ಜೈನ ಧರ್ಮದ ಸುರಕ್ಷತೆಗೆ ಸಂಘಟನೆ ಅವಶ್ಯ

ದಾವಣಗೆರೆ:

        ಜೈನ ಧರ್ಮ ಸುರಕ್ಷಿತವಾಗಿರಬೇಕಾದರೆ, ಉತ್ತಮ ಭವಿಷ್ಯ ದೊರೆಯಬೇಕಾದರೆ ಸಂಘಟನೆಯ ಅವಶ್ಯಕತೆ ಇದೆ ಎಂದು ಭಾರತ ಭೂಷಣ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಸ್ವಾಮೀಜಿ ಪ್ರತಿಪಾದಿಸಿದರು.

         ನಗರದ ಶ್ರೀಶಾಮನೂರು ಶಿವಶಂಕರಪ್ಪ ಪಾರ್ವತಮ್ಮ ಸಮುದಾಯ ಭವನದಲ್ಲಿ ಶನಿವಾರ ನಡೆದ ಭಾರತೀಯ ಜೈನ್ ಮಿಲನ್ ವಲಯ-8ರ 18ನೇ ವಲಯ ಸಮ್ಮೇಳನದ ಸಾನಿಧ್ಯ ವಹಿಸಿ ಅವರು ಮಾತನಾಡಿದರು.ಸಂಘಟನೆಯನ್ನು ದೂಷಿಸುವುದು ಸುಲಭ ಆದರೆ, ಜನರನ್ನು ಮೆಚ್ಚಿಸುವುದು ಕಷ್ಟಕರವಾಗಿದೆ. ಸಂಘಟನೆ ತಪಸಿನ್ನಂತೆ ಕೆಲಸ ಮಾಡಬೇಕಾಗಿದೆ. ಜೈನ್ ಮಿಲನ್ ಸಂಘಟನೆಯು ಜೈನ ಬಸದಿ, ಪಂಚಕಲ್ಯಾಣ, ಮುನಿಗಳ ಆಗಮ ಕೆಲಸ ಮಾಡುತ್ತಿದ್ದು, ಬಸದಿಗಳ ಸ್ವಚ್ಛತೆ, ಜೈನ ಚಿಂತನೆಗಳಿಗೆ ಆದ್ಯತೆ ನೀಡುವುದರ ಜತೆಗೆ ಶಿಕ್ಷಣ ನೀಡಲು ಪಾಠ ಶಾಲೆ ನಡೆಸುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದರು.

         ಈ ಸಂಘಟನೆಯು ಆಧ್ಯಾತ್ಮಿಕ, ಸಾಮಾಜಿಕ, ಸಾಂಸ್ಕೃತಿಕವಾಗಿಯೂ ಕೆಲಸ ಮಾಡುವುದರ ಜತೆಗೆ ಸಾಕಷ್ಟು ಭಜನಾ ಸಂಘಗಳನ್ನು ಸ್ಥಾಪಿಸುವ ಮೂಲಕ ಸಮಾಜವನ್ನು ಸಂಘಟಿಸುವುದರ ಜೊತೆಗೆ ಸರ್ಕಾರದಿಂದ ಅಲ್ಪಸಂಖ್ಯಾತರಿಗೆ ಸಿಗುವ ಸೌಲಭ್ಯಗಳ ಬಗ್ಗೆ ಜಾಗೃತಿ ಮೂಡಿಸುತ್ತಿದೆ. ಕೃಷಿ, ರಾಜಕೀಯ, ಸಾಂಸ್ಕೃತಿಕ ಆಧ್ಯಾತ್ಮಕ ಅರಿವು ಕಾರ್ಯಕ್ರಮಗಳನ್ನು ಜೈನ್ ಮಿಲನ್ ನಡೆಸುತ್ತಿದೆ ಎಂದು ಹೇಳಿದರು.

      ಸಮಾಜ ಮತ್ತು ಸ್ವಾಮೀಜಿಗಳ ನಡುವೆ ಅವಿನಾಭಾವ ಸಂಬಂಧವಿದ್ದು, ಮಠ ಬಿಟ್ಟು ಜೈನ್ ಮಿಲನ್ ಇಲ್ಲ ಜೈನ್ ಮಿಲನ್ ಹೊರತುಪಡಿಸಿ ಮಠ ಇಲ್ಲ ಎಂದ ಅವರು, ಸಮಾಜದ ಪ್ರತಿಯೊಬ್ಬರೂ ಸಂಘಕ್ಕಾಗಿ ತನು, ಮನ, ಧನ ಅರ್ಪಿಸಬೇಕೆಂದು ಸಲಹೆ ನೀಡಿದರು.

       ಭಾರತೀಯ ಜೈನ್ ಮಿಲನ್ ರಾಷ್ಟ್ರೀಯ ಕಾರ್ಯಾಧ್ಯಕ್ಷ ಸುರೇಂದ್ರಕುಮಾರ್ ಮಾತನಾಡಿ, ಜೈನ ಮಿಲನ್ ಸಂಘಟನೆಯು ರಾಜ್ಯದಲ್ಲಿ ಸುಮಾರು 500 ಭಜನಾ ತಂಡಗಳನ್ನು ಸ್ಥಾಪಿಸಿದ್ದು, 1500 ಮನೆಗಳಲ್ಲಿ ಭಜನೆ ಅಭ್ಯಾಸ ನಡೆಯುತ್ತಿದೆ. ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಸ್ವಾಮೀಜಿ ಅವರು ಇತ್ತೀಚೆಗೆ ಅಂತರರಾಷ್ಟ್ರೀಯ ಸರ್ವಧರ್ಮ ಸಮ್ಮೇಳನದಲ್ಲಿ ಭಾಗವಹಿಸಿದ್ದರು. ಅವರೊಂದು ರೀತಿಯಲ್ಲಿ ಜೈನ ವಿವೇಕಾನಂದ ಇದ್ದಂತೆ ಎಂದರು.

