಕೊಟ್ಟ ಕಾರಣಕ್ಕೆ ಕಾಂಗ್ರೆಸ್‍ನಿಂದ ಗೆದ್ದಿರುವ ಜೆ.ಎನ್.ಶ್ರೀನಿವಾಸ್ ಮತ್ತವರ ಪತ್ನಿ ಪ್ರತಿನಿಧಿಸಿರುವ ಶ್ವೇತಾ ಶ್ರೀನಿವಾಸ್ ವಾರ್ಡ್‍ಗೆ ಕೋಟಿ ರೂ.ಗಳಲ್ಲಿ ಅನುದಾನ ನೀಡಿರಬಹುದು ಅಷ್ಟೇ ಎಂದು ಲೇವಡಿ ಮಾಡಿದರು.
‘
ಬಿಜೆಪಿ ಸದಸ್ಯರು ಪ್ರತಿನಿಧಿಸಿರುವ 21 ವಾರ್ಡ್‍ಗಳಿಗೆ 51 ಕೋಟಿ ಏಕೆ? ಕಾಂಗ್ರೆಸ್‍ನ 22 ವಾರ್ಡ್‍ಗಳಿಗೆ 20 ಕೋಟಿ ಯಾಕೆ?’, ಎಸ್‍ಎಆರ್ ಪುತ್ರಿ ವೀಣಾ ನಂಜಯ್ಯಾಗೆ 5.50 ಕೋಟಿ ಅನುದಾನ ಯಾಕೆ? ಕಾಂಗ್ರೆಸ್‍ನ ಆಶಾ ಉಮೇಶ್‍ಗೆ 50 ಲಕ್ಷ ಅನುದಾನ ಯಾಕೆ? ಈ ತಾರತಮ್ಯ ಯಾತಕ್ಕಾಗಿ ಎನ್ನುವುದೇ ನಮ್ಮ ಕಾಂಗ್ರೆಸ್ ಸದಸ್ಯರ ಮುಖ್ಯ ಪ್ರಶ್ನೆಯಾಗಿದೆ ಎಂದು ಹೇಳಿದರು.
ಮಹಾತ್ಮಗಾಂಧಿ ನಗರ ವಿಕಾಸ ಯೋಜನೆಯಡಿ ಬಿಡುಗೆಯಾಗಿರುವ ಅನುದಾನ ಹಂಚಿಕೆಯಲ್ಲಿ ಕಾಂಗ್ರೆಸ್ ಸದಸ್ಯರಿಗೆ ಮಾಡಿರುವ ಅನ್ಯಾಯವನ್ನು ಇನ್ನೂ 15 ದಿನಗಳಲ್ಲಿ ಸರಿಪಡಿಸಿ, ಕ್ರಿಯಾಯೋಜನೆ ಪರಿಷ್ಕರಿಸದಿದ್ದರೆ ಮೇಯರ್ ಕಚೇರಿಗೆ ಬೀಗ ಜಡಿದು ಪ್ರತಿಭಟಿಸಲಾಗುವುದು. ಅಲ್ಲದೆ, ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್ ಅವರನ್ನು ಘೇರಾವ್ ಹಾಕಲಾಗುವುದು ಎಂದು ಎಚ್ಚರಿಸಿದರು.
ಪಾಲಿಕೆ ಸದಸ್ಯ ಅಬ್ದುಲ್ ಲತೀಫ್ ಮಾತನಾಡಿ, ನಾನು ಪ್ರತಿನಿಧಿಸಿರುವ ವಾರ್ಡ್‍ನಲ್ಲಿ ಕೊರಚರ ಕಾಲೋನಿಯೇ ಇಲ್ಲ. ಆದರೆ, ನನ್ನ ಪಕ್ಕದ ವಾರ್ಡ್‍ನಲ್ಲಿರುವ ಈ ಕಾಲೋನಿಗೆ ನನ್ನ ವಾರ್ಡ್‍ಗೆ ಸೇರಿಸಿ ಅನುದಾನ ಹಂಚಿಕೆ ಮಾಡಲಾಗಿದೆ. ನನ್ನ ವಾರ್ಡ್‍ಗೆ ನಗರೋತ್ಥಾನ ಯೋಜನೆಯಡಿ ಒಂದೇ ನಯಾಪೈಸೆ ಬಿಡುಗಡೆ ಮಾಡಿಲ್ಲ ಎಂದು ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಪಾಲಿಕೆ ಸದಸ್ಯರಾದ ದೇವರಮನಿ ಶಿವಕುಮಾರ್, ಜೆ.ಡಿ.ಪ್ರಕಾಶ್, ಕಬೀರ್ ಖಾನ್, ಮಂಜುನಾಥ ಗಡಿಗುಡಾಳ್, ಕಲ್ಲಳ್ಳಿ ನಾಗರಾಜ್, ಕಾಂಗ್ರೆಸ್ ಮುಖಂಡರಾದ ಇಟ್ಟಿಗುಡಿ ಮಂಜುನಾಥ್, ಗಣೇಶ್ ಹುಲ್ಮನಿ, ಜಾಕೀರ್ ಅಲಿ, ಉಮೇಶ್ ಮತ್ತಿತರರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