        ಮುಂದಿನ ಜೈನ್ ಮಿಲನ ಸಮ್ಮೇಳನವು ಮಂಗಳೂರಿನಲ್ಲಿ ನಡೆಯಲಿದ್ದು, ಈ ಬಾರಿ ಜೈನ ಮಿಲನ್‍ನ 80 ಶಾಖೆಗಳನ್ನು ಸ್ಥಾಪಿಸುವ ಗುರಿ ಇದೆ. ಪ್ರಸಕ್ತ ಸಾಲಿನಲ್ಲಿ ಅಲ್ಪಸಂಖ್ಯಾತ ಜೈನ ಮಕ್ಕಳಿಗೆ ವಿದ್ಯಾರ್ಥಿ ವೇತನ ದೊರೆತಿದ್ದು, 68 ಮಂದಿ ವಿದೇಶಕ್ಕೆ ಹೋಗಿ ಬಂದಿದ್ದಾರೆ. ಮುಂದಿನ ಬಾರಿ ಜೈನ್ ಮಿಲನ್ ಅಧ್ಯಕ್ಷ ಸ್ಥಾನವನ್ನು ಮಹಿಳೆಯರಿಗೆ ಮೀಸಲಿಡಬೇಕು ಎಂದು ಹೇಳಿದರು.

        ಸಂಸದ ಜಿ.ಎಂ. ಸಿದ್ದೇಶ್ವರ್ ಮಾತನಾಡಿ, ವಿಶ್ವದಲ್ಲಿ ಜನರನ್ನು ಪ್ರೀತಿ, ವಿಶ್ವಾಸದ ಮೂಲಕ ಜೀವಕ್ಕೆ ಹಾನಿಯಾಗದಂತೆ ನಡೆದುಕೊಳ್ಳುವ ಏಕೈಕ ಜನಾಂಗ ಜೈನ ಧರ್ಮವಾಗಿದೆ ಎಂದು ಬಣ್ಣಿಸಿದರು.

        ಶಾಸಕ ಎಸ್.ಎ. ರವೀಂದ್ರಾನಾಥ್ ಮಾತನಾಡಿ, ಜೈನ ಸಮಾಜ ಬುದ್ಧಿವಂತ ಸಮಾಜ, ಶ್ರೀಮಂತ ಸಮಾಜ. ಜೈನ ಸಮಾಜದ ಪ್ರತಿರೂಪವೇ ಧರ್ಮಸ್ಥಳದ ವೀರೇಂದ್ರ ಹೆಗ್ಗಡೆಯವರಾಗಿದ್ದಾರೆ. ಹಳ್ಳಿ, ಹಳ್ಳಿಯಲ್ಲೂ ಹೆಗ್ಗಡೆ ಪ್ರಸಿದ್ಧರಾಗಿದ್ದಾರೆ. ರಾಜ್ಯದ ಹೆಣ್ಣು ಮಕ್ಕಳು ಹೆಗ್ಗಡೆ ಅವರ ಮಾರ್ಗದರ್ಶನದಂತೆ ನಡೆಯುವಷ್ಟರ ಮಟ್ಟಿಗೆ ಪ್ರಭಾವಿಯಾಗಿದ್ದಾರೆ ಎಂದರು.

       ಮಾಜಿ ಶಾಸಕ ಎಚ್.ಎಸ್. ಶಿವಶಂಕರ್ ಮಾತನಾಡಿ, ಜೈನ ಸಮಾಜವು ಜಾತಿ, ಮತ, ಕಾಲ, ದೇಶಗಳ ಎಲ್ಲೆ ಮೀರಿ ಬೆಳೆದ ಸಮಾಜವಾಗಿದೆ. ಇದು ಯಾರಿಗೂ ನೋವು ಕೊಡದಂತೆ, ಯಾರಿಗೂ ನೋವಾಗದಂತೆ ಬದುಕುವ ಸಮಾಜವಾಗಿದೆ ಎಂದರು.

        ಜೈನ್ ಮಿಲನ್‍ನ ವಲಯಾಧ್ಯಕ್ಷ ಇ.ವಿ. ಅಜ್ಜಪ್ಪ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಮಾಜಿ ಸಚಿವ ಕೆ. ಅಭಯಚಂದ್ರಜೈನ್, ಮಾಜಿ ಶಾಸಕ ಇಲ್ಕಲ್ ವಿಜಯಕುಮಾರ್, ಮೇಯರ್ ಶೋಭಾ ಪಲ್ಲಾಗಟ್ಟೆ, ಸಂಘಟನಾ ಸಮಿತಿ ಅಧ್ಯಕ್ಷ ಧನ್ಯಕುಮಾರ್ ಹೊಸಮನೆ, ಕಾರ್ಯಾಧ್ಯಕ್ಷ ಕೆ. ಪ್ರಸನ್ನ ಕುಮಾರ್, ಪುಷ್ಪರಾಜ್ ಜೈನ್, ಡಾ.ಬಿ. ಯಶೋವರ್ಮ ಮತ್ತಿತರರು ಉಪಸ್ಥಿತರಿದ್ದರು. ಎಚ್.ಪಿ. ಸುಮತಿಕುಮಾರ್ ವರದಿ ವಾಚಿಸಿದರು. ಡಿ. ಸುನೀಲ್‍ಕುಮಾರ್ ಸ್ವಾಗತಿಸಿದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link